ಅಮೆರಿಕದಲ್ಲಿ ಮುಂದುವರಿದ ದುರಂತ ಸರಣಿ: ಮತ್ತೆ ಮೂರು ಗುಂಡೇಟು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಸೇರಿ 9 ಮಂದಿ ಬಲಿ

Update: 2023-01-24 07:30 GMT

ಕ್ಯಾಲಿಫೋರ್ನಿಯಾ: ಅಮೆರಿಕಾದಲ್ಲಿ ನಡೆದ ಮೂರು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಒಂಬತ್ತು ಮಂದಿ ಬಲಿಯಾಗಿದ್ದಾರೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನೀಯರ ಚಾಂದ್ರಮಾನ ಹೊಸ ವರ್ಷದ ಅಂಗವಾಗಿ ಆಯೋಜಿಸಲಾಗಿದ್ದ ನೃತ್ಯ ಕಾರ್ಯಕ್ರಮದ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿ, 11 ಮಂದಿಯನ್ನು ಬಲಿ ಪಡೆದ ಕೇವಲ 48 ಗಂಟೆ ಅಂತರದಲ್ಲಿ ಉತ್ತರ ಕ್ಯಾಲಿಫೋರ್ನಿಯಾ ಹಾಗೂ ಲೋವಾದಲ್ಲಿ ಬಂದೂಕು ಹಿಂಸಾಚಾರದ ಘಟನೆಗಳು ಜರುಗಿವೆ. ಬಂದೂಕುಧಾರಿಯನ್ನು 72 ವರ್ಷದ ಹೂ ಕ್ಯಾನ್ ಟ್ರ್ಯಾನ್ ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಆತನನ್ನು ಸುತ್ತುವರಿಯುತ್ತಿದ್ದಂತೆಯೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದರೊಂದಿಗೆ ಮತ್ತೆರಡು ಗುಂಡಿನ ದಾಳಿಗಳು ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಹಾಗೂ ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೊದಿಂದ ವರದಿಯಾಗಿವೆ. ಈ ಗುಂಡಿನ ದಾಳಿಗಳಲ್ಲಿ ಏಳು ಮಂದಿ ಸಾವಿಗೀಡಾಗಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ 67 ವರ್ಷದ ಚುನ್ಲಿ ಝಾವೊ ಎಂಬ ಸ್ಥಳೀಯ ನಿವಾಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾನಿಟರಿ ಪಾರ್ಕ್ ದುರ್ಘಟನೆ ನಡೆದ ಸಮಾರಂಭದಲ್ಲಿ ಹಾಜರಿದ್ದ ಕ್ಯಾಲಿಫೋರ್ನಿಯಾ ರಾಜ್ಯಪಾಲ ಗೇವಿನ್ ನ್ಯೂಸಮ್, ಮತ್ತೆರಡು ದುರ್ಘಟನೆಗಳ ವರದಿ ಪ್ರಕಟವಾಗುತ್ತಿದ್ದಂತೆಯೇ, "ಸಾಮೂಹಿಕ ಗುಂಡಿನ ದಾಳಿಗೆ ಒಳಗಾಗಿದ್ದ ಸಂತ್ರಸ್ತರ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆಯಲ್ಲಿ ಸಭೆ ನಡೆಸುವಾಗಲೇ, ಮತ್ತೆರಡು ಗುಂಡಿನ ದಾಳಿ ಘಟನೆಗಳ ಕುರಿತು ವಿವರ ನೀಡಲು ನನ್ನನ್ನು ಹೊರಗೆಳೆದು ತರಲಾಗಿದೆ. ಈ ಬಾರಿ ಹಾಫ್ ಮೂನ್ ಬೇ ಸರದಿಯಾಗಿದ್ದು, ದುರಂತದ ನಂತರದ ದುರಂತವಾಗಿದೆ" ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಮತ್ತೊಂದು ಗುಂಡಿನ ದಾಳಿ ಪ್ರಕರಣ ಲೋವಾದ ಡೆಸ್ ಮೋಯಿನ್ಸ್ ಪ್ರಾಂತ್ಯದಿಂದ ವರದಿಯಾಗಿದೆ. ಈ ಘಟನೆಯು ಇಲ್ಲಿನ ಸ್ಟಾರ್ಟ್ಸ್ ರೈಟ್ ಸಂಸ್ಥೆಯಲ್ಲಿ ಜರುಗಿದ್ದು, ಈ ಸಂಸ್ಥೆಯು ತೊಂದರೆಯಲ್ಲಿರುವ ಯುವಕರಿಗೆ ಶೈಕ್ಷಣಿಕ ಸಲಹಾ ಕಾರ್ಯಕ್ರಮವನ್ನು ನಡೆಸುತ್ತದೆ. ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜಕವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಫ್ಲೈಓವರ್ ಮೇಲಿಂದ ಹಣದ ಎಸೆದ ವ್ಯಕ್ತಿ; ವೀಡಿಯೊ ವೈರಲ್

Similar News