ದಶಕದಲ್ಲೇ ಗರಿಷ್ಠ ಮಟ್ಟ ತಲುಪಿದ ಗೋಧಿ ಬೆಲೆ

Update: 2023-01-26 02:17 GMT

ಹೊಸದಿಲ್ಲಿ: ಗೋಧಿ ಹಾಗೂ ಗೋಧಿಹಿಟ್ಟಿನ ಬೆಲೆ ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರ ಬುಧವಾರ 30 ಲಕ್ಷ ಟನ್ ಗೋಧಿಯನ್ನು ಬಫರ್ ಸ್ಟಾಕ್‌ನಿಂದ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಏತನ್ಮಧ್ಯೆ ಗೋಧಿ ಹಾಗೂ ಗೋಧಿಹಿಟ್ಟಿನ ಬೆಲೆ 10 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಗತ್ಯ ವಸ್ತುಗಳ ಬೆಲೆಗೆ ಸಂಬಂಧಿಸಿದ ಸಚಿವರ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಕ್ತ ಮಾರುಕಟ್ಟೆ ಯೋಜನೆಯಡಿ ಇ-ಹರಾಜಿನ ಮೂಲಕ ಭಾರತ ಆಹಾರ ನಿಗಮದಿಂದ ಗೋಧಿಯನ್ನು ಮಾರಾಟ ಮಾಡಲಾಗುತ್ತದೆ. ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಎರಡು ತಿಂಗಳಲ್ಲಿ ಎಲ್ಲ ದಾಸ್ತಾನು ಬಿಡುಗಡೆ ಮಾಡಲಾಗುತದೆ. ಈ ನಿರ್ಧಾರದಿಂದಾಗಿ ಗೋಧಿಹಿಟ್ಟಿನ ಗಿರಣಿಯವರು ಮತ್ತು ಮಾರಾಟದವರು ಕನಿಷ್ಠ ಬೆಂಬಲ ಬೆಲೆಯಾದ 2350 ರೂಪಾಯಯಲ್ಲಿ ಖರೀದಿಸಲು ಅನುವು ಆಗಲಿದೆ. ಸಾಗಾಣಿಕೆ ವೆಚ್ಚವನ್ನು ಖರೀದಿದಾರರು ಭರಿಸಬೇಕಾಗುತ್ತದೆ. ಗರಿಷ್ಠ ಬಿಡ್ಡಿಂಗ್ ಮಾಡುವವರು ಗೋಧಿ ಪಡೆಯುತ್ತಾರೆ.

ಸರ್ಕಾರವು ಪಿಎಸ್‌ಯುಗಳು ಸರ್ಕಾರಿ ಸಂಸ್ಥೆಗಳು, ಒಕ್ಕೂಟಗಳು, ಕೇಂದ್ರೀಯ ಭಂಡಾರ ಮತ್ತು ನಫೆಡ್‌ಗೆ ಇ-ಹರಾಜು ಇಲ್ಲದೇ ಕ್ವಿಂಟಲ್‌ಗೆ 2350 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತದೆ. ಇವು ಗೋಧಿಯನ್ನು ಹಿಟ್ಟಾಗಿ ಪರಿವರ್ತಿಸಿ ಗರಿಷ್ಠ ಪ್ರತಿ ಕೆಜಿಗೆ 29.5 ರೂಪಾಯಿ ದರದಲ್ಲಿ ಮಾರಾಟ ಮಾಡುವ ಬಗ್ಗೆ ಮುಚ್ಚಳಿಕೆ ನೀಡಬೇಕು. ಇದು ಬೆಲೆ ಇಳಿಕೆಗೆ ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಧಿಯ ಸರಾಸರಿ ಮಾರಾಟ ಬೆಲೆ ಪ್ರತಿ ಕೆಜಿಗೆ 33.3 ರೂಪಾಯಿ ಹಾಗೂ ಗೋಧಿ ಹಿಟ್ಟಿನ ಮಾರಾಟ ಬೆಲೆ 38 ರೂಪಾಯಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Similar News