ಉಡುಪಿ: ಜ.26ರಂದು ಮಣಿಪಾಲ್ ಇನ್ ಹೊಟೇಲಿನಲ್ಲಿ ಬೃಹತ್ ರಕ್ತದಾನ ಶಿಬಿರ

Update: 2023-01-25 08:52 GMT

ಉಡುಪಿ, ಜ.25: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಮಣಿಪಾಲ ಇನ್ ಹೊಟೇಲ್ ನ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಜ.26ರಂದು ಗಣರಾಜ್ಯೋತ್ಸವ ದಿನದಂದು ಬೃಹತ್ ರಕ್ತದಾನ ಶಿಬಿರವನ್ನು ಹೊಟೇಲಿನ ಏಳನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹೊಟೇಲಿನ ಆಡಳಿತ ನಿರ್ದೇಶಕ ಮೌಲಾನ ಇಬ್ರಾಹೀಂ ಗಂಗೊಳ್ಳಿ ತಿಳಿಸಿದ್ದಾರೆ.

ಹೊಟೇಲಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ನಡೆಯುವ ಈ ಶಿಬಿರವು ಬೆಳಗ್ಗೆ 7:30ರಿಂದ 11:30ರವರೆಗೆ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಹಾಗೂ ಸಾಮಾಜಿಕ ಕಾರ್ಯ ಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ವಿವಿಧ ಗಣ್ಯರು ಭಾಗವಹಿಸಲಿರುವರು ಎಂದರು.

ಶಿಬಿರದಲ್ಲಿ ಹೊಟೇಲಿನ 150 ಸಿಬಂದಿ ಸೇರಿದಂತೆ 500ಕ್ಕೂ ಅಧಿಕ ಮಂದಿ ಭಾಗವಹಿಸಿ ರಕ್ತದಾನ ಮಾಡಲಿದ್ದಾರೆ. ಆಟೋ ರಿಕ್ಷಾ ಯೂನಿಯನ್, ಕಾರ್ಮಿಕ ಸಂಘಟನೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಶಿಬಿರವನ್ನು ಮುಕ್ತವಾಗಿ ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಭಾರತದಲ್ಲಿ ಪ್ರತಿವರ್ಷ 1.5ರಿಂದ 2 ಲಕ್ಷ ಮಂದಿ ರಕ್ತ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಆದುದರಿಂದ ನಮ್ಮಲ್ಲಿ ರಕ್ತದ ಅಗತ್ಯತೆ ಸಾಕಷ್ಟು ಹೆಚ್ಚುತ್ತಿದೆ. ರಕ್ತದಾನಿಗಳು ಜೀವರಕ್ಷಕರು, ರಕ್ತದಾನ ಸಾಮಾಜಿಕ ಜವಾಬ್ದಾರಿಯಾಗಿದ್ದು, ನಿಮ್ಮ ರಕ್ತ ಒಂದು ಜೀವವನ್ನು ಉಳಿಸಬಹುದು. ಆದುದರಿಂದ ರಕ್ತದಾನ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೊಟೇಲಿನ ಜನರಲ್ ಮ್ಯಾನೇಜರ್ ಆನಂದ ಕುಮಾರ್, ಮುಖ್ಯ ಬಾಣಸಿಗ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.

Similar News