ವಿದ್ಯುತ್ ಕಡಿತ, ಕಲ್ಲುತೂರಾಟದ ನಡುವೆಯೂ ಜೆಎನ್‌ಯುನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

Update: 2023-01-25 03:01 GMT

ಹೊಸದಿಲ್ಲಿ: ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಕತ್ತಲು ಮತ್ತು ಕಲ್ಲುತೂರಾಟದ ನಡುವೆಯೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು. ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ವಿವಿಧ ಲ್ಯಾಪ್‌ಟಾಪ್‌ಗಳ ಮೂಲಕ ಚಿತ್ರ ವೀಕ್ಷಿಸಿದರು.

ಈ ಸಾಕ್ಷಚಿತ್ರ ಪ್ರದರ್ಶನ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ, ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ವಿವಿ ಆಡಳಿತ ಸಲಹೆ ಮಾಡಿತ್ತು.

ಜೆಎನ್‌ಯುಎಸ್‌ಯು ಕಚೇರಿ ಟೆಫ್ಲಾಸ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಐಶ್ ಘೋಷ್, "ಒಂದು ಪರದೆಯನ್ನು ಮುಚ್ಚಬಹುದು. ಸಾವಿರಾರು ಇತರ ಪದರೆಗಳಲ್ಲಿ ನಾವು ಅದನ್ನು ವೀಕ್ಷಿಸುತ್ತೇವೆ" ಎಂದು ಹೇಳಿದರು.

ಈ ಸಾಕ್ಷ್ಯಚಿತ್ರ ಪ್ರದರ್ಶಕ್ಕೆ ಕೆಲವೇ ನಿಮಿಷಗಳ ಮುನ್ನ ಕ್ಯಾಂಪಸ್‌ನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದಾಗ್ಯೂ ವಿದ್ಯಾರ್ಥಿ ಸಂಘ ಕ್ಯೂಆರ್ ಕೋಡ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಂಘದ ಕಚೇರಿಯ ಹೊರಗೆ ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿತು.

"ಈ ದೇಶ ಪ್ರಜಾಪ್ರಭುತ್ವದ ಪರವಾಗಿ ನಿಲ್ಲುತ್ತದೆ ಹಾಗೂ ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ಇಲ್ಲಿ ಸಂಭ್ರಮಿಸಲಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ಈ ನಿಲುವು ತೆಗೆದುಕೊಂಡು, ವಿದ್ಯುತ್ ಕಡಿತ ಸಂಪರ್ಕದ ಮೂಲಕ ನಮ್ಮ ಸ್ಫೂರ್ತಿಗೆ ಧಕ್ಕೆ ತರಲು ಅವರು ಯತ್ನಿಸಿದರು ಹಾಗೂ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಜೆಎನ್‌ಯು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಹುದು ಎಂದು ನೀವು ಯೋಚಿಸಿದರೆ, ಅದು ಸಾಧ್ಯವಾಗದು" ಎಂದು ಘೋಷ್ ವಿವರಿಸಿದರು.

ಏತನ್ಮಧ್ಯೆ ಚಿತ್ರ ವೀಕ್ಷಣೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುರಿ ಮಾಡಿ ಇಟ್ಟಿಗೆ ತುಂಡುಗಳನ್ನು ಎಸೆಯಲಾಯಿತು. ವಿದ್ಯಾರ್ಥಿ ಗುಂಪುಗಳ ನಡುವಿನ ಸಂಘರ್ಷದ ಮಧ್ಯೆಯೇ, ಜೆಎನ್‌ಯುಎಸ್‌ಯು ವಿವಿಯ ಮುಖ್ಯದ್ವಾರದ ಬಳಿಗೆ ಪಾದಯಾತ್ರೆ ಕೈಗೊಂಡಿತು. ರಾತ್ರಿ 11 ಗಂಟೆಯವರೆಗೂ ವಿದ್ಯುತ್ ಸಂಪರ್ಕ ಕಡಿಗೊಳಿಸಿದ್ದರಿಂದ ಮುಖ್ಯದ್ವಾರದ ಬಳಿ ಸುರಕ್ಷಿತ ಎಂದು ವಿದ್ಯಾರ್ಥಿಗಳು ಭಾವಿಸಿದರು.

Similar News