ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕ್ಷಿಪಣಿ ತುಕಡಿ ಮುನ್ನಡೆಸಲಿರುವ ಮಹಿಳಾ ಸೇನಾನಿಗಳು

Update: 2023-01-25 14:50 GMT

ಹೊಸ ದಿಲ್ಲಿ: 2023ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೆಲದಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿವಾಹಕ ವಾಹನವನ್ನು ಮಹಿಳಾ ಸೇನಾನಿ ಲೆಫ್ಟಿನೆಂಟ್ ಚೇತನಾ ಶರ್ಮ ಚಲಾಯಿಸಲಿದ್ದರೆ, ಡೇರ್‌ಡೆವಿಲ್ಸ್ ತಂಡದ ಮೋಟಾರ್ ಸೈಕಲ್ ಪ್ರದರ್ಶನದಲ್ಲಿ ಮತ್ತೊಬ್ಬ ಮಹಿಳಾ ಸೇನಾನಿ, ಕಾರ್ಪ್ಸ್ ಆಫ್ ಸಿಗ್ನಲ್ಸ್ ತಂಡದ ಲೆಫ್ಟಿನೆಂಟ್ ಡಿಂಪಲ್ ಭಾಟಿಯಾ ಪಾಲ್ಗೊಳ್ಳಲಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಚೇತನಾ ಶರ್ಮ, ನಾನು ಸೇನಾ ಪೆರೇಡ್ ಅನ್ನು ದೂರದರ್ಶನದಲ್ಲಿ ವೀಕ್ಷಿಸುವಾಗ ನಾನೂ ಒಮ್ಮೆ ಪೆರೇಡ್ ಭಾಗವಾಗಬೇಕು ಎಂದು ಬಯಸುತ್ತಿದ್ದೆ, ಆ ನನ್ನ ಕನಸು ಈ ವರ್ಷ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನೆಲದಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿ ವಾಹಕ ವಾಹನವು ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆಯಂದು ಕರ್ತವ್ಯ ಪಥದಲ್ಲಿ ಹಾದು ಹೋಗಲಿದೆ.

"ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಮ್ಮಲ್ಲಿ ಧೈರ್ಯ ಮತ್ತು ಸ್ಫೂರ್ತಿ ಇರಬೇಕು. ಯಾವುದೇ ವ್ಯಕ್ತಿ ಯಶಸ್ಸು ದೊರೆಯುವವರೆಗೂ ಮರಳಿ ಮರಳಿ ಪ್ರಯತ್ನ ಮಾಡುತ್ತಲೇ ಇರಬೇಕು" ಎಂದು ಆಕಾಶ್ ಕ್ಷಿಪಣಿ ವಾಹಕ ವಾಹನ ಚಲಾಯಿಸುವ ಅವಕಾಶ ದೊರೆತಿರುವ ಕುರಿತು ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚೇತನಾ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಲೆಫ್ಟಿನೆಂಟ್ ಚೇತನಾ ಶರ್ಮ ರಾಜಸ್ಥಾನ ರಾಜ್ಯದವರಾಗಿದ್ದು, ತಮ್ಮ ಆರನೆ ಪ್ರಯತ್ನದಲ್ಲಿ ಸೇನಾ ಸೇರ್ಪಡೆಯಾಗುವಲ್ಲಿ ಯಶಸ್ವಿಯಾಗಿದ್ದರು.

ಮತ್ತೊಬ್ಬ ಮಹಿಳಾ ಸೇನಾನಿ ಹಾಗೂ ಕಾರ್ಪ್ಸ್ ಆಫ್ ಸಿಗ್ನಲ್ಸ್ ಮೋಟಾರ್ ಸೈಕಲ್ ತಂಡದ ಸದಸ್ಯೆಯಾದ ಲೆಫ್ಟಿನೆಂಟ್ ಡಿಂಪಲ್ ಭಾಟಿಯಾ, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಮೋಟಾರ್ ಸೈಕಲ್ ಮೇಲೆ ತಮ್ಮ ಸಾಹಸ ನೈಪುಣ್ಯತೆ ಪ್ರದರ್ಶಿಸಲಿದ್ದಾರೆ. ಈ ತಂಡದೊಂದಿಗೆ ಭಾಟಿಯಾ ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುತ್ತಿದ್ದಾರೆ.

ಇದನ್ನು ಓದಿ : ‘ಗುಜರಾತ್ ಗಲಭೆ ಪೂರ್ವಯೋಜಿತವಾಗಿತ್ತು’: ಹಿಂಸಾಚಾರದ ಕುರಿತು ಬ್ರಿಟಿಷ್ ತನಿಖೆಯ ವರದಿ

Similar News