ತನ್ನ ಅಂತಿಮ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಆಡಿದ ನಂತರ ಭಾವುಕರಾದ ಸಾನಿಯಾ ಮಿರ್ಝಾ

‘’ನನ್ನ ಮಗನ ಮುಂದೆ ಗ್ರ್ಯಾನ್ ಸ್ಲಾಮ್ ಫೈನಲ್‌ನಲ್ಲಿ ಆಡುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ’’

Update: 2023-01-27 05:29 GMT

ಮೆಲ್ಬೋರ್ನ್: ಭಾರತದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಾನಿಯಾ ಮಿರ್ಝಾ ಅವರು ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಸೋಲುವ ಮೂಲಕ  ತಮ್ಮ ಯಶಸ್ವಿ ಗ್ರ್ಯಾನ್ ಸ್ಲಾಮ್ ಪಯಣವನ್ನು ಕೊನೆಗೊಳಿಸಿದರು.

ಬ್ರೆಝಿಲ್‌ನ ಲೂಯಿಸಾ ಸ್ಟೆಫಾನಿ ಹಾಗೂ ರರಾಫೆಲ್ ಮ್ಯಾಟೋಸ್ ಜೋಡಿಯು ಫೈನಲ್‌ನಲ್ಲಿ ಭಾರತದ ಜೋಡಿ ಸಾನಿಯಾ ಹಾಗೂ  ರೋಹನ್ ಬೋಪಣ್ಣ ಅವರನ್ನು 7-6, 6-2 ಸೆಟ್‌ಗಳಿಂದ ಸೋಲಿಸಿ ತಮ್ಮ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಆಟದ ಮುಕ್ತಾಯದ ನಂತರ, ಸಾನಿಯಾ ಬ್ರೆಝಿಲ್ ಜೋಡಿಯನ್ನು ಅಭಿನಂದಿಸಿದರು, ಅರ್ಹವಾದ ಗೆಲುವಿಗಾಗಿ ಅವರನ್ನು ಶ್ಲಾಘಿಸಿದರು. ಆದರೆ, ಟೆನಿಸ್ ತಾರೆ ತಮ್ಮ ಟೆನಿಸ್ ಪಯಣದ ಬಗ್ಗೆ ಮಾತನಾಡಲು ಆರಂಭಿಸಿದಾಗ,  ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯನ್ ಓಪನ್ 2023 ರೊಂದಿಗೆ ತನ್ನ ಗ್ರ್ಯಾನ್  ಸ್ಲಾಮ್ ಪ್ರಯಾಣವನ್ನು ಕೊನೆಗೊಳಿಸುವುದಾಗಿ ಸಾನಿಯಾ ಈಗಾಗಲೇ ಘೋಷಿಸಿದ್ದರು.,

"ನನ್ನ ವೃತ್ತಿಪರ ವೃತ್ತಿಜೀವನವು ಮೆಲ್ಬೋರ್ನ್‌ನಲ್ಲಿ ಆರಂಭವಾಯಿತು... ನನ್ನ (ಗ್ರ್ಯಾನ್  ಸ್ಲಾಮ್) ವೃತ್ತಿಜೀವನವನ್ನು ಮುಗಿಸಲು ಇದಕ್ಕಿಂತ  ಉತ್ತಮವಾದ ಅಖಾಡವನ್ನು ನಾನು ಯೋಚಿಸಲು ಸಾಧ್ಯವಾಗಲಿಲ್ಲ. ನನ್ನ ಪಾಲಿಗೆ  ರಾಡ್ ಲೇವರ್ ಅರೆನಾ ವಿಶೇಷವಾಗಿದೆ. ನನ್ನ ಮಗನ ಮುಂದೆ ಗ್ರ್ಯಾನ್ ಸ್ಲಾಮ್ ಫೈನಲ್‌ನಲ್ಲಿ ಆಡಲು ನನಗೆ ಸಾಧ್ಯವಾಗುತ್ತದೆ ಎಂದು ಎಂದಿಗೂ ಯೋಚಿಸಿರಲಿಲ್ಲ’’ ಎಂದು 36 ವರ್ಷದ ಅತ್ಲೀಟ್ ಹೇಳಿದ್ದಾರೆ.

ಇದು ಸಾನಿಯಾ ವೃತ್ತಿಬದುಕಿನ 11ನೇ ಗ್ರ್ಯಾನ್ ಸ್ಲಾಮ್ ಫೈನಲ್ ಆಗಿತ್ತು. ಅವರು ಆರು ಗ್ರ್ಯಾನ್  ಸ್ಲ್ಯಾಮ್‌ಗಳು ಸೇರಿದಂತೆ ಒಟ್ಟು 43 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ WTA ರ್ಯಾಂಕಿಂಗ್ ನಲ್ಲಿ 91 ವಾರಗಳ ಕಾಲ ನಂ. 1 ಶ್ರೇಯಾಂಕ ಪಡೆದಿದ್ದರು.

ಮತ್ತೊಂದೆಡೆ, ಬೋಪಣ್ಣ ಅವರು 2017 ರ ಫ್ರೆಂಚ್ ಓಪನ್‌ನಲ್ಲಿ ಟೈಮಾ ಬಾಬೋಸ್ ಜೊತೆಗೆ ಆಡುವಾಗ ಒಂದು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಇಂದು ತಮ್ಮ 4 ನೇ ಗ್ರ್ಯಾನ್  ಸ್ಲಾಮ್ ಫೈನಲ್‌ನಲ್ಲಿ ಅಡಿದ್ದರು.  

ಸ್ಟಾರ್ ಅತ್ಲೀಟ್‌ ಸಾನಿಯಾಗೆ ಇದು ಅಂತಿಮ ಪಂದ್ಯವಲ್ಲ. ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ WTA 1000 ಈವೆಂಟ್‌ನಲ್ಲಿ ತನ್ನ ಅಂತಿಮ ಪಂದ್ಯಾವಳಿಯನ್ನು ಆಡಲು ಅವರು  ನಿರ್ಧರಿಸಿ ದ್ದಾರೆ.

Similar News