ನಾಟ್ಟುನಾಟ್ಟು ಹಾಡಿನೊಂದಿಗೆ ಎರಡು ಭಾರತೀಯ ಡಾಕ್ಯುಮೆಂಟರಿಗಳು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ

Update: 2023-01-24 16:25 GMT

ಲಾಸ್ಏಂಜಲೀಸ್,ಜ.24: ಪ್ರತಿಷ್ಠಿತ ಆಸ್ಕರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ತೆಲುಗಿನ ಆರ್ಆರ್ಆರ್ ಚಿತ್ರದ ‘ನಾಟ್ಟುನಾಟ್ಟು’ ಹಾಡು ನಾಮನಿರ್ದೇಶನಗೊಂಡಿದೆ. ನಾಟ್ಟುನಾಟ್ಟು ಜೊತೆ ಇತರ ನಾಲ್ಕು ಹಾಡುಗಳು ಸ್ಪರ್ಧೆಯಲ್ಲಿವೆ. 

ಟೆಲ್ ಇಟ್ ಲೈಕ್ ಎ ವುಮನ್ ಚಿತ್ರದ ‘ಅಪ್ಲಾಸ್’, ಟಾಪ್ಗನ್: ಮಾವೆರಿಕ್ ಚಿತ್ರದಲ್ಲಿ ಲೇಡಿಗಾಗಾ ಹಾಡಿದ ‘ಹೋಲ್ಡ್ ಮೈ ಹ್ಯಾಂಡ್’, ಬ್ಲಾಕ್ ಪ್ಯಾಂಥರ್ ಚಿತ್ರದಲ್ಲಿ ರಿಹಾನಾ ಹಾಡಿದ ‘ಲಿಫ್ಟ್ ಮಿ ಅಪ್’, ಎವೆರಿಥಿಂಗ್ ಎವರಿವೇರ್ ಅಲ್ ಎಟ್ ಓನ್ಸ್ ಚಿತ್ರದ ‘ದಿಸ್ ಇಸ್ ಎ ಲೈಫ್’, ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಇತರ ಹಾಡುಗಳಾಗಿವೆ.
 
ಆದರೆ ಗೋಲ್ಡನ್ ಗ್ಲೋಬ್ ಪುರಸ್ಕಾರದಲ್ಲಿ ನಾಮಕರಣಗೊಂಡಿದ್ದ ಟೇಲರ್ ಸ್ವಿಫ್ಟ್ ಅವರ ಕರೋಲಿನಾ ಹಾಡು ಆಸ್ಕರ್ ಸ್ಪರ್ಧೆಯಿಂದ ಹೊರಬಿದ್ದಿದೆ.
 
ಭಾರತದ ಎರಡು ಸಾಕ್ಷಚಿತ್ರಗಳು ಕೂಡಾ ಆಸ್ಕರ್ ಸ್ಪರ್ಧೆಗೆ ನಾಮನಿರ್ದೇಶನಗೊಂಡಿವೆ. ಅಲ್ ದ್ಯಾಟ್ ಬ್ರೀತ್ಸ್ ಅತ್ಯುತ್ತಮ ಸಾಕ್ಷಚಿತ್ರ ವಿಭಾಗದಲ್ಲಿ ಹಾಗೂ ದಿ ಎಲಿಫೆಂಟ್ ವಿಶ್ಪರರ್ಸ್ ಅತ್ಯುತ್ತಮ ಕಿರು ಸಾಕ್ಷಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ. ಈ ಮಧ್ಯೆ ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಚೆಲ್ಲೊ ಶೋ ಆಸ್ಕರ್ ನಾಮನಿರ್ದೇಶನಗೊಳ್ಳುವಲ್ಲಿ ವಿಫಲವಾಗಿದ್ದು, ಸ್ಪರ್ಧೆಯಿಂದ ಹೊರಬಿದ್ದಿದೆ.
 
95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ 12ರಂದು ಲಾಸ್ಏಂಜಲೀಸ್ನಲ್ಲಿ ನಡೆಯಲಿದೆ.

Similar News