ಆರ್ಥಿಕ ಕುಸಿತದ ಅಂಚಿನಲ್ಲಿ ಪಾಕಿಸ್ತಾನ, ‘ಡಿಫಾಲ್ಟ್’ ಪಟ್ಟಿಗೆ ಸೇರ್ಪಡೆ ಖಚಿತ: ವರದಿ ‌

ದಾಖಲೆ ಮಟ್ಟಕ್ಕೆ ಕುಸಿದ ಪಾಕಿಸ್ತಾನದ ಕರೆನ್ಸಿ

Update: 2023-01-26 15:01 GMT

ಇಸ್ಲಮಾಬಾದ್, ಜ.26: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ, ಐಎಂಎಫ್ನಿಂದ ತುರ್ತು ಸಾಲದ ನೆರವಿನ ನಿರೀಕ್ಷೆಯಲ್ಲಿದೆ. ಆದರೆ ವಿಸ್ತತ ಹಣಕಾಸು ಸೌಲಭ್ಯ ಕಾರ್ಯಕ್ರಮವನ್ನು ಮರುಸ್ಥಾಪಿಸಲು ಐಎಂಎಫ್ ಅತ್ಯಂತ ಗಂಭೀರವಾದ ಷರತ್ತುಗಳನ್ನು ವಿಧಿಸುತ್ತಿರುವುದು ಇದಕ್ಕೆ ತೊಡಕಾಗಿದೆ. ಆದ್ದರಿಂದ ಸಾಲ ಮರುಪಾವತಿಸದೆ ಡಿಫಾಲ್ಟ್ ಪಟ್ಟಿಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಜೂನ್ನಿಂದ ಅಕ್ಟೋಬರ್ವರೆಗೆ ದೇಶವನ್ನು ಕಂಗೆಡಿಸಿದ್ದ ಮಾರಣಾಂತಿಕ ಪ್ರವಾಹದ ಆಘಾತದ ಜತೆಗೆ ಕರಗುತ್ತಿರುವ ಅರ್ಥವ್ಯವಸ್ಥೆ, ರಾಜಕೀಯ ಅಸ್ಥಿರತೆ ಸಮಸ್ಯೆಗಳೂ ಸೇರಿಕೊಂಡು ಪಾಕಿಸ್ತಾನ ಆರ್ಥಿಕ ವಿಪತ್ತಿನ ಅಂಚಿಗೆ ಜಾರುತ್ತಿದೆ. ದೈನಂದಿನ ಅಗತ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಗತ್ಯವಿರುವ ವಿದೇಶಿ ವಿನಿಮಯ ದಾಸ್ತಾನು ಕ್ರಮೇಣ ಕ್ಷೀಣಿಸುತ್ತಿದೆ. ಜೊತೆಗೆ ಅಂತರಾಷ್ಟ್ರೀಯ ಸಾಲದ ಕಂತನ್ನೂ ಮರುಪಾವತಿಸಬೇಕಿದೆ. ಮುಂದಿನ 6 ತಿಂಗಳಲ್ಲಿ ಪಾಕಿಸ್ತಾನಕ್ಕೆ ಸುಮಾರು 10 ಶತಕೋಟಿ ಡಾಲರ್ ಹಣದ ಅಗತ್ಯವಿದೆ. 

ಸೌದಿ ಅರೆಬಿಯಾ ಸುಮಾರು 2 ಶತಕೋಟಿ ಡಾಲರ್, ಯುಎಇ 1 ಶತಕೋಟಿ ಡಾಲರ್, ಚೀನಾ ಮತ್ತು ಖತರ್ನಿಂದ ಸುಮಾರು 2 ಶತಕೋಟಿ ಡಾಲರ್ ನೆರವಿನ ಭರವಸೆ ದೊರಕಿದೆ. ಉಳಿದ ಹಣವನ್ನು ಇತರ ಮೂಲಗಳಿಂದ ಸಂಗ್ರಹಿಸಬೇಕಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಪಾಕ್ ಮತ್ತೆ 30 ಶತಕೋಟಿ ಡಾಲರ್ ಮೊತ್ತ ಸಂಗ್ರಹಿಸಬೇಕು.
  
ತೈಲ, ಇಂಧನ ಬೆಲೆ ಗಗನಕ್ಕೇರಿದ್ದು ಹಣದುಬ್ಬರ 40%ಕ್ಕೂ ಅಧಿಕವಾಗಿದೆ. ಹಣದುಬ್ಬರ ನಿಯಂತ್ರಿಸಬೇಕಿದ್ದರೆ ಬಡ್ಡಿದರ ಹೆಚ್ಚಿಸಬೇಕು. ಬಡ್ಡಿದರ ಹೆಚ್ಚಿಸಿದರೆ ಉದ್ಯಮ ಕ್ಷೇತ್ರ ತತ್ತರಿಸಲಿದೆ. ಬಡ್ಡಿದರ ಹೆಚ್ಚಳವು ಸರಕಾರದ ಖಜಾನೆಯ ಮೇಲೆ ಹೊಡೆತ ನೀಡಲಿದೆ. ಯಾಕೆಂದರೆ, ಈಗಿನ 17% ಬಡ್ಡಿದರದಲ್ಲೂ ಸರಕಾರದ ಸಾಲಸೇವಾ ವೆಚ್ಚವು ಸಂಪೂರ್ಣ ಆದಾಯಕ್ಕಿಂತ ಅಧಿಕವಾಗಿದೆ.

ಡಿಫಾಲ್ಟ್ ಅನಿವಾರ್ಯ ಎಂಬುದು ಪಾಕಿಸ್ತಾನ ಎದುರಿಸುತ್ತಿರುವ ಕಟುವಾಸ್ತವ. ಅದು ಯಾವಾಗ ಸಂಭವಿಸಲಿದೆ ಎಂಬುದೇ ಇಲ್ಲಿರುವ ಪ್ರಶ್ನೆಯಾಗಿದೆ. ಇದೀಗ ಐಎಂಎಫ್ನಿಂದ ಸಾಲ ಮರುಹೊಂದಿಕೆಯ ಮೊರೆಹೋಗುವುದು ಪಾಕಿಸ್ತಾನಕ್ಕೆ ಇರುವ ಅನಿವಾರ್ಯ ಆಯ್ಕೆಯಾಗಿದೆ. ಆದರೆ ಐಎಂಎಫ್ ವಿಧಿಸುವ ಕಠಿಣ ಷರತ್ತುಗಳನ್ನು ಜಾರಿಗೊಳಿಸಿದರೆ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕ ಪಾಕ್ ಸರಕಾರಕ್ಕಿದೆ. ಈ ಹಿನ್ನೆಲೆಯಲ್ಲಿ, ಐಎಂಎಫ್ ನ ಷರತ್ತು ಸಡಿಲಿಸಲು ಪ್ರಭಾವ ಬೀರುವಂತೆ ಪಾಕ್ ಸರಕಾರ ಅಮೆರಿಕವನ್ನು ಕೋರಿದೆ ಎಂದು ಮಾಧ್ಯಮ ವರದಿ ಹೇಳಿದೆ.

ದಾಖಲೆ ಮಟ್ಟಕ್ಕೆ ಕುಸಿದ ಪಾಕಿಸ್ತಾನದ ಕರೆನ್ಸಿ
  
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಿಂದ ಹೆಚ್ಚು ಅಗತ್ಯವಿರುವ ಸಾಲದ ನೆರವನ್ನು ಪಡೆಯಲು, ವಿನಿಮಯ ದರದ ಮೇಲಿನ ತನ್ನ ಹಿಡಿತವನ್ನು ಪಾಕಿಸ್ತಾನದ ಸರಕಾರ ಸಡಿಲಗೊಳಿಸಿದ್ದರಿಂದ ಅಮೆರಿಕ ಡಾಲರ್ ಎದುರು ಕರೆನ್ಸಿಯು ದಾಖಲೆ ಮಟ್ಟಕ್ಕೆ ಕುಸಿದಿದೆ ಎಂದು ವರದಿಯಾಗಿದೆ.
  
ಸ್ಟೇಟ್‌ಬ್ಯಾಂಕ್ ಆಫ್ ಪಾಕಿಸ್ತಾನದ ಅಂಕಿಅಂಶಗಳ ಪ್ರಕಾರ, ರೂಪಾಯಿಯು 9.6%ದಷ್ಟು ಕುಸಿದಿದ್ದು ಗುರುವಾರ ಪ್ರತೀ ಡಾಲರ್ಗೆ 255.43ಕ್ಕೆ ತಲುಪಿದೆ. ಕಳೆದ 2 ದಶಕಗಳಲ್ಲಿ ಇದು ಅತ್ಯಂತ ಕನಿಷ್ಟ ಮಟ್ಟವಾಗಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಪಾಕಿಸ್ತಾನ ಕಡೆಗೂ ತನ್ನ ದೃಢನಿಶ್ಚಯ ಪ್ರದರ್ಶಿಸಿದ್ದು ದೀರ್ಘಾವಧಿಯ ಹಿಂಜರಿಕೆಯ ನಂತರ ಆರ್ಥಿಕ ನೆರವನ್ನು ಪಡೆಯಲು ಐಎಂಎಫ್ನ ಷರತ್ತುಗಳಿಗೆ ಅಂತಿಮವಾಗಿ ಸಮ್ಮತಿಸುತ್ತಿದೆ. ಮಾರುಕಟ್ಟೆ ಆಧಾರಿತ ವಿನಿಮಯ ದರವನ್ನು ನಿರ್ವಹಿಸುವಂತೆ ಐಎಂಎಫ್ ವಿಧಿಸಿದ್ದ ಷರತ್ತನ್ನು ಈಡೇರಿಸಲು ಈ ನಿರ್ಧಾರ(ಕರೆನ್ಸಿ ಅಪಮೌಲ್ಯ) ಪೂರಕವಾಗಿದೆ ಎಂಬ ವಿಶ್ವಾಸವನ್ನು ಮಾರುಕಟ್ಟೆಗೆ ನೀಡಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

Similar News