×
Ad

ಕ್ರಿಕೆಟ್‌ನ ‘ಪಂಚ್’ ತಂತ್ರ

Update: 2025-11-27 08:55 IST

ಭಾರತ ತನ್ನ ತಂತ್ರಗಳಿಗೆ ತಾನೇ ಸೋಲುತ್ತಿದೆಯೋ ಎಂಬ ಬೆಳವಣಿಗೆಗಳು ಎದುರಾಗಿವೆ. ವಿದೇಶದ ತಂಡಗಳು ಭಾರತಕ್ಕೆ ಬರಬೇಕಾದರೆ ಈ ಸ್ಪಿನ್ ಮಾಧ್ಯಮದಲ್ಲಿ ಪರಿಣತಿಯನ್ನು ಹೊಂದುವ ಅಗತ್ಯವನ್ನು ಕಂಡುಕೊಂಡಿವೆ. ಕಳೆದ ವರ್ಷ ನಮ್ಮ ತಂತ್ರಗಳಿಗೆ ತಿರುಮಂತ್ರ ಹಾಕಿದ ನ್ಯೂಝಿಲ್ಯಾಂಡ್ ಭಾರತದಲ್ಲಿ ವೈಟ್‌ವಾಷ್ ಮಾಡಿತ್ತು. ಈಗಷ್ಟೇ ಮುಗಿದ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯದಲ್ಲಿ ಆಫ್ರಿಕಾದ ಸ್ಪಿನ್ನರ್‌ಗಳು ನಮ್ಮ ನೆಲದಲ್ಲಿ ನಮಗಿಂತ ಶ್ರೇಷ್ಠ ಸಾಧನೆಯನ್ನು ಮಾಡಿದರು. ಇದಕ್ಕೆ ನಮ್ಮ ಕ್ಯುರೇಟರ್ ಅವರನ್ನು ಹಳಿದು ಫಲವಿಲ್ಲ. ನಾವು ಎದುರಾಳಿಯ ಸಾಮರ್ಥ್ಯವನ್ನು ಸರಿಯಾಗಿ ಅಳೆಯದೆ ತಂತ್ರವನ್ನು ರೂಪಿಸಿದೆವು. ನಾವು ತೋಡಿದ ಖೆಡ್ಡಾಕ್ಕೆ ನಾವೇ ಬಿದ್ದೆವು.

ಈ ಲೇಖನ ಬರೆಯುವ ಹೊತ್ತಿಗೆ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸೋಲಿನತ್ತ ಮುಖಮಾಡಿತ್ತು. ಲೇಖನ ಮುಗಿಯುವ ಹೊತ್ತಿಗೆ ಭಾರತ ಸೋತಿತ್ತು. ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್ ಎಂಬ ಆಫ್‌ಸ್ಪಿನ್ನರ್ 6 ವಿಕೆಟ್‌ಗಳನ್ನು ಕಬಳಿಸಿದ್ದ. ಮೊದಲ ಇನಿಂಗ್ಸ್‌ನ 3 ವಿಕೆಟ್‌ಗಳೊಂದಿಗೆ ಒಟ್ಟು 9 ವಿಕೆಟ್‌ಗಳ ಪತನಕ್ಕೆ ದಾರಿಯಾದ. ಮೊದಲ ಪಂದ್ಯದಲ್ಲಿ ಈತ 8 ವಿಕೆಟ್ ಪಡೆದಿದ್ದ ಎಂದು ನೆನಪು. (‘ಹಾರ್ಮ್’ ಎಂದರೆ ಇಂಗ್ಲಿಷ್‌ನಲ್ಲಿ ಹಾನಿಮಾಡುವುದು ಎಂದು ಅರ್ಥ. ಆ ತರ್ಕದಲ್ಲಿ ‘ಹಾರ್ಮರ್’ ಎಂದರೆ ಹಾನಿ ಮಾಡುವವನು ಎಂದುಕೊಳ್ಳಬಹುದು. ಈಗ ಆತನ ಹೆಸರು ಅಂಕಿತ ಮಾತ್ರವಲ್ಲ; ಅನ್ವರ್ಥ ಕೂಡಾ.

ಈ ಸೋಲು ಸಾಮಾನ್ಯದ್ದಾಗಿರಲಿಲ್ಲ. ‘ಭಾರೀ ಸೋಲು’ ಎಂಬ ಪ್ರಮಾಣದ್ದು. ನಮ್ಮದೇ ದೇಶದ ನಾವೇ ಹೇಳಿ ಮಾಡಿಸಿದ ಪಿಚ್‌ನಲ್ಲಿ ನಮ್ಮನ್ನೇ ಮಲಗಿಸಿ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಮರೆಯಲಾರದ ಎಚ್ಚರಿಕೆಯನ್ನು ನೀಡಿದ್ದಲ್ಲದೆ ಭಾರತವನ್ನು ಭಾರತದಲ್ಲೇ ಹೇಗೆ ಭಾರತದ ಅಸ್ತ್ರಗಳನ್ನೇ ಪ್ರಯೋಗಿಸಿ ಸೋಲಿಸಬಹುದು ಎಂದು ನಿರೂಪಿಸಿತು. ಕೋಚ್, ಕ್ಯಾಪ್ಟನ್, ಕ್ಯುರೇಟರ್, ಕೊನೆಗೆ ಆಯ್ಕೆ ಸಮಿತಿ ಕೂಡಾ ಇದಕ್ಕೆ ಉತ್ತರದಾಯಿಗಳು.

ಪಂಚತಂತ್ರದ ಕಥೆಯೊಂದಿದೆ: ನರಿ ಮತ್ತು ಕೊಕ್ಕರೆ ಗೆಳೆಯರು. ನರಿ ಕೊಕ್ಕರೆಯನ್ನು ತನ್ನ ಮನೆಗೆ ಔತಣಕ್ಕೆ ಆಹ್ವಾನಿಸಿತು. ಕೊಕ್ಕರೆ ಬಿಗುಮಾನದಿಂದ, ಸಂಭ್ರಮದಿಂದ ಬಂತು. ನರಿ ಕೊಕ್ಕರೆಗೆ ಒಂದು ವಿಶಾಲವಾದ ತಟ್ಟೆಯಲ್ಲಿ ಪಾಯಸ ಬಡಿಸಿತು. ಕೊಕ್ಕರೆ ಅದನ್ನು ಸವಿಯುವುದಾದರೂ ಹೇಗೆ? ಕೊಕ್ಕಿನಿಂದ ಮುಟ್ಟಿ ಅದನ್ನು ಸವಿಯಲಾರದೆ ಮರುಗಿತು. ಹೇಗಿದೆ? ಎಂದಿತು ನರಿ. ಚೆನ್ನಾಗಿದೆ, ಈಗ ಇಷ್ಟೇ ಸಾಕು ಎಂದು ಹೇಳಿ ಸುಂಕವಿಲ್ಲದೆ ಬಂದ ದಾರಿಯಲ್ಲಿ ಮರಳಿತು. ಆದರೆ ಮರೆಯಲಿಲ್ಲ. ಇತ್ತ ನರಿ ಕೊಕ್ಕರೆಯ ಪಾಲಿನ ಪಾಯಸವನ್ನೂ ತಿಂದು ತೇಗಿತು. ಇನ್ನೊಂದು ವಾರ: ಕೊಕ್ಕರೆಯು ನರಿಯನ್ನು ತನ್ನ ಮನೆಗೆ ಆಹ್ವಾನಿಸಿತು. ಅದು ಒಂದು ಹೂಜಿಯಲ್ಲಿ ಸ್ವಲ್ಪ ಪಾಯಸವನ್ನಿಟ್ಟು ನರಿಗೆ ಸವಿಯಲು ಹೇಳಿತು. ಹೂಜಿಯಲ್ಲಿ ಮುಖವನ್ನು ಇಳಿಸಲಾರದ ನರಿಗೂ ನಿರಾಶೆ ಅನಿವಾರ್ಯವಾಯಿತು. ಈ ಗೆಳೆತನ ಎಂದರೆ ಇಂದಿನ ವ್ಯಾವಹಾರಿಕ ಗೆಳೆಯರ ಹಾಗೆ. ಗೆಳೆತನದ ನಡುವೆ ಪರಸ್ಪರರ ಕಾಲೆಳೆಯುವುದು ಸಹಜ. ಆದರೆ ಸ್ಪರ್ಧೆಯಲ್ಲಿ ತಮ್ಮ ತಮ್ಮ ಅನುಕೂಲಕ್ಕೆ ಬೇಕಾದಂತೆ ನಡೆದುಕೊಳ್ಳುವುದು ಸಮಕಾಲೀನ ನಾಗರಿಕತೆಯೆನಿಸಿಕೊಂಡಿದೆ. ಸ್ಪರ್ಧಿಸುವುದು ಮಾತ್ರವಲ್ಲ, ಸಮಯ, ಸಂದರ್ಭ ಸಿಕ್ಕಿದರೆ ಬೆನ್ನಿಗೆ ತಿವಿಯುವುದು- ಸರಳ ಭಾಷೆಯಲ್ಲಿ ಹೇಳುವುದಾದರೆ ಮೋಸ, ವಂಚನೆ. ಇದೂ ರೂಢಿಯಲ್ಲಿದೆ. ಮಹಾಭಾರತದ ಪಗಡೆಯಾಟದಿಂದಲೇ ಆಟದ, ಸ್ಪರ್ಧೆಯ, ಪರೀಕ್ಷೆಯ, ಹೆಸರಿನಲ್ಲಿ ಈ ಮೋಸ ನಡೆಯುತ್ತಲೇ ಬಂದಿದೆ. ಆಗ ಪಂಚತಂತ್ರವಾಗಿದ್ದದ್ದು ಈಗ ಈ ಆಧುನಿಕ ಸಮಾಜದಲ್ಲಿ ‘ಪಂಚ್‌ತಂತ್ರ’ವಾಗಿದೆ. ಇದಕ್ಕೆ ಸರಿಯಾಗಿ ಮಾಧ್ಯಮಗಳು ‘ಕ್ರೀಡೆ’ಯನ್ನು, ‘ಪಂದ್ಯ’ವನ್ನು, ‘ಸ್ಪರ್ಧೆ’ಯನ್ನು ‘ಯುದ್ಧ’ವಾಗಿಸಿವೆ.

ಇಂತಹ ತಂತ್ರಗಳು ಸಭ್ಯರ ಕ್ರೀಡೆಯೆನಿಸಿಕೊಂಡಿದ್ದ ಕ್ರಿಕೆಟಿನಲ್ಲಿರಲಿಲ್ಲ. ಕಲಾತ್ಮಕ ಕೈಚಳಕದಿಂದ, ಸ್ವಂತ ಸಾಮರ್ಥ್ಯದಿಂದ, ತಂಡಗಳು ಎದುರಾಳಿಯನ್ನು ಸೋಲಿಸಲು ಪ್ರಯತ್ನಿಸುತ್ತಿದ್ದವು. ಇದು ಬ್ಯಾಟಿಂಗ್‌ನಲ್ಲೂ ಸರಿ, ಬೌಲಿಂಗ್‌ನಲ್ಲೂ ಸರಿ. ಸೋತರೆ ಅವಮಾನವಿರಲಿಲ್ಲ. ಮೈಮೇಲೆ ಕವಿದ ಸೋಲಿನ ಧೂಳನ್ನೊರೆಸಿಕೊಂಡು ಮುಂದಿನ ಪಂದ್ಯಕ್ಕೆ ಸನ್ನದ್ಧವಾಗುವುದು, ಅಷ್ಟೇ.

‘ಆಷಸ್’ನಂತಹ ಪ್ರತಿಷ್ಠೆಯ ಕಣವು ಗೌರವದ ಪಣವಾದಾಗ ಇಂಗ್ಲಿಷರು ಆಸ್ಟ್ರೇಲಿಯವನ್ನು ಸೋಲಿಸುವುದಕ್ಕಾಗಿ ನಡೆಸಿದ ಬಾಡಿಲೈನ್ ತಂತ್ರವೇ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಮೊದಲ ಅನಪೇಕ್ಷಿತ ಮೈಲಿಗಲ್ಲು. ಅದನ್ನು ದಾಟಿ ಕ್ರಿಕೆಟ್ ಮತ್ತೆ ಸರಿದಾರಿಯಲ್ಲಿ ನಡೆಯಿತು. ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್ ಪ್ರವಾಸದ 8 ಪಂದ್ಯಗಳಲ್ಲಿ ಅನುಕೂಲಕರವಲ್ಲದ ಪಿಚ್‌ಗಳಲ್ಲಿ ಭಾರತದ ಪ್ರಖ್ಯಾತ ಆಫ್ ಸ್ಪಿನ್ನರ್ ಎರ್ರಾಪಳ್ಳಿ ಪ್ರಸನ್ನ 25+24=49 ವಿಕೆಟುಗಳನ್ನು ಪಡೆದಿದ್ದರು! ಲೆಗ್ ಸ್ಪಿನ್ನರ್ ಚಂದ್ರಶೇಖರ್ ಅವರ ಸಾಧನೆ ಅಪೂರ್ವ.

ಆದರೆ ವರ್ಣದ್ವೇಷವನ್ನು ತೊಡೆಯುವ ಕ್ರಮದಲ್ಲಿ ದಕ್ಷಿಣ ಆಫ್ರಿಕಾ ತಂಡವು ಅನೇಕ ವರ್ಷಗಳ ಕಾಲ ತೆರೆಮರೆಗೆ ಸರಿಯಿತು. ಇದರಿಂದಾಗಿ ಗ್ರಹಾಂಪೊಲ್ಲಾಕ್‌ರಂತಹ ಅನೇಕ ಅಪ್ರತಿಮ ಪ್ರತಿಭೆಗಳು ಅವಕಾಶವಂಚಿತವಾದದ್ದೂ ಹೌದು. ಆದರೂ ಕ್ರೀಡೆಗಿಂತ ಮನುಷ್ಯತ್ವ, ಸಾಮಾಜಿಕ ಸುಧಾರಣೆ ಮಹತ್ವದ್ದಾದ್ದರಿಂದ ಇದನ್ನು ಜಗತ್ತು ಸಹಿಸಿದ್ದು ಮಾತ್ರವಲ್ಲ, ಸ್ವಾಗತಿಸಿತು.

ಯಾವಾಗ ಕೆರ್ರಿಪ್ಯಾಕರ್ ಅವತರಿಸಿ ಕ್ರಿಕೆಟನ್ನು ಹಣಮಾಡುವ ಉದ್ಯಮವಾಗಿಸಿದರೋ ಕ್ರಿಕೆಟ್‌ನಲ್ಲಿ ಬಹಳಷ್ಟು ಆಟಗಾರರು ‘ಸ್ಲಿಪ್‌ಫೀಲ್ಡರ್ಸ್’ ಆದರು. ಹಣಕ್ಕಾಗಿ ಸಾಂಪ್ರದಾಯಿಕ ಕ್ರಿಕೆಟಿನಿಂದ ಜಾರಿಕೊಳ್ಳುವ ಏಕತಂತ್ರವನ್ನು ಹೂಡಲಾರಂಭಿಸಿದರು. ಇದು ಆರ್ಥಿಕವಾಗಿ ಮುಖ್ಯ ವಾಗುತ್ತ ಬಂದರೂ ಆಯಾಯ ದೇಶಗಳ ಅಭಿಮಾನದಿಂದ ಪ್ರಮುಖ ಆಟಗಾರರು ಕ್ರಿಕೆಟನ್ನು ಒಂದು ಉತ್ತಮ ಕ್ರೀಡೆಯಾಗಿ ಉಳಿಸಿಕೊಂಡರು.

ಜೊತೆಗೇ ಕ್ರಿಕೆಟ್ ಬೆಟ್ಟಿಂಗೂ ಬೆಳೆದುಬಂತು. ಕ್ರಿಕೆಟಿನ ಹೊರಗೂ ಒಳಗೂ ನಡೆಯುವ ಇದು ಕ್ರಿಕೆಟಿನ ನೈತಿಕತೆಯನ್ನೇ ಅಲುಗಾಡಿಸಿತು. ಇದು ಭ್ರಷ್ಟಾಚಾರದಂತೆ ಬೆಳೆದುಬಂದು ಅನೇಕ ಆಟಗಾರರನ್ನು ಕಾಡಿದೆ; ಕೆಲವರ ಭವಿಷ್ಯವನ್ನು ಮಸುಕುಮಾಡಿದೆ. ಅಳಿಯುವ ಲಕ್ಷಣ ಕಾಣಿಸುವುದಿಲ್ಲ.

ಕೆರ್ರಿ ಪ್ಯಾಕರ್ ನೀತಿಯು ಇನ್ನೊಂದು ರೀತಿಯಲ್ಲಿ ರಂಗವನ್ನು ಪ್ರವೇಶಿಸಿತು. ಪಾರಂಪರಿಕ 5 ದಿನಗಳ ಕ್ರಿಕೆಟನ್ನು ಒಂದು ದಿನದ ಕ್ರಿಕೆಟ್ ಆಗಿಯೂ ಆಡಲಾರಂಭಿಸಲಾಯಿತು. ಇದು ಹೆಚ್ಚು ಜನರನ್ನು ಆಕರ್ಷಿಸಲಾರಂಭಿಸಿತು. ಇದರಿಂದ ಕ್ರಿಕೆಟ್ ಮಂಡಳಿಗಳ ಧನಭಂಡಾರ ಬೆಳೆಯಿತು. ಅದರಲ್ಲೂ ವಿಶ್ವದಲ್ಲೇ ಹೆಚ್ಚು ಹಣ ಸಂಪಾದಿಸುವ ದೇಶವಾಗಿ ಭಾರತವು ಹೊರಹೊಮ್ಮಿತು. ಈಚೆಗೆ 20 ಓವರುಗಳ ಪಂದ್ಯಗಳು ಆರಂಭವಾದ ನಂತರ ಇದಕ್ಕೆ ಮಿತಿಯೇ ಇಲ್ಲದಾಗಿದೆ. ದೇಶದೇಶಗಳ ನಡುವಣ ಕ್ರಿಕೆಟ್ ಅಲ್ಲದೆ ಐಪಿಎಲ್ ಮತ್ತು ಅಂತಹ ಇತರ ಪಂದ್ಯಗಳು ವಿಶ್ವಾದ್ಯಂತ ಎಲ್ಲ ಮಂಡಳಿಗಳ ಆರ್ಥಿಕ ಬೆನ್ನೆಲುಬಾಗಿದೆ. ಕ್ರಿಕೆಟ್ ಅಭಿಮಾನಿಗಳು ಕಳೆಯುವ ಕಾಲ ಕಡಿಮೆಯಾಗಿದೆಯೇ? ಇರಲಾರದು.

ಆದರೆ ಇದಕ್ಕೆ ಸಮಾನಾಂತರವಾಗಿ ಕ್ರಿಕೆಟ್ ಪಂದ್ಯಗಳ ನಿಯಮಗಳೊಳಗೇ ಹೇಗಾದರೂ ಗೆಲ್ಲುವ ತಂತ್ರವನ್ನು ಎಲ್ಲ ದೇಶಗಳೂ ಕಂಡುಕೊಂಡವು. ಬಿಳಿಯ ಸಮವಸ್ತ್ರವು ಸಭ್ಯತೆಯ ದಿಕ್ಕಾದರೆ, ಏಕದಿನ, 20 ಓವರ್ ಪಂದ್ಯಗಳಲ್ಲಿ ಬಣ್ಣಬಣ್ಣದ ಸಮವಸ್ತ್ರಗಳು ವಿಜೃಂಭಿಸಿದವು. ಜಾಹೀರಾತಿನ ಬೆಡಗರಂತೆ ಆಟಗಾರರು ಪ್ರದರ್ಶಿಸಲಾರಂಭಿಸಿದರು. ಈಗ ಬೆಡಗಿಯರು ಬಂದಮೇಲಂತೂ ಇದು ಇನ್ನೂ ಆಕರ್ಷಕವಾಗುತ್ತಿದೆ.

ವೇಗ, ಸ್ಪಿನ್ ಮುಂತಾದವು ಸಭ್ಯರ ಹಣಾಹಣಿಯಾದರೆ, ತಮ್ಮ ತಂಡದ ಆಟಗಾರರಿಗೆ ಅನುಕೂಲವಾದ ಪಿಚ್ಚನ್ನು ತಯಾರಿಸಿ ಪ್ರವಾಸಿ ತಂಡಗಳನ್ನು ಕಟ್ಟಿಹಾಕುವುದು ಮಾನ್ಯವಾದ ತಂತ್ರವಾಯಿತು. ಇದು ಎಷ್ಟು ಸರಿ, ಎಷ್ಟು ತಪ್ಪು ಎಂದು ನಿರ್ಣಯಿಸಲಸಾಧ್ಯವಾದ ಮನ್ನಣೆ ಇದಕ್ಕೆ ಸಿಕ್ಕಿದೆ. ಪಂದ್ಯಗಳೊಳಗೆ ಚೆಂಡನ್ನು ಎಂಜಲಿನಿಂದ ಬೇಕಾದಂತೆ ಬಳಸುವುದು ಆರಂಭವಾಗಿ ಬಹಳ ದಶಕಗಳೇ ಆದವು. ಇತರರಿಗೆ ಅರಿವಾಗದಂತೆ ಚೆಂಡನ್ನು ವಿರೂಪಗೊಳಿಸುವುದೂ ‘ತಂತ್ರ’ದಲ್ಲಿ ಸೇರಿದವು.

ಹಿಂದೆ ಆಟಗಾರರು ಸಹಜ ಮನುಷ್ಯರೂಪಿನಲ್ಲಿ ಬ್ಯಾಟ್ ಮಾಡಲು ಹೋಗುತ್ತಿದ್ದರು. ಅಪವಾದವೆಂಬಂತೆ ಕಾಲುಗಳ, ಕೈಗಳ, ಖಾಸಗಿ ಭಾಗಗಳ ರಕ್ಷಣೆಗೆ ಪ್ಯಾಡ್ ಧರಿಸುತ್ತಿದ್ದರು. ಅಪಾಯ ಯಾವುದೇ ಕ್ರೀಡೆಯಲ್ಲಿದೆ. ಆದರೂ ಅದರದರ ಗೌರವದೊಂದಿಗೆ ಅದನ್ನಾಡುವವರ ಧೈರ್ಯ ಮತ್ತು ಚಾಕಚಕ್ಯತೆ ಅರ್ಥವಾಗಬೇಕಾದರೆ ಈ ಅಪಾಯವನ್ನೆದುರಿಸಲೇಬೇಕು. ಕಾರ್ ರೇಸ್, ಕುಸ್ತಿ, ಬಾಕ್ಸಿಂಗ್ ಹೀಗೆ ಅನೇಕ ಕ್ರೀಡೆಗಳಲ್ಲಿ ಇಂತಹ ಅಪಾಯಗಳಿವೆ. ಪಾಕಿಸ್ತಾನ ಪ್ರವಾಸದಲ್ಲಿ ನಾರಿ ಕಂಟ್ರಾಕ್ಟರ್ ಗಂಭೀರವಾಗಿ ಗಾಯಗೊಂಡದ್ದನ್ನು ನೆನಪಿಸಬಹುದು. ಚೆಂಡು ಬಿದ್ದು ಸತ್ತವರೂ ಇದ್ದಾರೆ. ಹಾಗೆಂದು ಬೌನ್ಸರ್‌ಗಳಿಗೆ ಹೆದರಿ ಆಟಕ್ಕೆ ಹಿಂಜರಿದವರಿಲ್ಲ. (ಅಂಥವರು ಕ್ರಿಕೆಟಿನ ಮೊದಲ ಹಂತವನ್ನೇ ದಾಟುವುದಿಲ್ಲ!) ವೆಸ್ಟ್ ಇಂಡೀಸ್ ತಂಡದ ವಿರುದ್ಧ 1971ರ ಪ್ರವಾಸದಲ್ಲಿ ಶಿರಸ್ತ್ರಾಣ (ಹೆಲ್ಮೆಟ್) ಇಲ್ಲದೆ ಸುನಿಲ್‌ಗವಾಸ್ಕರ್ ಬ್ಯಾಟ್ ಮಾಡಿದ್ದನ್ನು ಸ್ಮರಿಸಬಹುದು.

ಆದರೆ ಈಗ ಕ್ರಿಕೆಟ್ ಆಟಗಾರರು ಗಗನಯಾನಕ್ಕೆ ಹೋಗಲಣಿಯಾದವರಂತೆ ಮೈತುಂಬ ರಕ್ಷಾಕವಚಗಳನ್ನು ಧರಿಸಲಾರಂಭಿಸಿ ತಮ್ಮ ಗುರುತನ್ನೇ ಕಳೆದುಕೊಂಡಿದ್ದಾರೆ. ಕ್ರಿಕೆಟ್ ಒಂದು ಹೈಟೆಕ್ ವಿದ್ಯಮಾನವಾಗಿದೆ. ಆದರೂ ನಮ್ಮ ಜನರ ಕಳಕಳಿ, ಕಾಳಜಿ, ಅಭಿಮಾನ, ಮೆಚ್ಚುವಂಥದ್ದೇ. 22 ಮಂದಿಯ ಹುಚ್ಚಾಟವನ್ನು 22 ಸಾವಿರ ಮಂದಿ ನೋಡುವ ಟೀಕೆ ಅತಿಯಾದರೂ ಎಲ್ಲೋ ಒಂದುಕಡೆ ಅದರ ಮೊನಚು ಗೋಚರವಾಗುತ್ತಿದೆ.

ಸದ್ಯದ ಕ್ರಿಕೆಟ್ ವಿದ್ಯಮಾನಗಳ ಸಂಪೂರ್ಣ ಲಾಭವನ್ನು ಭಾರತ ಪಡೆದುಕೊಂಡಿದೆಯೆನ್ನಿಸುತ್ತದೆ. ಒಟ್ಟಾರೆ ಜಾಗತಿಕ ಕ್ರಿಕೆಟ್ ಆದಾಯದಲ್ಲಿ ಸುಮಾರು ಶೇ. 85 ಭಾರತದ ಸಂಗ್ರಹವೆಂದು ಹೇಳಲಾಗುತ್ತಿದೆ. ವಿದೇಶಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ಇದ್ದರೂ ಭಾರತದ ಕ್ರಿಕೆಟ್ ಅಭಿಮಾನವು ಹೇಳತೀರದಷ್ಟು ಮಿಗಿಲು. ಇದರಿಂದಾಗಿ ದೊಡ್ಡ ದೊಡ್ಡ ಉದ್ಯಮಿಗಳು ಕ್ರಿಕೆಟ್ ಆಡದಿದ್ದರೂ ಕ್ರಿಕೆಟಿನಿಂದ ಹಣಸಂಪಾದಿಸುವುದು ಹೇಗೆಂದು ತಿಳಿದಿದ್ದಾರೆ. ನಮ್ಮ ಐಪಿಎಲ್ ಹರಾಜೇ ಇದಕ್ಕೆ ಸಾಕ್ಷಿ. ಕ್ರಿಕಟಿಗರೂ ಅಷ್ಟೇ: ಜಾಹೀರಾತುಗಳ ಮುಖವಾಗಿದ್ದಾರೆ. ಇಂದು ಕ್ರಿಕೆಟ್ ಕುರಿತ ಪ್ರೀತಿ ನಮ್ಮ ಯುವಜನಾಂಗದಲ್ಲಿ ಹೆಚ್ಚುತ್ತಿದ್ದರೆ ಈ ಹಣದ ಹೊಳೆ ಅದರ ಬೇರು-ಕಾಂಡ-ಚಿಗುರೆಂದು ಕಾಣಿಸುತ್ತಿದೆ. ನಮ್ಮ ದೇಶೀ ಕ್ರೀಡೆಗಳನ್ನು ಕಡೆಗಣಿಸಿ ಯುವಕರು ಕೋಟಿಕೋಟಿ ಬಾಚುವ ಕ್ರಿಕೆಟಿನ ಕಡೆ ವಾಲುತ್ತಿದ್ದಾರೆ.

ಆರಂಭದಲ್ಲಿ ಹೇಳಿದ ಪಂಚತಂತ್ರದ ಕಥೆಯಂತೆ ನಮ್ಮ ತಂಡಗಳು ಮತ್ತು ಆಡಳಿತ ವರ್ಗಗಳು ಕ್ಯುರೇಟರ್‌ಗಳ ಮೂಲಕ ತಮಗೆ ಬೇಕಾದ ದಡ್ಡ ಅಥವಾ ಸ್ಪಿನ್ ಪಿಚ್‌ಗಳನ್ನು ಆಯಾಯ ಸಂದರ್ಭಗಳಿಗನುಸಾರವಾಗಿ ತಯಾರಿಸಿಕೊಳ್ಳುತ್ತಿವೆ. ನಮ್ಮಲ್ಲಿ ಬ್ಯಾಟುದಾರರು ಹೆಚ್ಚಿದ್ದರೆ ಬ್ಯಾಟಿಂಗಿಗೆ ಅನುಕೂಲವಾದ ಪಿಚ್ ಮತ್ತು ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾದ ಪಿಚ್‌ಗಳನ್ನು ತಯಾರಿಸುತ್ತಿವೆ. ಇನಿಂಗ್ಸ್‌ನ ಆರಂಭದ ಓವರನ್ನು ಒಬ್ಬ ಸ್ಪಿನ್ ಬೌಲರ್ ಮಾಡಿದ ಕೀರ್ತಿ ಭಾರತಕ್ಕೆ ಸೇರಿದೆ. ಇದನ್ನು ಇತರರು ಮಾಡುತ್ತಿಲ್ಲವೆಂದಲ್ಲ. ಪಾಕಿಸ್ತಾನವು ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್ಚನ್ನು ತಯಾರಿಸುವುದರಿಂದ ಪಾಕಿಸ್ತಾನ ಪ್ರವಾಸವು ಅನೇಕ ಬೌಲರುಗಳ ಗೋರಿಯನ್ನು ತೋಡಿದೆ. (ರಘುರಾಮ ಭಟ್ ಎಂಬ ಅತ್ಯುತ್ತಮ ಸ್ಪಿನ್ನರ್ ಕೂಡಾ ಪಾಕಿಸ್ತಾನದಲ್ಲಿ ಪಟ್ಟ ಬವಣೆಯನ್ನು ನೆನಪು ಮಾಡಬಹುದು,) ವಿಶ್ವಮನ್ನಣೆಗೆ ಕಾತರಿಸುವ ಭಾರತವು ಇಂತಹ ಸಂದರ್ಭಗಳಲ್ಲಿ ಹೊಸ ಮಾದರಿಯನ್ನು, ಆದರ್ಶವನ್ನು ಸಿದ್ಧಗೊಳಿಸುವ ಅಗತ್ಯವಿದೆ. ಈಗ ಐಸಿಸಿ ಅಧ್ಯಕ್ಷತೆ ಮಾತ್ರವಲ್ಲ, ಪಾರಮ್ಯವೂ ಭಾರತದ್ದೇ ಆಗಿರುವುದರಿಂದ ಇದೇನೂ ಕಷ್ಟವಾಗದು. ಅಲಿಪ್ತ ಅಥವಾ ನ್ಯೂಟ್ರಲ್ ಕ್ಯುರೇಟರ್‌ಗಳು ಇರಬೇಕಾದ ಅಗತ್ಯ ಎಂದಿನ ಕಾಲಕ್ಕಿಂತ ಹೆಚ್ಚಾಗಿದೆ.

ಇವೆಲ್ಲವುಗಳ ನಡುವೆ ಭಾರತ ತನ್ನ ತಂತ್ರಗಳಿಗೆ ತಾನೇ ಸೋಲುತ್ತಿದೆಯೋ ಎಂಬ ಬೆಳವಣಿಗೆಗಳು ಎದುರಾಗಿವೆ. ವಿದೇಶದ ತಂಡಗಳು ಭಾರತಕ್ಕೆ ಬರಬೇಕಾದರೆ ಈ ಸ್ಪಿನ್ ಮಾಧ್ಯಮದಲ್ಲಿ ಪರಿಣತಿಯನ್ನು ಹೊಂದುವ ಅಗತ್ಯವನ್ನು ಕಂಡುಕೊಂಡಿವೆ. ಕಳೆದ ವರ್ಷ ನಮ್ಮ ತಂತ್ರಗಳಿಗೆ ತಿರುಮಂತ್ರ ಹಾಕಿದ ನ್ಯೂಝಿಲ್ಯಾಂಡ್ ಭಾರತದಲ್ಲಿ ವೈಟ್‌ವಾಷ್ ಮಾಡಿತ್ತು. ಈಗಷ್ಟೇ ಮುಗಿದ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯದಲ್ಲಿ ಆಫ್ರಿಕಾದ ಸ್ಪಿನ್ನರ್‌ಗಳು ನಮ್ಮ ನೆಲದಲ್ಲಿ ನಮಗಿಂತ ಶ್ರೇಷ್ಠ ಸಾಧನೆಯನ್ನು ಮಾಡಿದರು. ಇದಕ್ಕೆ ನಮ್ಮ ಕ್ಯುರೇಟರ್ ಅವರನ್ನು ಹಳಿದು ಫಲವಿಲ್ಲ. ನಾವು ಎದುರಾಳಿಯ ಸಾಮರ್ಥ್ಯವನ್ನು ಸರಿಯಾಗಿ ಅಳೆಯದೆ ತಂತ್ರವನ್ನು ರೂಪಿಸಿದೆವು. ನಾವು ತೋಡಿದ ಖೆಡ್ಡಾಕ್ಕೆ ನಾವೇ ಬಿದ್ದೆವು.

ನಮ್ಮ ಶೋಚನೀಯ ಪ್ರದರ್ಶನವ್ನ ಮರೆಯೋಣ. ಅಷ್ಟೇ ಸಾಲದು. ಏಕೆಂದರೆ ನಾವೀಗ ಕ್ರಿಕೆಟನ್ನು ರಾಜಕೀಯ, ಧರ್ಮ, ಮತ ರಾಷ್ಟ್ರೀಯತೆ ಇತ್ಯಾದಿಗಳನ್ನು ಬೆರೆಸಿ ತೋರಿಸುತ್ತಿದ್ದೇವೆ. ನೀವು ಕ್ರಿಕೆಟ್ ಆಟಗಾರರಾಗಿರಬೇಕಾಗಿಲ್ಲ; ರಾಜಕಾರಣದ ಆಧಾರದಲ್ಲಿ ಕ್ರಿಕೆಟ್ ಮಂಡಳಿಯ ನಿಯಂತ್ರಣವನ್ನು ರಾಷ್ಟ್ರೀಯ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಪಡೆಯಬಹುದೆಂಬುದನ್ನು ಕ್ರಿಕೆಟ್ ತೋರಿಸಿಕೊಟ್ಟಿದೆ. ಕೋಚ್ ನೇಮಕಕ್ಕೆ ಆಡಳಿತ ರಾಜಕಾರಣ ಅನುಕೂಲವಾಗುತ್ತದೆ. ಆಯ್ಕೆಗಾಗಿ ಕ್ರಿಕೆಟ್ ಮಂಡಳಿಗಳೂ, ಆಟಗಾರರೂ ಸ್ವಾಯತ್ತೆಯನ್ನು ಕಳೆದುಕೊಂಡು ಆಡಳಿತದ ಅಂಗವಾದಾಗ, ಆಳುವವರ ಕೈಗೊಂಬೆಗಳಾದಾಗ ಕ್ರಿಕೆಟ್ ಕ್ರಿಕೆಟ್ ಆಗಿ ಉಳಿಯುವುದಿಲ್ಲ. ಅದೂ ಒಂದು ಭೂಗತ ಜಗತ್ತಾಗಬಹುದು; ನೆಲದಿಂದ ಮೇಲೆ ಕ್ರೀಡೋದ್ಯಮದಂತೆ ಗೋಚರಿಸಬಹುದು. ಕ್ರಿಕೆಟ್ ಕೂಡಾ ನಮ್ಮ ಪ್ರಶಸ್ತಿಗಳಂತೆ ಹಣಸಂಪಾದನೆಯ ಮಾರ್ಗವಾಗಬಹುದೇ ಹೊರತು ಘನತೆ, ಗೌರವಗಳನ್ನು ತಂದುಕೊಡಲಾರದು.

್ರಕೆಟನ್ನು ಮತ್ತೆ ಸಭ್ಯರ ಕ್ರೀಡೆಯಾಗಲು ಶ್ರಮಿಸಬೇಕು. ಎಲ್ಲರಿಗೂ ಒಂದೇ ನಿಯಮ-ತಂತ್ರದಡಿ ಆಡುವ ಅವಕಾಶ ಸಿಗಬೇಕು. ಹಣವಂತೂ ಮುಖ್ಯ ಪಾತ್ರವನ್ನು ವಹಿಸಲೇಬಾರದು. ಅದು ವಿಶ್ವತೋಮುಖವಾಗಬೇಕೇ ವಿನಾ ಸ್ವಾರ್ಥದ ಆತ್ಮಮುಖವಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News