ಕಾಂಗ್ರೆಸ್‌ನಿಂದ ಲೋಕಸಭಾ ಟಿಕೆಟ್‌ ಏಕೆ ನಿರೀಕ್ಷಿಸಬಾರದು ಎಂದ ಕಮಲ್ ಹಾಸನ್

Update: 2023-01-26 08:15 GMT

ಚೆನ್ನೈ: ಈರೋಡ್‌ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ ಇವಿಕೆಎಸ್‌ ಇಳಂಗೋವನ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ನಟ ಹಾಗೂ ರಾಜಕಾರಣಿ ಕಮಲ ಹಾಸನ್‌ ಅವರು ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್‌ ಏಕೆ ನಿರೀಕ್ಷಿಸಬಾರದು ಎಂದು ಬುಧವಾರ ಹೇಳಿದ್ದಾರೆ.

ಈರೋಡ್ ಪೂರ್ವ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಕಮಲ ಹಾಸನ್ ಬುಧವಾರ ಹೇಳಿದ್ದಾರೆ.

"ನಾನೇಕೆ  ಅಭ್ಯರ್ಥಿ ಆಗಬಾರದು? ರಾಷ್ಟ್ರೀಯ ಹಿತಾಸಕ್ತಿಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಭವಿಷ್ಯದಲ್ಲಿ ಕಾಂಗ್ರೆಸ್‌ನಿಂದ ಲೋಕಸಭಾ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೀರಾ ಎಂದು ಕೇಳಿದಾಗ ಎಂಎನ್‌ಎಂ ಮುಖ್ಯಸ್ಥರು ಹೇಳಿದರು.

ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯಲ್ಲಿ ಕಮಲ ಹಾಸನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದರು.

ಇಳಂಗೋವನ್ ಅವರು ಜನವರಿ 23 ರಂದು ಅಲ್ವಾರ್‌ಪೇಟ್ ಕಚೇರಿಯಲ್ಲಿ ಕಮಲ ಹಾಸನ್ ಅವರನ್ನು ಭೇಟಿಯಾಗಿ  ಉಪಚುನಾವಣೆಗೆ ಬೆಂಬಲ ಕೋರಿದ ನಂತರ ಈ ಬೆಳವಣಿಗೆಯಾಗಿದೆ.

ಎಂಎನ್‌ಎಂ ಕಾರ್ಯಕಾರಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಕಮಲ ಹಾಸನ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರವನ್ನು ಪ್ರಕಟಿಸಿದರು.

Similar News