8 ನಿಮಿಷಗಳ ದೈನಂದಿನ ಕೆಲಸಕ್ಕೆ ವಾರ್ಷಿಕ 40 ಲಕ್ಷ ರೂ. ವೇತನ: ವಿಜಿಲೆನ್ಸ್ ಮುಖ್ಯಸ್ಥ ಹುದ್ದೆ ಕೋರಿದ IAS ಅಧಿಕಾರಿ

Update: 2023-01-25 13:58 GMT

ಚಂಡೀಗಢ: ಹಿರಿಯ ಐಎಎಸ್‌ (IAS) ಅಧಿಕಾರಿ, ಪ್ರಸ್ತುತ ಆರ್ಕೈವ್ಸ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಅಶೋಕ್‌ ಖೇಮ್ಕಾ (Ashok Khemka) ಅವರು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರಿಗೆ ಜನವರಿ 23 ರಂದು ಪತ್ರ ಬರೆದು ತಮಗೆ ರಾಜ್ಯ ವಿಜಿಲೆನ್ಸ್‌ ಇಲಾಖೆಯ ಮುಖ್ಯಸ್ಥನ ಹುದ್ದೆ ನೀಡಬೇಕೆಂದು ಕೋರಿದ್ದಾರೆ. ಸಿಎಂ ಕಾರ್ಯಾಲಯ ಈ ಬೇಡಿಕೆ ಕುರಿತು ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.

ಆರ್ಕೈವ್ಸ್‌ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ  ತಮಗೆ ದಿನಕ್ಕೆ ಹೆಚ್ಚೆಂದರೆ ಎಂಟು ನಿಮಿಷ ಹಾಗೂ ವಾರಕ್ಕೆ ಒಂದು ಗಂಟೆ ಕೆಲಸವಿದೆ ಹಾಗೂ ತಮ್ಮ ವಾರ್ಷಿಕ ವೇತನ ರೂ. 40 ಲಕ್ಷ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಅಧಿಕಾರಿಯೊಬ್ಬನಿಗೆ ಆತನ ಸ್ಥಾನಮಾನಕ್ಕೆ ತಕ್ಕ ಪೋಸ್ಟಿಂಗ್‌ ಹಾಗೂ ಕೆಲಸ ನೀಡಬೇಕೆಂದು ಸುಪ್ರೀಂ ಕೋರ್ಟ್‌ 1987 ರಲ್ಲಿ ಪಿ ಕೆ ಚಿನ್ನಸ್ವಾಮಿ ಮತ್ತು ತಮಿಳುನಾಡು ಸರಕಾರ ನಡುವಿನ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2025 ರಲ್ಲಿ ನಿವೃತ್ತರಾಗಲಿರುವ ಖೇಮ್ಕಾ ತಾವು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುದನ್ನು ನೆನಪಿಸಿದ್ದಾರಲ್ಲದೆ ಭ್ರಷ್ಟಾಚಾರದ ಕ್ಯಾನ್ಸರ್‌ ಅನ್ನು ಬೇರು ಸಮೇತ ಕಿತ್ತೊಗೆಯಲು ನಾನು ನನ್ನ ವೃತ್ತಿಯನ್ನು ಬಲಿಗೊಟ್ಟಿದ್ದೇನೆ, ಭ್ರಷ್ಟಾಚಾರವನ್ನು ಹೊಡೆದೋಡಿಸಲು ವಿಜಿಲೆನ್ಸ್‌ ಇಲಾಖೆ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ನನ್ನ ಸೇವಾವಧಿಯ ಕೊನೆಯ ಘಟ್ಟದಲ್ಲಿ ಭ್ರಷ್ಟಾಚಾರ ಹೊಡೆದೋಡಿಸಲು ವಿಜಿಲೆನ್ಸ್‌ ಇಲಾಖೆಯ ಮುಖ್ಯಸ್ಥನ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಬಯಸುತ್ತೇನೆ. ಈ ಅವಕಾಶ ನೀಡಿದರೆ ಭ್ರಷ್ಟಾಚಾರದ ವಿರುದ್ಧ ನಿಜವಾದ ಹೋರಾಟವಿರುವುದು ಹಾಗೂ ಯಾರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಬಿಟ್ಟುಬಿಡಲಾಗುವುದಿಲ್ಲ," ಎಂದು ಖೇಮ್ಕಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಜನರು ದೂರದರ್ಶನವನ್ನು ನಂಬದೇ ಇದ್ದರೂ, BBCಯನ್ನು ನಂಬುತ್ತಾರೆ: ಪ್ರಧಾನಿ ಮೋದಿಯ ಹಳೆಯ ವೀಡಿಯೊ ವೈರಲ್

Similar News