ಬಿಬಿಸಿ ಸಾಕ್ಷ್ಯಚಿತ್ರ: ನಿರ್ಬಂಧ ಆದೇಶಕ್ಕೆ ಕಾರಣಗಳನ್ನು ಇನ್ನೂ ಬಹಿರಂಗಪಡಿಸದ ಕೇಂದ್ರ

Update: 2023-01-24 08:13 GMT

ಹೊಸದಿಲ್ಲಿ: ಗುಜರಾತ್‌ನಲ್ಲಿ 2002 ರಲ್ಲಿ ನಡೆದ ಗಲಭೆಗಳಲ್ಲಿ ಆಗಿನ ಗುಜರಾತ್‌ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪಾತ್ರವನ್ನು ಅವಲೋಕಿಸುವ ಬಿಬಿಸಿ (BBC) ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಟ್ವಿಟರ್‌ ಮತ್ತು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಆ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಆದೇಶಿಸಿದೆಯಾದರೂ ಈ ಕ್ರಮಕ್ಕೆ ಯಾವ ಕಾರಣಗಳನ್ನು ನೀಡಲಾಗಿದೆ ಎಂಬ ಕುರಿತು ಸರ್ಕಾರವಿನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿಲ್ಲ ಎಂದು ವರದಿಯಾಗಿದೆ.

ಸಾಕ್ಷ್ಯಚಿತ್ರದ ತುಣುಕುಗಳನ್ನು ಹಂಚಿಕೊಳ್ಳುವುದನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು 2021 ಅನ್ವಯ ಪ್ರದತ್ತವಾದ ತುರ್ತು ಅಧಿಕಾರವನ್ನು ಬಳಸಿದೆ. ಆದರೆ ಈ ನಿಯಮಗಳ ಪ್ರಕಾರ ನಿರ್ಬಂಧ ಆದೇಶಕ್ಕೆ ಕಾರಣವೇನೆಂದು ಸರ್ಕಾರ ಲಿಖಿತವಾಗಿ ತಿಳಿಸಬೇಕಿದೆ ಎಂದು ಕಾಮನ್ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನೀಶ್ಯೇಟಿವ್‌ ಅಭಿಪ್ರಾಯಪಟ್ಟಿದೆ.

ಮಾಹಿತಿ ಹಕ್ಕು ಕಾಯಿದೆಯನ್ವಯ ಈ ಸಂಸ್ಥೆಯ ನಿರ್ದೇಶಕ ವೆಂಕಟೇಶ್‌ ನಾಯಕ್‌  ಸರ್ಕಾರದ ಈ ಹಿಂದಿನ ನಿರ್ಬಂಧ ಆದೇಶಗಳ ಕುರಿತು ಮಾಹಿತಿ ಕೇಳಿದ್ದರೂ ವಾರ್ತಾ ಮತ್ತು ಪ್ರಸಾರ ಸಚಿವಾಲಯವು  ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(1) (ಎ) ಅನ್ನು ಉಲ್ಲೇಖಿಸಿ ರಾಷ್ಟ್ರೀಯ ಸುರಕ್ಷತೆ ಕಾರಣಗಳಿಗಾಗಿ ಈ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು ಎಂದು ನಾಯಕ್‌ ತಿಳಿಸುತ್ತಾರೆ.

ಯಾವ ಆಧಾರದಲ್ಲಿ ಈ ರೀತಿ ನಿರ್ಬಂಧ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂಬ ಕುರಿತೂ ಮಾಹಿತಿ ಹಂಚಿಕೊಳ್ಳಲು ಸರ್ಕಾರ ನಿರಾಕರಿಸಿದೆ ಎಂದು ಅವರು ಹೇಳುತ್ತಾರೆ.

ಈ ನಿಯಮಗಳ ಒಂದು ನಿಬಂಧನೆಯ ಪ್ರಕಾರ ಯಾವುದೇ ನಿರ್ದಿಷ್ಟ ವಿಷಯದ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣಗಳಿಂದ ಅಧಿಕೃತ ಅಧಿಕಾರಿಯ ಶಿಫಾರಸಿನಂತೆ  ಸಂಬಂಧಿತ ಪ್ಲಾಟ್‌ಫಾರ್ಮ್‌ಗಳಿಗೆ ನೋಟಿಸ್‌ ನೀಡದೆಯೇ  ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

ಕಾಮನ್ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನೀಶ್ಯೇಟಿವ್‌ ಸಂಸ್ಥೆಯು ಆರ್‌ಟಿಐ ಮೂಲಕ ಪಡೆದ ಒಂದು ಮಾಹಿತಿ ಪ್ರಕಾರ ಐಟಿ ಕಾಯಿದೆ 2000 ಅನ್ವಯ ಐಟಿ ನಿಯಮಗಳನ್ನು ಸಂಸದೀಯ ಸಮಿತಿಗಳು ಪರಿಶೀಲಿಸಬೇಕಿದ್ದರೂ ಹಾಗಾಗಿಲ್ಲ. 

ಇದನ್ನೂ ಓದಿ: ಜೋಶಿಮಠ ಭೂಕುಸಿತ ಶುರುವಾದಾಗಿನಿಂದ ಇದೇ ಪ್ರಥಮ ಬಾರಿಗೆ ಕುಸಿದ ಮನೆ

Similar News