×
Ad

(ಅ)ಗೌರವ (ಅ)ನೀತಿ

Update: 2025-10-09 11:41 IST

ಒಳ್ಳೆಯ ಮಾದರಿಯ ನಾಯಕತ್ವವಿದ್ದರೆ ಸಾಮಾಜಿಕ ಹಿತ ಸಾಧ್ಯ. ಒಡೆದೇ ಆಳುವವನಿಗೆ ಪೂರ್ಣವೆಂದರೇನೆಂದು ಹೇಗೆ ಅರ್ಥವಾದೀತು? ಅಖಂಡ ಭಾರತವಾಗುವ ಮುನ್ನ ಸಾಮರಸ್ಯದ ಭಾರತವಾದರೆ, ಎಲ್ಲರನ್ನೂ ಗೌರವಿಸುವ ನೀತಿ ಸಾಧ್ಯವಾದರೆ ಮಾತ್ರ ಒಳಿತಾದೀತು. ರಾಜಕೀಯವೇ ಬದುಕಾದರೆ ಆಗ ಬಿಟ್ಟಿಬಾಬುಗಳು ದೇಶದ ಉಸ್ತುವಾರಿಯನ್ನು ಕೈಗೊಂಡು ದೇಶದ ನಾಶ ಮಾತ್ರವಲ್ಲ, ದೇಶದ ಮಾನ ಹರಾಜಾಗುವುದಕ್ಕೆ ದಾರಿ ದೂರವಿಲ್ಲ.

ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್.ಗವಾಯಿಯವರತ್ತ ‘ಹಿರಿಯ’ ವಕೀಲರೊಬ್ಬರು ಚಪ್ಪಲಿ ಎಸೆದರೆಂದೋ ಎಸೆಯಲು ಪ್ರಯತ್ನಿಸಿದರೆಂದೋ ಬಂದ ಸುದ್ದಿ ದೇಶದೆಲ್ಲೆಡೆ (ಬಿರು) ಗಾಳಿಯನ್ನೆಬ್ಬಿಸಿದೆ. ಈಗ ದೂರು ದಾಖಲಾಗಿಲ್ಲ. ಈ ದೇಶದ ನ್ಯಾಯವ್ಯವಸ್ಥೆಯೇ ಹಾಗೆ ಅಚ್ಚರಿಯ ಗುಚ್ಛ. ಯಾರೆಡೆಗೆ ಎಸೆದರೋ ಅವರೇ ಅಥವಾ ಅವರ ಪರವಾಗಿ ಇತರರು ದೂರುಕೊಡದಿದ್ದರೆ ನಮ್ಮ ಕಾನೂನು ವ್ಯವಸ್ಥೆಯು ಚಲಿಸುವುದಿಲ್ಲ; ಹೆಜ್ಜೆಯಿಡುವುದಿಲ್ಲ. ಪ್ರಾಯಃ ಬುದ್ಧನ ಅನುಯಾಯಿಯಾಗಿರುವ, ಅಹಿಂಸೆಯನ್ನು ಗೌರವಿಸುವ, ನಂಬುವ ಗವಾಯಿಯವರು ಕ್ಷಮೆಯೇ ದೊಡ್ಡ ಸೇಡೆಂದು ನ್ಯಾಯವಾಗಿಯೇ ನಂಬಿರಬಹುದು. ಸಜ್ಜನರ ಬಹುದೊಡ್ಡ ಆಯುಧದಂತಿರುವ ಅಹಿಂಸೆ ಮತ್ತು ಕ್ಷಮೆ ಇವು ಬುದ್ಧ, ಯೇಸು ಮತ್ತು ಗಾಂಧಿಯನ್ನು ಒಂದೇ ತರಂಗಾಂತರದಲ್ಲಿ ಬಿಂಬಿಸುತ್ತವೆ.

‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ’, ‘ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ’, ‘ದೇವರೇ ಇವರನ್ನು ಕ್ಷಮಿಸು, ಇವರಿಗೆ ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲ’ ಮುಂತಾದ ಮನಮೋಹಕ ಉದಾತ್ತ ಮಾತುಗಳು ಉದಾರಚರಿತರ ಸದ್ಗುಣಗಳನ್ನು ತೋರಿಸಿ ಮನುಕುಲಕ್ಕೆ ಆದರ್ಶವಾದ ಹಾದಿಯನ್ನು ತೋರಿಸುತ್ತವೆಂದು ಹೇಳಲಾಗಿದೆ. ಆದರೆ ನಿಜಕ್ಕೂ ಚರಿತ್ರಹೀನರು ಎಂದಾದರೂ ಇಂತಹ ಗುಣಗಳನ್ನು ಗೌರವಿಸಿದ್ದಾರೆಯೇ? ನಂಬಿದ್ದಾರೆಯೇ? ಇಲ್ಲ. ಈಗಂತೂ ನಮಗೆ ಬೇಕಾದವರು ತಪ್ಪು ಮಾಡಿದರೆ ‘ಅವರ ಮನಸ್ಥಿತಿ ಚೆನ್ನಾಗಿರಲಿಲ್ಲವೇನೋ?’ ಅಥವಾ ‘ಅವರು ವಿನಾಕಾರಣ ಹೀಗೆ ಮಾಡಿರಲಿಕ್ಕಿಲ್ಲ, ಅವರು ಅಂಥವರಲ್ಲ!’ ಎಂದೆಲ್ಲ ಹೇಳುವುದು ವಾಡಿಕೆಯಾಗಿದೆ. ಇಂತಹ ಪ್ರಸಂಗಗಳು ಈ ದೇಶದಲ್ಲಿ ದಿನನಿತ್ಯ ನಡೆಯುತ್ತವೆ. ನಮ್ಮ ಮನೆಯೊಳಗೆ ನಡೆದರೆ ಮಾತ್ರ ನಾವು ‘ಹೌದಲ್ಲ!’ ಎನ್ನುತ್ತೇವೆ. ಮನೆಯೆದುರೇ ನಡೆದರೂ ‘ಇರಲಾರದು’ ಅಥವಾ ‘ಇದ್ದರೂ ಅದಕ್ಕೆ ನಾವೇಕೆ ತಲೆಕೆಡಿಸಿಕೊಳ್ಳಬೇಕು’ ಎಂದುಕೊಳ್ಳುತ್ತೇವೆ. ಈ ಮತ್ತು ಇಂತಹ ಗುಣಗಳೇ ಸಹಜವೆಂಬ (ಕು)ತರ್ಕಕ್ಕೆ, (ದು)ಸ್ಥಿತಿಗೆ ಬಂದು ತಲುಪಿದ್ದೇವೆ.

ಹೀಗಾಗಿ ಅಂಗುಲಿಮಾಲಾನ ಪ್ರಸಂಗವು ಪಂಚತಂತ್ರದಂತೆ ಒಂದು ದಂತಕಥೆಯೆಂದು ಹೇಳಿ ದಾಟಿಬಿಡಬಹುದು. ಉಳಿದದ್ದೆಲ್ಲ ಕವಿಹೃದಯದ ಅವತರಣಿಕೆಯೆಂದು ಹೇಳಿ ಹಗುರಾಗಬಹುದು.

ಆದರೆ ಈ ಗುಣವಿಕಾಸದ ಹಿಂದೆ ಆಳವಾದ ಬೇರುಗಳಿವೆ. ಈ ವಿಕ್ಷಿಪ್ತತೆಯ ನಡುವೆ ಭಾರತದ ಸಂವಿಧಾನದ ಗಾಳಿಪಟ ಒಂದಿಷ್ಟಾದರೂ ಇನ್ನೂ ಕಾಣುವಷ್ಟು ಎತ್ತರದಲ್ಲಿದೆಯೆಂದಾದರೆ ಅದಕ್ಕೆ ನಮ್ಮ ಸಂವಿಧಾನ ಮತ್ತು ಅದಕ್ಕೊಂದಿಷ್ಟು ಅಂಟಿಕೊಂಡ ಜನರು ಹಾಗೂ ಸಾಂವಿಧಾನಿಕ ಹೊಣೆಯನ್ನು ಸ್ವಲ್ಪವಾದರೂ ನೆರವೇರಿಸುವ ನ್ಯಾಯಾಂಗ ಜೀವಂತವಾಗಿರುವುದೇ ಕಾರಣ. ಸಂವಿಧಾನದ ಅಂಗಗಳಲ್ಲಿ ನ್ಯಾಯಾಂಗವೆಂಬ ಅತೀ ಕಡಿಮೆ ಹಾನಿಕಾರಕ ವ್ಯವಸ್ಥೆಯು ಶಾಸಕಾಂಗ ಮತ್ತು ಕಾರ್ಯಾಂಗವೆಂಬ ಅಧಿಕಾರಗ್ರಸ್ತ ಅಂಗಗಳಿಗೆ ಕಾನೂನಿನನ್ವಯ ಒಮ್ಮೊಮ್ಮೆಯಾದರೂ ಹಾಕುವ ಅಂಕುಶಗಳಿಂದ ಮುಕ್ತವಾಗುವುದಕ್ಕೆ ಮಾಡುವ ರಾಜಕೀಯತಂತ್ರದಂತೆ ಗೋಚರವಾಗುತ್ತಿವೆ. ಕೆಲವೆಡೆ ಕೆಲವರಿಂದಾಗಿ ನ್ಯಾಯಾಂಗವೂ ಹಿಡಿತ ತಪ್ಪಿ ಹೋದರೂ ಅದಿನ್ನೂ ತನ್ನ ಅಸ್ತಿತ್ವವನ್ನು, ಗೌರವವನ್ನು ಬಲಿಕೊಟ್ಟಿಲ್ಲ. ಇದು ಅರಿವಿದ್ದೇ ಈಗ ಪ್ರಧಾನಿ ನೇಪಥ್ಯದಿಂದ ನ್ಯಾಯಾಂಗದ ವಿರುದ್ಧ ಟೀಕೆಗಳನ್ನು ಹರಿಬಿಟ್ಟಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಈಗ ವೇದಿಕೆಯಿಂದ ನಿರ್ಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಮಾಜಿ ಕಾನೂನು ಸಚಿವ, ಈಗಿನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮುಂತಾದವರು ಶಾಸಕಾಂಗದ ಅಧಿಕಾರದ, ಸ್ವಾತಂತ್ರ್ಯದ, ಸ್ವಾಯತ್ತೆಯ ಹೆಸರಿನಲ್ಲಿ, ಅವಕಾಶ ಸಿಕ್ಕಾಗಲೆಲ್ಲ ಟೀಕಿಸಿದರು. ಅದಕ್ಕೆ ಸೂಕ್ತ ಮನ್ನಣೆ ಸಿಗದಾಗ ಸುಮ್ಮನಾದರು.

ಈಚೆಗೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಎಂಬ ಅರ್ಥತಜ್ಞ ನ್ಯಾಯಾಂಗದ ಬಗ್ಗೆ ಅದರಲ್ಲೂ ಇಬ್ಬರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಬೀಸುಟೀಕೆಯನ್ನು ಮಾಡಿದ್ದಾರೆ. ‘ವಿಕಸಿತ ಭಾರತ’ಕ್ಕೆ, ಅರ್ಥಾತ್ ಭಾರತದ ವಿಕಾಸಕ್ಕೆ ನ್ಯಾಯಾಂಗವೇ ಮುಖ್ಯ ತೊಡಕು ಎಂಬ ಉದ್ಧಟತನದ ಮಾತನ್ನಾಡಿದರು. ಅಷ್ಟೇ ಅಲ್ಲ. ನ್ಯಾಯಾಲಯಗಳ ವ್ಯವಸ್ಥೆಯ ಬಗ್ಗೆ ಮುಖ್ಯವಾಗಿ ಅವರನ್ನು ಗೌರವಿಸುವ ಪದಗಳಿಗೆ, ರಜೆಗಳಿಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ‘ಮೈ ಲಾರ್ಡ್, ಯುವರ್ ಆನರ್’ ಮುಂತಾದ ಪದಗಳನ್ನು ಸಮಾನತೆಯ ಎದುರಿನಲ್ಲಿ ಏಕೆ ಬಳಸಬೇಕು ಎಂದು ಪ್ರಶ್ನಿಸಿದರು. ಹೀಗೆ ಬಳಸಿದ್ದರಿಂದಲೇ ನ್ಯಾಯಾಂಗವು ತಾನು ಇತರ ಅಂಗಗಳಿಂದ ಹೆಚ್ಚು ಎಂಬ ಹಿರಿಮೆಯನ್ನು ಪ್ರದರ್ಶಿಸುತ್ತಿದೆ ಎಂದರು. ಇಷ್ಟಕ್ಕೇ ಅವರು ನಿಲ್ಲಿಸಲಿಲ್ಲ. ‘‘ಇತರರಗಿಲ್ಲದ ಬೇಸಿಗೆಯ, ದಸರಾದ, ಚಳಿಗಾಲದ ರಜೆ ನ್ಯಾಯಾಲಯಗಳಿಗೇಕೆ?’’ ಎಂದು ಕೇಳಿದರು.

ಈ ಮೇಧಾವಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರ. ಅನೇಕ ಉನ್ನತ ಹುದ್ದೆಯಲ್ಲಿ ದುಡಿದವರು. ಆಳುವ ಪಕ್ಷದ ಪ್ರೀತಿಪಾತ್ರ ನಡವಳಿಕೆಯಿಂದ ಆಯಕಟ್ಟಿನ ಹುದ್ದೆಯನ್ನು ಆಕ್ರಮಿಸಿದವರು. ಇವರ ಆರ್ಥಿಕ ತಜ್ಞತೆಯ ಬಗ್ಗೆ ಯಾರಿಗೂ ಮುನಿಸಿಲ್ಲ. ಆದರೆ ಇಷ್ಟೆಲ್ಲ ಪದವಿಯೂ ಇವರಿಗೆ ಸಾಮಾನ್ಯ ಜ್ಞಾನ, ಬುದ್ಧಿ ಮತ್ತು ವಿವೇಕವನ್ನು ಒದಗಿಸಲಿಲ್ಲವೆನ್ನುವುದು ದುರಂತ. ಈಗಂತೂ ಪ್ರಧಾನಿಯ ನೀಲಿಗಣ್ಣಿನ ಹುಡುಗನಾದ್ದರಿಂದ ಒಕ್ಕೂಟ ಸರಕಾರದ ಮನದಿಂಗಿತವನ್ನರಿತುಕೊಂಡು ಅದಕ್ಕೆ ಬೇಕಾದಂತೆ ನೆಗೆಯುವುದೇ ಈ ಮತ್ತು ಇಂಥವರ ಕೆಲಸ. (ಚಪ್ಪಲಿ ಎಸೆದವರಿಗೂ ಒಂದು ಡಾಕ್ಟರೇಟಿದೆ! ಇಂಥವರನ್ನು ಹೊಂದಿದ ದೇಶ, ಬೆಳೆಸಿದ ಆಡಳಿತ ಧನ್ಯ!)

ಇರಲಿ, ಇವರು ಹೇಳಿದ್ದನ್ನು ವಿವೇಚಿಸಬೇಕು. ಇನ್ಯಾವ ಹುದ್ದೆಯಲ್ಲೂ, ಕ್ಷೇತ್ರದಲ್ಲೂ ಇಲ್ಲದಷ್ಟು ದುಡಿಮೆ ನ್ಯಾಯಾಂಗದಲ್ಲಿದೆಯೆನ್ನುವುದು ಅದನ್ನು ಹತ್ತಿರದಿಂದ ನೋಡಿದವರಿಗಷ್ಟೇ ಗೊತ್ತು. ನ್ಯಾಯವೆನ್ನುವುದು ಕಾನೂನಿನನ್ವಯ ಮತ್ತು ಕಾನೂನಿನ ಪರಿಧಿ ಮತ್ತು ಪರಿಮಿತಿಯೊಳಗೇ ನೀಡಬೇಕು. ಇತರ ಯಾವುದೇ ಕ್ಷೇತ್ರದಲ್ಲಿರುವ ಸಾರ್ವಜನಿಕ ಸಂಪರ್ಕವಾಗಲೀ ಬಿಟ್ಟಿ ಸೌಲಭ್ಯಗಳಾಗಲೀ ನ್ಯಾಯಾಂಗದಲ್ಲಿ ಸಿಗದು. ಖಾಸಗಿತನ ಅದರ ದುರ್ದೆಶೆ. ಜೈಲೊಳಗಿದ್ದೂ ಸಚಿವರಾಗಬಹುದು; ಹತ್ತಾರು ಕ್ರಿಮಿನಲ್ ಪ್ರಕರಣಗಳಿದ್ದರೂ ಚುನಾವಣೆಯನ್ನೆದುರಿಸಬಹುದು. ಪಕ್ಷರಾಜಕಾರಣ, ಪಕ್ಷಪಾತ ಇವೆಲ್ಲವನ್ನೂ ಮಾಡಿ ಸುಖಾನುಭವವನ್ನು ಪಡೆಯಬಹುದು. ಆದರೆ ನ್ಯಾಯಾಧೀಶರಾಗಲೀ, ನ್ಯಾಯಮೂರ್ತಿಗಳಾಗಲೀ ತಮ್ಮ ಲಕ್ಷ್ಮಣರೇಖೆಯನ್ನು ಮೀರಿ ಹೋಗುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವಂತಿಲ್ಲ. ವೈಯಕ್ತಿಕವಾಗಿ ಯಾವುದರಲ್ಲೂ ಬಹಿರಂಗವಾಗಿ ಭಾಗವಹಿಸುವಂತಿಲ್ಲ. ಎಲ್ಲವೂ ನಿಯಮಾನುಸಾರ. ಈ ದುಡಿಮೆಗಾಗಿಯೇ ಈ ರಜೆಗಳು. ಖಾಸಗಿ ಬದುಕಿನ, ಆಪ್ತ ಕ್ಷಣಗಳ, ಹನಿಸಮಯಗಳು.

ಹಾಗಾದರೆ ಅಪವಾದಗಳಿಲ್ಲವೇ? ಇವೆ. ನ್ಯಾಯಮೂರ್ತಿಗಳಾಗಿದ್ದು ನಿವೃತ್ತರಾದ ಕ್ಷಣ ರಾಜಕೀಯಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆಗೆಯುವವರಿದ್ದಾರೆ. ಪಟ್ಟಭದ್ರ ಹಿತಾಸಕ್ತಿಯ ಹುದ್ದೆಯ ನಿರೀಕ್ಷೆಯಲ್ಲಿ ಸರಕಾರಕ್ಕೆ ಸರಿಯಾಗುವ ತೀರ್ಮಾನವನ್ನು ಮಾಡುವವರಿದ್ದಾರೆ. ಆದರೂ ಇತರ ಕ್ಷೇತ್ರಗಳಲ್ಲಿ ನಿಯಮಗಳಿರುವಷ್ಟು ನ್ಯಾಯಾಂಗದಲ್ಲಿ ಅಪವಾದಗಳಿರಬಹುದು. ನ್ಯಾಯಾಂಗದಲ್ಲಿರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಏಕಾಂಗಿಗಳು.

ಈ ದ್ವೀಪಪರಿಸರಕ್ಕಾಗಿಯೇ ನ್ಯಾಯಾಂಗಕ್ಕೆ ಪ್ರತ್ಯೇಕವಾದ ನೆಲೆಯಿದೆ, ಗೌರವವಿದೆ. ‘ಮೈಲಾರ್ಡ್’ ಅಥವಾ ‘ಯುವರ್ ಆನರ್’ ಎನ್ನುವಾಗ ಆ ಹುದ್ದೆಯ ಗೌರವಸೂಚಕ ಅದೆಂದು ಮರೆಯಬಾರದು. ಇಷ್ಟಕ್ಕೂ ಇಂತಹ ಗೌರವಸೂಚಕಗಳು ಇತರೆಡೆಯೂ ಇವೆ. ರಾಷ್ಟ್ರಪತಿ-ಉಪರಾಷ್ಟ್ರಪತಿ, ಪ್ರಧಾನಿ ಇವರನ್ನೆಲ್ಲ ವಿಶೇಷ ಗೌರವದಿಂದ ಸಂಬೋಧಿಸುವ ಉದ್ದೇಶವೇನು? ಸಭಾಪತಿಗಳಿಗೇಕೆ ವಿಶಿಷ್ಟ ಗೌರವ? ಅವರೊಂದಿಗೆ ವಂದಿಮಾಗಧರೇಕೆ? ಇವೆಲ್ಲ ಸಲೀಸಾಗಿ ಮಾಮೂಲು ನಡವಳಿಕೆಯಂತೆ ಮುಂದುವರಿಯುತ್ತಿರುವಾಗ ನ್ಯಾಯಾಂಗದ ಕುರಿತು ಈ ಪ್ರತ್ಯೇಕ ಬೀಸುಹೇಳಿಕೆಯೇಕೆ? ಮೇಲೆ ಹೇಳಿದ ಪಿಎಚ್.ಡಿ. ಪದವಿ ಪಡೆಯುವಾಗ ಗವನು, ಕಿರೀಟದಂತಹ ಅಲಂಕಾರಗಳನ್ನು ಧರಿಸುವುದೇಕೇ?

ಹೀಗೆ ಟೀಕಿಸಿದವರು ಇವನ್ನೆಲ್ಲ ಗೊತ್ತಿಲ್ಲದವರೇನಲ್ಲ. ಇವೆಲ್ಲ ಸಮಯ-ಸಂದರ್ಭಗಳ ಗೊತ್ತುಗುಳಿಯಿಲ್ಲದೆ ಆಡಿದ ಮಾತುಗಳೇನಲ್ಲ. ಇವು ಪ್ರಜ್ಞಾಪೂರ್ವಕ, ಉದ್ದೇಶಪೂರ್ವಕ.

ಮೋದಿ ಸರಕಾರ ತನಗಾಗದವರನ್ನು ಅಥವಾ ಮುಜುಗರ ತರಬಹುದಾದ್ದನ್ನು ಪ್ರಾಕ್ಸಿಗಳ ಮೂಲಕ ನಿಯಂತ್ರಿಸಲು ಪ್ರಯತ್ನಿಸುವುದು ಈಗೊಂದು ದಶಕದ ರಾಜನೀತಿ. ಈ ಕಾರ್ಯದಲ್ಲಿ ಕೇಂದ್ರ ಸರಕಾರದ ‘ಈ.ಡಿ.’ ಎಂದು ಪ್ರಸಿದ್ಧಿಯಾಗಿರುವ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ತಂಡ, ರಾಷ್ಟ್ರೀಯ ತನಿಖಾ ದಳ, ಆದಾಯ ತೆರಿಗೆ ಇಲಾಖೆ, ಮುಂತಾದ ನೇರ ಆಳುಗಳಲ್ಲದೆ ಪರೋಕ್ಷವಾಗಿ ದುಡಿಯುವ ವಿವಿಧ ‘ಬುದ್ಧಿವಂತ’ರ ತಂಡವೂ ಇದೆ. ಇದು ಸಾಮಾನ್ಯ ಕಾರ್ಯಕರ್ತರಿಂದ ಸಚಿವ-ಉಪ/ರಾಷ್ಟ್ರಪತಿಯ ವರೆಗೂ ಒಂದೇ ಧ್ವನಿಯಲ್ಲಿ, ಧಾಟಿಯಲ್ಲಿ ವಿವಿಧ ಘೋಷಣೆಗಳನ್ನು ಕೂಗುತ್ತವೆ. ಕೆಲವರು ಸೌಮ್ಯ ಮತ್ತು ಇನ್ನು ಕೆಲವರು ಉಗ್ರ ಸ್ವರೂಪದಿಂದ ಇದನ್ನು ದೇಶಾದ್ಯಂತ ಮತ್ತು ಸಾಂದರ್ಭಿಕವಾಗಿ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಬಿತ್ತರಿಸುತ್ತವೆ.

ರಾಜನೀತಿಯನ್ನು ಅನುಸರಿಸಿ ಎಂದು ಆಗಿನ ಪ್ರಧಾನಿ ವಾಜಪೇಯಿಯವರಿಂದ ಹೇಳಿಸಿಕೊಂಡ ಖ್ಯಾತಿಯ ಗುಜರಾತಿನ ಮುಖ್ಯಮಂತ್ರಿ ಮುಂದೆ ಒಂದು ದಶಕದ ಬಳಿಕ ಪ್ರಧಾನಿಯಾಗಿ ಸಂಸತ್ತಿನ ಮೆಟ್ಟಲಿನ ಧೂಳನ್ನು ಹಣೆಗೊತ್ತಿಕೊಂಡಾಗಲೇ ಮುಂದಿನ ಹಾದಿ ತೆರೆದಿತ್ತು. ಕಳೆದ ದಶಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ದೇಶದ ಉಸಿರುಕಟ್ಟಿಸಿದ್ದು ಬದುಕನ್ನು ಪಕ್ಷರಾಜಕೀಯಕ್ಕೂ ಅಧಿಕಾರಕ್ಕೂ ಅಡವಿಟ್ಟವರು ಮಾತ್ರ ತಮಗೇನೂ ಆಗಿಲ್ಲವೆಂದು ಹೇಳಬಹುದಾಗಿತ್ತು. ಪರಿಣಾಮವಾಗಿ ನೋಟು ಅಮಾನ್ಯೀಕರಣ, ಬೆಲೆಯೇರಿಕೆ, ಪುಲ್ವಾಮಾ, ಮುಂತಾದ ಮೊನ್ನೆ ಮೊನ್ನೆಯ ಪಹಲ್ಗಾಮ್ ದುರಂತದ ಬರೆಗೆ ‘ನೋಡಿ ಸ್ವಾಮಿ, ನಾವಿರೋದೇ ಹೀಗೆ’ ಎಂಬ ಸೌಮ್ಯ ಇಲ್ಲವೇ ಸಾತ್ವಿಕ ಹಠದ ಬದಲಿಗೆ ರಾಜಸವನ್ನೂ ದಾಟಿದ ‘ನಾನು ಹೀಗೇ ಮಾಡೋದು, ಅದೇನು ಕಿತ್ತುಕೊಳ್ತೀರೋ ನೋಡ್ತೀನಿ’ ಎಂಬ ತಾಮಸ ಉದ್ಧಟತನ ಮುಂದುವರಿದಿದೆ.

ಯೋಜನಾ ಆಯೋಗವನ್ನು ನೀತಿ ಆಯೋಗವಾಗಿ ಬದಲಾಯಿಸಿದಾಗಲೇ ಅನೀತಿಯ ಬೀಜಗಳು ಬಿತ್ತಲ್ಪಟ್ಟಿದ್ದವು. ದೇಶದ ಮೂಲೆಮೂಲೆಯಿಂದ ‘ನಿಷ್ಠ ಬುದ್ಧಿವಂತರು’ ದಿಲ್ಲಿಗೆ ರವಾನೆಯಾದರು. ದೇಶದ ಹಣೆಬರೆಹವೆಂಬ ಸಿಂಧೂರವನ್ನು ಅಳಿಸುವ, ಅದಾಗದಿದ್ದರೆ ತಿದ್ದುವ ಕಾರ್ಯ ಪೈಪೋಟಿಯಿಂದ ನಡೆಯಿತು. ಯೋಗವಾದರೂ ಸರಿ, ಕ್ರಿಕೆಟಾದರೂ ಸರಿ, ವಿಜ್ಞಾನವಾದರೂ ಸರಿ, ಚರಿತ್ರೆಯಾದರೂ ಸರಿ, ಆರ್ಥಿಕತೆಯ, ಅಂತರ್‌ರಾಷ್ಟ್ರೀಯ ಸಂಬಂಧಗಳ ಕತೆಯಂತೂ ಬೇಡ- ವಿಶ್ವದೆದುರು ಭಾರತವು ಬಟ್ಟೆ ಬಿಚ್ಚಿ ನಿಂತಿತು. ಇದರ ಫಲಶೃತಿ ಈಗ ಕಾಣಲಾರಂಭಿಸಿದರೂ ಬೆತ್ತಲೆ ಅರಸ ಮಾತ್ರ ಎಚ್ಚೆತ್ತಿಲ್ಲ.

ಈಗ ಸಂವಿಧಾನವನ್ನು ಕಲಕಲು ಒಕ್ಕೂಟ ಸರಕಾರ ವಿವಿಧ ಸಿದ್ಧತೆಗಳನ್ನು ಮಾಡಿದೆ; ಮಾಡುತ್ತಿದೆ. ಅದಕ್ಕೀಗ ತನ್ನ ಇಷ್ಟಾನುಸಾರ ಅಧಿಕಾರ ಚಲಾಯಿಸಲು ಇರುವ ಏಕಮಾತ್ರ ಪ್ರತ್ಯಕ್ಷ ತೊಡಕೆಂದರೆ ನ್ಯಾಯಾಂಗ; ಪರೋಕ್ಷವಾಗಿ ಸಂವಿಧಾನ. ಎಷ್ಟೇ ಪ್ರಯತ್ನಿಸಿದರೂ ದೇಶದ ನಾಗರಿಕರು ಒಕ್ಕೂಟ ಸರಕಾರಕ್ಕೆ ಇಷ್ಟಬಂದಂತೆ ನಡೆಯುವ ಬಹುಮತವನ್ನು ನೀಡದೆ ಅವರನ್ನು ಪರಾವಲಂಬಿಗಳನ್ನಾಗಿ ಮಾಡಿದ್ದಾರೆ. ಆದರೂ ನ್ಯಾಯಮೂರ್ತಿಗಳ ನೇಮಕದಲ್ಲಿ ಒಕ್ಕೂಟ ಸರಕಾರ ಮಾಡಿದ, ಮಾಡುತ್ತಿರುವ ಹಾವಳಿ ಜಗಜ್ಜಾಹೀರಾಗಿದೆ. ತನಗಿಷ್ಟವಿಲ್ಲದ ನ್ಯಾಯಮೂರ್ತಿಗಳ ಆಯ್ಕೆಗೆ ಶಿಫಾರಸು ಆದರೂ ನೇಮಕಾತಿ ಆದೇಶಕ್ಕೆ ಅನಗತ್ಯ ವಿಳಂಬವನ್ನು ಮಾಡುವುದು ದಿಲ್ಲಿ ರಾಜಕಾರಣದ ಪ್ರಮುಖ ಅಂಶವಾಗಿದೆ. ಖುರೇಷಿ, ಮುರಳೀಧರ್ ಮುಂತಾದ ಅರ್ಹರ ಪದೋನ್ನತಿಯನ್ನು ಅವರು ನಿವೃತ್ತಿಯಾಗುವ ವರೆಗೂ ತಡೆಹಿಡಿದು ಇತರರಿಗೆ ಅವಕಾಶ ಮಾಡಿಕೊಟ್ಟದ್ದು ಬಹಿರಂಗ ಅನ್ಯಾಯ. ಆದರೂ ನ್ಯಾಯಾಧೀಶರು, ನ್ಯಾಯಮೂರ್ತಿಗಳು, ನ್ಯಾಯಾಂಗದೊಳಗಿನಿಂದಲೇ ಬರಬೇಕಾದ ಅನಿವಾರ್ಯತೆಯಿಂದ ಒಕ್ಕೂಟ ಸರಕಾರ ತೀವ್ರ ಹಸ್ತಕ್ಷೇಪವನ್ನು ಮಾಡದಂತಾಗಿದೆ.

ಇದಕ್ಕಾಗಿ ಏನು ಬೇಕಾದರೂ ಹೇಳುವ, ಹೇಳಬಲ್ಲ, ಮಾಡುವ, ಮಾಡಬಲ್ಲ ಒಂದು ಬೃಹತ್ ತಂಡವನ್ನೇ ಪ್ರಭುತ್ವವು ಸಾಕಿದೆ; ಸಾಕುತ್ತಿದೆ. ಅವರಿವರ ಮೂಲಕ ಹೇಳಿಸಿ ತಾನು ಸಂತರಂತೆ ಬದುಕುವುದನ್ನು ಮತ್ತು ಮಾತಿನ ಮನೆ ಕಟ್ಟುವುದನ್ನು ಪ್ರಧಾನಿಗೆ ಹೇಳಿಕೊಡಬೇಕಾಗಿಲ್ಲ. ಅದು ಅವರಿಗೆ ಕರತಲಾಮಲಕ. ಗಾಂಧಿ ಜಯಂತಿಯಂದು ಪ್ರಧಾನಿ ರಾಜಘಾಟಿಗೆ ಹೋಗಿ ಗಾಂಧಿಗೆ ನಮಿಸುವಾಗ ಅವರದೇ ತಂಡವು ಗಾಂಧಿಗೆ ಪ್ರತ್ಯಕ್ಷ-ಪರೋಕ್ಷ ಅವಮಾನವನ್ನು ಸಂಘಟಿತವಾಗಿ ಮಾಡುತ್ತದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆದ ಪ್ರಸಂಗಕ್ಕಾಗಿ ಅವರನ್ನು ಸಂಪರ್ಕಿಸಿ ವಿಷಾದ ಹೇಳಿದ ಪ್ರಧಾನಿ ಹಲ್ಲೆಕೋರ ಹಲಾಲಕೋರನ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಅವರ ಕ್ರಮವೇ ಇಷ್ಟು. ಕರ್ನಾಟಕದ ಪಂಚ ಗ್ಯಾರಂಟಿಗಳನ್ನು ವಾಚಾಮಗೋಚರ ಹಳಿದು ಆನಂತರದ ಮತ್ತು ಈಗ ನಡೆಯಲಿರುವ ಬಿಹಾರದ ಚುನಾವಣೆಯಲ್ಲಿ ಅಂತಹ ಹಲವಾರು ಬಿಟ್ಟಿ ಭಾಗ್ಯಗಳನ್ನು (ಮಹಿಳೆಯರಿಗೆ ರೂ.10 ಸಾವಿರ ಇತ್ಯಾದಿ!) ಘೋಷಿಸಿದರೂ ಕೇರಳದ ವಯನಾಡಿನ ಭೂಕುಸಿತದ ಸಾವಿರಾರು ಹತಭಾಗ್ಯ ಸಂತ್ರಸ್ತರಿಗೆ ರಿಯಾಯಿತಿಗಳನ್ನೂ ಘೋಷಿಸದ ಪ್ರಧಾನಿಯವರಿಂದ ಎಂತಹ ಗೌರವ, ನೀತಿಯನ್ನು ನಿರೀಕ್ಷಿಸಬಹುದು? (ಕೇರಳದ ಉಚ್ಚ ನ್ಯಾಯಾಲಯವು ಈ ಬಗ್ಗೆ ಒಕ್ಕೂಟ ಸರಕಾರವನ್ನು ತೀವ್ರವಾಗಿ ಖಂಡಿಸಿದೆ!)

ಆದ್ದರಿಂದ ಯಥಾರಾಜಾ ತಥಾ ಪ್ರಜಾ! ಒಳ್ಳೆಯ ಮಾದರಿಯ ನಾಯಕತ್ವವಿದ್ದರೆ ಸಾಮಾಜಿಕ ಹಿತ ಸಾಧ್ಯ. ಒಡೆದೇ ಆಳುವವನಿಗೆ ಪೂರ್ಣವೆಂದರೇನೆಂದು ಹೇಗೆ ಅರ್ಥವಾದೀತು? ಅಖಂಡ ಭಾರತವಾಗುವ ಮುನ್ನ ಸಾಮರಸ್ಯದ ಭಾರತವಾದರೆ, ಎಲ್ಲರನ್ನೂ ಗೌರವಿಸುವ ನೀತಿ ಸಾಧ್ಯವಾದರೆ ಮಾತ್ರ ಒಳಿತಾದೀತು. ರಾಜಕೀಯವೇ ಬದುಕಾದರೆ ಆಗ ಬಿಟ್ಟಿಬಾಬುಗಳು ದೇಶದ ಉಸ್ತುವಾರಿಯನ್ನು ಕೈಗೊಂಡು ದೇಶದ ನಾಶ ಮಾತ್ರವಲ್ಲ, ದೇಶದ ಮಾನ ಹರಾಜಾಗುವುದಕ್ಕೆ ದಾರಿ ದೂರವಿಲ್ಲ.

ಪರಸ್ಪರ ಗೌರವ, ನೀತಿ ಪ್ರಕೃತಿ ಸಹಜ; ಅಗೌರವ, ಅನೀತಿಗಳು ಮನುಷ್ಯ ಸೃಷ್ಟಿಯವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News