ಅನ್ನಭಾಗ್ಯ ಯೋಜನೆ: 1 ಕೆ.ಜಿ. ಹೆಚ್ಚುವರಿ ಅಕ್ಕಿ; 1,960 ಕೋಟಿ ರೂ. ವಾರ್ಷಿಕ ವೆಚ್ಚ

Update: 2023-01-28 03:12 GMT

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುತ್ತಿರುವ 5 ಕೆ.ಜಿ. ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ವಿತರಿಸುವ ಸಂಬಂಧ ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿದಲ್ಲಿ ವಾರ್ಷಿಕ 1,960 ಕೋಟಿ ರೂ. ವೆಚ್ಚವಾಗಲಿದೆ.

ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಇರುವಾಗಲೇ ಪಡಿತರದಾರರಿಗೆ 1 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡುವುದಾಗಿ ಘೋಷಿಸಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಸರಕಾರವು ಈ ಯೋಜನೆಗೆ ಹಣಕಾಸು ಹಂಚಿಕೆ ಮರು ಹೊಂದಿಸುವ ಲೆಕ್ಕಾಚಾರದಲ್ಲಿ ಮುಳುಗಿದೆ.

 2023-24ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಲೆಕ್ಕಾಚಾರ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಿರು ಟಿಪ್ಪಣಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದೆ. ಇದರ ಪ್ರತಿಯು ''ಣhe-ಜಿiಟe.iಟಿ''ಗೆ ಲಭ್ಯವಾಗಿದೆ.

ಅನ್ನಭಾಗ್ಯ ಯೋಜನೆಯ ಪ್ರಧಾನ ಲೆಕ್ಕ ಶೀರ್ಷಿಕೆಯಡಿಯಲ್ಲಿ ರಾಜ್ಯ ಪಡಿತರದಾರರಿಗೆ 1 ಕೆ.ಜಿ. ಹೆಚ್ಚುವರಿ ಅಕ್ಕಿಯೂ ಸೇರಿದಂತೆ ಆಹಾರ ಧಾನ್ಯಗಳ ವಿತರಣೆಗೆ 2,467 ಕೋಟಿ ರೂ.(ಕಳೆದ ವರ್ಷ 1,416 ಕೋಟಿ ರೂ.) ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ 1,051 ಕೋಟಿ ರೂ.ಹೆಚ್ಚುವರಿಯಾಗಲಿದೆ. 2023-24ನೇ ಸಾಲಿನಲ್ಲಿ ಒಟ್ಟು 3,862 ಕೋಟಿ ರೂ. ಅಂದಾಜು ವೆಚ್ಚವನ್ನು ಇಲಾಖೆಯು ಸಲ್ಲಿಸಿರುವುದು ಕಿರು ಟಿಪ್ಪಣಿಯಿಂದ ತಿಳಿದು ಬಂದಿದೆ. ಇದು ಕಳೆದ ವರ್ಷಕ್ಕಿಂತ (2,810 ಕೋಟಿ)   ಒಟ್ಟು 1,052 ಕೋಟಿ ರೂ. ಹೆಚ್ಚಳವಾದಂತಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಈಗಾಗಲೇ ಭಾರತ ಸರಕಾರವು ರದ್ದುಗೊಳಿಸಿ ಎನ್‌ಎಫ್‌ಎಸ್‌ಎ ಹೆಸರಿನಲ್ಲಿ ಮತ್ತೊಂದು ಯೋಜನೆ ಜಾರಿಗೊ ಳಿಸಿರುವುದರಿಂದ ಕರ್ನಾಟಕ ಸರಕಾರಕ್ಕೆ ಇದೇ ಆರ್ಥಿಕ ಸಾಲಿನಿಂದ 720 ಕೋಟಿ ರೂ. ಉಳಿಕೆಯಾಗಲಿದೆ. ಆದರೂ 1 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಣೆಯಿಂದಾಗಿ 1,960 ಕೋಟಿ ರೂ.ಗಳನ್ನು ಹೇಗೆ ಮರು ಹೊಂದಿಸುವುದು ಎಂದು ಚಿಂತಿತವಾಗಿದೆ.

1 ಕೆ.ಜಿ.ಹೆಚ್ಚುವರಿ ಅಕ್ಕಿಯನ್ನು (ಪ್ರತಿ ಕೆ.ಜಿ.ಗೆ 23 ರೂ.) 2022ರ ಎಪ್ರಿಲ್‌ನಿಂದ ಡಿಸೆಂಬರ್ 2022ರವರೆಗೆ ನೀಡಲಾಗಿತ್ತು. ಇದನ್ನೀಗ ಜನವರಿ 2023ರಿಂದ ಮಾರ್ಚ್ 2023ರವರೆಗೆ ವಿಸ್ತರಿಸಲಾಗಿದೆ. ಇದಕ್ಕೆ 924 ಕೋಟಿ ರೂ. ವೆಚ್ಚವಾಗಲಿದೆ ಎಂದು ಇಲಾಖೆಯು ಲೆಕ್ಕ ಹಾಕಿರುವುದು ಲಭ್ಯವಿರುವ ಕಿರು ಟಿಪ್ಪಣಿಯಿಂದ ತಿಳಿದು ಬಂದಿದೆ.

ಅದೇ ರೀತಿ ಅಕ್ಕಿ ಸಾಗಣೆ ವೆಚ್ಚ, ಸಗಟು ಮತ್ತು ರೀಟೈಲ್ ಕಮಿಷನ್ ಹಣವನ್ನು ರಾಜ್ಯ ಸರಕಾರವೇ ಭರಿಸಬೇಕಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಜಾರಿಯಲ್ಲಿದ್ದ ಅವಧಿಯಲ್ಲಿ ರಾಜ್ಯ ಸರಕಾರವು 4 ತಿಂಗಳು 1 ಕೆ.ಜಿ. ಹೆಚ್ಚುವರಿಯಂತೆ  1.84 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 2022-23ನೇ ಸಾಲಿನಲ್ಲಿ ನೀಡಿದ್ದರಿಂದ 466 ಕೋಟಿ ರೂ. ವೆಚ್ಚವಾಗಿತ್ತು.

  ಇದೀಗ 1 ಕೆ.ಜಿ.ಹೆಚ್ಚುವರಿ ಅಕ್ಕಿಯನ್ನು 2023-24ನೇ ಸಾಲಿನಲ್ಲಿ 33 ರೂ.  ದರದಲ್ಲಿ ನೀಡಲು 5.52 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಲಿದೆ. ಇದಕ್ಕೆ 1,960 ಕೋಟಿ ರೂ. (1822+ 138) ವೆಚ್ಚವಾಗಲಿದೆ. ಪ್ರತಿ ಕೆ.ಜಿ.ಗೆ 23 ರೂ. ದರದಲ್ಲಿ ನೀಡಿದರೆ 1,408 (1270+13*) ಕೋಟಿ ರೂ. ಆಗಲಿದೆ ಎಂದು ಲೆಕ್ಕ ಹಾಕಿದೆ.

ಅನ್ನಭಾಗ್ಯ ಯೋಜ ನೆಯಡಿ ಅಕ್ಕಿ ಖರೀದಿ, ಸಾಗಣೆ, ರೀಟೈಲ್ ಮತ್ತು ಸಗಟು ಕಮಿಷನ್, ಕಾರ್ಮಿಕ ವೆಚ್ಚವನ್ನು 2013-14ರಿಂದ ಪರಿಷ್ಕರಣೆ ಆಗಿಲ್ಲ. ಸಗಟು ಕಮಿಷನ್ ದರವನ್ನು 2013-14ರಿಂದ ಪರಿಷ್ಕರಿಸದ ಕಾರಣ 2023-24ರಿಂದ ಪ್ರತೀ  ಕ್ವಿಂಟಾಲ್‌ಗೆ 35 ರೂ.ನಿಂದ 50 ರೂ.ಗೆ ಹೆಚ್ಚಳ ಮಾಡಬೇಕು ಎಂದು ಇಲಾಖೆಯು ಪ್ರಸ್ತಾಪಿಸಿದೆ. ಅದೇ ರೀತಿ 2018ರಿಂದ ಕಾರ್ಮಿಕ ವೆಚ್ಚವನ್ನು ಪರಿಷ್ಕರಿಸಿಲ್ಲ. ಹೀಗಾಗಿ ಇದೇ ಆರ್ಥಿಕ ಸಾಲಿನಿಂದ 16 ರೂ.ನಿಂದ 19 ರೂ.ಗೆ, ರೀಟೈಲ್ ಮತ್ತು ಸಗಟು ಕಮಿಷನ್ ದರವನ್ನು 7 ರೂ.ನಿಂದ 10 ರೂ.ವರೆಗೆ ಹೆಚ್ಚಿಸಬೇಕಿದೆ ಎಂದೂ ಕಿರು ಟಿಪ್ಪಣಿಯಲ್ಲಿ ವಿವರಿಸಿದೆ.

 2022-23ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 1 ಕೆ.ಜಿ. ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಲಾಗಿತ್ತು. ಆ ಪ್ರಕಾರ 2022ರ ಎಪ್ರಿಲ್‌ನಿಂದ 5 ಕೆ.ಜಿ. ಆಹಾರ ಧಾನ್ಯದ ಜತೆಗೆ ಹೆಚ್ಚುವರಿ 1 ಕೆ.ಜಿ. ವಿತರಿಸಲು ಆರಂಭಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂದರೆ 2022ರ ಮೇನಿಂದ ಸೆಪ್ಟೆಂಬರ್‌ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿತ್ತು.

ಪಿಎಂಜಿಕೆಎವೈ ಯೋಜನೆ ಅಡಿ ಆದ್ಯತಾ ವಲಯ (ಬಿಪಿಎಲ್) ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿಯನ್ನು 2022 ರ ಅಕ್ಟೋಬರ್‌ನಿಂದ 2022 ಡಿಸೆಂಬರ್‌ವರೆಗೆ ಮುಂದುವರಿಸಲಾಗಿತ್ತು. ಹೀಗಾಗಿ, ಆದ್ಯತಾ ವಲಯದ ಪಡಿತರ ಫಲಾನುಭವಿಗಳಿಗೆ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವುದನ್ನು ನಿಲ್ಲಿಸಲಾಗಿತ್ತು. ಪಿಎಂಜಿಕೆಎವೈ ಯೋಜನೆ ಡಿಸೆಂಬರ್‌ನಲ್ಲಿ ಕೊನೆಗೊಂಡಿದ್ದರಿಂದ 1 ಕೆ.ಜಿ. ಆಹಾರ ಹೆಚ್ಚುವರಿಯಾಗಿ ವಿತರಿಸಲು ಸರಕಾರ ಮುಂದಾಗಿತ್ತು.

‘ಪಡಿತರದಲ್ಲಿ ಶೇ.50ರಷ್ಟು ಕಡಿತ’

ಕೇಂದ್ರ ಸರಕಾರವು ಹೊಸ ವರ್ಷದಲ್ಲಿ 81 ಕೋಟಿ ಬಡವರ ಪಡಿತರದಲ್ಲಿ ಶೇ.50ರಷ್ಟು ಕಡಿತಗೊಳಿಸಿದೆ. ತಿಂಗಳಿಗೆ 10 ಕೆ.ಜಿ. ಆಹಾರ ಧಾನ್ಯಕ್ಕೆ ಅರ್ಹರಾಗಿದ್ದ 81 ಕೋಟಿ ಭಾರತೀಯರು ಈಗ ಕೇವಲ ಐದು ಕೆ.ಜಿಯಷ್ಟನ್ನು ಮಾತ್ರ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದನ್ನು ಸ್ಮರಿಸಬಹುದು.

Similar News