ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸದಿರಲು ವಿದ್ಯುತ್‌, ಇಂಟರ್ನೆಟ್ ಸ್ಥಗಿತಗೊಳಿಸಿದ ಜೆಎನ್‌ಯು: ವರದಿ

Update: 2023-01-24 16:22 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಹತ್ಯಾಕಾಂಡದ ವೇಳೆ ನಿರ್ವಹಿಸಿದ ಪಾತ್ರದ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಜವಹರ್‌ಲಾಲ್‌ ನೆಹರೂ ಯುನಿವರ್ಸಿಟಿಯಲ್ಲಿ ಪ್ರದರ್ಶಿಸಲುದ್ದೇಶಿಸಿದ್ದು, ಆದರೆ ಈ ವೇಳೆ ವಿಶ್ವವಿದ್ಯಾನಿಲಯವು ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸ್ಥಗಿತಗೊಳಿಸಿದೆ ಎಂದು ndtv.com ವರದಿ ಮಾಡಿದೆ.‌

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಕಚೇರಿಯಲ್ಲಿ ವಿದ್ಯುತ್ ಮತ್ತು ಕರೆಂಟ್ ಎರಡೂ ಸ್ಥಗಿತಗೊಂಡಿದ್ದರಿಂದ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಯೋಜನೆಯು ವಿಫಲಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ಸಾಕ್ಷ್ಯಚಿತ್ರದ ಪ್ರದರ್ಶನವು ರಾತ್ರಿ 9 ಗಂಟೆಗೆ ಪ್ರಾರಂಭವಾಗಬೇಕಿದ್ದು, ಆಡಳಿತದ ಅಸಮ್ಮತಿ ನಡುವೆಯೂ ವಿದ್ಯಾರ್ಥಿಗಳು ಅದನ್ನು ಮುಂದುವರಿಸಲು ಯೋಜಿಸಿದ್ದರು.

ಜೆಎನ್‌ಯು ಆಡಳಿತ ಮಂಡಳಿ ಸ್ಕ್ರೀನಿಂಗ್‌ಗೆ ಅನುಮತಿ ನೀಡಿರಲಿಲ್ಲ. ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಹೇಳಿತ್ತು.

ಆದರೆ ಇದರ ಸ್ಕ್ರೀನಿಂಗ್ ವಿಶ್ವವಿದ್ಯಾಲಯದ ಯಾವುದೇ ನಿಯಮವನ್ನು ಉಲ್ಲಂಘಿಸುವುದಿಲ್ಲ ಅಥವಾ ಕೋಮು ಸೌಹಾರ್ದವನ್ನು ಹಾಳು ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು ಎಂದು ವರದಿ ತಿಳಿಸಿದೆ.

Similar News