ಉಡುಪಿ: ದೇಶೀಯ ಜಾನಪದ ಕಲಾಪ್ರಕಾರ ‘ಹಸೆ ಚಿತ್ತಾರ’ ಉಳಿಸುವ ಪ್ರಯತ್ನ!

Update: 2023-01-28 15:33 GMT

ಉಡುಪಿ: ನಶಿಸಿ ಹೋಗುತ್ತಿರುವ ದೇಶಿಯ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಜನಪದ ದೇಶಿಯ ಕಲೆಯ ಸರಣಿ ಕಾರ್ಯಾಗಾರವನ್ನು ಹಮ್ಮಿ ಕೊಂಡಿದ್ದು, ಮೊದಲ ಭಾಗವಾಗಿ ಮಲೆನಾಡ ಬುಡಕಟ್ಟು ಜನರ ಕಲೆಯಾದ ದೇಶೀಯ ಜಾನಪದ ಕಲಾ ಪ್ರಕಾರ ‘ಹಸೆ ಚಿತ್ತಾರ’ವನ್ನು ಕರಾವಳಿಯ ಯುವ ಜನತೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.

ಉಡುಪಿ ಬಡಗುಪೇಟೆಯ ಭಾಸ ಗ್ಯಾಲರಿಯಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರದಲ್ಲಿ ಹಸೆ ಚಿತ್ತಾರ ಕಲೆಯ ಕಲಾವಿದರಾದ ಸಾಗರದ ಭಾಗೀರಥಿ ಹಾಗೂ ಸುಶೀಲಾಮ್ಮ ನಶಿಸಿ ಹೋಗುತ್ತಿರುವ ಈ ದೇಶಿಯ ಕಲೆಯನ್ನು ಯುವ ಜನತೆಗೆ ಪರಿಚಯಿಸಿ, ಚಿತ್ತಾರವನ್ನು ಬಿಡಿಸುವ ಬಗ್ಗೆ ಹೇಳಿಕೊಡುತ್ತಿದ್ದಾರೆ. ಮೊದಲ ದಿನವಾದ ಇಂದು 20 ಮಂದಿ ಮತ್ತು ಎರಡನೇ ದಿನಕ್ಕೆ 15 ಮಂದಿ ಹೆಸರು ನೋಂದಾಯಿಸಿದ್ದಾರೆ.

‘ಹಸೆ ಚಿತ್ತಾರ ಕಲೆ ಶಿವಮೊಗ್ಗದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಮನೆಯ ಶುಭ ಸಂದರ್ಭದಲ್ಲಿ ಒಳಗೋಡೆ ಮತ್ತು ಹೊರಗೋಡೆಗಳಲ್ಲಿ ನೈಸರ್ಗಿಕ ವರ್ಣಗಳನ್ನು ಪ್ರಯೋಗಿಸಿ ಚಿತ್ರಿಸಲಾಗುವ ಈ ಚಿತ್ತಾರ ಕಲೆಯು ಸಾಗರ, ಶಿರ್ಸಿ, ಸಿದ್ಧಾಪುರ, ಹೊಸನಗರ ಮೊದಲಾದ ಕಡೆಗಳಲ್ಲಿ ಕಾಣಸಿಗುತ್ತದೆ. ಒಕ್ಕಲಿಗ, ಈಡಿಗ, ಮಡಿ ವಾಳ, ಗಿರಿಜನ ಸೇರಿದಂತೆ ಎಲ್ಲ ಸಮುದಾಯದವರು ಈ ಕೂಡ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಭಾಗೀರಥಿ.

‘ಮಹಿಳೆಯರು ಜಾಸ್ತಿಯಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಡೆಗೆ ಕೆಮ್ಮಣ್ಣು ಹಚ್ಚಿ ಅದರ ಮೇಲೆ ಅಕ್ಕಿಯ ಹಿಟ್ಟನ್ನು ನಾರಿನಿಂದ ಮಾಡಿದ ಪುಂಚ(ಬ್ರೆಶ್)ದಿಂದ ಈ ಚಿತ್ತಾರ ಬಿಡಿಸಲಾಗುತ್ತದೆ. ಅದು ಗಟ್ಟಿಯಾಗಿ ನಿಲ್ಲಲು ಗಮ್‌ನ್ನು ಬೆರೆಸಲಾಗುತ್ತದೆ. ಈ ಕಲೆಯಲ್ಲಿ ಇತಿಹಾಸ ಕೂಡ ಅಡಕವಾಗಿದೆ.  ಮದುವೆ ಮಂಟಪ, ವಧುವರರ ಸಂಬಂಧ, ಮನೆಯ ಶೃಂಗಾರಗಳನ್ನು ಈ ಚಿತ್ತಾರ ಹೇಳುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ದೇಶಿ ಕಲೆಗಳ ಪ್ರದರ್ಶನ: ಇಲ್ಲಿ ಬೇರೆ ಬೇರೆ ರಾಜ್ಯಗಳ ದೇಶಿಯ ಕಲಾಕೃತಿ ಗಳನ್ನು ಕೂಡ ಪ್ರದರ್ಶಿಸ ಲಾಗಿತ್ತು. ಸುಮಾರು 15 ಕಲಾವಿದರು ರಚಿಸಿದ 25ಕಲಾಕೃತಿಗಳು ಗಮನ ಸೆಳೆದವು. ಇದರಲ್ಲಿ ಕರ್ನಾಟಕದ ಖಾವಿ ಕಲೆ, ಮೈಸೂರು ಕಲೆ, ಕಿನ್ನಾಳ ಕಲೆ, ಬಿಹಾರದ ಮಧುಬನಿ, ಟಿಬೆಟ್, ಹೈದರಬಾದಿನ ಲೇದರ್ ಪಪ್ಪೆಟ್, ಮಧ್ಯಪ್ರದೇಶದ ಭಿಲ್ ಪೈಟಿಂಗ್ ಮುಖ್ಯವಾಗಿದ್ದವು.

ಕಾರ್ಯಾಗಾರವನ್ನು ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ನಿರಂಜನ್ ಯು.ಸಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಭಾವನಾ ಫೌಂಡೇಶನ್ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಡಾ.ಜನಾರ್ದನ ಹಾವಂಜೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

‘ಎಲ್ಲ ರಾಜ್ಯದಲ್ಲೂ ಒಂದೊಂದು ರೀತಿಯ ದೇಶಿಯ ಕಲೆಗಳಿವೆ. ಎಲ್ಲ ರಾಜ್ಯದಲ್ಲಿರುವುದು ಒಂದೇ ದೇಶಿಯ ಕಲೆ ಅಲ್ಲ. ಯಾವುದಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆಯೇ ಅದು ಇಂದು ಪ್ರಸಿದ್ಧಿ ಪಡೆದಿದೆ. ಇದೇ ರೀತಿಯ ಕರ್ನಾಟಕದಲ್ಲಿ ದೇಶಿಯ ಕಲೆಗಳಾದ ರಂಗೋಲಿ ಕಲೆ, ಹಸೆ ಚಿತ್ತಾರ, ಖಾವಿ ಕಲೆಗಳಿಗೆ ಪ್ರಚಾರವೇ ಇಲ್ಲ. ಇದಕ್ಕೆ ಪ್ರಚಾರ ಸಿಗುವಂತೆ ಮಾಡಬೇಕಾಗಿರುವುದು  ಅಕಾ ಡೆಮಿ ಕೆಲಸ. ಆದರೆ ಅವರು ಯಾಕೆ ಮುಂದೆ ಬರುತ್ತಿಲ್ಲ. ಕರ್ನಾಟಕ ಲಲಿತಾ ಕಲಾ ಅಕಾಡೆಮಿ ತನ್ನ ಕಲಾ ಚಚಟುವಟಿಕೆಗಳನ್ನು ಯಾಕೆ ಮಾಡುತ್ತಿಲ್ಲ ಮತ್ತು ಯಾಕೆ ಯಾರಿಗೂ ತಿಳಿಸುತ್ತಿಲ್ಲ ಎಂಬುದನ್ನು ಜನರೇ ತಿಳಿದುಕೊಳ್ಳಬೇಕು’
-ರಮೇಶ್ ರಾವ್, ಹಿರಿಯ ಕಲಾವಿದ

ನಶಿಸಿ ಹೋಗುತ್ತಿರುವ ದೇಶಿಯ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಜನತೆಗೆ ಅದನ್ನು ತಿಳಿಸಿಕೊಡುವ ಪ್ರಯತ್ನವೇ ಈ ಕಾರ್ಯಾಗಾರದ ಉದ್ದೇಶ ವಾಗಿದೆ. ಈ ಕಾರ್ಯಾಗಾರದ ಮೊದಲ ದಿನಕ್ಕೆ 20 ಮಂದಿ ಹೆಸರು ನೋಂದಾ ಯಿಸಿದ್ದು, ಎರಡನೇ ದಿನಕ್ಕೆ 15 ಮಂದಿ ಹೆಸರು ನೋಂದಾಯಿಸಿದ್ದಾರೆ. ಜ.30ರಂದು ಹಸೆ ಚಿತ್ತಾರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹೀಗೆ ದೇಶಿಯ ಜನಪದ ಹಾಗೂ ಬುಡಕಟ್ಟು ಕಲೆಗಳ ಕುರಿತು ಪ್ರತಿತಿಂಗಳು ನಿರಂತರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು.
-ಡಾ.ಜನಾರ್ದನ ಹಾವಂಜೆ

ದೀವಾರ್ ಸಮುದಾಯದ ಜನರು ತಮ್ಮ ಆರಾಧನೆಯೊಂದಿಗೆ ಬೆಳೆಸಿ ಕೊಂಡು ಬಂದ ಈ ಹಸೆ ಚಿತ್ತಾರದಲ್ಲಿ ಬಿಳಿ ಕೆಂಪು ಹಸೆ ಮತ್ತು ಕಪ್ಪು ಹಸೆಗಳೆಂಬ ಮೂರು ವಿಧಾನಗಳಿವೆ. ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸುವುದು ಮಾತ್ರವಲ್ಲದೆ ನಗರದ ಜನತೆಗೆ ತಿಳಿಸಿಕೊಂಡುವ ಕಾರ್ಯ ಕೂಡ ಮಾಡಲಾಗು ತ್ತಿದೆ. ಈ ಹಿಂದೆ ದೆಹಲಿಯಲ್ಲಿ ಈ ರೀತಿಯ ಕಾರ್ಯಾಗಾರವನ್ನು ನಡೆಸ ಲಾಗಿದೆ’

-ಭಾಗೀರಥಿ, ಹಸೆ ಚಿತ್ತಾರ ಕಲಾವಿದೆ

Similar News