ಲಕ್ಷದ್ವೀಪ ಸಂಸದ‌ ಮುಹಮ್ಮದ್ ಫೈಝಲ್ ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಕೇರಳ ಹೈಕೋರ್ಟ್

Update: 2023-01-25 15:36 GMT

ತಿರುವನಂತಪುರಂ, ಜ. 25: ಕೊಲೆಯತ್ನ ಪ್ರಕರಣವೊಂದರಲ್ಲಿ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್(Muhammad Faizal) ದೋಷಿ ಎಂಬುದಾಗಿ ಘೋಷಿಸಿ ವಿಚಾರಣಾ ನ್ಯಾಯಾಲಯವು ನೀಡಿರುವ ತೀರ್ಪು ಮತ್ತು ಶಿಕ್ಷೆಯನ್ನು ಕೇರಳ ಹೈಕೋರ್ಟ್(Kerala High Court) ಬುಧವಾರ ಅಮಾನತಿನಲ್ಲಿಟ್ಟಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

2009ರ ಲೋಕಸಭಾ ಚುನಾವಣೆಯ ವೇಳೆ, ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಎಮ್. ಸಯೀದ್ ರ ಅಳಿಯ ಪಡನಾತ್ ಸಾಲಿಹ್ರನ್ನು ಕೊಲೆಗೈಯಲು ನಡೆಸಿರುವ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಫೈಝಲ್ ಮತ್ತು ಇತರ ನಾಲ್ವರು ದೋಷಿಗಳು ಎಂಬುದಾಗಿ ಕಾವರಟ್ಟಿ ಸೆಶನ್ಸ್ ನ್ಯಾಯಾಲಯವು ಜನವರಿ 11ರಂದು ಘೋಷಿಸಿತ್ತು.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಫೈಝಲ್ ಮತ್ತು ಇತರ ನಾಲ್ವರು ದೋಷಿಗಳಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜನವರಿ 13ರಂದು ಸಂಸದ ಪದವಿಯಿಂದ ಅನರ್ಹಗೊಂಡಿದ್ದರು.

ಫೈಝಲ್ ರ ಅನರ್ಹತೆಯಿಂದಾಗಿ ಅವರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವುದರಿಂದ, ದೋಷಿ ಎಂದು ಘೋಷಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಬುಧವಾರ ಅಮಾನತಿನಲ್ಲಿಟ್ಟಿದೆ.

ಉಪಚುನಾವಣೆ ತಡೆಯಲು ಈ ಕ್ರಮ: ಹೈಕೋರ್ಟ್

‘‘ವಿಚಾರಣಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ, ಲಕ್ಷದ್ವೀಪದಲ್ಲಿ ಚುನಾವಣೆಯ ಜಟಿಲ ಪ್ರಕ್ರಿಯೆಯನ್ನು ಆರಂಭಿಸಬೇಕಾಗುತ್ತದೆ ಹಾಗೂ ಅದರ ಅಗಾಧ ವೆಚ್ಚವನ್ನು ದೇಶ ಮತ್ತು ಪರೋಕ್ಷವಾಗಿ ಈ ದೇಶದ ಜನತೆ ಭರಿಸಬೇಕಾಗುತ್ತದೆ’’ ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್(Bechu Kurian Thomas) ಹೇಳಿದರು.

‘‘ದೋಷಿತ್ವ ಮತ್ತು ಶಿಕ್ಷೆಯನ್ನು ಅಮಾನತಿನಲ್ಲಿರಿಸದಿದ್ದರೆ ಅದರ ಫರಿಣಾಮಗಳು ಅಗಾಧ ಮತ್ತು ತೀವ್ರವಾಗಿರುತ್ತವೆ’’ ಎಂದು ಅವರು ಹೇಳಿದರು.

ಹೊಸ ಚುನಾವಣಾ ಪ್ರಕ್ರಿಯೆಯಿಂದಾಗಿ ಲಕ್ಷದ್ವೀಪದ ವಿವಿಧ ಅಭಿವೃದ್ಧಿ ಚಟುವಟಿಕೆಗಳು ಕೆಲವ ವಾರಗಳ ಕಾಲ ಸ್ಥಗಿತಗೊಳ್ಳುತ್ತವೆ. ರಾಜಕೀಯವನ್ನು ಅಪರಾಧಮುಕ್ತಗೊಳಿಸುವುದು ಪ್ರತಿಯೊಂದು ಪ್ರಜಾಪ್ರಭುತ್ವದ ಅಗತ್ಯವಾದರೂ, ನಾನು ಕಾನೂನಿನ ಆಡಳಿತದ ತತ್ವಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

Similar News