ಓದುವುದೆಂದರೆ...
ಓದುವುದು ಆಸಕ್ತಿಗೆ, ಮನೋರಂಜನೆಗೆ. ಅರಿವೆಂಬುದು ಅದರ ಪರಿಣಾಮ. ಅದೊಂದು ವೃತ್ತಿಯಾದಾಗ ಅಥವಾ ಕಡ್ಡಾಯದ ಉದ್ಯೋಗವಾದಾಗ ಪುಸ್ತಕವೂ ಓದುಗರೂ ಯಂತ್ರಗಳಾಗುತ್ತಾರೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದಿದರೆ, ವಿಮರ್ಶಕರು ಅದನ್ನೊಂದು ಅನಿವಾರ್ಯ ಕರ್ಮವೆಂಬಂತೆ ಓದುತ್ತಾರೆ. ಓದೆಂಬುದು ಇಂತಹ ಸ್ವತಂತ್ರ ಗಾಳಿಯಂತಿದ್ದಾಗ ಸಹಜವಾಗಿಯೇ ಅರಿವಿನ ಬೆಳಗು, ಬೆಳಕು ಎರಡೂ ಒದಗುತ್ತದೆ. ಅದಕ್ಕೆ ಪದವಿಯಾಗಲೀ ಸ್ಥಾನಮಾನವಾಗಲೀ ಬೇಕಾಗುವುದಿಲ್ಲ.
ಪ್ರತೀ ವರ್ಷವೂ ಈ ಕಾಲದಲ್ಲಿ ಅಂದರೆ ನವೆಂಬರ್ 14ರಿಂದ ಒಂದು ವಾರ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನಡೆಸಲಾಗುತ್ತದೆ. ನೆಹರೂ ಅವರ ಜನ್ಮದಿನಾಂಕದಿಂದ ಇದು ಒಂದು ವಾರ ನಡೆಯುತ್ತದೆಯೆಂದೇ ನಾನು ಭಾವಿಸಿದ್ದೆ. ಆದರೆ ಇಂತಹ ಒಂದು ಸಪ್ತಾಹದ ಆರಂಭದಲ್ಲಿ ಪಾಲ್ಗೊಂಡ ಮೇಲೆ ವಿವರಗಳು ಲಭ್ಯವಾದವು.
ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ| ಎಸ್.ಆರ್. ರಂಗನಾಥನ್ (1892-1972) ಅವರ ನೆನಪಿನಲ್ಲಿ ಈ ಸಪ್ತಾಹವನ್ನು ನಡೆಸಲಾಗುತ್ತದೆ. ಅವರು ಗ್ರಂಥಾಲಯ ವಿದ್ವಾಂಸರಾದದ್ದು ಆನಂತರ. ಮೂಲತಃ ಅವರು ಖ್ಯಾತ ಗಣಿತಶಾಸ್ತ್ರಜ್ಞರೂ ಶಿಕ್ಷಣ ತಜ್ಞರೂ ಆಗಿದ್ದರು. ತಮಿಳುನಾಡಿನಲ್ಲಿ ಹುಟ್ಟಿ ಅನೇಕ ಕಡೆ ದುಡಿದರು. ಕರ್ನಾಟಕದ ಮಂಗಳೂರಿನ ಸರಕಾರಿ ಕಾಲೇಜಿನಲ್ಲೂ ಅವರು ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆಂಬುದು ಕನ್ನಡದ ಹೆಮ್ಮೆ. ಅವರು ಗ್ರಂಥಾಲಯಗಳ ವಿಕಾಸಕ್ಕೆ ತಮ್ಮ ಅರಿವಿನ ಮೂಲಕ ಹೊಸ ನಿಯಮಗಳನ್ನು ರೂಪಿಸಿ ಒಂದು ಚೌಕಟ್ಟನ್ನು ಹಾಕಿ ಕೊಟ್ಟವರು. (ಹೆಚ್ಚಿನ ಮಾಹಿತಿ ಗ್ರಂಥಾಲಯಗಳಲ್ಲಿ ಮತ್ತು ಈಗ ಸುಲಭವಾಗಿ ಅಂತರ್ಜಾಲದಲ್ಲಿ ಲಭ್ಯವಾಗುವುದರಿಂದ ಆ ಬಗ್ಗೆ ಇಲ್ಲಿ ಇಷ್ಟು ಮಾಹಿತಿ ಸಾಕೆಂದು ತಿಳಿದಿದ್ದೇನೆ.)
ಪ್ರಾಯಃ ಪುಸ್ತಕಾಸಕ್ತರಾಗಿದ್ದ ನೆಹರೂ ಅವರನ್ನೂ ಈ ಸಪ್ತಾಹ ನೆನಪಿಸುವಂತೆ ವೇಳಾಪಟ್ಟಿ ರೂಪಿತವಾಗಿದೆ. (ಅಮೆರಿಕದಲ್ಲಿ ಈ ಸಪ್ತಾಹವನ್ನು ಎಪ್ರಿಲ್‌ನಲ್ಲಿ ನಡೆಸಲಾಗುತ್ತದೆಯೆಂದು ಕೇಳಿದ್ದೇನೆ.)
ಓದವುದು ಎಂಬ ವ್ಯವಸ್ಥೆ ಇತ್ತೀಚೆಗಿನ ಶತಮಾನಗಳ ಬೆಳವಣಿಗೆ. ಕೇಳಿ ಮನನಮಾಡಿಕೊಳ್ಳುವ ಜನರಿದ್ದಾಗ ಜನಪದವೇ ಸಾಹಿತ್ಯ-ಸಂಗೀತವಾಗಿ, ಶಾಸ್ತ್ರವಾಗಿ ಬೆಳೆದುಬಂತು. ಅದಲ್ಲವಾದರೆ ಸಂಸ್ಕೃತ ಸಾಹಿತ್ಯ ಮತ್ತು ಕಳೆದ ಎರಡು ಸಾವಿರ ವರ್ಷಗಳಿಂದ ಹುಲುಸಾಗಿ ಬೆಳೆದುಬಂದ ಕನ್ನಡದ ಸಾರಸ್ವತ ಲೋಕವು ಕನ್ನಡಿಗರಿಗೆ ಇಳಿದುಬಂದದ್ದಾದರೂ ಹೇಗೆ? ವಿಶ್ವದೆಲ್ಲೆಡೆ ಇದು ಸಮಾನಾಂತರವಾಗಿ ವಿಕಾಸಗೊಂಡಿದೆಯೆಂಬುದು ಬೆರಗುಗೊಳಸಿರುವ ಐತಿಹಾಸಿಕ ಸತ್ಯ.
ಗ್ರಂಥಾಲಯಗಳು ಕಳೆದ ಒಂದೆರಡು ಶತಮಾನಗಳಿಂದ ವಿಕಾಸಗೊಂಡ ವ್ಯವಸ್ಥೆ. ಓದುವುದು ಅರಿವಿಗಾಗಿ. ಅರಿವೇ ಗುರುವಾದರೆ ಅರಿವಿಗಾಗಿ ಓದುವವರು ಶಿಷ್ಯರು. ಈ ಆಸಕ್ತಿಗೆ ಓದುವ ಸೌಲಭ್ಯ ದೊರಕಬೇಕು. ಭಾರತವು ಈಗ ಆಧುನಿಕತೆಗೆ ತೆರೆದುಕೊಂಡಿದೆೆಯಾದರೂ ಈ ಸೌಲಭ್ಯ ಮೊದಲು ಇರಲಿಲ್ಲ. ಗ್ರಾಮಗಳಿಂದಲೇ ಸಮೃದ್ಧಗೊಂಡ ದೇಶದಲ್ಲಿ ಬಹುಪಾಲು ಜನರು ಹಳ್ಳಿಗಳಲ್ಲಿ ಮತ್ತು ವಿಶೇಷವಾಗಿ ಕೃಷಿ ಹಾಗೂ ದುಡಿಯುವ ವರ್ಗ. ಶಿಕ್ಷಣವೆಂಬ ದೊಡ್ಡ ಹೆಸರಿನ ಸೌಲಭ್ಯವಿಲ್ಲದಿದ್ದರೂ ಓದುಬರೆಹದ ಸಾಕ್ಷರತೆಯನ್ನು ಅನೇಕರು ಪಡೆದಿದ್ದರು. ಆದರೆ ಇವರ ಸಂಖ್ಯೆ ಹೆಚ್ಚಾಗಿರುವುದು ಇತ್ತೀಚೆಗೆ. ದುರಂತವೆಂದರೆ ಔಪಚಾರಿಕ ಶಿಕ್ಷಣ ಪಡೆದವರೆಲ್ಲ ವಿದೇಶಗಳತ್ತ ಮತ್ತು ಭಾರತದ ನಗರಗಳತ್ತ ವಲಸೆಯಾಗತೊಡಗಿದರು. ಹೀಗಾಗಿ ಹಳ್ಳಿಗಳಲ್ಲಿ ಉಳಿದ್ದು ಪಾರಂಪರಿಕ ಓದುಗರು ಮಾತ್ರ. ಇತ್ತೀಚೆಗೆ ಟಿ.ವಿ., ಮೊಬೈಲ್ ಸೌಕರ್ಯಗಳ ಲೋಲುಪತೆಯು ಎಲ್ಲ ಜ್ಞಾನವನ್ನೂ ಆ ಮೂಲಕ ಪಡೆಯಬಹುದೆಂಬ ಭ್ರಮೆಯನ್ನು-ಅದು ಸ್ವಲ್ಪ ಮಟ್ಟಿಗೆ ವಾಸ್ತವವಾದರೂ-ಸೃಷ್ಟಿಸಿದೆ.
ಇಷ್ಟಾದರೂ ಸಾಕಷ್ಟು ಮಂದಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿಮೆಯ ನಡುವೆ ಬಿಡುವನ್ನು ಕಳೆಯುವ ಓದನ್ನು ಪ್ರವೃತ್ತಿಯಾಗಿಸಿದರು. ಓದಿನ ಮುಖ್ಯ ಸರಕು ಪತ್ರಿಕೆಗಳು. ಅವೂ ಪುಸ್ತಕಗಳಂತೆ ಮುದ್ರಣ ಮಾಧ್ಯಮಗಳು. ಬೆಳಗಾಗೆದ್ದು ಚಹ ಕುಡಿಯುವ ಆಧುನಿಕ ಸಂಸ್ಕೃತಿಗೂ ಈ ಪತ್ರಿಕೆಗಳ ಆಗಮನಕ್ಕೂ ಅವಿನಾ ಸಂಬಂಧ. ಪತ್ರಿಕೆ ಬಾರದಿದ್ದರೆ ಏನೋ ಆಗಬಾರದ್ದು ಆಗಿದೆಯೆಂಬುದನ್ನು ನೆನಪಿಸುವಂತೆ ಚಡಪಡಿಸುವವರನ್ನು ಕಂಡಿದ್ದೇನೆ. ಇಂದು ಪತ್ರಿಕಾ ಕಾರ್ಯಾಲಯಕ್ಕೆ ರಜೆಯಿರುವುದರಿಂದ ನಾಳೆಯ ಪತ್ರಿಕೆ ಪ್ರಕಟವಾಗುವುದಿಲ್ಲ ಎಂಬುದನ್ನು ನಿರಾಶೆಯ ಕಣ್ಣುಗಳಿಂದ ಓದುವವರನ್ನೂ ಕಂಡಿದ್ದೇನೆ. ಈಗ ಕೆಲವು ದಶಕಗಳ ಹಿಂದಿನ ವರೆಗೆ ಎಲ್ಲ ಮನೆಗಳಲ್ಲೂ ಅದರಲ್ಲೂ ಗ್ರಾಮೀಣ ಭಾಗದಲ್ಲಿ ರೇಡಿಯೊ ಇರಲಿಲ್ಲ. ಆದ್ದರಿಂದ ಆಕಾಶವಾಣಿಯ ಭಾಗ್ಯ ಸಿಕ್ಕುತ್ತಿರಲಿಲ್ಲ. ಇದರಿಂದಾಗಿ ಪತ್ರಿಕೆಗಳೇ ಬಡವರ ಪಾಲಿನ ದಾಳಿಂಬೆಯಾಗಿತ್ತು. ಇಂದು ಆಕಾಶವಾಣಿಯು ಹೇಳುವ ಮಾಹಿತಿ, ಮನೋರಂಜನೆ, ಶಿಕ್ಷಣ ಎಲ್ಲವೂ ಪತ್ರಿಕೆಗಳಲ್ಲಿ ಮಡುಗಟ್ಟಿತ್ತು. ಹುಟ್ಟುಸಾವುಗಳ ವಾರ್ತೆಗೂ, ಒಂದಂಕಿಯ ಆಟಕ್ಕೂ ಅದೇ ಮಾಧ್ಯಮ.
ಇದರೊಂದಿಗೇ ಚಂದಮಾಮ, ಬಾಲಮಿತ್ರ ಮುಂತಾದ ಮಕ್ಕಳ ನಿಯತಕಾಲಿಕಗಳೂ, ಪಂಚತಂತ್ರ, ಅರೇಬಿಯನ್ ನೈಟ್ಸ್, ಅಕ್ಬರ್-ಬೀರಬಲ್ ಕಥೆಗಳು, ಇಸೋಪನ ನೀತಿಕಥೆಗಳು, ರಾಮಾಯಣ, ಮಹಾಭಾರತ ಮುಂತಾದ ಪುರಾಣ ಕಥಾ ಪುಸ್ತಕಗಳೂ ಜನಪ್ರಿಯವೇ ಆಗಿದ್ದವು. ಇವು ಸಾಮಾನ್ಯವಾಗಿ ಮಕ್ಕಳಿರುವ ಎಲ್ಲ ಮನೆಗಳಲ್ಲೂ ಇರುತ್ತಿದ್ದವು. (ಇವು ಹಿರಿಯರಿಗೂ ಉತ್ಸುಕತೆಯ ಓದನ್ನು ನೀಡುತ್ತಿದ್ದವು.)
ಕಥೆ ಕೇಳುವಲ್ಲಿಂದ ಕಥೆ ಓದುವ ಪ್ರವೃತ್ತಿಗೆ ಮನುಷ್ಯನ ಯಾತ್ರೆ ಸಾಗಿದಾಗ ಪುಸ್ತಕಗಳ ರಥಯಾತ್ರೆ ಮನೆಮನೆಗಳಿಗೆ ಪಾದ ಬೆಳೆಸಿತು. ಮುದ್ರಣ ಪ್ರವೃತ್ತಿ ಮುದ್ರಣೋದ್ಯಮವಾಗಿ ಪುಸ್ತಕಗಳನ್ನು ಗಂಟುಕಟ್ಟಿ ಮನೆಮನೆಗೆ ಒಯ್ದು ಮಾರಾಟ ಮಾಡುವ ಸನ್ಯಾಸ ವೃತ್ತಿ ಬೆಳೆಯಿತು. ಸನ್ಯಾಸ ವೃತ್ತಿ ಏಕೆಂದರೆ ಅದು ಪರಿಶ್ರಮದ ಹಾದಿ; ತೀರಾ ಅಲ್ಪ ಲಾಭಕ್ಕಾಗಿ ನಡೆಸುವ ವೃತ್ತಿ. ಪುಸ್ತಕಗಳು ಆಸಕ್ತಿಮೂಲದ ಅಗತ್ಯವನ್ನು ಹೊಂದಿದ ಸರಕು. ಅನ್ನದಂತೆ, ನೀರಿನಂತೆ, ಗಾಳಿಯಂತೆ ಎಲ್ಲರಿಗೂ ಅನಿವಾರ್ಯವಾದ ವಸ್ತುವಲ್ಲ. ಗಳಗನಾಥರು ಪುಸ್ತಕಗಳ ಗಂಟನ್ನು ಹೆಗಲಲ್ಲಿ ಹೊತ್ತು ಊರೂರು ಸಂಚರಿಸುತ್ತಿದ್ದರಂತೆ. ಕಾರಂತರು, ಕುವೆಂಪು, ಮಾಸ್ತಿಯವರು ತಮ್ಮ ಪುಸ್ತಕಗಳ್ನು ತಾವೇ ಮುದ್ರಿಸಿ ಮಾರಾಟಮಾಡುತ್ತಿದ್ದರು. ಅದು ಮಾನಾಪಮಾನದ ಪ್ರಶ್ನೆಯಾಗಿರಲಿಲ್ಲ.
ಕಳೆದ ಶತಮಾನದ ಮಧ್ಯಭಾಗದಲ್ಲಿ ಹುಲ್ಲು ಮಾಡಿನ ಮನೆಗಳಲ್ಲೂ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರು ತಮ್ಮೆಲ್ಲ ಮನೆಕೆಲಸಗಳನ್ನು ಪೂರೈಸಿ ಮಧ್ಯಾಹ್ನ ಊಟದ ಬಳಿಕ ಪುರುಷರು ನಿದ್ರೆ ಮಾಡುತ್ತಿದ್ದಾಗ ಪುಸ್ತಕಗಳನ್ನು ಓದುತ್ತಿದ್ದರು. ಓದಿನ ನಡುವೆ ಇತರ ಕೆಲಸಗಳು ಎದುರಾದರೆ ಅವುಗಳ ಪುಟಗುರುತಿಗಾಗಿ ತಲೆಗೂದಲಿನ ಕ್ಲಿಪ್ಪು ಅಥವಾ ಸೇಫ್ಟಿ ಪಿನ್ ಹೀಗೇನಾದರೂ ಇಟ್ಟು ಮತ್ತೆ ಓದನ್ನು ಮುಂದುವರಿಸುತ್ತಿದ್ದರು. ಇವೆಲ್ಲ ಅನೌಪಚಾರಿಕ ಓದುಗಳಾಗಿದ್ದುದರಿಂದ ಮತ್ತು ಹೀಗೆ ಓದುವವರಿಗೆ ಪದವಿಗಳಿಲ್ಲದಿದ್ದುದರಿಂದ ಅವು ನಮ್ಮ ಸಾಂಸ್ಕೃತಿಕ ಪ್ರಪಂಚದ ಅರಿವಿಗೆ ಬಂದದ್ದು ಕಡಿಮೆ. 20ನೇ ಶತಮಾನದಲ್ಲಿ ನಾವಿಂದು ಮೌಲಿಕವೆಂದು ಗುರುತಿಸದ ಎನ್. ನರಸಿಂಹಯ್ಯ, ಕೃಷ್ಣಮೂರ್ತಿ ಪುರಾಣಿಕ ಮುಂತಾದ ಕಾದಂಬರಿಕಾರರನ್ನು ಮತ್ತು ಮನೋರಂಜಕ ಕಥೆಗಾರರ ಪರಿಚಯ ಬಹುತೇಕ ಓದುಗರಿಗಿತ್ತು. ಅಲ್ಲಿ ತರಾಸು, ಅನಕೃ ಮುಂತಾದವರು ಬಹು ಜನಪ್ರಿಯರು. ಓದಿನ ಬಾಗಿಲು ತೆರೆದವರು ಈ ಸಾಹಿತಿಗಳೇ. ಬೌದ್ಧಿಕ ಪ್ರಪಂಚದಲ್ಲಿ ವಿಮರ್ಶೆಗೊಳಪಡುವ ಮೊದಲೇ ಎಸ್.ಎಲ್. ಭೈರಪ್ಪನವರು ಹೀಗೆಯೇ ಜನಪ್ರಿಯರಾಗಿದ್ದರು.
ಈ ಓದಿನ ಹಸಿವನ್ನು ಇಂಗಿಸುವ ದೃಷ್ಟಿಯಿಂದ ಗ್ರಂಥಾಲಯಗಳ ಕಲ್ಪನೆ ಮೂಡಿರಬೇಕು. ಎಲ್ಲರಿಗೂ ಪತ್ರಿಕೆ-ಪುಸ್ತಕಗಳನ್ನು ಖರೀದಿಸುವ ಶಕ್ತಿಯಿರುವುದಿಲ್ಲ. ಶಕ್ತಿಯಿದ್ದವರಿಗೂ ಅಗತ್ಯ ಸೌಲಭ್ಯವಿರುವುದಿಲ್ಲ. ರಾಜ್ಯದ ಮುಖ್ಯ ಪಟ್ಟಣಗಳಲ್ಲಷ್ಟೇ ಪತ್ರಿಕೆಗಳು ಮುದ್ರಣಗೊಂಡರೂ ಅವು ಗ್ರಾಮೀಣ ಭಾಗಗಳಿಗೆ ತಡವಾಗಿಯಾದರೂ ಸರಬರಾಜಾಗುತ್ತಿದ್ದವು. ಪುಸ್ತಕಗಳ ಸಂಗತಿ ಬೇರೆ. ತಲೆಹೊರೆಕಾಣಿಕೆಯಂತೆ ಅವು ಹಳ್ಳಿಗಳಲ್ಲಿ ಸಂಚರಿಸುತ್ತಿದ್ದವಾದರೂ ಅವುಗಳ ಲಭ್ಯತೆ ತೀರಾ ತಡ ಮತ್ತು ಅಪರೂಪವಾಗುತ್ತಿದ್ದವು.
ಓದಿನ ಹವ್ಯಾಸವನ್ನು ಬೆಳೆಸಲು ಗ್ರಂಥಾಲಯಗಳ ಅಗತ್ಯವನ್ನು ಶಿಕ್ಷಣ ಸಂಸ್ಥೆಗಳೂ ಕಂಡುಕೊಂಡವು. ಇವು ಅಕ್ಷರಾಭ್ಯಾಸದಿಂದ ಸಂಶೋಧನೆಯ ವರೆಗೆ ವಿವಿಧ ಹಂತಗಳಲ್ಲಿ ಕಾರ್ಯವೆಸಗಿದವು. ಇವೆಲ್ಲವುಗಳ ಫಲಶೃತಿಯೆಂಬಂತೆ ಗ್ರಂಥಾಲಯ ಶುಲ್ಕವು ಶಾಸನಬದ್ಧವಾಯಿತು. ಸರಕಾರ ಮತ್ತದರ ಎಲ್ಲ ಸ್ಥಳೀಯ ಸಂಸ್ಥೆಗಳೂ ಜನರಿಂದ ಗ್ರಂಥಾಲಯ ಶುಲ್ಕವನ್ನು ಸಂಗ್ರಹಿಸಿ ಅವುಗಳ ಮೂಲಕ ಮೌಲಿಕ ಪತ್ರಿಕೆ-ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ಲಭ್ಯವಾಗಿಸಬೇಕೆಂಬ ಕಾನೂನು ರೂಪಿತವಾಯಿತು. ಇದಕ್ಕೊಂದು ಇಲಾಖೆ, ಸಚಿವರು ಹೀಗೆ ಅಧಿಕಾರಶಾಹಿಯ ಏಣಿಯೂ ಸ್ಥಾಪಿತವಾಯಿತು.
ಹೀಗೆ ಶಾಲಾ-ಕಾಲೇಜುಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಪೇಟೆಪಟ್ಟಣಗಳಲ್ಲಿ, ನಗರ ಮಹಾನಗರಗಳಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಿವೆ. ಅಲ್ಲೇ ಬಂದು ಓದುವ ಮತ್ತು ಗ್ರಂಥಾಲಯದ ಸದಸ್ಯರಾದವರಿಗೆ ನಿಗದಿತ ಅವಧಿಗೆ ಪುಸ್ತಕಗಳನ್ನು ಕಡ ಒಯ್ಯುವ ಸೌಲಭ್ಯವೂ ಇದೆ. ಸರಕಾರವು ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸಿ ಗ್ರಂಥಾಲಯಗಳಿಗೆ ಒದಗಿಸುವ ಯೋಜನೆಯಿದೆ. ಶಾಲಾಕಾಲೇಜುಗಳಲ್ಲಿ ಇದು ಅಗತ್ಯವಾದ್ದರಿಂದ ಅವರು ವಿವಿಧ ಶಿಸ್ತುಗಳ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಓದಿನ ಸೌಲಭ್ಯಕ್ಕೆ ಒದಗಿಸುವುದರಿಂದ ಓದುವವರ ಮನಸ್ಸು ವಿಕಾಸವಾಗಲು ಅವಕಾಶ ಮಾಡಿಕೊಟ್ಟಿವೆ.
ಮಹಾನಗರಗಳಲ್ಲಿ ಗ್ರಂಥಾಲಯಗಳನ್ನು ಸಂದರ್ಶಿಸುವವರು ಕಡಿಮೆಯೇ ಎನ್ನಬಹುದು. ಚಿಕ್ಕ ಊರುಗಳಲ್ಲಿ ಹೆಚ್ಚು ಪರಿಚಿತ ವಾತಾವರಣವಿರುವುದರಿಂದ ಗ್ರಂಥಾಲಯಗಳು ಹೆಚ್ಚು ಸಕ್ರಿಯವಾಗಿವೆ. ನಿವೃತ್ತರು ಪತ್ರಿಕೆಗಳನ್ನು ಮತ್ತು ಇತರ ಆಸಕ್ತಿದಾಯಕ ಪುಸ್ತಕಗಳನ್ನು ಓದುವುದಕ್ಕಾಗಿ ಗ್ರಂಥಾಲಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯಿಸುತ್ತಾರೆ. ಬಡವಿದ್ಯಾರ್ಥಿಗಳಿಗೆ ಇದು ತಮ್ಮ ಆಸಕ್ತಿಗನುಗುಣವಾಗಿ ಓದಿನ ಅವಕಾಶವನ್ನು ಒದಗಿಸಿದೆ. ಗ್ರಂಥಾಲಯಗಳಲ್ಲಿ ಅಧ್ಯಯನಕ್ಕಾಗಿ, ಸಂಶೋಧನೆಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಸಿಸುವುದಕ್ಕಾಗಿ ಬರುವವರ ಸಂಖ್ಯೆ ಸಾಕಷ್ಟಿದೆ.
ಆದರೂ ಟಿ.ವಿ., ಮೊಬೈಲ್ ಮುಂತಾದ ಆಧುನಿಕ ತಂತ್ರಜ್ಞಾನದೊಂದಿಗೆ ಪುಸ್ತಕವೆಂಬ ಮೂರ್ತ ಓದಿನ ಹವ್ಯಾಸ ಕಡಿಮೆಯಾಗತೊಡಗಿದೆ. ಮುದ್ರಣ ಮಾಧ್ಯಮದ ಓದುಗರ ಸಂಖ್ಯೆ ಕ್ಷೀಣವಾಗತೊಡಗಿದೆ. ನಾಳೆ ಪತ್ರಿಕೆಯಲ್ಲಿ ಬರುವ ಸುದ್ದಿಯು ಇಂದೇ ಅಂಗೈಯಲ್ಲಿ ಸಿಗುವಾಗ ಪತ್ರಿಕೆಗಳ ಕುರಿತ ಕಾತರ ಸಹಜವಾಗಿಯೇ ಕಡಿಮೆಯಾಗುತ್ತದೆ. ಆದರೂ ಪುಸ್ತಕವನ್ನು, ಪತ್ರಿಕೆಯನ್ನು ಓದಿದ ಅನುಭವ ಇದರಲ್ಲಿ ಸಿಕ್ಕುವುದಿಲ್ಲವೆಂಬ ಸಬೂಬು ಇಂದಿಗೂ ಸಾಂಪ್ರದಾಯಿಕ ನೆಲೆಯಿಂದ ಕೇಳುತ್ತಿದೆ. ಇದು ಎಷ್ಟು ಸತ್ಯವೆಂಬ ವಿಚಾರದ ಕುರಿತು ಗಣತಿಯಾಗಿಲ್ಲ.
ಜನರು ತಾವಾಗಿ ಆಸಕ್ತಿಯಿಂದ ಕೊಂಡು ಓದುವುದಕ್ಕೂ ಒದಗಿದ ಪುಸ್ತಕಗಳನ್ನು ಓದುವುದಕ್ಕೂ ಅಂತರವಿದೆ. ಇದಕ್ಕೆ ಪುಸ್ತಕಗಳ ಸಗಟು ಆಯ್ಕೆಯೂ ಕಾರಣವಿರಬಹುದು. ಎಲ್ಲ ಇಲಾಖೆಗಳಂತೆ ಗ್ರಂಥಾಲಯ ಇಲಾಖೆಯಲ್ಲೂ ಮೌಲ್ಯರಹಿತ ಆಯ್ಕೆಯ ದೂರುಗಳಿವೆ. ಪ್ರಭಾವ, ವಶೀಲಿ, ಲಾಬಿ ಇವುಗಳ ಮೂಲಕ ಸರಕಾರವು ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳ ಕಪಾಟುಗಳನ್ನು ತುಂಬಿಸುತ್ತಿದೆಯೆಂಬುದು ಮತ್ತು ಜೊಳ್ಳೇ ಜಾಸ್ತಿಯಿದೆಯೆಂಬುದು ಸಾಮಾನ್ಯವಾಗಿ ತಮ್ಮ ಕೃತಿಗಳು ಆಯ್ಕೆಯಾಗದ ಲೇಖಕ-ಪ್ರಕಾಶಕರ ಅಳಲು. ಸರಕಾರದ ಯಾವುದೇ ಆಯ್ಕೆಯೂ ಹಗರಣಗಳಿಂದ ಮುಕ್ತವಾಗಿರುವುದಿಲ್ಲವೆಂಬುದು ಸಾಮಾನ್ಯ ಸತ್ಯ. ಆದರೆ 10 ಪುಸ್ತಕಗಳಲ್ಲಿ ಒಂದಾದರೂ ಒಳ್ಳೆಯದಿದ್ದರೆ ಇಲಾಖೆಯ ಗೌರವ ಉಳಿದೀತು. ಆಯ್ಕೆಯು ಮೌಲ್ಯಯುತವಾಗಿದೆಯೆಂದು ಈಚೀಚೆಗೆ ವರುಷದ 365 ದಿನಗಳೂ ಪುಸ್ತಕಗಳು ಪ್ರಕಟಣೆಯಾಗುವುದರಿಂದ ಪುಸ್ತಕ ಧರ್ಮವು ಪುಸ್ತಕೋದ್ಯಮವಾಗಿದೆ.
ಸಹಜವಾಗಿಯೇ ಉದ್ಯಮಿಗಳು ವ್ಯಾವಹಾರಿಕವಾಗಿರುತ್ತಾರೆಯೇ ಹೊರತು ಮೌಲಿಕತೆಗೆ ಪ್ರಾಶಸ್ತ್ಯ ನೀಡುವುದಿಲ್ಲ. ಅಷ್ಟೇ ಅಲ್ಲ, ಮಹಾ ನಗರಗಳಲ್ಲೇ ಬಹುತೇಕ ಪ್ರಕಾಶಕರು ಕೇಂದ್ರಿತವಾಗಿರುವುದರಿಂದ ಮತ್ತು ಅವರಿಗೆ ಇಲಾಖೆಯ ಮೇಲಿನ ಹಂತ ಸಾಕಷ್ಟು ನಿಕಟವಾಗಿರುವುದರಿಂದ ಆಯ್ಕೆಯ ನ್ಯಾಯಾನ್ಯಾಯಗಳಲ್ಲಿ ಅವರೇ ಭಾಗಿದಾರರು. ಆದ್ದರಿಂದ ನಮ್ಮ ಪಾಪ ಪುಣ್ಯಗಳಿಗೆ ಗ್ರಂಥಾಲಯ ಇಲಾಖೆಯನ್ನು ದೂರಿದರೆ ಫಲವಿಲ್ಲ.
ಸ್ವತಂತ್ರ ಪ್ರಕಾಶನಗಳಲ್ಲದೆ, ಸರಕಾರದ ವಿವಿಧ ಪ್ರಾಧಿಕಾರಗಳೂ, ಅಕಾಡಮಿಗಳೂ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಅನುದಾನಿತ ಸಂಸ್ಥೆಗಳೂ, ವಿಶ್ವವಿದ್ಯಾನಿಲಯಗಳೂ, ಪ್ರಸಾರಾಂಗವೆಂಬಂತೆ ಪ್ರಚಾರಾಂಗಗಳನ್ನು ಸ್ಥಾಪಿಸಿಕೊಂಡು ತಮ್ಮ ನೀಲಿಗಣ್ಣಿನ ಲೇಖಕರ ಪುಸ್ತಕಗಳನ್ನು ಶ್ರದ್ಧಾಭಕಿ, ಪ್ರೀತಿಯಿಂದ ಪ್ರಕಟಿಸುತ್ತಿವೆ. ವಿಶ್ವವಿದ್ಯಾನಿಲಯಗಳಲ್ಲಂತೂ ಪುಸ್ತಕ ಬರೆಯದಿರುವವರ ಸಂಖ್ಯೆ ಕಡಿಮೆ. ಇವನ್ನು ಮಾರಾಟಮಾಡುವ ಯಾವ ಆಸಕ್ತಿಯೂ ಇಲ್ಲದೆ, ವಿಶೇಷ ಸಂದರ್ಭಗಳಲ್ಲಿ ಶೇ. 50 ಕಡಿತದೊಂದಿಗೆ ಮಾರಾಟವಾಗುವ ಜಾಹೀರಾತು ಹಾಕುತ್ತಾರೆ. ಜನರು ಈ ಕಡಿತ ಶೇ. 100 ಆಗುವುದನ್ನು ಅಥವಾ ತೂಕದ ಆಧಾರದಲ್ಲಿ ಮಾರಾಟವಾಗುವುದನ್ನು ಕಾಯುತ್ತಿರುತ್ತಾರೆ. ಲೇಖಕರು ಒಂದು ಗೊತ್ತಾದ ಸಮಖ್ಯೆಯ ಪ್ರಕಟಣೆಗಳೊಂದಿಗೆ ವಿದ್ವಾಂಸರಾಗುತ್ತಾರೆ. ಇವು ಮಾರಾಟವಾಗದಿರುವ ಬಗ್ಗೆ ಆತಂಕಗಳೇ ಇರುವುದಿಲ್ಲ.
ಓದುಗರು ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಅವರಿಗೆ ಅತಿನಾಗರಿಕತೆಯ ನರಕದ ಪರಿಚಯ ಕಡಿಮೆ; ಇಲ್ಲವೆಂದಲ್ಲ. ಈಗ ನಮ್ಮ ಎಲ್ಲ ಪ್ರಕಾಶಕರು ಬೆಂಗಳೂರು ಮತ್ತು ಕೆಲವು ಬಾರಿ ಮೈಸೂರು, ಮಂಗಳೂರು, ಧಾರವಾಡ ಮತ್ತಿತರ ನಗರಗಳಲ್ಲಿ ತಮ್ಮ ಪುಸ್ತಕ ಮಾರಾಟಗಳನ್ನಿಟ್ಟಿದ್ದಾರೆಯೇ ಹೊರತು ಇವನ್ನು ವಿಕೆಂದ್ರೀಕರಿಸಿಲ್ಲ. ನಿಜವಾಗಿ ಸರಕಾರ ಮಾಡಬೇಕಾದ್ದೆಂದರೆ ಪಂಚಾಯತು ಮಟ್ಟದಲ್ಲಿ ಆಯಾಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಲು ಒಂದು ಸಮಿತಿ ರಚಿಸುವುದು. ಆಗ ರಾಜ್ಯ-ದೇಶಮಟ್ಟದ ಪ್ರಕಾಶಕರು ಅನಿವಾರ್ಯವಾಗಿ ಅಲ್ಲಿಗೆ ಹೋಗಬೇಕಾಗುತ್ತದೆ. ಅಲ್ಲಿ ತಮ್ಮ ಪರಿಚಯ ಮಾಡಿಕೊಂಡು ಪುಸ್ತಕಗಳ ಬಗ್ಗೆ ಹೇಳಬೇಕಾಗುತ್ತದೆ. ಅಲ್ಲಿ ಈಗಿನಂತೆ ಸಗಟು ಭಂಡಾರಗಳು ಇರಲಾರವು.
ಏನಿದ್ದರೂ ಓದುವುದು ಆಸಕ್ತಿಗೆ, ಮನೋರಂಜನೆಗೆ. ಅರಿವೆಂಬುದು ಅದರ ಪರಿಣಾಮ. ಅದೊಂದು ವೃತ್ತಿಯಾದಾಗ ಅಥವಾ ಕಡ್ಡಾಯದ ಉದ್ಯೋಗವಾದಾಗ ಪುಸ್ತಕವೂ ಓದುಗರೂ ಯಂತ್ರಗಳಾಗುತ್ತಾರೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದಿದರೆ, ವಿಮರ್ಶಕರು ಅದನ್ನೊಂದು ಅನಿವಾರ್ಯ ಕರ್ಮವೆಂಬಂತೆ ಓದುತ್ತಾರೆ. ಓದೆಂಬುದು ಇಂತಹ ಸ್ವತಂತ್ರ ಗಾಳಿಯಂತಿದ್ದಾಗ ಸಹಜವಾಗಿಯೇ ಅರಿವಿನ ಬೆಳಗು, ಬೆಳಕು ಎರಡೂ ಒದಗುತ್ತದೆ. ಅದಕ್ಕೆ ಪದವಿಯಾಗಲೀ ಸ್ಥಾನಮಾನವಾಗಲೀ ಬೇಕಾಗುವುದಿಲ್ಲ.