ದಲಿತ ಯುವಕನ ಮುಖಕ್ಕೆ ಉಗಿದು, ಬೂಟು ನೆಕ್ಕುವಂತೆ ಬಲವಂತಪಡಿಸಿದ ಮುಂಬೈ ಪೊಲೀಸ್‌ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Update: 2023-01-26 14:14 GMT

ಮುಂಬೈ: ನವಿ ಮುಂಬೈನ ಕಲಂಬೋಲಿ ಪೊಲೀಸ್ ಠಾಣೆಯಲ್ಲಿ 28 ವರ್ಷದ ದಲಿತ ಯುವಕನಿಗೆ ಹಲ್ಲೆಗೈದು, ಜಾತಿ ನಿಂದನೆಗೈದು ಆತನ ಮೇಲೆ ಉಗುಳಿದ ಆರೋಪದ ಮೇಲೆ ಅಸಿಸ್ಟೆಂಟ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ದಿನೇಶ್‌ ಪಾಟೀಲ್‌ ವಿರುದ್ಧ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಸಹಿತ ವಿವಿಧ ಕಾಯಿದೆಗಳ ಪ್ರಕಾರ ದೂರು ದಾಖಲಾಗಿದೆ.

ಪೊಲೀಸ್‌ ಅಧಿಕಾರಿಯು ಠಾಣೆಯಲ್ಲಿ ಸಂತ್ರಸ್ತ ವಿಕಾಸ್‌ ಉಜ್ಗಾರೆ ಮುಖಕ್ಕೆ ಉಗುಳಿದ್ದೇ ಅಲ್ಲದೆ ಆತನಿಗೆ ತಮ್ಮ ಬೂಟುಗಳನ್ನು ನೆಕ್ಕುವಂತೆ ಬಲವಂತಪಡಿಸಿದ್ದರು ಎಂದು ದೂರಲಾಗಿದೆ.

ಸೈಬರ್‌ ವಂಚನೆಗೆ ಸಂಬಂಧಿಸಿದಂತೆ ತಾನು ದಾಖಲಿಸಿದ್ದ ದೂರನ್ನು  ದಾಖಲಿಸಲು ಕಲಂಬೋಲಿ ಠಾಣೆಯ ಅಧಿಕಾರಿಗಳು ಹಿಂಜರಿಯುತ್ತಿರುವ ಕುರಿತಂತೆ ವಿಕಾಸ್‌ ಹಿರಿಯಾಧಿಕಾರಿಗಳಿಗೆ ದೂರು ನೀಡಿದ್ದರಿಂದ ದಿನೇಶ್‌ ಪಾಟೀಲ್‌ ಆಕ್ರೋಶಗೊಂಡಿದ್ದರೆಂದು ಹೇಳಲಾಗಿದೆ.

ಜನವರಿ 6 ರಂದು ವಿಕಾಸ್‌ ತನ್ನ ಸ್ನೇಹಿತನೊಂದಿಗೆ ಚೈನೀಸ್‌ ರೆಸ್ಟೋರೆಂಟ್‌ನಲ್ಲಿದ್ದಾಗ ಸ್ನೇಹಿತ ಹಾಗೂ ರೆಸ್ಟೋರೆಂಟ್‌ ಮಾಲಕನ ನಡುವೆ ಜಗಳವಾಗಿ, ಮಾಲಕ ಇಬ್ಬರಿಗೂ ಹಲ್ಲೆ ನಡೆಸಿದ್ದ, ನಂತರ ತಾನು ಪೊಲೀಸ್‌ ಕಂಟ್ರೋಲ್‌ ರೂಂಗೆ  ಮಾಹಿತಿ ನೀಡಿದ ನಂತರ ಕಲಂಬೋಲಿ ಪೊಲೀಸರು  ಆಗಮಿಸಿದ್ದರು.

ಗಾಯವಾಗಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಮನವಿ ಮಾಡಿದ ನಂತರ ಪನ್ವೇಲ್‌ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ವೈದ್ಯರು ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದಾಗ ಪೊಲೀಸರು ಠಾಣೆಗೆ ಕರೆತಂದಿದ್ದು ಅಲ್ಲಿ ಪಾಟೀಲ್‌ ಹಲ್ಲೆ ನಡೆಸಿ, ಉಗಿದು, ನಿಂದನೆಗೈದು ಬೂಟು ನೆಕ್ಕುವಂತೆ ಮಾಡಿದ್ದರು ಎಂದು ವಿಕಾಸ್‌ ಆರೋಪಿಸಿದ್ದಾನೆ.

ಜನವರಿ 7 ರಂದು ಮುಂಜಾನೆ 3 ಗಂಟೆಗೆ ಪೊಲೀಸರು ತನ್ನನ್ನು ಎಂಜಿಎಂ ಆಸ್ಪತ್ರೆಗೆ ದಾಖಳಿಸಿ ಅಲ್ಲಿಂದ ತೆರಳಿದ್ದರು ಎಂದು ಆತ ಹೇಳಿದ್ದಾನೆ. ಅಲ್ಲಿ ಮೂರು ದಿನ ಚಿಕಿತ್ಸೆ ಪಡೆದ ನಂತರ ಆತ ಹಿರಿಯಾಧಿಕಾರಿಗಳಿಗೆ ದೂರು ನೀಡಿದ್ದರೂ  ಎಫ್‌ಐಆರ್‌ ದಾಖಲಾಗದೇ ಇದ್ದುದರಿಂದ ನವಿ ಮುಂಬೈ ಪೊಲೀಸ್‌ ಆಯುಕ್ತರಿಗೆ ದೂರಿದ್ದಾಗಿ ಆತ ಹೇಳಿದ್ದಾನೆ.

ಆರೋಪಿ ಪೊಲೀಸ್‌ ಅಧಿಕಾರಿ ಪಾಟೀಲ್‌ ಅನಾರೋಗ್ಯ ರಜೆ ಪಡೆದಿದ್ಧಾರೆಂದು ಠಾಣೆಯ ಸಿಬ್ಬಂದಿ ಹೇಳಿದ್ಧಾರೆ. ಪ್ರಕರಣವನ್ನು ಸಹಾಯಕ ಪೊಲೀಸ್‌ ಆಯುಕ್ತರು ತನಿಖೆ ನಡೆಸುತ್ತಿದ್ದಾರೆಂಬ ಮಾಹಿತಿಯೂ ಇದೆ.

​ಇದನ್ನು ಓದಿ:  ಬಾಲಕನಿಗೆ ಲೈಂಗಿಕ ಕಿರುಕುಳ, ಕೊಲೆ: ವಿದ್ಯಾರ್ಥಿಯ ಬಂಧನ

Similar News