ನಾವು ಸ್ಪಷ್ಟವಾಗಿ ಕಾರ್ಯಾಚರಿಸದಿದ್ದರೆ...: ಉದ್ಯೋಗ ಕಡಿತದ ಕುರಿತು ಸುಂದರ್ ಪಿಚೈ ಮಾತುಗಳು ಹೀಗಿವೆ..

Update: 2023-01-24 08:50 GMT

ಕ್ಯಾಲಿಫೋರ್ನಿಯಾ: "ನಾವೇನಾದರೂ ಸ್ಪಷ್ಟವಾಗಿ, ನಿರ್ಣಾಯಕವಾಗಿ ಮತ್ತು ಮುಂಚಿತವಾಗಿ ಕಾರ್ಯಾಚರಿಸದಿದ್ದರೆ, ಅದರಿಂದ ನಾವು ಸಮಸ್ಯೆಗಳನ್ನು ಮತ್ತಷ್ಟು ದುಪ್ಪಟ್ಟುಗೊಳಿಸುತ್ತೇವೆ ಮತ್ತು ಹದಗೆಡಿಸುತ್ತೇವೆ" ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚ್ಚೈ ತಮ್ಮ ಸಂಸ್ಥೆಯ ಆಂತರಿಕ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಗೂಗಲ್ ಸಂಸ್ಥೆ ಜಾರಿಗೊಳಿಸಿರುವ ಉದ್ಯೋಗ ಕಡಿತವನ್ನು ಸಮರ್ಥಿಸಿಕೊಂಡಿರುವ ಅವರು, ಸಂಸ್ಥೆಯ ಬೆಳವಣಿಗೆ ಕುಂಠಿತಗೊಂಡಿದ್ದರಿಂದಾಗಿ ನಿರ್ಣಾಯಕವಾಗಿ ಕಾರ್ಯೋನ್ಮುಖವಾಗಲು ಉದ್ಯೋಗ ಕಡಿತದ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಸೋಮವಾರ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬ್ಲೂಮ್‌ಬರ್ಗ್ ವಿಶ್ಲೇಷಣೆಯ ಪ್ರಕಾರ, ಗೂಗಲ್ ಮಾತೃಸಂಸ್ಥೆಯಾದ ಆಲ್ಪಾಭೆಟ್ ಇಂಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಂದರ್ ಪಿಚ್ಚೈ ಅವರು ಕಂಪನಿಯ ಸಂಸ್ಥಾಪಕರು ಹಾಗೂ ಮಂಡಳಿ ಸದಸ್ಯರೊಂದಿಗೆ ಸಮಾಲೋಚಿಸಿದ ಬಳಿಕ ಶೇ. 6ರಷ್ಟು ಉದ್ಯೋಗ ಕಡಿತಗೊಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಸಂಸ್ಥೆಯ ಆಂತರಿಕ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಉದ್ಯೋಗ ಕಡಿತ ನಿರ್ಧಾರವನ್ನು ಪ್ರಕಟಿಸಿದ್ದ ಗೂಗಲ್, ಜಾಗತಿಕವಾಗಿ ಒಟ್ಟಾರೆ 12,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಹೇಳಿತ್ತು. ಇದರೊಂದಿಗೆ ಕಳೆದ ಹಲವಾರು ವರ್ಷಗಳಿಂದ ವೇಗದ ಬೆಳವಣಿಗೆ ಸಾಧಿಸಿ, ಸಾವಿರಾರು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದ್ದ ಈ ದೈತ್ಯ ತಂತ್ರಜ್ಞಾನ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕಡಿತ ಪ್ರಕಟಿಸುತ್ತಿರುವ ಇನ್ನಿತರೆ ತಂತ್ರಜ್ಞಾನ ಸಂಸ್ಥೆಗಳ ಸಾಲಿಗೆ ಸೇರ್ಪಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯೋಗ ಕಡಿತವು ಎಚ್ಚರಿಕೆಯ ಪರಿಗಣನೆಯೊಂದಿಗೆ ಹೊರ ಬಿದ್ದಿರುವ ನಿರ್ಧಾರ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚ್ಚೈ ಸ್ಪಷ್ಟನೆ ನೀಡಿದ್ದಾರೆ.

Similar News