ಮೊದಲ ಟ್ವೆಂಟಿ-20: ಭಾರತ ವಿರುದ್ಧ ನ್ಯೂಝಿಲ್ಯಾಂಡ್ ಜಯಭೇರಿ

ಕಾನ್ವೇ, ಮಿಚೆಲ್ ಅರ್ಧಶತಕ,ಮಿಂಚಿದ ಬ್ರೆಸ್‌ವೆಲ್, ಸ್ಯಾಂಟ್ನರ್

Update: 2023-01-27 17:04 GMT

ರಾಂಚಿ, ಜ.27: ಮೈಕಲ್ ಬ್ರೆಸ್‌ವೆಲ್(2-31),ಫರ್ಗ್ಯುಸನ್(2-33) ಹಾಗೂ ಮಿಚೆಲ್ ಸ್ಯಾಂಟ್ನರ್(2-11)ದಾಳಿಗೆ ತತ್ತರಿಸಿದ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 21 ರನ್‌ಗಳ ಅಂತರದಿಂದ ಸೋತಿದೆ.

ಗೆಲ್ಲಲು 177 ರನ್ ಗುರಿ ಬೆನ್ನಟ್ಟಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಪರ ವಾಶಿಂಗ್ಟನ್ ಸುಂದರ್(50 ರನ್,28 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್(47 ರನ್,34 ಎಸೆತ) ಒಂದಷ್ಟು ಪ್ರತಿರೋಧ ಒಡ್ಡಿದರು.
 
   ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಕಿವೀಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ(52 ರನ್, 35 ಎಸೆತ)ಹಾಗೂ ಡರ್ಲ್ ಮಿಚೆಲ್(ಔಟಾಗದೆ 59, 30 ಎಸೆತ) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿತು.

ಮಿಚೆಲ್ ಕೇವಲ 26 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಾಯದಿಂದ 4ನೇ ಅರ್ಧಶತಕ ಪೂರೈಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಔಟಾಗದೆ 59 ರನ್(30 ಎಸೆತ, 3 ಬೌಂಡರಿ, 5 ಸಿಕ್ಸರ್) ಗಳಿಸಿದ ಮಿಚೆಲ್ ಅವರು ಅರ್ಷದೀಪ್ ಸಿಂಗ್ ಎಸೆದ ಅಂತಿಮ ಓವರ್‌ವೊಂದರಲ್ಲಿ 3 ಸಿಕ್ಸರ್ ಸಹಿತ 27 ರನ್ ಗಳಿಸಿದರು.

ಕಾನ್ವೇ-ಫಿನ್ ಅಲೆನ್ ಮೊದಲ ವಿಕೆಟಿಗೆ 43 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಅಬ್ಬರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ಭಾರತದ ಪರ ವಾಶಿಂಗ್ಟನ್ ಸುಂದರ್(2-22) ಎರಡು ವಿಕೆಟ್ ಪಡೆದರು.
 

Similar News