ಉಡುಪಿ ಜಿಪಂನಿಂದ ‘ಗೆಲುವು’ ಆನ್‌ಲೈನ್ ಕೋಚಿಂಗ್ ಕೇಂದ್ರ ಉದ್ಘಾಟನೆ

Update: 2023-01-25 18:51 GMT

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೆಲುವು’ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ/ಜೆಇಇ/ನೀಟ್ ಗೆ ತರಬೇತಿ ನೀಡುವ ಆನ್‌ಲೈನ್ ಕೋಚಿಂಗ್ ಸೆಂಟರ್‌ನ್ನು ಜಿಲ್ಲಾ ಸಂಪನ್ಮೂಲನ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಬುಧವಾರ ಉದ್ಘಾಟಿಸಿದರು.

ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನಿರ್ದೇಶನದಲ್ಲಿ ‘ಗೆಲುವು’ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಇದಕ್ಕಾಗಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಆವರಣದಲ್ಲಿರುವ ಜಿಪಂ ಸಂಪನ್ಮೂಲ ಕೇಂದ್ರದಲ್ಲಿದ್ದ ಸ್ಟುಡಿಯೋವನ್ನು ಮೇಲ್ದರ್ಜೆಗೇರಿಸಲಾಗಿದೆ. ಸ್ಟುಡಿಯೊ ದಿಂದಲೇ ನೇರವಾಗಿ ಎಲ್ಲಾ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ-ಚರ್ಚೆ ನಡೆಸಲು ಸಾಧ್ಯವಾಗುವಂತೆ ಇಂಟರ್ಯಾಕ್ಟೀವ್ ಟಿವಿ ಸೇರಿದಂತೆ ಬೇಕಾದ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಿ ಸುಸಜ್ಜಿತಗ ಗೊಳಿಸಲಾಗಿದೆ. ಇಲ್ಲಿಂದಲೇ ಪ್ರತಿದಿನ ನೇರ ತರಗತಿ (ಲೈವ್ ಕ್ಲಾಸಸ್) ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

27 ಕಾಲೇಜು-1000 ವಿದ್ಯಾರ್ಥಿಗಳು: ಜಿಲ್ಲೆಯ 27 ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ 1096 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುತಿದ್ದಾರೆ ಎಂದು ಸಿಇಓ ತಿಳಿಸಿದ್ದಾರೆ.

ಗೆಲುವು ಯೋಜನೆಯ ಭಾಗವಾಗಿ ಜಿಲ್ಲೆಯ ಗ್ರಾಮೀಣ ಭಾಗದ 19 ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ಇಂಟರ್ಯಾಕ್ಟೀವ್ ಟಿವಿ ಸೇರಿದಂತೆ ಅಗತ್ಯ ಪರಿಕರ ಉಪಕರಣ ಗಳನ್ನು ಒದಗಿಸಲಾಗಿದೆ ಎಂದರು.

ಮಕ್ಕಳಿಗೆ ಪಾಠ ಮಾಡಲು ತಜ್ಞರ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪಿಸಿಎಂಬಿ ವಿಷಯಗಳಲ್ಲಿ ಪರಿಣಿತರಿರುವ ಸರಕಾರಿ ಕಾಲೇಜಿನ ಉಪನ್ಯಾಸಕರ ತಂಡವನ್ನು ರಚಿಸಲಾಗಿದ್ದು, ಪ್ರತಿದಿನ ಅಪರಾಹ್ನ 3:00ರಿಂದ 4:30ರವರೆಗೆ ಪ್ರತಿದಿನ ಒಂದೂವರೆ ಗಂಟೆ ಜಿಪಂನ ಸಂಪನ್ಮೂಲ ಕೇಂದ್ರದಿಂದ ನೇರ ಪ್ರಸಾರದಲ್ಲಿ ಸಿಇಟಿ, ಜೆಇಇ, ನೀಟ್ ಪರೀಕ್ಷೆ ತೆಗೆದು ಕೊಳ್ಳಲು ತರಬೇತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೂ ಹೆಚ್ಚುವರಿ ತರಬೇತಿ ಇರುತ್ತದೆ ಎಂದೂ ಪ್ರಸನ್ನ ಎಚ್.ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಖಾಸಗಿ ಸಂಸ್ಥೆಗಳಿಂದ ತರಬೇತಿ ಪಡೆಯಲಾಗದ  ಸರಕಾರಿ ಪ.ಪೂ.ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಸೌಲಭ್ಯವನ್ನು ಎಲ್ಲಾ ಬಡ ವಿದ್ಯಾರ್ಥಿಗಳೂ ಪಡೆದುಕೊಳ್ಳುವಂತೆ ಕೇಂದ್ರ ಹಾಗೂ ಯೋಜನೆಯನ್ನು ಉದ್ಘಾಟಿಸಿದ ಸಚಿವ ಎಸ್.ಅಂಗಾರ ತಿಳಿಸಿದರು.

ಈಗಾಗಲೇ ಜಿಲ್ಲಾ ಗ್ರಂಥಾಲಯದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಯೊಂದಿಗೆ, ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳಿಗೂ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಈ ಎಲ್ಲಾ ಸ್ಮಾರ್ಟ್‌ಕ್ಲಾಸ್‌ಗಳ ಸೌಲಭ್ಯಗಳನ್ನು ಆಸಕ್ತ ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ಸಿಇಓ ಪ್ರಸನ್ನ ಎಚ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Similar News