ಆಸ್ಟ್ರೇಲಿಯನ್ ಓಪನ್ ಫೈನಲ್: ಸಾನಿಯಾ-ರೋಹನ್ ಬೋಪಣ್ಣ ರನ್ನರ್ಸ್ ಅಪ್

Update: 2023-01-27 05:07 GMT

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ 2023 ರಲ್ಲಿ ಶುಕ್ರವಾರ ನಡೆದ   ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಅವರು ಸೋಲುವ ಮೂಲಕ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟರು.

 ಭಾರತದ ಜೋಡಿ ಫೈನಲ್ ನಲ್ಲಿ  ಬ್ರೆಝಿಲ್ ಜೋಡಿಯಾದ ಲೂಯಿಸಾ ಸ್ಟೆಫಾನಿ  ಹಾಗೂ  ರಫೆಲ್ ಮಾಟೋಸ್ ವಿರುದ್ಧ 6-7, 2-6 ಅಂತರದ ಸೋಲುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ  ಕೊನೆಗೊಳಿಸಿತು.

ತಮ್ಮ ಅಂತಿಮ ಗ್ರ್ಯಾನ್  ಸ್ಲಾಮ್ ಆಡಿರುವ ಸಾನಿಯಾ ಮಿರ್ಝಾ ಅವರು ವೃತ್ತಿಜೀವನದಲ್ಲಿ ಈ ಹಿಂದೆ ಮೂರು ಮಹಿಳಾ ಡಬಲ್ಸ್ ಗ್ರ್ಯಾನ್  ಸ್ಲಾಮ್ ಪ್ರಶಸ್ತಿಗಳನ್ನು  ಹಾಗೂ 3 ಮಿಶ್ರ ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬೋಪಣ್ಣ ಒಂದು ಬಾರಿ ಮಿಶ್ರ ಡಬಲ್ಸ್ ಗ್ರ್ಯಾನ್  ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಶ್ರೇಯಾಂಕ ರಹಿತ ಭಾರತದ ಜೋಡಿಯಾದ ಸಾನಿಯಾ ಹಾಗೂ  ಬೋಪಣ್ಣ ಆಸ್ಟ್ರೇಲಿಯನ್ ಓಪನ್ 2023 ರ ಸೆಮಿ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಕ್ರಾವ್ಜಿಕ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು 7-6(5), 6-7(5), 10-6 ಸೆಟ್‌ಗಳಿಂದ ಸೋಲಿಸಿದ್ದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ.ವಾಕ್ ಓವರ್ ಪಡೆದಿದ್ದರು.

ಕುತೂಹಲಕಾರಿ ಅಂಶವೆಂದರೆ, ಸಾನಿಯಾ 2005 ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಗ್ರ್ಯಾನ್ ಸ್ಲಾಮ್ ವೃತ್ತಿಜೀವನವನ್ನು ಆರಂಭಿಸಿದ್ದರು. ಇದೀಗ ಅಲ್ಲಿಯೇ ಅಂತ್ಯಗೊಳಿಸಿದ್ದಾರೆ.  ಸಾನಿಯಾ ಅವರು 2009 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ಮೊದಲ ಗ್ರ್ಯಾನ್  ಸ್ಲಾಮ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಫೆಬ್ರವರಿ 19 ರಂದು ಆರಂಭವಾಗುವ ದುಬೈ ಟೆನಿಸ್ ಚಾಂಪಿಯನ್‌ಶಿಪ್ WTA 1000 ಈವೆಂಟ್‌ನಲ್ಲಿ ಸಾನಿಯಾ ಅವರು ವೃತ್ತಿಪರ ಟೆನಿಸ್‌ನಿಂದ ನಿವೃತ್ತರಾಗಲಿದ್ದಾರೆ.

Similar News