2002ರ ಗುಜರಾತ್ ಹಿಂಸಾಚಾರ: 17 ಮುಸ್ಲಿಮರನ್ನು ಕೊಂದ 22 ಆರೋಪಿಗಳು ದೋಷಮುಕ್ತ

Update: 2023-01-25 15:49 GMT

ಗಾಂಧಿನಗರ, ಜ. 25: 2002ರ ಗುಜರಾತ್(Gujarat) ಹಿಂಸಾಚಾರದ ಸಂದರ್ಭದಲ್ಲಿ, ಇಬ್ಬರು ಮಕ್ಕಳು ಸೇರಿದಂತೆ 17 ಮುಸ್ಲಿಮರನ್ನು ಕೊಂದ ಪ್ರಕರಣದ ಎಲ್ಲಾ 22 ಆರೋಪಿಗಳನ್ನು ಗುಜರಾತ್ ನ ನ್ಯಾಯಾಲಯವೊಂದು ಮಂಗಳವಾರ ಸಾಕ್ಷಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

22 ಆರೋಪಿಗಳ ಪೈಕಿ 8 ಮಂದಿ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದಾರೆ.ಅಯೋಧ್ಯೆಯಿಂದ ಯಾತ್ರಿಗಳನ್ನು ಹೊತ್ತು ತರುತ್ತಿದ್ದ ಸಾಬರ್ಮತಿ ಎಕ್ಸ್ ಪ್ರೆಸ್ ರೈಲಿ(Sabarmati Express)ನ ಬೋಗಿಯೊಂದು ಗೋಧ್ರಾದಲ್ಲಿ ಸುಟ್ಟು ಹೋದ ಘಟನೆಯ ಬಳಿಕ, 2002 ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಕೋಮು ಗಲಭೆಗಳು ನಡೆದವು. ಫೆಬ್ರವರಿ 27ರಂದು ರೈಲು ಸುಟ್ಟು ಹೋದ ಘಟನೆಯಲ್ಲಿ, ಬೋಗಿಯಲ್ಲಿದ್ದ 51 ಮಂದಿ ಮೃತಪಟ್ಟಿದ್ದಾರೆ.

2002 ಫೆಬ್ರವರಿ 28ರಂದು ದೆಲೋಲ್ ಗ್ರಾಮದಲ್ಲಿ 17 ಮುಸ್ಲಿಮರನ್ನು ಕೊಂದ ಆರೋಪಕ್ಕೆ ಸಂಬಂಧಿಸಿ 2004ರಲ್ಲಿ 22 ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳು ಸಾಕ್ಷ ನಾಶ ಮಾಡುವುದಕ್ಕಾಗಿ ತಾವು ಕೊಂದ ವ್ಯಕ್ತಿಗಳ ಮೃತದೇಹಗಳನ್ನು ಸುಟ್ಟು ಹಾಕಿದ್ದರು ಎಂದು ಪ್ರಾಸಿಕ್ಯೂಶನ್ ಹೇಳಿದೆ.

ಆದರೆ, ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ ಬಳಿಕ 2004ರಿಂದಲೂ ಆರೋಪಿಗಳು ಮುಕ್ತವಾಗಿ ತಿರುಗಾಡಿಕೊಂಡಿದ್ದರು.

‘‘ನ್ಯಾಯಾಲಯವು ಮೃತರದ್ದು ಎನ್ನಲಾದ ಎಲುಬುಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದೆ. ಆದರೆ, ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ಅದು ನಿರ್ಣಾಯಕವಾಗಿ ಸಾಬೀತಾಗಿಲ್ಲ’’ ಎಂದು ಎಲ್ಲಾ ಆರೋಪಿಗಳ ಪರವಾಗಿ ವಾದಿಸಿರುವ ವಕೀಲ ಗೋಪಾಲಸಿನ್ಹ ಸೋಳಂಕಿ ಹೇಳಿದರು. ‘‘ಅದೂ ಅಲ್ಲದೆ, ನ್ಯಾಯಾಲಯವು 100ಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಿಸಿದೆ. ಅವರ ಪೈಕಿ ಹೆಚ್ಚಿನವರು ಪ್ರತಿಕೂಲ ಸಾಕ್ಷಿಗಳಾದರು’’ ಎಂದು ಅವರು ನುಡಿದರು.

ಈ ಪ್ರಕರಣದಲ್ಲಿ ಪೊಲೀಸರ ಪಾತ್ರವೂ ಪ್ರಶ್ನೆಗೀಡಾಗಿದೆ. ಹತ್ಯಾಕಾಂಡ ನಡೆದು ಸುಮಾರು ಎರಡು ವರ್ಷಗಳ ಬಳಿಕ, ಅಂದರೆ 2003 ಡಿಸೆಂಬರ್ನಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಿದ್ದರು.

Similar News