ಟೆಸ್ಟ್ ತಂಡಕ್ಕೆ ಸರ್ಫರಾಝ್ ಕಡೆಗಣನೆ: ಕೊನೆಗೂ ಮೌನ ಮುರಿದ ಬಿಸಿಸಿಐ

Update: 2023-01-27 13:39 GMT

ಹೊಸದಿಲ್ಲಿ, ಜ.27: ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸಿ ‘ರನ್‌ಯಂತ್ರ’ವಾಗಿ ಗುರುತಿಸಿಕೊಂಡಿರುವ ಸರ್ಫರಾಝ್ ಖಾನ್‌ಗೆ (Safaraz Khan)ಭಾರತದ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡದೇ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವಾಗ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿ ಸರ್ಫರಾಝ್‌ರನ್ನು ಕಡೆಗಣಿಸಲಾಗಿತ್ತು. ಸರ್ಫರಾಝ್ ರನ್ನು ಕೈಬಿಟ್ಟಿರುವ ಹಿಂದಿನ ಕಾರಣದ ಬಗ್ಗೆ ಮಾತನಾಡಿರುವ ಬಿಸಿಸಿಐ(BCCI) ಆಯ್ಕೆ ಸಮಿತಿಯ ಸದಸ್ಯರೊಬ್ಬರು ಕೊನೆಗೂ ಮೌನ ಮುರಿದಿದ್ದಾರೆ. ‘

ಸ್ಪೋರ್ಟ್‌ಸ್ಟಾರ್’ ಜೊತೆ ಮಾತನಾಡಿದ ರಾಷ್ಟ್ರೀಯ ಆಯ್ಕೆಗಾರ ಶ್ರೀಧರನ್ ಶರತ್, ಭಾರತದ ಟೆಸ್ಟ್ ತಂಡದಲ್ಲಿ ಸರ್ಫರಾಝ್ ಅನುಪಸ್ಥಿತಿಯ ವಿಚಾರವನ್ನು ಉಲ್ಲೇಖಿಸಿದರು. ಈಗಿನ ತಂಡದ ಕುರಿತು ಮಾತನಾಡಿದ ಅವರು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಹಾಗೂ ಯುವ ಆಟಗಾರರನ್ನು ಶ್ಲಾಘಿಸಿದರು.

 ಸರ್ಫರಾಝ್ ಬಗ್ಗೆ ಕೇಳಿದಾಗ, ‘ಸಂಯೋಜನೆ ಹಾಗೂ ಸಮತೋಲನ’ವು ಯುವ ಬ್ಯಾಟರ್‌ನನ್ನು ಟೆಸ್ಟ್ ತಂಡದಿಂದ ಹೊರಗಿಡಲು ಕಾರಣವಾಗಿದೆ. ಅವರು ಖಂಡಿತವಾಗಿಯೂ ನಮ್ಮ ಪಟ್ಟಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸ್ಥಾನ ನೀಡಲಾಗುವುದು. ನಾವು ತಂಡವನ್ನು ಆಯ್ಕೆ ಮಾಡುವಾಗ ಸಂಯೋಜನೆ ಹಾಗೂ ಸಮತೋಲನವನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ’’ಎಂದು ಶರತ್ ಹೇಳಿದರು.

ಆಯ್ಕೆ ಸಮಿತಿಯು ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಉಳಿದೆರಡು ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಸರ್ಫರಾಝ್ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದಿದ್ದರೂ ಸರಣಿಯ ಉಳಿದಿರುವ ಪಂದ್ಯಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
 

Similar News