×
Ad

ನಿಲ್ಲದ (ಇಲ್ಲದ) ವಿವಾದ

Update: 2025-10-30 10:18 IST

ಕರ್ನಾಟಕ ಸರಕಾರವು ಆರೆಸ್ಸೆಸ್‌ನ ವಿರುದ್ಧ ಕೆಲವು ನಿರ್ಬಂಧಗಳನ್ನು ಹಾಕಬಹುದು. ಅದನ್ನು ಸಾಮಾಜಿಕ ಹಿತದೃಷ್ಟಿಯಿಂದ ಮತ್ತು ಈಗ ಹಬ್ಬುತ್ತಿರುವ ಮತೀಯ ವಿಷಗಾಳಿಯ ಮಾಲಿನ್ಯವನ್ನು ಶುದ್ಧೀಕರಿಸುವ ದೃಷ್ಟಿಯಿಂದ ಸ್ವಾಗತಿಸಬಹುದು. ಆದರೆ ನಿಷೇಧವು ಕಾನೂನಿನಡಿ ಮಾನ್ಯವಾಗದು. ಇದು ಕಾನೂನು ಪರಿಣತರ ನಡುವೆ ಚರ್ಚೆಯಲ್ಲಿ ಕಂಡುಕೊಳ್ಳಬಹುದಾದ ಮತ್ತು ಒಂದು ವೇಳೆ ನಿಷೇಧವಾದರೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ/ಬಹುದಾದ ವಿವಾದ. ಅಂತೂ ಕಾಂಗ್ರೆಸಿನ ಇಬ್ಬಂದಿತನವು ಇದನ್ನು ಒಂದಷ್ಟು ಕಾಲ ಜೀವಂತವಾಗಿ ಇಡಬಹುದು. ಕೊನೆಗೂ ಕಂಡುಕೊಳ್ಳಬೇಕಾದ ಸತ್ಯವೆಂದರೆ ಮಾತಾಡುವ ಮೊದಲು ಚಿಂತನೆಯ ಅಗತ್ಯ.

ಕರ್ನಾಟಕದ ಸಚಿವ ಖರ್ಗೆಯವರು ಸಾರ್ವಜನಿಕ/ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ಮತ್ತು ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಕುರಿತ ಕ್ರಮಕ್ಕಾಗಿ ಮನವಿ ಮಾಡಿದರು; ಈ ವಿಚಾರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ವಿವಾದಸೃಷ್ಟಿಗಾಗಿ ಕಾದು ಕುಳಿತ ಮಾಧ್ಯಮಗಳು ಇದನ್ನು ಪರ-ವಿರೋಧದ ನಿಲುವಿನ ಮೂಲಕ ವೈಭವೀಕರಿಸಿದರು. ಇದರಲ್ಲಿ ಆರೆಸ್ಸೆಸನ್ನು ನಿಷೇಧಿಸುವ ಮಾತೇ ಇರಲಿಲ್ಲ. ಆದರೂ ಒಂದು ಸಮೂಹವು ಅವರಿಗೆ ಹೀರೋ ಪಟ್ಟವನ್ನು ಕಟ್ಟಿತು. ಮಾತ್ರವಲ್ಲ, ಪ್ರಸ್ತಾವವೇ ಇಲ್ಲದ ನಿಷೇಧದ ಕುರಿತು ಅನಗತ್ಯ ವಿವಾದವನ್ನು ಸೃಷ್ಟಿಸಿತು.

ಈ ಕುರಿತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸಚಿವರ ಪ್ರಸ್ತಾವದ ಮೂಲಕ ಎದ್ದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ವನ್ನು ನಿಷೇಧಿಸುವ ಸುದ್ದಿಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತಕ್ಷಣವೇ ಅವರ ಎಲ್ಲ ಹುದ್ದೆಗಳು, ಗೌರವಯುತ ಬದುಕು, ಚಾರಿತ್ರ್ಯಗಳನ್ನು ಮರೆತು ಅವರನ್ನು ಕಟುವಾಗಿ ಟೀಕಿಸುವ ಅಭಿಮತಗಳ ಸರಮಾಲೆಯೇ ಮಾಧ್ಯಮಗಳಲ್ಲಿ ಸುದ್ದಿಯಾದವು.

ಇದೀಗ ಸರಕಾರದ/ಸರಕಾರಿ ಸ್ವಾಮ್ಯದ ನಿಗಮ/ಮಂಡಳಿಗಳ ಶಾಲಾಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಆಸ್ತಿ/ಜಾಗಗಳನ್ನು ಯಾವುದೇ ಖಾಸಗಿ ಸಂಸ್ಥೆಗಳು, ಸದಸ್ಯರು, ತರಬೇತಿ, ಉತ್ಸವ, ಸಭೆ, ಪ್ರಚಾರ ಇತ್ಯಾದಿಗಳಿಗೆ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ನಡೆಸಲು ನಿರ್ಬಂಧ ಹೇರಿದೆ. ಹಾಗೆಂದು ಪೂರ್ವಾನುಮತಿ ಪಡೆಯಬೇಕೆಂದಿದೆಯೇ ವಿನಾ ಅನುಮತಿ ನೀಡುವುದಿಲ್ಲವೆಂದಿಲ್ಲ. ಇದು ಒಂದು ಮುಂಜಾಗ್ರತಾ ನಿಯಂತ್ರಣದ ಕ್ರಮ.

ಸಾಮಾಜಿಕ ಜಾಲತಾಣಗಳು ಯಾರು ಬೇಕಾದರೂ ಕುಣಿಯಬಲ್ಲ ವೇದಿಕೆಗಳಾದ್ದರಿಂದ ಅದೊಂದು ರೀತಿಯ ಜನಾಭಿಪ್ರಾಯತಾಣವಾಗಿ ರುವುದರಿಂದ ಸರಿತಪ್ಪುಗಳ ನಿರ್ಣಯವಾಗಲಾರವು. ಆದರೆ ಅವು ನಿಶ್ಚಿತವಾಗಿಯೂ ಯಾರದ್ದೇ ಹೆಸರನ್ನು ಕೆಡಿಸಬಲ್ಲವು. ಪ್ರಾಯಃ ಈಗ ಇದೂ ಅಂಥದ್ದೊಂದು ಸಂದರ್ಭವೆನ್ನಿಸಿದೆ. ಸಚಿವರು ತಾವು ಹೇಳದ ಮಾತುಗಳಿಗಾಗಿ ಕ್ರಿಯೆ-ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.

ಆರೆಸ್ಸೆಸ್‌ನ್ನು ಒಪ್ಪುವುದೂ ಒಪ್ಪದಿರುವುದೂ, ಅದನ್ನು ಸೇರುವುದೂ ಬಿಡುವುದೂ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ. ಅದರ ಸೈದ್ಧಾಂತಿಕ ಪೊಳ್ಳುತನವನ್ನು ಟೀಕಿಸಬಹುದು. ಅದರ ಧ್ಯೇಯೋದ್ದೇಶಗಳು ದೇಶದ ಹಿತಕ್ಕೆ ಮಾರಕವಾಗಿದೆಯೆಂದು ವಾದಿಸಬಹುದು. ಇವೆಲ್ಲ ಪ್ರಜಾಪ್ರಭುತ್ವದಲ್ಲಿ ಪ್ರಜೆಯ ಆಯ್ಕೆಗೆ ಬಿಟ್ಟದ್ದು. ಆದರೆ ಅದರ ನಿಷೇಧವೆಂಬ ವ್ಯಕ್ತಕ್ರಿಯೆಗೆ ಸಂವಿಧಾನದ ಮತ್ತು ಅದರಡಿ ರೂಪಿಸಲ್ಪಟ್ಟ ಕಾನೂನುಗಳೇ ಮಾತನಾಡಬೇಕಾಗುತ್ತದೆ. ಇಲ್ಲವಾದರೆ ನಾವು ಪಠಿಸುವ ಸಂವಿಧಾನವೇ ನಗೆಪಾಟಲಿಗೆ ಈಡಾಗಬಹುದು. ಈ ಕುರಿತು ಇಲ್ಲಿ ಚರ್ಚಿಸಿದ್ದೇನೆ.

ಸಮಾಜದ ಎಲ್ಲ ಅಂಗಗಳಲ್ಲೂ ಯಾವುದು ಸರಿ ಯಾವುದು ತಪ್ಪು ಎಂಬ ಹಂತದಿಂದ ನಾವೀಗ ಯಾರು ಸರಿ ಯಾರು ತಪ್ಪು ಎಂಬಲ್ಲಿಗೆ ತಲುಪಿದ್ದೇವೆ. ನಮಗಿಷ್ಟವಾದ್ದನ್ನು ಹೇಳುವವನು ಸರಿ ಮತ್ತು ನಾವು ಒಪ್ಪದ್ದನ್ನು ಹೇಳುವವನು ತಪ್ಪು ಎಂಬ ಕಾಲಾನುಕ್ರಮದ ಮೌಲ್ಯೀಕರಣದ ಜಾಯಮಾನಕ್ಕೆ ತುತ್ತಾಗಿದ್ದೇವೆ. ಸತ್ಯವೆಂಬುದು ಸಾರ್ವಕಾಲಿಕ, ಸಾರ್ವತ್ರಿಕ ವಾಗಬೇಕಿತ್ತು. ಅದೇ ಸತ್ಯದ ಲಕ್ಷಣ. ಆದರೆ ಯಕಶ್ಚಿತ್ ಮನುಷ್ಯರು ನಿಯಮಗಳನ್ನು ರೂಪಿಸಲಾರಂಭಿಸಿದ್ದರಿಂದ ಸತ್ಯವೆಂಬುದು ತನ್ನ ನೈಜ ಅರ್ಥವನ್ನು, ಮೌಲ್ಯವನ್ನು ಕಳೆದುಕೊಂಡು, ಬಹುಜನರ ಅಥವಾ ಸಮಾಜದ ಬಹುಸಂಖ್ಯಾಕರ ಸ್ವಾನುಕೂಲ ಸಾಧನವಾಗಿದೆ. ಹಿಂದಿನ ಸತ್ಯ ನಮಗೆ ಇಂದಿನ ಸತ್ಯದ ಆವಿಷ್ಕಾರಕ್ಕೆ ಸಹಕಾರಿಯಾಗಿಲ್ಲ ಎಂಬುದು ಮಾತ್ರ ಸತ್ಯ.

ಬಹುಮತವೆಂಬುದು ಆಡಳಿತ ಅನುಕೂಲಕ್ಕಿರುವ ನಿಯಮ. ಅದಿಲ್ಲದಿದ್ದರೆ ದೈವಿಕ, ದೈಹಿಕ ಮತ್ತು ಗುಂಪಿನ, ಶಕ್ತಿಯೇ ಅಧಿಕಾರಕ್ಕೆ ಹಕ್ಕು ಎಂಬಂತಾಗುತ್ತಿತ್ತು. ರಾಜಸತ್ತೆಯಲ್ಲಿ ನ್ಯಾಯದಾನಕ್ಕೆ ಈ ಪ್ರಶ್ನಾರ್ಹ ನಿಯಮವೇ ರಹದಾರಿ ಮತ್ತು ಸಾಧನವಾಗಿತ್ತು. ಆದ್ದರಿಂದ ಆಳುವವನ ಅನುಕೂಲವೇ ಸತ್ಯ ಮತ್ತು ನ್ಯಾಯವೆಂಬ ನಿಯಮವಿತ್ತು. ಇದನ್ನು ಆಳಿಸಿಕೊಳ್ಳುವವರು ಒಪ್ಪಿಕೊಂಡದ್ದು ಇತಿಹಾಸದ ಅನ್ನುವುದಕ್ಕಿಂತ ಅಸಹಾಯಕತೆಯ, ಪ್ರತಿಭಟನೆಯ ಶಕ್ತಿಯಿಲ್ಲದ್ದು ಕಾರಣವಾಗಿತ್ತು. ಇದರಿಂದಾದ ಒಳ್ಳೆಯದನ್ನು ಸಮಾಜ ಅನುಭವಿಸಿದೆ ಮತ್ತು ಕೇಡನ್ನು ಸಹಿಸಿದೆ. ಈ ಸಂಬಂಧ ಚರಿತ್ರೆ ಸಾಕ್ರೆಟಿಸ್, ಯೇಸು, ಗಾಂಧಿ ಹೀಗೆ ತುಂಬಾ ನಿದರ್ಶನಗಳನ್ನು ಕಂಡಿದೆ. ಆ ಕಾಲದ ಸಮಾಜವು ಅದಕ್ಕೆ ಅವಕಾಶಮಾಡಿಕೊಟ್ಟಿದೆಯಲ್ಲ ಎಂಬುದನ್ನು ನಾವು ವಿಷಾದಪೂರ್ವಕ ಅಚ್ಚರಿಯಿಂದ ಗಮನಿಸಬೇಕಾಗಿದೆ. ಯಾರನ್ನು ದೂಷಿಸಬೇಕು? ಜನರು ತಮಗೆ ಬೇಕಾದ್ದನ್ನು ರೊಚ್ಚಿಗೇಳದೆ ಸ್ವೀಕರಿಸಿದ್ದಾರೆ.

ಇಷ್ಟಾದರೂ ಸರಿ-ತಪ್ಪುಗಳ ನಡುವಣ ಗೆರೆ ಸ್ಪಷ್ಟವಾಗಿರುವುದನ್ನು ಗಮನಿಸಲು ವಿಶೇಷವಾದ ದೃಶ್ಯನಿಯಮಗಳು ಬೇಕಾಗಿಲ್ಲ. ಬಹುಮತ ಹೇಳಿದರೆ 2+2=5 ಆಗುವುದಿಲ್ಲ ಎಂಬ ಸರಳ ಸತ್ಯವನ್ನೂ ಜೀರ್ಣಿಸದ ಹಂತಕ್ಕೆ ನಾವು ಬಂದಿದ್ದೇವೆ.

ಸಂತೋಷ್ ಹೆಗ್ಡೆಯವರು ತಮ್ಮ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಬಹಿರಂಗವಾಗಿ ಹೇಳಿದ್ದು ತಪ್ಪಲ್ಲ. ಇಲ್ಲದ ವಿಚಾರವನ್ನು ಸೃಷ್ಟಿಸಿದ್ದು ಸರಿಯಾಗದು. ದುಷ್ಟನೆದುರು ಹಗಲನ್ನು ಹಗಲೆಂದೂ ಇರುಳನ್ನು ಇರುಳೆಂದೂ ಹೇಳಬಾರದು ಎಂಬ ನೀತಿಯಿದೆ. ನಿಮಗೆ ಯಾವುದು ಸರಿ? ಎಂದು ಕೇಳಿಕೊಂಡು ಅದಕ್ಕೆ ತಲೆಯಾಡಿಸಬೇಕು. ಅದರಲ್ಲೂ ಸಚಿವರು ಹೇಳದ್ದನ್ನು ರೆಕ್ಕೆ ಪುಕ್ಕ ಕಟ್ಟಿ ಏಕೆ ಹೇಳಬೇಕು? ಏಕೆಂದರೆ ಇಂದು ಕೂಡಾ ಮಾಧ್ಯಮಗಳೇ ಸುದ್ದಿಯ ಮೂಲ ಮತ್ತು ಬಿಂದುಗಳು. ಆದರೆ ಅವರು ಸುದ್ದಿಯೆಂಬ ಅನಿಲವನ್ನು ವಾತಾವರಣದಲ್ಲಿ ಹಬ್ಬಿಸುವಾಗ ಅದು ವಿಷಾನಿಲ ಹೌದೇ ಅಲ್ಲವೇ ಎಂಬುದನ್ನು ಗಣಿಸಲಾರರು. ಅದರ ಫಲಿತಾಂಶ, ಪರಿಣಾಮಗಳ ಬಗ್ಗೆ ಯೋಚಿಸಲಾರರು. ಒಟ್ಟಾರೆ ಅದು ಆ ಕ್ಷಣದ ಸುದ್ದಿ.

ಇಂದು ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮತೀಯತೆ, ಪಕ್ಷಾಭಿಮಾನವು ವಿವಿಧ ರೀತಿಯಲ್ಲಿ ಜಾಹೀರಾತುಗೊಳ್ಳುವುದನ್ನು ಗಮನಿಸಬಹುದು. ಯಾವುದೊಂದು ಹಬ್ಬ-ಹರಿದಿನ, ಸಾರ್ವಜನಿಕ ಜಾಗವನ್ನು ಮಲಿನಗೊಳಿಸುವುದರಿಂದಲೇ ಆರಂಭವಾಗುತ್ತದೆ. ಅಲ್ಲಿ ದೇವರ ಬದಲು ಸೋ ಕಾಲ್ಡ್ ಭಕ್ತರ, ಅಭಿಮಾನಿಗಳ, ಪುಂಡುನಾಯಕರ ಆಯ್ಕೆಯ ಧ್ವಜಗಳು, ಬ್ಯಾನರುಗಳು, ಚಿತ್ರಗಳು ರಾರಾಜಿಸುತ್ತವೆ. ರಾಜಕೀಯ ಸಮಾರಂಭಗಳಂತೂ ವಾತಾವರಣವನ್ನು ಮಲಿನಗೊಳಿಸುವುದರಲ್ಲೇ ತಮ್ಮ ಸಾರ್ಥಕತೆಯನ್ನು ಸಾರುತ್ತವೆ. ಇವನ್ನೆಲ್ಲ ನಿಷೇಧಿಸಬಹುದಲ್ಲವೇ? ಇಲ್ಲ. ಅವು ಎಲ್ಲ ಕೇಡಿಗರಿಗೂ ಬೇಕು. ಆ ಕುರಿತು ಚರ್ಚೆಯಾಗುವುದೇ ಇಲ್ಲ. ಇಕ್ಕಡೆಯ ತಂಡಗಳ ಪ್ರತಿರೋಧದ ವಿಚಾರಗಳಷ್ಟೇ ಕಲಹದ ಸಂಗತಿಗಳಾಗುತ್ತವೆ.

ಇರಲಿ. ಈಗ ಆರೆಸ್ಸೆಸ್‌ನ ನಿಷೇಧದ ಕುರಿತ ಚರ್ಚೆಯನ್ನು ಮುಂದುವರಿಸೋಣ: ವಿಶೇಷವೆಂದರೆ ಕರ್ನಾಟಕ ಸರಕಾರವು ಅಧಿಕೃತವಾಗಿ ಆರೆಸ್ಸೆಸನ್ನು ನಿಷೇಧ ಮಾಡುವ ಕುರಿತ ಮಾತನಾಡಿಲ್ಲ. ಸಚಿವರೊಬ್ಬರು ಈ ಕುರಿತು ನೀಡಿದ ಇನ್ನೂ ದ್ರವಸ್ಥಿತಿಯಲ್ಲೇ ಇದ್ದ ಅಭಿಪ್ರಾಯವನ್ನು ಜನರು ಕೆದಕಿ ಸುದ್ದಿಮಾಡಿದರು. ಸರಕಾರಿ ಪ್ರದೇಶವನ್ನು ಮತೀಯ ಸಂಘಸಂಸ್ಥೆಗಳು, ವ್ಯಕ್ತಿಗಳು ಬಳಸುವಂತಿಲ್ಲವೆಂಬ ನಿರ್ಬಂಧವನ್ನು ಸರಕಾರ ಹಾಕಬಹುದು. ಅದಕ್ಕೂ ನಿಷೇಧಕ್ಕೂ ಅಂತರವಿದೆ. ಹಾಗೆ ನೋಡಿದರೆ ಸಚಿವರ ಅಭಿವ್ಯಕ್ತಿ ಸ್ಪಷ್ಟವಿತ್ತು. ಅವರೆಲ್ಲೂ ಆರೆಸ್ಸೆಸನ್ನು ನಿಷೇಧಿಸುವ ಮಾತಾಡಿರಲಿಲ್ಲ. ಸರಕಾರಿ-ಸಾರ್ವಜನಿಕ ಸ್ಥಳಗಳು, ಸರಕಾರಿ ನೌಕರರು ಮುಂತಾದ ಸ್ಪಷ್ಟ ಅಂಶಗಳನ್ನು ಬದ್ಧ ಜನಸಮೂಹಗಳು ಗಣಿಸದೆ ತಮಗಿಷ್ಟವಾದ ಅರ್ಥವಿಕಾಸವನ್ನು ನೀಡುತ್ತಾರೆ. ಈಗ ನಡೆದದ್ದೂ ಇದೇ. ಸಂತೋಷ್ ಹೆಗ್ಡೆಯವರೂ ಈ ಅಂಶವನ್ನು ಗಮನಿಸಿದಂತಿಲ್ಲ. ಅವರು ಈ ಬೆಂಕಿಯ ಮೂಲವನ್ನು ಶೋಧಿಸದೆ ಅದರಿಂದೆದ್ದ ಹೊಗೆಯನ್ನೂ ಬರಿಗುಲ್ಲನ್ನೂ ಗುರಿಯಿಟ್ಟು ತಮ್ಮದೇ ಅರ್ಥವಿವರಣೆಯನ್ನು ನೀಡಿದರು. ಅನಗತ್ಯವಾಗಿ ಆರೆಸ್ಸೆಸನ್ನು ನಿಷೇಧಿಸಿದರೆ ಮುಂದೆ ಕಾಂಗ್ರೆಸನ್ನು ಭಾಜಪ ನಿಷೇಧಿಸಬಹುದೆಂಬ ಅನಗತ್ಯ ವಿವಾದವನ್ನು ಸೃಷ್ಟಿಸಿದರು.

ಸಂವಿಧಾನದ ಬಗ್ಗೆ ನಿತ್ಯನಿಷ್ಠೆಯವರಿಗೂ ಸಂವಿಧಾನವು ಅರ್ಥವಾದಂತಿಲ್ಲ. ಸಂವಿಧಾನವು ಈ ದೇಶಕ್ಕೂ ಅದರ ಪ್ರಜೆಗಳಿಗೆ ಮಾತ್ರವಲ್ಲ ಎಲ್ಲ ಜೀವವೈವಿಧ್ಯಕ್ಕೂ, ನೆಲ-ಜಲಕ್ಕೂ, ನಂಬಿಕೆ-ಹಕ್ಕುಗಳಿಗೂ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನಕ್ಕೆ ಬದ್ಧರಾದರೆ, ಎಲ್ಲವೂ ಸರಿಯಾದರೆ ಎಲ್ಲರೂ ಸರಿ; ಬರೀ ಸಂವಿಧಾನವನ್ನು ಪ್ರೀತಿಸಿದರೆ ಸಾಲದು. ಅದು ನಮಗೆ ನೀಡಿದಂತೆ ಇತರರಿಗೂ ಅಷ್ಟೇ ವಾಕ್, ಅಭಿವ್ಯಕ್ತಿ, ನಂಬಿಕೆ, ಧರ್ಮ/ಮತ, ಪ್ರಶ್ನಿಸುವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದೆಯೆಂಬುದನ್ನು ಮರೆಯಲಾಗದು. ನಾನು ಹೇಳಿದ್ದು ಅಥವಾ ನಾನು ಹೇಳಿದ್ದರಿಂದ ನನ್ನ ವಿಚಾರ/ಅಭಿಮತ ಸರಿಯಾಗದು. ಅದು ಸಂವಿಧಾನ ಮತ್ತು ಅದರಡಿಯ ಕಾನೂನಿನ ನಿಕಷಕ್ಕೆ ಒಡ್ಡಿಕೊಳ್ಳಬೇಕು. ನಮ್ಮ ನ್ಯಾಯಾಲಯಗಳು ಮಾಡುತ್ತಿರುವುದು ಇದೇ ಇಲ್ಲವೇ ಮಾಡಬೇಕಾದದ್ದು ಇದನ್ನೇ.

ಯಾವ ಸಂಘಟನೆಗಳನ್ನು ನಿಷೇಧಿಸಬಹುದು? ನೋಂದಾಯಿತ ಮತ್ತು ನೋಂದಾಯಿತವಲ್ಲದ ಎಂಬ ಭೇದವಿರುವುದಿಲ್ಲ. ದೇಶದ, ಜನರ ಹಿತಕ್ಕೆ, ಸಾಮಾಜಿಕ ಸಾಮರಸ್ಯಕ್ಕೆ ವಿರೋಧವಾದ, ಭಯೋತ್ಪಾದನೆಯನ್ನು ನಡೆಸುವ ಇಲ್ಲವೇ ಪ್ರೋತ್ಸಾಹಿಸುವ ವ್ಯಕ್ತಿ, ಸಂಘಟನೆಗಳನ್ನು ನಿಷೇಧಿಸಬಹುದು. ಆದರೆ ನಿಷೇಧವು ಕಾನೂನುದ್ವಾರಾ ಸ್ಥಾಪಿತವಾದ ಪ್ರಾಧಿಕಾರದ ನಿರ್ಣಯವನ್ನು ಇದು ಆಧರಿಸುತ್ತದೆ. ಹೀಗಾಗಿಯೇ ಸರಕಾರ (ಗಳು) ಕೈಗೊಂಡ ಅನೇಕ ಇಂತಹ ಆದೇಶಗಳು ನೋಟಕ್ಕೆ ಸರಿಯೆಂದು ಕಂಡರೂ ಕಾನೂನಿನ ಪ್ರಕ್ರಿಯೆಗಳು ಸರಿಯಾಗದೇ ಅವಮಾನಕಾರಿಯಾಗಿ ರದ್ದಾಗುತ್ತದೆ. ನ್ಯಾಯಾಂಗವೂ ಮನುಷ್ಯರನ್ನೇ ಹೊಂದಿರುವುದರಿಂದ ಮತ್ತು ಈ ಕಾರಣಕ್ಕೇ ಅಪವಾದಗಳಿಗೆ ಹೊರತಲ್ಲವಾದ್ದರಿಂದ ಅಲ್ಲಿನ ನಿರ್ಣಯಗಳೂ ಅವುಗಳಿಂದ ಲಾಭಹೊಂದಿದವರನ್ನು ಬಿಟ್ಟು ಇತರ ಮನುಷ್ಯರಿಂದ ಟೀಕೆಗೊಳಗಾಗಬಹುದು. ಆದರೆ ಕಾನೂನನ್ನು ಒಪ್ಪದೇ ಹೋದರೆ ಅರಾಜಕತೆಯು ಸೃಷ್ಟಿಯಾಗಬಹುದಾದ್ದರಿಂದ ಅದನ್ನು ಒಪ್ಪಿಕೊಳ್ಳುವುದು ಸಾಮಾಜಿಕ ಆರೋಗ್ಯಕ್ಕೆ ಒಳ್ಳೆಯದು. ವಾಲಿವಧೆ, ಸೀತಾ ಪರಿತ್ಯಾಗ, ಶಂಭೂಕವಧೆ ಮುಂತಾದ ಅಪವಾದಗಳ ಹೊರತಾಗಿಯೂ ಶ್ರೀರಾಮನನ್ನು ಆದರ್ಶವೆಂದು ಭಾವಿಸುವುದಿಲ್ಲವೇ- ಹಾಗೆ!

ಸದ್ಯ ಈ ದೇಶದಲ್ಲಿ ಯುಎಪಿಎ (ಅಕ್ರಮ ಚಟುವಟಿಕೆಗಳನ್ನು ತಡೆಯುವ ಕಾಯ್ದೆ) ಎಂಬ 1967ರಲ್ಲಿ ರಚನೆಗೊಂಡ ಕಾನೂನಿನಡಿ ಸರಕಾರವು ಯಾವುದೇ ಸಂಘಟನೆಗಳನ್ನು ಕಾನೂನಾತ್ಮಕ ತನಿಖೆಯ ಬಳಿಕ ನಿಷೇಧಿಸಬಹುದು. 2019ರಲ್ಲಿ ಆದ ತಿದ್ದುಪಡಿಯಡಿ ಈ ಕಾಯ್ದೆಯಲ್ಲಿ ವ್ಯಕ್ತಿಗಳ ವಿರುದ್ಧವೂ ಕ್ರಮವನ್ನು ಕೈಗೊಳ್ಳಬಹುದು. ಯಾವುದೇ ಸಂಪತ್ತನ್ನು ಅಮಾನತು ಮಾಡಬಹುದು. ಆದರೆ ಈ ನಿಷೇಧವು ಒಂದು ನ್ಯಾಯಮಂಡಳಿಯ ನಿರ್ಣಯಕ್ಕೆ ಮತ್ತು ಒಟ್ಟಿನಲ್ಲಿ ನ್ಯಾಯಾಂಗದ ಪರೀಕ್ಷೆಗೆ ಒಳಪಟ್ಟಿದೆ. ಅಷ್ಟೇ ಅಲ್ಲ, ದೇಶದ ಅಥವಾ ಗೊತ್ತಾದ ಪ್ರಾದೇಶಿಕ ಇತಿಮಿತಿಗೊಳಪಟ್ಟು ಮಾಡುವ ಗಡಿಪಾರು ಮುಂತಾದವು ಸಹಿತ ಈ ವ್ಯಾಪ್ತಿಗೊಳಪಡುತ್ತವೆ. ಪೊಲೀಸರು ಮಾಡುವ ರೌಡಿ ಪಟ್ಟಿ ಕೂಡಾ ಇದೇ ಮಾದರಿಯದ್ದು! ಇವೆಲ್ಲ ಆಯಾಯ ಚಟುವಟಿಕೆ, ಸಮಯ, ಸ್ಥಳ, ಸಂದರ್ಭಕ್ಕೊಳಪಟ್ಟಿವೆ.

ಆರೆಸ್ಸೆಸ್ ನೂರು ವರ್ಷಗಳನ್ನು ತಲುಪಿದ ಉತ್ಸಾಹದಲ್ಲಿದೆ. ಅದಕ್ಕೆ ಪೂರಕವಾದ ಒಕ್ಕೂಟ ಸರಕಾರವಿದೆ. ಭಾಜಪಕ್ಕೆ ಆರೆಸ್ಸೆಸೇ ಆಧಾರ ಕಾರ್ಡ್. ಆದ್ದರಿಂದ ಅದನ್ನು ದೇಶಾದ್ಯಂತ ಅಥವಾ ಭಾಜಪವು ಅಧಿಕಾರದಲ್ಲಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಷೇಧಿಸುವ ಸಂದರ್ಭವೇ ಇಲ್ಲ. ಈ ದೇಶವು ಮೂರು ಬಾರಿ ಆರೆಸ್ಸೆಸನ್ನು ನಿಷೇಧಿಸಿದೆ. 1950ರ ದಶಕದಲ್ಲಿ, 1975ರ ತುರ್ತುಪರಿಸ್ಥಿತಿಯಲ್ಲಿ ಮತ್ತು ಬಾಬರಿ ಮಸೀದಿ ಕೆಡವಿದ ಸಂದರ್ಭದಲ್ಲಿ; ಆದರೆ ಆನಂತರ ಈ ನಿಷೇಧಾಜ್ಞೆಗಳನ್ನು ಹಿಂಪಡೆದಿದೆ. ಯಾವುದೇ ಸಂದರ್ಭದಲ್ಲೂ ಸರಕಾರವನ್ನು ಮೂರ್ಖನೆಂದು ಭಾವಿಸಬಾರದು. ಅದು ಯಾವಾಗಲೂ ತನ್ನ ಅಧಿಕಾರದ ಉಳಿವಿಗೆ ಬೇಕಾದ್ದನ್ನು ಮಾಡುತ್ತದೆ. ಅದು ತಪ್ಪೆಂದು ಸಾಬೀತಾದಾಗ ಒಂದೋ ಒಳದಾರಿಗಳಲ್ಲಿ ಪಾರಾಗುತ್ತದೆ. ಕೆಲವು ಬಾರಿ ಇಂತಹ ನಿರ್ಣಯಗಳು ತಪ್ಪೆಂದು ಅರಿವಾದಾಗ ಕಾಲ ಮಿಂಚಿರುತ್ತದೆ. ಆಗ ಅದನ್ನು ಸಮರ್ಥಿಸಲು ಪ್ರಯತ್ನಿಸುತ್ತದೆ, ಇಲ್ಲವೇ ಮುಖಕ್ಕೆ ಮುಸುಕು ಹಾಕಿಕೊಂಡು ಮುಂದುವರಿಯುತ್ತದೆ. ಇದು ಎಲ್ಲ ಕಾಲದಲ್ಲೂ ನಡೆದಿದೆ.

ನ್ಯಾಯಾಂಗವು ತನ್ನೆಲ್ಲ ದೋಷಗಳೊಂದಿಗೂ ಅನ್ಯ ಆಯ್ಕೆಗಳಿಲ್ಲದ ಸಾಂವಿಧಾನಿಕ ವ್ಯವಸ್ಥೆ. ಅನೇಕ ಬಾರಿ ಕಾನೂನಿನ ಹೊಣೆ, ಹಂಗು ಮತ್ತು ಬಂಧನದಲ್ಲಿರುವುದೂ ಉಂಟು. ವೈಯಕ್ತಿಕ ಸ್ವಾತಂತ್ರ್ಯದ ಸಂಬಂಧ ಅದರ ನಡವಳಿಕೆಯೂ ಸಂದೇಹಾಸ್ಪದ. ಕೆಲವರಿಗೆ ಬೇಗ ಜಾಮೀನು, ಇನ್ನು ಕೆಲವರಿಗೆ ವರ್ಷಾನುಗಟ್ಟಲೆ ವಿಳಂಬ ಹೀಗಾಗಿ ತನ್ನ ನ್ಯಾಯನಿರ್ಣಯ ಪದ್ಧತಿಯಲ್ಲಿ ಏಕಸೂತ್ರವನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯಗಳು, ಅದರಲ್ಲಿನ ವಿಳಂಬವು ಸರಕಾರಕ್ಕೆ ವಿವಾದಾಸ್ಪದ ಅನುಕೂಲವನ್ನು ಮಾಡಿಕೊಟ್ಟದ್ದೂ ಇದೆ.

ಕರ್ನಾಟಕ ಸರಕಾರವು ಆರೆಸ್ಸೆಸ್‌ನ ವಿರುದ್ಧ ಕೆಲವು ನಿರ್ಬಂಧಗಳನ್ನು ಹಾಕಬಹುದು. ಅದನ್ನು ಸಾಮಾಜಿಕ ಹಿತದೃಷ್ಟಿಯಿಂದ ಮತ್ತು ಈಗ ಹಬ್ಬುತ್ತಿರುವ ಮತೀಯ ವಿಷಗಾಳಿಯ ಮಾಲಿನ್ಯವನ್ನು ಶುದ್ಧೀಕರಿಸುವ ದೃಷ್ಟಿಯಿಂದ ಸ್ವಾಗತಿಸಬಹುದು. ಆದರೆ ನಿಷೇಧವು ಕಾನೂನಿನಡಿ ಮಾನ್ಯವಾಗದು. ಇದು ಕಾನೂನು ಪರಿಣತರ ನಡುವೆ ಚರ್ಚೆಯಲ್ಲಿ ಕಂಡುಕೊಳ್ಳಬಹುದಾದ ಮತ್ತು ಒಂದು ವೇಳೆ ನಿಷೇಧವಾದರೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ/ಬಹುದಾದ ವಿವಾದ. ಅಂತೂ ಕಾಂಗ್ರೆಸಿನ ಇಬ್ಬಂದಿತನವು ಇದನ್ನು ಒಂದಷ್ಟು ಕಾಲ ಜೀವಂತವಾಗಿ ಇಡಬಹುದು. ಕೊನೆಗೂ ಕಂಡುಕೊಳ್ಳಬೇಕಾದ ಸತ್ಯವೆಂದರೆ ಮಾತಾಡುವ ಮೊದಲು ಚಿಂತನೆಯ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News