ಮರ್ಯಾದೆ ಹತ್ಯೆ: ತಂದೆ, ಸಹೋದರನಿಂದ ವೈದ್ಯಕೀಯ ವಿದ್ಯಾರ್ಥಿನಿಯ ಬೆಂಕಿ ಹಚ್ಚಿ ಹತ್ಯೆ ಐವರು ಆರೋಪಿಗಳ ಬಂಧನ

Update: 2023-01-27 15:28 GMT

ಮುಂಬೈ, ಜ. 27: ಇಪ್ಪತ್ತೆರೆಡು ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ತಂದೆ, ಸಹೋದರ ಹಾಗೂ ಇತರ ಮೂವರು ಸಂಬಂಧಿಕರು ಕತ್ತು ಹಿಸುಕಿ ಹತ್ಯೆಗೈದು ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ನಾಂದೇಡ್ ನಲ್ಲಿ ನಡೆದಿದೆ. ಲಿಂಬ್ಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್(Pimpri Mahipal) ಗ್ರಾಮದಲ್ಲಿ ಜನವರಿ 22ರಂದು ನಡೆದ ಈ ಹತ್ಯೆ ಘಟನೆಗೆ ಸಂಬಂಧಿಸಿ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಚ್ಎಂಎಸ್ (BHMS)ನ ಮೂರನೇ ವರ್ಷದ ವಿದ್ಯಾರ್ಥಿನಿ ಶುಭಾಂಗಿನಿ ಜೋಗ್ಡಾಂಡ್(shubhangi jogdand) ಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಕುಟುಂಬ ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ಶುಭಾಂಗಿನಿ, ‘‘ತಾನು ಗ್ರಾಮದ ಇನ್ನೋರ್ವನನ್ನು ಪ್ರೀತಿಸುತ್ತಿರುವುದಾಗಿ’’ ತಿಳಿಸಿದ್ದಳು. ಇದರಿಂದ ವಿವಾಹ ಮುರಿದು ಬಿದ್ದಿತ್ತು. ಆಕೆಯ ಕುಟುಂಬ ಅಸಮಾಧಾನಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂದೆ, ಸಹೋದರ, ಮಾವ ಹಾಗೂ ಸೋದರ ಸಂಬಂಧಿ ಜನವರಿ 22ರಂದು ರಾತ್ರಿ ಯುವತಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾರೆ. ಅನಂತರ ಸಾಕ್ಷ ನಾಶ ಮಾಡಲು ಬೆಂಕಿ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News