ಯುವ ಮತದಾರರು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ನ್ಯಾ. ಶಾಂತವೀರ ಶಿವಪ್ಪ

Update: 2023-01-25 17:14 GMT

ಉಡುಪಿ: ಭಾರತೀಯ ಪ್ರಜೆಯಾಗಿ ಹದಿನೆಂಟು ವರ್ಷ ತುಂಬಿದ ಅರ್ಹ ಯುವ ಮತದಾರರು ತಮ್ಮ ಹೆಸರನ್ನು ತಪ್ಪದೇ ಮತದಾನ ಪಟ್ಟಿಯಲ್ಲಿ ನೋಂದಾಯಿಸುವುದರೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಸಕ್ರೀಯರಾಗಿ  ಭಾಗವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಹೇಳಿದ್ದಾರೆ.

ನಗರದ ಅಜ್ಜರಕಾಡು ಪುರಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಉಡುಪಿ ಜಿಲ್ಲೆ ಇವರ ವತಿಯಿಂದ ಬುಧವಾರ ಅಯೋಜಿಸಲಾದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಜೆಗಳೇ ಅಯ್ಕೆ ಮಾಡುವ ಅವಕಾಶವಿದೆ. ಜನಪ್ರತಿನಿಧಿಗಳನ್ನು ಆರಿಸುವಾಗ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಘೋಷಿಸುವ, ಒಡ್ಡುವ  ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಉತ್ತಮ ಸರಕಾರವನ್ನು ನಡೆಸುವ ಜನಪ್ರತಿನಿಧಿಗಳನ್ನು ಆರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ವಯಸ್ಕರಾದ ತಕ್ಷಣ ಸರಕಾರಿ ವ್ಯವಸ್ಥೆಯಲ್ಲಿ ಒಂದನೇಯದಾಗಿ ಮತದಾನ ಮಾಡುವ ಹಕ್ಕು, ಎರಡನೆಯದಾಗಿ ವಾಹನ ಚಾಲನಾ ಪರವಾನಿಗೆ ಪತ್ರ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮತದಾರರ ದಿನಾಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ನೋಂದಣಿಯಾದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಿದ್ಧಲಿಂಗಪ್ಪ, ತಹಶೀಲ್ದಾರ್ ಜೆ ಮಹೇಶ್, ಕುಂದಾಪುರ ಉಪ ವಿಭಾಗಾಧಿಕಾರಿ ಕೆ ರಾಜು ಮತ್ತಿತರರು ಉಪಸ್ಥಿತರಿದ್ದರು.

Similar News

ನಾಪತ್ತೆ