ನಮ್ಮೆದುರಿನ ರಾಹು-ಕೇತುಗಳು
ರಾಜಕಾರಣಿಗಳಿಗೆ ಮಾತೇ ಮಾಣಿಕ್ಯ. ಮಾತಿನ ಮಂಟಪವನ್ನು ಕಟ್ಟಿ ಭರವಸೆಗಳ ಮಹಾಪೂರವನ್ನು ಹರಿಸಿ ಸದಾ ಕಾಯುವಂತೆ, ಕಾತರವಾಗಿ ಉಳಿಸುವ ಈ ವಿದ್ಯೆ ಸಮ್ಮೋಹನಕ್ಕಿಂತಲೂ ಭಯಂಕರ. ಕೇಳುವ ಮಂದಿ ತಾವು ರಾಹುವೋ ಕೇತುವೋ ಎಂದು ಬೆರಗಾಗಬೇಕಿಲ್ಲ. ಯಾವುದಾದರೂ ಫಲಶ್ರುತಿ ಒಂದೇ. ಅಡಿಯಾಳಾಗಿರುವುದು. ನಾವು ಅಡಿಯಾಳಾಗಿರುವ ಈ ಆಕಾರದ ಕುರಿತು ನಮಗೆ ಸತ್ಯ ಗೊತ್ತಿರುತ್ತದೆ. ಆದರೂ ಈ ಅಂತರವನ್ನು ಗುರುತಿಸಲಾರೆವು ಅಥವಾ ಗುರುತಿಸಿದರೂ ಅದನ್ನು ಮೀರಲಾರೆವು.
ಹೊಸ ಜಗತ್ತೊಂದು ಆರಂಭವಾಗಲಿದೆಯೆಂಬ ಸಂಕೇತವನ್ನು ವಿಶ್ವದ ನಾಯಕರನೇಕರು ನೀಡುತ್ತಿದ್ದಾರೆ. ಅತಿರೇಕಗಳು ಸಮೀಪಕ್ಕೆ ಬಂದಿವೆ. ಅಪಾಯಕಾರಿ, ಹೆಚ್ಚು ಅಪಾಯಕಾರಿ ಎಂಬ ವಿಚಿತ್ರ ಮಾಪನಗಳು ಚಾಲ್ತಿಗೆ ಬಂದಿವೆ. ಕೆಲವೇ ಪ್ರಮುಖ ಅಥವಾ ಶಕ್ತ ದೇಶಗಳು ಜಗತ್ತಿನ ಭವಿಷ್ಯವನ್ನು ನಿರ್ಧರಿಸುವ ತವಕದಲ್ಲಿವೆ. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿದ್ದುದಕ್ಕಿಂತ ಹೆಚ್ಚು ಹಿಟ್ಲರ್, ಮುಸ್ಸೋಲಿನಿಗಳು ಈಗ ಇದ್ದಾರೆ. ನಮ್ಮ ಭವಿಷ್ಯ ಎಂದರೆ ಇನ್ನೊಬ್ಬರ ಭವಿಷ್ಯವಲ್ಲ ಎಂಬ ಯೋಚನೆಗಳು ವೈಯಕ್ತಿಕ ಸ್ವಾರ್ಥ ಸಾಧನೆಯ ಮೈಲಿಗಲ್ಲುಗಳಾಗುತ್ತಿವೆ ಮತ್ತು ಕೆಲವು ಬಾರಿ ಇನ್ನೊಬ್ಬರ ಗಲ್ಲುಶಿಕ್ಷೆಗಳಾಗುತ್ತಿವೆ. ಅಮೆರಿಕ, ರಶ್ಯ, ಚೀನಾ, ಭಾರತ, ಪಾಕಿಸ್ತಾನ, ಮಧ್ಯಪೂರ್ವ ರಾಷ್ಟ್ರಗಳು, ಉತ್ತರ ಕೊರಿಯಾ ಹೀಗೆ ಎಲ್ಲಿ ಬೇಕಾದರೂ ವಿಶ್ವನಾಶದ ಕಳೆಯನ್ನು ಬೆಳೆಯಬಹುದು. ನೋಹನ ನೌಕೆಯನ್ನು ಅಣಿಗೊಳಿಸುವುದು ಇಂದಿನ ಮೊದಲ ಕಾಯಕವಾಗಬಹುದು ಮತ್ತು ಇವೆಲ್ಲದರ ಸೂತ್ರಹಸ್ತವಾದ ನಾಯಕತ್ವ ಮತ್ತು ಅದರ ಆಧಾರಸ್ತಂಭಗಳಾದ ಚಿಂತನೆಗಳು, ಆಕಾಂಕ್ಷೆಗಳು ಬಹಳ ಆಳದಲ್ಲಿವೆ. ಅಮೆರಿಕದ ಟ್ರಂಪ್ ಪಶ್ಚಿಮದ ಸೂರ್ಯನಾದರೆ ನಾವೇನು ಕಡಿಮೆ, ನಮ್ಮಲ್ಲೂ ಬೆಳಗುವ ಸೂರ್ಯರಿದ್ದಾರೆ ಎಂದು ಅನೇಕರು ತಮ್ಮ ಎದೆತಟ್ಟಿಕೊಳ್ಳುವುದು ದೈನಂದಿನ ಸುದ್ದಿಯಾಗಿವೆ. ಇವುಗಳನ್ನು ನಿವಾರಿಸುವ ಸಾಮರ್ಥ್ಯ ಜನರಿಗಿಲ್ಲವಾದ್ದರಿಂದ ಇವನ್ನು ಕೇಳುವುದು, ಓದುವುದು, ಮಾತನಾಡುವುದು ಇವಿಷ್ಟೇ ದಿನಚರಿಯಾಗುವ ಅಪಾಯವನ್ನೆದುರಿಸುತ್ತಿದ್ದೇವೆ.
ಪುರಾಣಗಳನ್ನು ಸ್ಮರಿಸುವುದು, ಓದುವುದು ಹೊಸ ಚಿಂತನೆಗಳಿಗೆ ಅವಕಾಶವಾಗಲಿ ಎಂಬ ಉದ್ದೇಶದ ಸಾರ್ಥಕ್ಯಕ್ಕೆ ಅಥವಾ ಇಂದಿಗೆ ಅಂದು ಹೇಗೆ ಹೊಂದುತ್ತದೆ ಎಂಬುದನ್ನು ಹುಡುಕುವುದಕ್ಕೆ. ಒಂದು ಪುರಾಣಚಿತ್ರದೊಂದಿಗೆ ಇದನ್ನು ಮುಂದುವರಿಸಬಹುದು:
ಸಮುದ್ರಮಥನದ ಸಂದರ್ಭದಲ್ಲಿ ಉತ್ಪನ್ನವಾದ ಅಮೃತವನ್ನು ಮಹಾವಿಷ್ಣು ದೇವತೆಗಳಿಗೆ ಮಾತ್ರ ಉಣಬಡಿಸುವ ತಂತ್ರವನ್ನು ಹೂಡಿದ. ಇದನ್ನರಿತ ರಾಕ್ಷಸರ ಪೈಕಿ ಒಬ್ಬನು ಆತನ ಹೆಸರು ರಾಹು ಎಂದಿತ್ತೋ ಕೇತು ಎಂದಿತ್ತೋ ಎಂಬುದು ಚರ್ಚಾಸ್ಪದ ವಿಚಾರ. ಹೇಗೂ ಇರಲಿ, ಆತ ಹೇಗೋ ಮಾಡಿ ದೇವತೆಗಳ ಸಾಲಿನಲ್ಲಿ ಕುಳಿತನಂತೆ. ಅದು ಪತ್ತೆಯಾಗಿ ಮಹಾವಿಷ್ಣು ಆತನ ರುಂಡವನ್ನು ಮುಂಡದಿಂದ ಬೇರೆ ಮಾಡಿದನಂತೆ. ಆದರೂ ಅಮೃತವು ಆತನ ಕಂಠದಲ್ಲಿ ಇಳಿದದ್ದರಿಂದ ರುಂಡ ಮುಂಡ ಎರಡೂ ಅಮರವಾದವಂತೆ. ಅವಕ್ಕೆ ರಾಹು-ಕೇತು ಎಂದು ಹೆಸರಿಟ್ಟರು. ವಿಷಕಂಠ ಎಂದು ಶಿವನಿಗೆ ಹೆಸರಾದಂತೆ ಈ ರಾಕ್ಷಸನಿಗೆ ಅಮೃತಕಂಠ ಎಂದು ಹೆಸರಿಡಬಹುದಿತ್ತೇನೋ?
ಈಗ ನಾವು ಶಿರೋಭಾಗವನ್ನು ರಾಹು ಎಂದೂ ಉಳಿದ ದೇಹಭಾಗವನ್ನು ಕೇತು ಎಂದು ಹೇಳಿ ಅವಕ್ಕೆ ಅಡ್ಡಪಂಕ್ತಿಯಾದರೂ ಗ್ರಹಗಳೊಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದೂ ಪಂಚಾಂಗದಲ್ಲಿ ಅವರ ಹೆಸರಿನಲ್ಲಿ ಕಾಲ ಪ್ರಾಪ್ತವಾಗಿದೆ. ಎಲ್ಲದರಲ್ಲೂ ಪವಿತ್ರವನ್ನು ಕಾಣುವ ಭಕ್ತಕೋಟಿ ಸಂಸತ್ತಿಗೆ ನಾಮನಿರ್ದೇಶನವಾದ ಹಾಗೆ ಈ ಇಬ್ಬರಿಗೂ ಮಹತ್ವದ ಸ್ಥಾನವನ್ನು ಕೊಟ್ಟಿರುವುದು ವಿಶೇಷ. ರಾಹು-ಕೇತು ಎಂಬವರು ಈ ಕಥೆಗಿಂತಲೂ ಹೆಚ್ಚು ಸಾಂಕೇತಿಕ. ಇಂತಹ ಕಥೆ ಕಥಾಸರಿತ್ಸಾಗರದಲ್ಲಿಯೂ ಇದೆ. ಅಲ್ಲಿ ರುಂಡಮುಂಡಗಳನ್ನು ಸೇರಿಸುವಾಗ ಅದಲು ಬದಲಾಗಿ ಇಬ್ಬರೂ ಪರಸ್ಪರರಾಗುವುದು ಕೂಡಾ ಕಾಲ್ಪನಿಕವಾದರೂ ಒಂದು ರೂಪಕ. ಕಾರ್ನಾಡರ ಹಯವದನ ಇದನ್ನು ಹೊಸ ಹೊಳಪಿನೊಂದಿಗೆ ಚಿತ್ರಿಸಿದೆ.
ಇಂದಿನ ರಾಜಧರ್ಮ, ರಾಜನೀತಿಯಲ್ಲಿ ದೇಶವಾಳುವ ರಾಜಕಾರಣಿಗಳೆಲ್ಲ ಇಂತಹ ರಾಹುಕೇತುಗಳೇ. ಅಮೃತ ಕದಿಯುವುದರಲ್ಲಿ ವಿಫಲರಾದರೂ ತಮ್ಮ, ತಮ್ಮವರ ಬದುಕನ್ನು ಗಟ್ಟಿಗೊಳಿಸುವುದಕ್ಕಾಗಿ ಏನು ಮಾಡುವುದಕ್ಕೂ ತಯಾರು. ಆದರೆ ಬದುಕು ಬಂಗಾರವಾಗಬೇಕೆಂಬ ತವಕ ಅವಕ್ಕಿಲ್ಲ. ವ್ಯವಹಾರವೆಂದರೆ ಇದೇ. ಚಿನ್ನವಾದರೂ ಅಷ್ಟೇ: ಶುದ್ಧ ಬಂಗಾರಕ್ಕೆ ಶಕ್ತಿಯಿಲ್ಲ. ಬಹಳಬೇಗ ಬಳುಕುತ್ತದೆ. ಅದನ್ನು ಶಕ್ತಿಯುತವಾಗಿಸಲು ಒಂದಿಷ್ಟು (ಪ್ರಾಯಃ ಶೇ.1) ತಾಮ್ರವನ್ನು ಸೇರಿಸುತ್ತಾರೆಂದು ಕೇಳಿದ್ದೇನೆ. ಹೀಗಾಗಿ 24 ಕ್ಯಾರೆಟ್ ಚಿನ್ನವೆಂದರೆ ಶೇ. 99 ಅಷ್ಟೇ ಎಂದು ಬಲ್ಲವರೊಬ್ಬರು ಹೇಳಿದರು. ಇದೇ ರೀತಿ ರಾಜಕಾರಣದಲ್ಲಿ ತಾಮ್ರವನ್ನು ಸೇರಿಸುತ್ತ ಹೋಗಿ ಬಂಗಾರದ ನೆಲೆಯೇ ಇಲ್ಲವಾದರೆ ಹೇಗೆ? ವ್ಯವಹಾರದಲ್ಲಿ ಹೀಗಾಗುವುದು ಸಹಜ. ಹಾಲೆಂದು ಹೇಳುವ ದ್ರವದಲ್ಲಿ ನೀರನ್ನು ಸೇರಿಸುವುದು ಸಹಜ. ಹಾಗೆಂದು ನೀರೇ ಹೆಚ್ಚಾದರೆ, ಹಾಲು ತನ್ನ ಹಾಲ್ತನವನ್ನು ಬಿಟ್ಟುಕೊಟ್ಟಂತಾದೀತು. ಸಮಾಜವೇ ಹೀಗೆ. ಅಕ್ಬರ-ಬೀರಬಲ್‌ರ ಕಥೆಯೊಂದರಲ್ಲಿ ಎಲ್ಲರೂ ರಾತ್ರಿ ಬಂದು ಒಂದು ಖಾಲಿ ಕೊಳಕ್ಕೆ ಹಾಲು ಸುರಿಯಲು ಆದೇಶಿಸಿದಾಗ ಎಲ್ಲರೂ ಹಾಲು ಸುರಿಯುತ್ತಾರೆಂದು ನಂಬಿ ತಾನು ಮಾತ್ರ ನೀರು ಹಾಕಿದರೆ ಗೊತ್ತಾಗುವುದಿಲ್ಲವೆಂದು ಪ್ರತಿಯೊಬ್ಬನೂ ಬಗೆದು ನೀರುಸುರಿದು ಕೊನೆಗೆ ನೋಡಿದರೆ ಅಲ್ಲಿ ನೀರು ಮಾತ್ರವೇ ಇತ್ತಂತೆ. ಇಂತಹ ಸಮಾಜವನ್ನು ಮುನ್ನಡೆಸಲು ಬಂದ, ಬರುವ, ಜನಪ್ರತಿನಿಧಿಯು ಬೇರೆ ರೀತಿಯಿರಲು ಸಾಧ್ಯವಿಲ್ಲ. ಆತನೂ ನೀರು ಸುರಿಯುತ್ತಾನೆ. ಆದರೆ ತಾನು ಸುರಿದದ್ದು ಹಾಲೆಂದು ಜನರನ್ನು ನಂಬಿಸಿದವನು ಶ್ರೇಷ್ಠ ನಾಯಕನಾಗುತ್ತಾನೆ.
ಮತ್ತೆ ರಾಹುಕೇತುಗಳನ್ನು ನೋಡೋಣ: ಒಬ್ಬನಿಗೆ ತಲೆ; ಇನ್ನೊಬ್ಬನಿಗೆ ದೇಹ. ಒಂದು ಚಿಂತನೆ; ಇನ್ನೊಂದು ದುಡಿಮೆ. ಮಹಾವಿಷ್ಣು ಮಾಡಿದ ಈ ಆಕಸ್ಮಿಕ ಪ್ರಯೋಗದಲ್ಲಿ ಯಾವುದು ಶ್ರೇಷ್ಠ? ಕಲಿತು ಉದ್ಯೋಗದಲ್ಲಿರುವವರು ಚಿಂತಿಸುತ್ತಾರೆಂಬ ಗ್ಯಾರಂಟಿಯೇನೂ ಇಲ್ಲ. ಆದರೆ ಅವರಿಗೆ ದೈಹಿಕ ಶ್ರಮವಿಲ್ಲವೆಂಬ ಕಾರಣಕ್ಕೆ ಅವರ ಉದ್ಯೋಗ-ವೃತ್ತಿಗಳನ್ನು ಚಿಂತನಶೀಲವೆಂದು ಆರೋಪಿಸಬಹುದು. ಕೂಲಿಯಾಳು, ರೈತ ಮುಂತಾದ ವರ್ಗದವರು ದುಡಿಯುತ್ತಾರೆ. ಹಾಗೆಂದು ಅವರು ಚಿಂತಿಸುವುದಿಲ್ಲವೆಂದು ಅರ್ಥವಲ್ಲ. ಅದು ತೋರಗಣ್ಣಿಗೆ ಕಾಣಿಸುವುದಿಲ್ಲ. ಆದರೂ ನಮ್ಮ ಸಮಾಜದಲ್ಲಿ ಈ ಶಿರೋಭಾಗಕ್ಕೆ ಶ್ರೇಷ್ಠತೆಯನ್ನು ಕಲ್ಪಿಸಲಾಗಿದೆ ಮತ್ತು ಬಹುತೇಕ ಅಂಥವರು ತಾವು ಶ್ರೇಷ್ಠರೆಂಬ ಸ್ವಪ್ರೀತಿಪಾತ್ರರಾಗಿದ್ದಾರೆ. ಒಂದಿಲ್ಲದೆ ಇನ್ನೊಂದಿಲ್ಲವೆಂಬ ಭಾವನೆಯು ವಿಚಾರವಾಗಿ ಎಂದು ಮನುಕುಲಕ್ಕೆ ಪ್ರಾಪ್ತವಾಗುತ್ತದೆಯೋ ಅಲ್ಲಿಯವರೆಗೆ ಈ ಅಂತರ, ವ್ಯತ್ಯಸ್ತತೆ ಉಳಿಯುತ್ತದೆ.
ಆದರೆ ರಾಜಕೀಯದ ಆಧಿಪತ್ಯ ಈ ಎರಡೂ ವರ್ಗಕ್ಕಿಲ್ಲ. ಬದಲಾಗಿ ಇವರಿಬ್ಬರಿಗೂ ಮೂಗುದಾರ ಹಾಕಿ ಸವಾರಿ ಮಾಡುವ ಮೂರನೇ ವರ್ಗವು ರಾಜಕಾರಣಿಯೆಂಬ ಅಭಿದಾನದಲ್ಲಿ ಸೃಷ್ಟಿಯಾಗಿದೆ. ಇವರಿಗೆ ಮಾತೇ ಮಾಣಿಕ್ಯ. ಮಾತಿನ ಮಂಟಪವನ್ನು ಕಟ್ಟಿ ಭರವಸೆಗಳ ಮಹಾಪೂರವನ್ನು ಹರಿಸಿ ಸದಾ ಕಾಯುವಂತೆ, ಕಾತರವಾಗಿ ಉಳಿಸುವ ಈ ವಿದ್ಯೆ ಸಮ್ಮೋಹನಕ್ಕಿಂತಲೂ ಭಯಂಕರ. ಕೇಳುವ ಮಂದಿ ತಾವು ರಾಹುವೋ ಕೇತುವೋ ಎಂದು ಬೆರಗಾಗಬೇಕಿಲ್ಲ. ಯಾವುದಾದರೂ ಫಲಶ್ರುತಿ ಒಂದೇ. ಅಡಿಯಾಳಾಗಿರುವುದು. ನಾವು ಅಡಿಯಾಳಾಗಿರುವ ಈ ಆಕಾರದ ಕುರಿತು ನಮಗೆ ಸತ್ಯ ಗೊತ್ತಿರುತ್ತದೆ. ಆದರೂ ಈ ಅಂತರವನ್ನು ಗುರುತಿಸಲಾರೆವು ಅಥವಾ ಗುರುತಿಸಿದರೂ ಅದನ್ನು ಮೀರಲಾರೆವು.
ಕೇಡೇ ಮನುಷ್ಯನ ಕರ್ತೃತ್ವವಾಗುತ್ತಿದೆಯಾದರೂ ಅದನ್ನು ಗುರುತಿಸುವ ಮನಸ್ಸೂ, ಕ್ರಿಯಾಶಕ್ತಿಯೂ ಜನಸಾಮಾನ್ಯರಿಗಿಲ್ಲವಾಗಿದೆ. ಜನರ ಈ ದೌರ್ಬಲ್ಯವನ್ನು ತಮ್ಮ ಹಿತಕ್ಕೆ ಬಳಸಿಕೊಂಡು ತಮ್ಮ ಧೂರ್ತ ಗುರಿಯನ್ನು ಸಾಧಿಸಿಕೊಳ್ಳಲು ಬಳಸುವ ತಂತ್ರದಲ್ಲಿ ಮಾತು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ; ನಿರ್ವಹಿಸುತ್ತದೆ. ಪುರಾತನರ ನಡುವೆ ರಾಜನೆಂಬವನೊಬ್ಬನಿದ್ದರೆ ಆತ ಜಾಗರೂಕತೆಯಿಂದ ಅಥವಾ ತನ್ನ ಸಚಿವರನ್ನು ಕೇಳಿ ಸರಿಯಾದ್ದನ್ನೇ ಮಾತನಾಡುತ್ತಿದ್ದನೆಂದು ನಂಬಲಾಗಿದೆ. ದೇವರೇ ಆತನಿಂದ, ಮಾತನಾಡಿಸುತ್ತದೆ ಅಥವಾ ಆತನ ಮೂಲಕ ಮಾತನಾಡುತ್ತದೆಂಬ ಕಲ್ಪನೆಯಿದೆ. ಆಡಳಿತದಲ್ಲಿ ಗಮನಿಸಬೇಕಾಗಿದ್ದದ್ದು ಎರಡೇ ಅಂಶಗಳನ್ನು ಅಂದರೆ ತಪ್ಪು ಮತ್ತು ಅಪರಾಧವನ್ನು. ತಪ್ಪನ್ನು ತಿದ್ದುವುದು ಮತ್ತು ಅಪರಾಧವನ್ನು ಶಿಕ್ಷಿಸುವುದು ಆಳುವವರ ಕರ್ತವ್ಯವೆಂದು ತಿಳಿಯಲಾಗಿತ್ತು.
ವರ್ತಮಾನಕಾಲದಲ್ಲಿ ಮಾತೆಂಬುದು ಗ್ರಹಚಾರವಾಗಿದೆ. ಬಹುತೇಕ ಆಳುವವರೂ ಅವರ ಜೊತೆಗಾರರು, ಅನುಯಾಯಿಗಳು, ರಾಹುಗಳಲ್ಲ, ಕೇತುಗಳೇ. ಅವಕ್ಕೆ ಯೋಚಿಸಲು ತಲೆಯಿಲ್ಲ; ಹಾಗೆಂದು ದುಡಿಯುವ ಮನಸ್ಸಿಲ್ಲ. ಆದರೆ ಇವೆರಡರ ನಡುವೆ ಮರುಳುಮಾಡುವ ಒಂದು ತಂತ್ರ ಮಾತ್ರ ಸಿದ್ಧಿಸಿದೆ. ನಾವು ಹೇಗೆ ಇವರನ್ನು ನಂಬಿದೆವು ಎಂದು ಯೋಚಿಸುವ ಹೊತ್ತಿಗೆ ನಮ್ಮ ಆಯುಷ್ಯದ ಬಹುಭಾಗ ಕಳೆದಿರುತ್ತದೆ ಇಲ್ಲವೇ ಸವೆದಿರುತ್ತದೆ.
ಆದರೆ ಒಂದು ಮಹತ್ತರ ಬದಲಾವಣೆಯಾಗಿದೆ. ಈಗ ಮಾತೆಂಬುದು ರುಂಡ-ಮುಂಡಗಳ ಬೆಸುಗೆಯಾಗುವುದೇ ಇಲ್ಲ. ಇನ್ನೂ ಸೂಕ್ಷ್ಮವಾಗಿ ಅಥವಾ ಕ್ರೂರವಾಗಿ ಗಮನಿಸುವುದಾದರೆ ಮಾತಿನಲ್ಲಿ ಮೂರುವಿಧವನ್ನು ಕಾಣಬಹುದು: ಒಂದು ಶಿರೋಭಾಗದಿಂದ ಬರುವ ಚಿಂತನೆಗಳು; ಇನ್ನೊಂದು ಮುಂಡದ ಭಾಗದಿಂದ ಅಭಿವ್ಯಕ್ತಿಗೊಳ್ಳುವ ಭಾವನೆಗಳು, ಮತ್ತೊಂದು ಸೊಂಟದ ಕೆಳಗಿನ ಮಾತುಗಳು.
ನಮ್ಮ ರಾಜಕಾರಣದ ಮಂದಿಯಂತೂ ಈ ಮೂರನೇ ವರ್ಗಕ್ಕೆ ಸಲ್ಲುವವರು. ಈಗ ಹೊಸ ಮತ್ತು ಆಧುನಿಕ ಮಂತ್ರಜಾಲವು ದಕ್ಕಿದ ಮೇಲೆ ಏನನ್ನಾದರೂ ಮಾತನಾಡಿ ದಕ್ಕಿಸಿಕೊಳ್ಳಬಹುದೆಂಬುದನ್ನು ಇಂತಹ ಜಾಣರು ಅರ್ಥಮಾಡಿಕೊಂಡಿದ್ದಾರೆ. ಅವರು ಪರಸ್ಪರ ಆಡಿಕೊಳ್ಳುವ ಮಾತುಗಳು ನಮಗೆ ಸಹ್ಯವಾದರೂ ನಾವು ಅದನ್ನು ನಮ್ಮ ನಾಯಕರ ನುಡಿಯೆಂಬುದಕ್ಕಾಗಿ ಸಹಿಸಿಕೊಳ್ಳುತ್ತೇವೆ. ಇದರಲ್ಲಿ ಯಾರು ಮೇಲು, ಯಾರು ಕೀಳು ಎಂಬುದನ್ನು ನಿರ್ಧರಿಸುವಂತಿಲ್ಲ. ಕೀಳುತನದಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದಷ್ಟೇ ಯೋಚಿಸಬಹುದು. ಇದೊಂದು ರೀತಿಯಲ್ಲಿ ನಿಧಾನಗತಿಯ ಓಟದ ಸ್ಪರ್ಧೆ. ಯಾರು ಹೆಚ್ಚು ಆಳಕ್ಕಿಳಿಯುತ್ತಾನೋ ಆತನೇ ಕೊನೆಗೆ ನಾಯಕನಾಗುತ್ತಾನೆ. ಈಚೆಗೆ ನಮ್ಮ ಕೇಂದ್ರ ಸಚಿವರೊಬ್ಬರು ‘‘ಯಾರು ಹೆಚ್ಚು ಮಂದಿಯನ್ನು ಮರುಳು ಮಾಡುತ್ತಾನೋ ಆತನೇ ಶ್ರೇಷ್ಠ ನಾಯಕ’’ ಎಂದರು. ಹೌದೆನ್ನಿಸುತ್ತದೆ. ನಮ್ಮ ಕಣ್ಣೆದುರೇ ಹೀಗೂ ಮಾತನಾಡಬಹುದು ಎಂಬಂತೆ ಹೊಸ ರಸಾತಳವನ್ನು ಮಾತಿನ ಮೂಲಕ ಸೃಷ್ಟಿಸಿ ಜನರ ಸ್ವಂತ ಬುದ್ಧಿಯೇನಾದರೂ ಇದ್ದರೆ ಅದನ್ನು ಮೊದಲು ಕಸಿದುಕೊಂಡು ಉಳಿದದ್ದಕ್ಕೆ ಕಿಲುಬು ಹಿಡಿಸುವ ತಂತ್ರಗಾರಿಕೆಯನ್ನು ನಾಯಕರೆನ್ನಿಸಿಕೊಂಡವರು ಕಲಿತಿದ್ದಾರೆ. ಕುದುರೆಯ ಮುಖಕ್ಕೆ ಒಂದು ಕೋಲನ್ನು, ಅದಕ್ಕೊಂದಿಷ್ಟು ಹಸಿರು ಹುಲ್ಲನ್ನು ಕಟ್ಟಿದರೆ ಎಷ್ಟು ದೂರವೂ ಒಯ್ಯಬಹುದು. ಇಂದಲ್ಲ ನಾಳೆ ಒಳಿತಾಗುತ್ತದೆಂಬ ಅಖಂಡ ಮತ್ತು ಅನಂತ ಆಶ್ವಾಸನೆಯ ಕತ್ತಲಲ್ಲಿ ಎಷ್ಟು ದೂರ ನಡೆದರೂ ಬಳಲಿದರೂ ಒಂದಿಷ್ಟು ಜೀವ-ಜೀವನ ತ್ರಾಣ ನಮ್ಮಲ್ಲಿದೆಯೆಂದು ಮುಂದೆ ಮುಂದೆ ಸಾಗುತ್ತೇವೆ. ಆ ಹಸಿರು ಹುಲ್ಲು ಒಣ ಹುಲ್ಲಾದರೂ ನಮಗೆ ದಕ್ಕುವುದಿಲ್ಲ. ದಕ್ಕಿಲ್ಲವೆಂಬ ದುಃಖವಿಲ್ಲ. ಪಯಣ ಅನಂತ. ಸತ್ಯವನ್ನು ಹೇಳುತ್ತಲೇ ಅದನ್ನು ನೀವು ನಂಬದಂತೆ ಮರುಳು ಮಾಡುವುದಿದೆಯಲ್ಲ, ಅದು ಬಲು ಕಷ್ಟದ ಕೆಲಸ. ಆಳುವವರು ಇದನ್ನು ಸಾಧಿಸುತ್ತಾರಲ್ಲ, ಅದು ಬಲು ವಿಶೇಷ.
ಇನ್ನು ಕೆಲವು ಬಾರಿ ಅನೇಕ ನಾಯಕರ ಆಶ್ವಾಸನೆ ಎಷ್ಟು ಘನಘೋರವಾಗಿರುತ್ತದೆಂದರೆ ಅದೊಂದು ಹುಲಿಸವಾರಿ. ಅವರು ಅದರಿಂದ ಇಳಿಯುವುದಿಲ್ಲ. ಇಳಿದರೆ ತಾನೆಲ್ಲಿ ಹುಲಿಗೇ ಆಹಾರವಾಗುತ್ತೇನೋ ಎಂಬ ಭಯದಿಂದ ಅವರ ಸವಾರಿ ಮುಂದುವರಿಯುತ್ತದೆ. ಇದು ಎಷ್ಟೇ ಅತಿರೇಕಕ್ಕೆ ಹೋದರೂ ಅನುಸರಿಸುವ ಜನರು ಅದೊಂದು ಅಪಾಯದ ಹೆಜ್ಜೆಯೆಂದು ತಿಳಿಯುವುದಿಲ್ಲ. ನಮ್ಮ ದೇವಾನುದೇವತೆಗಳೂ ಹೀಗೆ ಹುಲಿ, ಸಿಂಹ ಮುಂತಾದ ಕ್ರೂರ ಮೃಗಗಳ ಮೇಲೆ ನಡೆಯುವುದನ್ನು ಕಾಣಬಹುದು. ಒಂದಲ್ಲ ಒಂದು ದಿನ ಈ ನಾಯಕನು ಇಳಿಯಲೇಬೇಕಾಗುತ್ತದೆಂಬುದು ಆತನಿಗೂ ತಿಳಿಯದು. ಅನುಯಾಯಿಗಳಿಗೂ ಅರ್ಥವಾಗಲೊಲ್ಲದು. ಆಗ ನೋಟಕರೆದುರೇ ಆತ ತನ್ನ ಈ ಕ್ರೂರ ವಾಹನದಡಿ ಅಳಿಯಬಹುದು.
ರಾಹುಕಾಲ ಬಂದು ಉಳಿದಿದೆ. ರಾಹು-ಕೇತುಗಳನ್ನು ಮತ್ತೆ ಜೋಡಿಸಿ ಜೀವಜಲ ಸುರಿದು ಚಲನಶೀಲ ಬದುಕನ್ನು ನೀಡಿದರೆ ಈ ಪರಿಸ್ಥಿತಿ ಸುಧಾರಿಸಬಹುದೇನೋ? ಸದ್ಯ ಆ ಸಾಧ್ಯತೆಯಿಲ್ಲ.