ಝಾಂಬಿಯಾದ ಲಂಡನ್ ಅಮೆರಿಕನ್ ಯೂನಿವರ್ಸಿಟಿ ಕಾಲೇಜು ಉಪಕುಲಪತಿಯಾಗಿ ಡಾ. ಕಾಪು ಮುಹಮ್ಮದ್ ನೇಮಕ

Update: 2023-01-24 16:17 GMT

ಲುಸಾಕ (ಝಾಂಬಿಯ): ಝಾಂಬಿಯಾದಲ್ಲಿರುವ ಲಂಡನ್ ಅಮೆರಿಕನ್ ಯೂನಿವರ್ಸಿಟಿ ಕಾಲೇಜಿನ (ಎಲ್‌ಎಯುಸಿ) ಗವರ್ನರ್‌ಗಳ ಮಂಡಳಿಯು ಡಾ. ಕಾಪು ಮುಹಮ್ಮದ್‌ರನ್ನು ಕಾಲೇಜಿನ ಉಪಕುಲಪತಿಯಾಗಿ ನೇಮಿಸಿದೆ.

ರಾಜಧಾನಿ ಲುಸಾಕದಲ್ಲಿರುವ ಈ ಕಾಲೇಜು ದೇಶದ ಉನ್ನತ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದುಕೊಂಡಿದ್ದು, ಬ್ಯಾಚಲರ್ ಆಫ್ ಬಿಝ್ನೆಸ್ ಅಡ್ಮಿನಿಸ್ಟ್ರೇಶನ್, ಬಿಝ್ನೆಸ್ ಇನ್‌ಫಾರ್ಮೇಶನ್ ಸಿಸ್ಟಮ್‌ನಲ್ಲಿ ಬ್ಯಾಚಲರ್ ಆಫ್ ಸಯನ್ಸ್ ಮತ್ತು ಬಿಝ್ನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಡಿಪ್ಲೊಮ ಪದವಿಗಳನ್ನು ನೀಡುತ್ತಿದೆ.
ಕಾಲೇಜು ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆಯುವ ನಿಟ್ಟಿನಲ್ಲಿಯೂ ಪ್ರಯತ್ನಗಳನ್ನು ನಡೆಸುತ್ತಿದೆ.

ಪ್ರೊಫೆಸರ್ (ಡಾಕ್ಟರ್) ಕಾಪು ಮುಹಮ್ಮದ್ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ಡೀನ್ ಮತ್ತು ಆಡಳಿತ ನಿರ್ದೇಶಕ ಹಾಗೂ ಅಮೆರಿಕದ ಮಿಶಿಗನ್‌ನಲ್ಲಿರುವ ಮಡೋನಾ ಯೂನಿವರ್ಸಿಟಿಯ ಅಜಂಕ್ಟ್ ಪ್ರೊಫೆಸರ್ ಕೂಡ ಆಗಿದ್ದಾರೆ. ಅವರು ಶೈಕ್ಷಣಿಕ ವಿಚಾರಗಳು, ಬೋಧನೆ, ತರಬೇತಿ ಮತ್ತು ಸಂಶೋಧನೆಯಲ್ಲಿ 27 ವರ್ಷಗಳ ಅನುಭವ ಹೊಂದಿದ್ದಾರೆ. ಅವರು  ಅಮೆರಿಕ, ಯುರೋಪ್ ಮತ್ತು ಭಾರತದಿಂದ ಕ್ರಮವಾಗಿ ಬಿಝ್ನೆಸ್ ಅಡ್ಮಿನಿಸ್ಟ್ರೇಶನ್, ಶಿಕ್ಷಣ ಮತ್ತು ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್ ಪದವಿಗಳನ್ನೂ ಪಡೆದಿದ್ದಾರೆ ಹಾಗೂ ಅಮೆರಿಕನ್, ಯುರೋಪಿಯನ್ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್‌ಡಿ ಎಕ್ಸಾಮಿನರ್ ಮತ್ತು ಗೈಡ್ ಕೂಡ ಆಗಿದ್ದಾರೆ.

ಅವರು ಕ್ಯಾಲಿಫೋರ್ನಿಯ ಲೆಜಿಸ್ಲೇಟಿವ್ ಅಸೆಂಬ್ಲಿ ಪ್ರಶಸ್ತಿ ಮತ್ತು ಮಡೋನಾ ಯೂನಿವರ್ಸಿಟಿಯ ಪ್ರೆಸಿಡೆಂಟ್ಸ್ ಕ್ಯಾಬಿನೆಟ್‌ನಿಂದ ಪಿನ್ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಮಾನ್ಯತೆಗಳನ್ನು ಪಡೆದುಕೊಂಡಿದ್ದಾರೆ.

ಡಾ. ಕಾಪು ಮುಹಮ್ಮದ್ ಬ್ರಿಟನ್‌ನ ಲಿಂಕನ್‌ಶಯರ್ ಯುನಿವರ್ಸಿಟಿ, ಹಂಬರ್‌ಸೈಡ್ ಯೂನಿವರ್ಸಿಟಿ ಮತ್ತು ಅಮೆರಿಕದ ನ್ಯಾಶನಲ್ ಅಮೆರಿಕನ್ ಯೂನಿವರ್ಸಿಟಿಯಲ್ಲಿ ಕ್ರಮವಾಗಿ ಡೆಪ್ಯುಟಿ ಡೈರೆಕ್ಟರ್, ಹೆಡ್ ಆಫ್ ಡಿಪಾರ್ಟ್‌ಮೆಂಟ್ ಮತ್ತು ಪ್ರೋಗ್ರಾಮ್ ಲೀಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

Similar News