ಬಿಬಿಸಿ ತಂದ ಬಿಸಿ

Update: 2023-01-26 08:00 GMT

ಭಾರತದ ಪ್ರಧಾನಿಯನ್ನು ಟೀಕಿಸಿದಾಕ್ಷಣ ಬಿಬಿಸಿ ಅಪರಾಧಿಯಾಗುವುದಿಲ್ಲ. 2002ರ ಗುಜರಾತ್ ಪ್ರಕರಣ ನಿಮಿತ್ತವಾಗಿ ಪ್ರಧಾನಿಯಾಗುವವರೆಗೂ ಮೋದಿಯವರಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ವೀಸಾ ನಿರಾಕರಿಸಿತ್ತೆಂಬುದನ್ನು ಇಲ್ಲಿ ನೆನಪಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯದ ಲಾಭ ಪಡೆದುಕೊಂಡು ಚಿನ್ನವನ್ನು ಕಿಲುಬೆಂದು ನಾವು ಟೀಕಿಸಿದರೆ ನಮ್ಮ ಮಾನ ಹರಾಜಾಗುತ್ತದೆಯೇ ವಿನಾ ಬಿಬಿಸಿಯದ್ದಲ್ಲ. ಬಿಬಿಸಿಯ ಬಿಸಿಯಂತೂ ದೇಶವನ್ನು ನಾಟಿದೆ ಎಂಬುದು ಸತ್ಯ.


ರಾಜಕಾರಣಿಗಳಲ್ಲಿ ಎರಡು ವರ್ಗಗಳಿವೆ: ಒಂದು, ತಮ್ಮ ಬಗ್ಗೆ ಬಂದ ಪ್ರಶಂಸೆ-ಟೀಕೆಗಳನ್ನು ಅಲಕ್ಷಿಸುವವರು; ಇನ್ನೊಂದು ವರ್ಗ ಪ್ರಶಂಸಕರನ್ನು ಬಹುಮಾನಿಸಿ, ತಮ್ಮ ವಿರುದ್ಧದ ಟೀಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸುವವರು; ಉರಿಗೆ ಉರಿಯನ್ನೇ ತೋರುವವರು. ಈ ಎರಡು ವರ್ಗದವರಿಗೂ ತಮ್ಮ ಬಗ್ಗೆ ಬಂದ ಟೀಕೆ ಅಥವಾ ಪ್ರಶಂಸೆಗಳ ಅರಿವಿರುತ್ತದೆ. ಅದಕ್ಕೆ ನೀಡುವ ಪ್ರತಿಕ್ರಿಯೆಗಳು ಬೇರೆಬೇರೆ, ಅಷ್ಟೇ. ಆದರೆ ವ್ಯಕ್ತಿಯನ್ನು ಸರಕಾರಕ್ಕೂ ದೇಶಕ್ಕೂ ಸಮೀಕರಿಸಿ ಯೋಚಿಸುವವರಿಗೆ ಅಹಿತಕರ ಸುದ್ದಿಗಳು ಚಿಂತನೆಗಿಂತ ಚಿಂತೆಯನ್ನು ಉಣಬಡಿಸುತ್ತವೆ. ಅಸ್ಸಾಮಿನ ಮುಖ್ಯಮಂತ್ರಿಗಳು ಚಲನಚಿತ್ರ ನಟ ಶಾರುಕ್‌ಖಾನ್ ಕುರಿತಂತೆ ‘‘ಯಾರು ಈ ಶಾರುಕ್?’’ ಎಂದು ಕೇಳಿದ ಸುದ್ದಿ ಪ್ರಕಟವಾಯಿತು. ಈ ಭಾರೀ ಅಜ್ಞಾನದ ಹಿಂದೆ ಅಧಿಕಾರದ ಗರ್ವದ ಹೊರತು ಬೇರೇನೂ ಇದ್ದಂತಿರಲಿಲ್ಲ. ಒಬ್ಬ ಮುಖ್ಯಮಂತ್ರಿ ಚಲನಚಿತ್ರ ರಂಗದ ಸವಿವರವನ್ನು ಹೊಂದಿರಬೇಕಾಗಿಲ್ಲ. ಆದರೆ ಭಾರತೀಯ ಚಿತ್ರರಂಗದಲ್ಲಿ ಸದ್ಯ ಮೊದಲ ಸಾಲಿನಲ್ಲಿರುವ, ಪದ್ಮಶ್ರೀ ಪ್ರಶಸ್ತಿ ಪಡೆದ, ಒಬ್ಬ ಪ್ರಸಿದ್ಧ ನಟನ ಕುರಿತು ಅಜ್ಞಾನವನ್ನು ಪ್ರದರ್ಶಿಸುವುದು ಯಾವ ರಾಜಕಾರಣಿಗೂ ಭೂಷಣವಲ್ಲ.

ಒಬ್ಬ ಮುಖ್ಯಮಂತ್ರಿಯನ್ನು ಆ ರಾಜ್ಯದ ಹೊರಗಿನ ಜನರಿಗೆ ಗೊತ್ತಿರಬೇಕಾದ್ದಿಲ್ಲ. ಆದೂ ಈಗಿನ ರಾಜಕೀಯದಲ್ಲಿ ಯಾರು ಬೇಕಾದರೂ ಯಾವ ಯೋಗ್ಯತೆಯೂ ಇಲ್ಲದೆ, ಅದೃಷ್ಟ ಅಥವಾ ನಿಷ್ಠೆಯ ಬಲದಿಂದ ‘ಹೈ ಕಮಾಂಡ್’ನ ಕೃಪೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಭಾಜನರಾಗುವ ಈ ಕಾಲದಲ್ಲಿ, ವೈಯಕ್ತಿಕವಾಗಿ ಎಲ್ಲರಿಗೂ ಗೊತ್ತಿರಬೇಕಾದ ಪ್ರಸಿದ್ಧಿ, ವರ್ಚಸ್ಸು, ವ್ಯಕ್ತಿತ್ವ ರಾಜಕಾರಣಿಗಳಿಗಿರುವುದಿಲ್ಲ. ಒಂದು ವೇಳೆ ಶಾರುಕ್‌ಖಾನ್ ಈತ ಯಾರು ಎಂದು ಕೇಳಿದ್ದರೆ ಅದು ಸಹಜವಾಗಿರುತ್ತಿತ್ತು. ಆದರೆ ಮನರಂಜನೆಯ ರಂಗದಲ್ಲಿರುವ ವ್ಯಕ್ತಿಗೆ ವ್ಯಾವಹಾರಿಕ ಆಸಕ್ತಿಯಿರುತ್ತದೆಯಾದ್ದರಿಂದ ಹೀಗೆ ಹೇಳಿದವರಿಂದ ತನ್ನ ವ್ಯವಹಾರಕ್ಕೆ ಏನು ತೊಂದರೆಯಾಗುತ್ತದೆಂಬುದನ್ನು (ರಾಜಕಾರಣಿಗಳಿಗಿರುವುದೇ ನೇತ್ಯಾತ್ಮಕ ಮೌಲ್ಯ; ಅವರಿಂದ ಉಚಿತ ಉಪಕಾರವೆಂಬುದು ಇರುವುದಿಲ್ಲ; ಏನಿದ್ದರೂ ಅಪಾಯ ಅಷ್ಟೇ!) ವಿಚಾರಿಸಿ ಅದಕ್ಕೆ ತಕ್ಕಂತೆ ದೂರವಾಣಿ ಕರೆ ಮಾಡಿ ಮಾತನಾಡಿ ವ್ಯವಹಾರವನ್ನು ಕುದುರಿಸಿಕೊಂಡು ಬರಬಹುದಾದ ಆತಂಕವನ್ನು ನಿವಾರಿಸಿಕೊಂಡದ್ದು ಶಾರುಕ್‌ಖಾನ್‌ರ ಚಾಣಾಕ್ಷತೆಯೆನ್ನಬೇಕು. ಇದನ್ನು ಪ್ರಸ್ತಾವಿಸಲು ಕಾರಣವೆಂದರೆ ಮಂತ್ರಿಗಳು ಮುಖ್ಯ-ಇರಲಿ, ಪ್ರಧಾನ-ಇರಲಿ, ಜಾಣಕುರುಡು, ಜಾಣಕಿವುಡು, (ಈಗ ಮೂಗತನವನ್ನೂ) ಪ್ರದರ್ಶಿಸುತ್ತಾರೆ. ರಾಷ್ಟ್ರದೊಳಗೆ ಅವು ಚುನಾವಣಾ ಭಾಗ್ಯದ ವಿಷಯವಾದರೆ, ಅಂತರ್‌ರಾಷ್ಟ್ರೀಯವಾಗಿ ಅವು ವರ್ಚಸ್ಸಿನ ಪ್ರಶ್ನೆ/ಸವಾಲುಗಳಾಗುತ್ತವೆ. ಆದ್ದರಿಂದ ರಾಷ್ಟ್ರೀಯ ವಿಚಾರಗಳು ಅಂತರ್‌ರಾಷ್ಟ್ರೀಯಗೊಳ್ಳುವುದು ಯಾರಿಗೂ ಬೇಡ. ಈಗ ಆದದ್ದೂ ಅದೇ.

1947ರ ಭಾರತ ವಿಭಜನೆಯ ಕಾಲದಲ್ಲಿ ನಡೆದ ನರಬಲಿ, 1984ರ ಸಿಖ್ ಹತ್ಯಾಕಾಂಡ ಮತ್ತು 2002ರ ಗುಜರಾತಿನ ನರಮೇಧ ಪ್ರಜ್ಞಾವಂತ ಮನಸ್ಸುಗಳನ್ನು ರಾಜಕೀಯ ರಹಿತವಾಗಿ ತಲ್ಲಣಿಸಿದ ಘಟನೆಗಳು. ಇವುಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಯಿತು, ಎಷ್ಟು ಜನರು ಬಿಡುಗಡೆ ಹೊಂದಿದರು ಎಂಬ ಸಂಖ್ಯಾಶಾಸ್ತ್ರವು ಕಡತ ವಿಲೇವಾರಿಗೆ ಸಂಬಂಧಿಸಿದ್ದೇ ಹೊರತು ಭಾವಕ್ಕೂ ಅಲ್ಲ, ವಿಚಾರಕ್ಕೂ ಅಲ್ಲ. ಇದರ ಸತ್ಯ ಮಿಥ್ಯಗಳು ತರ್ಕವನ್ನು ಮೀರಿದವುಗಳು. ಕಾನೂನೆಂಬ ಪರಿಕಲ್ಪನೆಯೇ ಇಲ್ಲದಿದ್ದ ಕಾಲದಲ್ಲಿ ನ್ಯಾಯವೇ ಸರ್ವಸ್ವವಾಗಿದ್ದ ಕಾಲದಲ್ಲಿ, ಲೋಕದೆದುರು, ಕಾಲದೆದುರು ತಾವು ಗೆದ್ದೆವು, ತಮಗೆ ಭಗವಂತನ ನೆರವಿತ್ತು, ತಮ್ಮ ನಡೆಯು ಸರಿ ಮತ್ತು ತಾವು ಸತ್ಯದ ಪರವಾಗಿದ್ದುದರಿಂದ ಹೀಗೆ ಗೆದ್ದೆವು ಎಂದೇ ನಿರೂಪಿಸಿದ ಅಥವಾ ಕಾನೂನಿನ ಪರಿಭಾಷೆಯಲ್ಲಿ ಹೇಳುವುದಾದರೆ ‘ಸಾಬೀತುಪಡಿಸಿದ’ ಪಾಂಡವರು ಕೊನೆಗೂ ಸಂಕಟದಿಂದ ಪಾರಾಗಲೇ ಇಲ್ಲ.

ಲೋಕಾಪವಾದದಿಂದ ಇಂದಿಗೂ ಹೊರಬಾರದ ಶ್ರೀರಾಮನಲ್ಲಿ ‘ತಪ್ಪಿಲ್ಲ’ವೆಂದು ಹೇಳಿದ ಸೀತೆಯೂ ಆತನೊಂದಿಗೆ ಬದುಕಲಾರದಾದಳು. ಇಂದು ಕಾನೂನೇ ಸಾರ್ವಭೌಮ. ಇದನ್ನು ಸೃಷ್ಟಿಸುವವರು ಮತ್ತು ಪಾಲಿಸುವವರು ಎಷ್ಟೇ ದಡ್ಡರಾಗಿರಲಿ, ದುಷ್ಟರಾಗಿರಲಿ- ಉದಾಹರಣೆಗೆ ನಮ್ಮ ಪೊಲೀಸ್ ವ್ಯವಸ್ಥೆ- ಅದು ನಮ್ಮನ್ನಾಳುತ್ತದೆ. ಸರಿ-ತಪ್ಪುಗಳ ನಿರ್ವಹಣೆಯನ್ನು ಕೆಲವು ಜನರಷ್ಟೇ ಮಾಡುತ್ತಾರೆ. ಇದೊಂದು ರೀತಿಯ ಆಧುನಿಕ ಜ್ಯೂರಿ ವ್ಯವಸ್ಥೆ. ಹೀಗಾಗಿ ಯಾವುದೇ ಪ್ರಸಂಗ-ಪ್ರಕರಣವೂ ಕಾನೂನಿನ ತಕ್ಕಡಿಯಲ್ಲಿ ಬೆಲೆಪಡೆದರೂ ನ್ಯಾಯದ ತಕ್ಕಡಿಯಲ್ಲಿ ಕಳೆಗುಂದುತ್ತದೆ.

ಇದರಿಂದಲೇ ಕಾನೂನಿನ ಬಾಹುಗಳಿಂದ ಬಿಡುಗಡೆ ಪಡೆದವರನ್ನೂ ಸಮಾಜವು ಸಂಶಯದಿಂದ ನೋಡುತ್ತದೆಯೇ ಹೊರತು ನಿರಂಜನರಾಗಿ ಅಥವಾ ಪ್ರಶ್ನಾತೀತರಾಗಿ ಕಾಣುವುದಿಲ್ಲ. ವಿದೇಶಗಳಿಂದ ಪ್ರಶಂಸೆ ಪಡೆದರೆ ಜನಸಾಮಾನ್ಯರಿಂದ ಪ್ರಧಾನಿಯ (ಅಥವಾ ರಾಷ್ಟ್ರಪತಿಯ) ವರೆಗೆ ನಮ್ಮ ದೇಶದ ಖ್ಯಾತಿ ವಿಶ್ವಮಾನ್ಯವಾಯಿತೆಂದು ತಿಳಿಯುತ್ತೇವೆ ಅಥವಾ ಭಾವಿಸುತ್ತೇವೆ ಅಥವಾ ಭ್ರಮಿಸುತ್ತೇವೆ. ಆದ್ದರಿಂದಲೇ ನಮಗೆ ನೊಬೆಲ್, ಪುಲಿಟ್ಸರ್, ಆಸ್ಕರ್, ಗ್ರಾಮಿ, ಮ್ಯಾಗ್ಸೆಸೆ ಮುಂತಾದ ಪ್ರಶಸ್ತಿಗಳು ಬಹುಭಾರದ ದೊಡ್ಡ ಕಿರೀಟಗಳಂತೆ ಗೋಚರಿಸುತ್ತವೆ. ಆತ್ಮನಿರ್ಭರತೆಯ ಮಾತನ್ನೆಷ್ಟೇ ಆಡಿದರೂ ಕೊನೆಗೂ ಪರಸತಿ, ಪರಧನಕ್ಕಾಗಿ ಚಿಂತಿಸುವ ಉದರವೈರಾಗ್ಯದಂತಿದೆ ಈ ನಮ್ಮ ಸ್ಥಿತಿ. ಇದಕ್ಕೆ ವ್ಯತಿರಿಕ್ತವಾಗಿ ಯಾರಾದರೂ ಟೀಕಿಸಿದರೆ ನಾವು ಆತನಿಗೆ ವಿಷಯದ ಕುರಿತ ಕನಿಷ್ಠ ಜ್ಞಾನವೂ ಇಲ್ಲವೆಂಬಂತೆ ಪ್ರತಿಕ್ರಿಯಿಸುತ್ತೇವೆ. ಇದು ಭಾರತೀಯರಿಗೆ ಹೆಚ್ಚು ವಿಶಿಷ್ಟವಾದ ಲಕ್ಷಣವೆನ್ನಿಸುತ್ತದೆ. ಈಚೆಗೆ ಗೋವಾದಲ್ಲಿ ಜ್ಯೂರಿಗಳ ಅಧ್ಯಕ್ಷರೊಬ್ಬರು ಭಾರತೀಯ ಸಿನೆಮಾವೊಂದರ ಕುರಿತು ಪ್ರಕಟಿಸಿದ ಅಭಿಪ್ರಾಯ ನಮಗೆ ಚೊಗರೆನ್ನಿಸಿದಾಗ ಆ ತಜ್ಞರ ಯೋಗ್ಯತೆಯನ್ನು, ಬದ್ಧತೆಯನ್ನು ನಮ್ಮ ಅನೇಕರು ಪ್ರಶ್ನಿಸಿದ್ದರು. ಕೆಲವೇ ದಿನಗಳ ಮೊದಲು ಅದೇ ವ್ಯಕ್ತಿಯನ್ನು ಜ್ಞಾನಿಯೆಂದು ಪರಿಗಣಿಸಿದ್ದನ್ನು ಮರೆಯಲಾಯಿತು.

ಈ ಪ್ರಮಾದಗಳಿಗೆ ಇತ್ತೀಚಿನ ಸೇರ್ಪಡೆಯೆಂದರೆ 2002ರ ಗುಜರಾತ್ ನರಮೇಧದಲ್ಲಿ ಪ್ರಧಾನಿ ಮೋದಿಯ ಪಾತ್ರ ನಿರ್ವಹಣೆಯನ್ನೊಳಗೊಂಡಂತೆ ಬಿಬಿಸಿ ತಯಾರಿಸಿದ ಸಾಕ್ಷ್ಯಚಿತ್ರ. ಆದರೆ ಬಿಬಿಸಿ ತನ್ನ ಸರಕಾರ ನಡೆಸಿದ ವಿಚಾರಣೆಯ, ಸಂದರ್ಶನಗಳ ಆಧಾರದಲ್ಲಿ ಒಂದು ಅಭಿಪ್ರಾಯವನ್ನು ರೂಪಿಸಿದೆ ಮತ್ತು ಅದರಲ್ಲಿ ಆರೋಪದ ಬೆಟ್ಟು ಮೋದಿಯ ಕಡೆಗಿದೆ. ಇದೇನೂ ಅವರ ವಿರುದ್ಧದ ಕಾನೂನಿನ ವಿಚಾರಣೆಯಲ್ಲ; ಶಿಕ್ಷೆಯಿಲ್ಲ. ಚರಿತ್ರೆಯಲ್ಲಿ ಹೀಗೆ ತಪ್ಪು-ಒಪ್ಪುಗಳ, ವ್ಯವಸ್ಥೆಯ ದೋಷದ, ಸಂಘರ್ಷದ ಚಿತ್ರಣಗಳು ಹಲವಿವೆ. ಇದರ ಮೊದಲ ಸರಣಿಯಷ್ಟೇ ಪ್ರಸಾರವಾಗಿದೆ; ಎರಡನೆಯದು ಇನ್ನೂ ಭಾರತದ ನೆಲದಲ್ಲಿ ಕಾಲಿಟ್ಟಿಲ್ಲ. ಅದಕ್ಕೂ ಮೊದಲೇ ಭಾರತದಾದ್ಯಂತ ರಾಷ್ಟ್ರೀಯ ಭೂಮಿ ಕಂಪಿಸಿದ್ದರಿಂದ ಮತ್ತು ಪ್ರಧಾನರು ತಮ್ಮ ಕುರ್ಚಿ ಅಲುಗಾಡುತ್ತಿದೆಯೆಂಬಂತೆ ಹುಯ್ಲಿಟ್ಟದ್ದರಿಂದ ಈಗ ನಿಯಂತ್ರಣ ರೇಖೆಯಿಂದ ಈಚೆಗೆ ಈ ಸಾಕ್ಷಚಿತ್ರದ ನೆರಳು ಸೋಕುವಂತಿಲ್ಲ. ಇಷ್ಟಕ್ಕೂ ಅದರಲ್ಲೇನಿದೆ? ಗೋಧ್ರಾ ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ಬೆಂಕಿ ಹಚ್ಚಿಕೊಂಡಿತು. ನಮ್ಮ ಮಾಧ್ಯಮಗಳು ಸದಾ ಒಳ್ಳೆಯದಕ್ಕೂ ಕೇಡಿಗೂ ಬಳಸುವ ‘ತಿರುಗೇಟು’ ಸರಕಾರದ ಕೃಪಾಶ್ರಯವನ್ನು ಪಡೆಯಿತು ಎಂಬುದೇ ತಾತ್ಪರ್ಯ.

ಇದೇನೂ ಹೊಸ ಆರೋಪವಲ್ಲ. ಇಲ್ಲಿನ ಪ್ರಕರಣಗಳು ಸಾಕಷ್ಟು ಜನರನ್ನು ಶಿಕ್ಷೆಗೊಳಪಡಿಸಿವೆ. ಸರ್ವೋಚ್ಚ ನ್ಯಾಯಾಲಯದವರೆಗೂ ಇವು ಸದ್ದು-ಸುದ್ದಿ ಮಾಡಿವೆ. ಈ ಕೃತ್ಯಗಳಲ್ಲಿ ಆಗಿನ ಅಲ್ಲಿನ ಮುಖ್ಯಮಂತ್ರಿಗಳ (ದೇಶದ ಈಗಿನ ಪ್ರಧಾನಿಯ) ಪಾತ್ರವಿತ್ತೆಂದು ಸಾಬೀತು ಪಡಿಸುವ ಸಾಕ್ಷ್ಯಾಧಾರಗಳು ಇಲ್ಲವೆಂಬ ಕಾರಣಕ್ಕೆ ಅವರ ವಿರುದ್ಧ ಮಾಡಲಾದ ದೂರು ಗಳು ತಳ್ಳಿಹಾಕಲ್ಪಟ್ಟಿವೆ. ಆದ್ದರಿಂದ ಕಾನೂನಿನ ದೃಷ್ಟಿಯಿಂದ ಪ್ರಧಾನಿ ಮುಕ್ತರು. ಇದು ದೇಶದ ಸಾವಿರಾರು ಪ್ರಕರಣಗಳಲ್ಲಿ ಸಿಲುಕಿದವರ ಹಣೆಬರಹವೂ ಹೌದು. ವ್ಯತ್ಯಾಸವೆಂದರೆ ಈ ಸಾಮಾನ್ಯರು ನಿರ್ದೋಷಿಗಳೆಂದು ಸಾಬೀತಾಗುವವರೆಗೆ ಕಂಬಿಯೆಣಿಸುತ್ತಿದ್ದರೆ, ಗುಜರಾತಿನ ಆಗಿನ ಮುಖ್ಯಮಂತ್ರಿ ರಾಜಕೀಯದ ಭಡ್ತಿ ಪಡೆದರು. ಅಲ್ಲಿನ ಗೃಹಮಂತ್ರಿ, ಆರೋಗ್ಯಮಂತ್ರಿ ಮುಂತಾದವರು ಕೆಲವು ಕಾಲ ವಿಚಾರಣಾಧೀನ ಕೈದಿಯಾಗಿಯೋ ದೋಷಿಯಾಗಿಯೋ ಸೆರೆವಾಸ ಅನುಭವಿಸಿದರೂ ಮುಖ್ಯಮಂತ್ರಿಗಳು ಕಾನೂನಿನಡಿ ಯಾವ ಲೇಪವನ್ನೂ ಅಂಟಿಸಿಕೊಳ್ಳಲಿಲ್ಲ. ನಮ್ಮ ದೇಶದ ಕಾನೂನು ಅವರನ್ನು ಆರೋಪಿಯೆಂದು ಹೇಳುವಂತಿಲ್ಲ. ಅವರು ನಿರ್ದೋಷಿ.

ಆದರೆ ಮೋದಿಯವರ ಕುರಿತ ಟೀಕೆಗಳು ವ್ಯಾಪಕವಾಗಿ ಪ್ರಕಟವಾಗಿದ್ದವು. ಕಾಂಗ್ರೆಸ್ ಅವರನ್ನು ‘ಸಾವಿನ ವ್ಯಾಪಾರಿ’ಯೆಂದು ಬಣ್ಣಿಸಿ ಅವರ ಚುನಾವಣಾ ಗೆಲುವಿಗೆ ಬೇಕಾದ ಮತಸಂಗ್ರಹವನ್ನು ಮಾಡಿತು. ಗುಜರಾತಿನ ಎಲ್ಲ ಗೊಂದಲಗಳು ಮೋದಿಯವರಿಗೆ ದುರದೃಷ್ಟದಲ್ಲಿ ಅದೃಷ್ಟವಾಗಿ ಪರಿಣಮಿಸಿ ಅವರನ್ನು ರಾಜಕೀಯ ಜೀವನದ ಉತ್ತುಂಗಕ್ಕೆ ತಲುಪಿಸಿತು. ಪ್ರಧಾನಿ 2018ರಲ್ಲಿ ಧಾರಾಳತನದಿಂದ ಒಮ್ಮೆ ‘‘ಪ್ರಜಾತಂತ್ರದ ಬೆಳವಣಿಗೆಗೆ ಟೀಕೆಗಳು ಅವಶ್ಯಕ’’ ಎಂದಿದ್ದರಂತೆ. ಅದನ್ನು ಅವರ ಕಡತಗಳಿಂದ ತೆಗೆಯಲಾಗಿದೆಯೋ ಗೊತ್ತಿಲ್ಲ. ಆದರೆ ಬಿಬಿಸಿಯ ಈ ಸಾಕ್ಷಚಿತ್ರ ಇನ್ನೂ ಜನರ ನಡುವೆ ಪ್ರಚಾರವಾಗುವ ಮೊದಲೇ ಅವರ ಸಚಿವರು, ಬೆಂಬಲಿಗರು ಮತ್ತು ಅಭಿಮಾನಿದೇವತೆಗಳು ಬಿಬಿಸಿಯನ್ನು ತೆಗಳಲಾರಂಭಿಸಿದರು. ಗೃಹ ಸಚಿವಾಲಯವು ಐಟಿ ನಿಯಮಾವಳಿಗಳ ತುರ್ತು ಅಧಿಕಾರವನ್ನು ಬಳಸಿ ಈ ಸಾಕ್ಷಚಿತ್ರವು ಹೆಚ್ಚು ಪ್ರಚಾರವಾಗದಂತೆ ನೋಡಿಕೊಂಡಿತು. ಪ್ರಾಯಃ ಇದರಿಂದಾಗಿ ಈ ಬಗ್ಗೆ ಗೊತ್ತಿಲ್ಲದ ಅನೇಕರಿಗೆ ಈ ವಿಚಾರ ತಿಳಿಯಿತೇನೋ?

‘ಕಾಶ್ಮೀರ್ ಫೈಲ್ಸ್’ ಎಂಬ ಹಿಂದಿ ಚಲನಚಿತ್ರವು ಉತ್ತಮವಾಗಿದೆಯೆಂಬ ಕಾರಣಕ್ಕೆ ಸರಕಾರ ಅದರ ನೆರವಿಗೆ ಧಾವಿಸಿಲ್ಲ; ಬದಲಾಗಿ ತನ್ನ ಕಾರ್ಯಸೂಚಿಗನುಗುಣವಾಗಿದೆಯೆಂಬ ಕಾರಣಕ್ಕೆ ಅದಕ್ಕೆ ತೆರಿಗೆ ವಿನಾಯಿತಿ ಮತ್ತು ಭಾರೀ ರಾಷ್ಟ್ರವ್ಯಾಪಿ ಪ್ರಚಾರವನ್ನು ನೀಡಿತು. ಉಚಿತ ಪ್ರದರ್ಶನಗಳು ನಡೆದವು. ಬಿಟ್ಟಿ ನೋಡಬಹುದೆಂಬ ಕಾರಣಕ್ಕೇ ಅನೇಕರು ಅದನ್ನು ನೋಡಿದರು. ಈಗ ಬಿಬಿಸಿಯ ಈ ಸಾಕ್ಷಚಿತ್ರವು ಮೋದಿಯವರ ಕುರಿತು ಕಠಿಣವಾಗಿ ಹೇಳಿದೆಯೆಂದಾದರೆ ಅದು ಬಿಬಿಸಿಯ ದೃಷ್ಟಿಕೋನವೇ ಹೊರತು ಸತ್ಯವೆಂದು ಸ್ವೀಕರಿಸಬೇಕಾಗಿಲ್ಲ. ಈಗ ಸರಕಾರ ತೋರಿಸುತ್ತಿರುವ ಪ್ರತಿಕ್ರಿಯೆಗಳಿಂದಾಗಿ ಸಾಕ್ಷಚಿತ್ರವು ಸತ್ಯದ, ವಾಸ್ತವದ ಸಮೀಪಕ್ಕೆ, ಸನಿಹಕ್ಕೆ ಧಾವಿಸುತ್ತಿದೆ. ನಮ್ಮ ಕಾನೂನುಮಂತ್ರಿಗಳು ಸರ್ವೋಚ್ಚ ನ್ಯಾಯಾಲಯವು ಪ್ರಧಾನಿಯವರಿಗೆ ಕ್ಲೀನ್‌ಚಿಟ್ ನೀಡಿದ್ದನ್ನು ಹೇಳಿ ಬಿಬಿಸಿಯು ಅದಕ್ಕಿಂತಲೂ ಹೆಚ್ಚೇ ಎಂದು ಪ್ರಶ್ನಿಸಿದ್ದಾರೆ. ಸತತವಾಗಿ ಸರ್ವೋಚ್ಚ ನ್ಯಾಯಾಲಯವನ್ನು ಅಸಂಗತ, ಅಸಂಬದ್ಧಗೊಳಿಸಲು ಅವರು ಉಪರಾಷ್ಟ್ರಪತಿಗಳೊಂದಿಗೆ ಸೇರಿಕೊಂಡು ಮಾಡುವ ಪ್ರಯತ್ನಗಳ ನಡುವೆ ಇದೊಂದು ಬೆಳ್ಳಿರೇಖೆ, ಮತ್ತು ಅವರ ತರ್ಕಕ್ಕೆ ಮುಳುವಾಗಬಲ್ಲ ಮತ್ತು ಅವರನ್ನು ವಿರೋಧಾಭಾಸಕ್ಕೆ ತಳ್ಳಬಲ್ಲ ಅಭಿಪ್ರಾಯ. ಇತರ ಅನುಯಾಯಿಗಳಂತೂ ಬಿಬಿಸಿಯೇನಾದರೂ ಭಾರತದಲ್ಲಿರುತ್ತಿದ್ದರೆ ಅದನ್ನು ನಾಶಮಾಡುವಷ್ಟು ಉನ್ಮಾದವನ್ನು ತೋರಿಸಿದರು.

ಬಿಬಿಸಿ ಒಂದು ಸ್ವತಂತ್ರ ಪ್ರಸಾರ ಸಂಸ್ಥೆ. ವಿಶ್ವದಲ್ಲಿ ನಿಖರತೆಗೆ ಬಹು ಹತ್ತಿರವೆಂಬ ಹೆಗ್ಗಳಿಕೆಯನ್ನು ಹೊಂದಿದ ಸಂಸ್ಥೆ. ನಮ್ಮ ಮಾಧ್ಯಮಗಳು ಪ್ರಸಾರ ಮಾಡಿದ ಸುದ್ದಿಗಳು ವಾಸ್ತವವೇ, ಸತ್ಯವೇ ಎಂದು ಪರೀಕ್ಷಿಸಲು ಬಿಬಿಸಿಯನ್ನು ಅವಲಂಬಿಸಲು ಕಾರಣವಿದೆ. ಅಷ್ಟೇ ಅಲ್ಲ, ಅದರ ವಸ್ತುನಿಷ್ಠೆ ವಿಶ್ವದೆಲ್ಲೆಡೆ ಭಾರೀ ಮನ್ನಣೆಯನ್ನು ಹೊಂದಿದೆ. ರಾಜಕೀಯವೆಂದಲ್ಲ, ಕ್ರೀಡೆ, ವಿಜ್ಞಾನ, ಸಾಹಿತ್ಯ-ಕಲೆ, ಜನಜೀವನ ಹೀಗೆ ಬದುಕಿನ ಎಲ್ಲ ಮುಖಗಳನ್ನೂ ಮಗ್ಗುಲುಗಳನ್ನೂ ಅದು ಅನಾವರಣಗೊಳಿಸುತ್ತಿದೆ. ಬ್ರಿಟನ್‌ನ ಆಡಳಿತವನ್ನೂ ಎದುರು ಹಾಕಿಕೊಂಡು ಅದು ತನ್ನ ಪ್ರಸಾರವನ್ನು ಸಾಧ್ಯವಾಗಿಸಿದೆ. ಇದು ಗೊತ್ತಿಲ್ಲದ ಭಾರತೀಯರು ಅದನ್ನು ಸುಖಾಸುಮ್ಮನೆ ಟೀಕಿಸುತ್ತಾರೆ, ಕೆಲವು ದಶಕಗಳ ಮೊದಲು ಅಂದರೆ ಭಾರತದಲ್ಲಿ ಇನ್ನೂ ವಿದೇಶಿ ನೆಲದ ಕ್ರೀಡೆಗಳ ವೀಕ್ಷಕ ವಿವರಣೆ ಸಿಕ್ಕದಿದ್ದಾಗ ಬಿಬಿಸಿಯ ಮೂಲಕ ಅವನ್ನು ಕೇಳಿದ ತಲೆಮಾರಿನವರು ಇಂದೂ ಇದ್ದಾರೆ. ವಿಜಯ್ ಅಮೃತರಾಜ್ ಮತ್ತು ಜೋನ್‌ಬೋರ್ಗ್ ನಡುವಣ ವಿಂಬಲ್ಡನ್ ಟೆನ್ನಿಸ್ ಪಂದ್ಯವನ್ನು (ಪ್ರಾಯಃ ಸೆಮಿಫೈನಲ್), ವಿಂಡೀಸ್‌ನಲ್ಲಿ ಭಾರತ 1971ರಲ್ಲಿ ಪಡೆದ ಐತಿಹಾಸಿಕ ಸರಣಿ ಗೆಲುವನ್ನು ನಾನೇ ಕೇಳಿದ್ದೇನೆ. ಬಿಬಿಸಿ ಇಂದಿಗೂ ಜನಪ್ರಿಯ.

ಇಂತಹ ಒಂದು ಸಂಸ್ಥೆಯನ್ನು ಅವಹೇಳನ ಮಾಡುವ ಮೊದಲು ಅದರ ಮತ್ತು ಅದು ಹೇಳಿದ ವಿಚಾರಗಳ ತೌಲನಿಕ ವಿಮರ್ಶೆ ನಡೆಯಬೇಕು. ಭಾರತದ ಪ್ರಧಾನಿಯನ್ನು ಟೀಕಿಸಿದಾಕ್ಷಣ ಬಿಬಿಸಿ ಅಪರಾಧಿಯಾಗುವುದಿಲ್ಲ. 2002ರ ಗುಜರಾತ್ ಪ್ರಕರಣ ನಿಮಿತ್ತವಾಗಿ ಪ್ರಧಾನಿಯಾಗುವ ವರೆಗೂ ಮೋದಿಯವರಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ವೀಸಾ ನಿರಾಕರಿಸಿತ್ತೆಂಬುದನ್ನು ಇಲ್ಲಿ ನೆನಪಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯದ ಲಾಭ ಪಡೆದುಕೊಂಡು ಚಿನ್ನವನ್ನು ಕಿಲುಬೆಂದು ನಾವು ಟೀಕಿಸಿದರೆ ನಮ್ಮ ಮಾನ ಹರಾಜಾಗುತ್ತದೆಯೇ ವಿನಾ ಬಿಬಿಸಿಯದ್ದಲ್ಲ. ಬಿಬಿಸಿಯ ಬಿಸಿಯಂತೂ ದೇಶವನ್ನು ನಾಟಿದೆ ಎಂಬುದು ಸತ್ಯ.

ಬಿಬಿಸಿ ಟೀಕಿಸಿದ್ದು ಪ್ರಧಾನಿ ಮೋದಿಯವರನ್ನೂ ಅಲ್ಲ; ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು. ಆದರೆ ಮೋದಿಯೇ ಭಾರತ, ಮೋದಿಯೇ ಸರಕಾರ ಎಂದೆಲ್ಲ ಬರಿಗುಲ್ಲೆಬ್ಬಿಸುವ ಮಂದಿಗೆ ಈ ಸೂಕ್ಷ್ಮಗಳೆಲ್ಲ ಅರ್ಥವಾಗವು. ಇಂದಿರಾ ಯುಗದಲ್ಲಿನ ದೇವಕಾಂತ ಬರುವಾ ‘‘ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ’’ ಎಂಬ ಘೋಷಣೆಯನ್ನು ಕೂಗಿ ಹೇಗೆ ನಗೆಪಾಟಲಿಗೀಡಾದರೋ ಅದನ್ನೇ ಇಲ್ಲಿಯವರೆಗೂ ಬೆಳೆಸಿಕೊಂಡು ಬರುವಲ್ಲಿ ಭಾರತ ಸರಕಾರ ಮತ್ತು ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿದೆಯೆಂಬುದು ಗಮನಾರ್ಹ ಬೆಳವಣಿಗೆ. ಆದರೆ ಇವರೆಲ್ಲ ಮರೆತದ್ದೆಂದರೆ ‘ಶಂಕರ್ಸ್ ವೀಕ್ಲಿ’ಯ ಶಂಕರ್‌ರಂತಹ ವ್ಯಂಗ್ಯಚಿತ್ರಗಾರರು ನೆಹರೂ ಮತ್ತು ಇಂದಿರಾರವರನ್ನೂ ಟೀಕಿಸು ತ್ತಲೇ ಇಂದಿರಾ ಸರಕಾರದಿಂದ ಪದ್ಮಪ್ರಶಸ್ತಿಯನ್ನು ಪಡೆದರು ಎಂಬ ವಿಚಾರ. ಅನೇಕ ಬಾರಿ ನೆನಪುಗಳೂ ಆಯ್ಕೆಯನ್ನು ಬಯಸುತ್ತವೆಯಲ್ಲವೇ?

Similar News