‘ಮಾಧ್ಯಮ-ವಾಕ್ ಸ್ವಾತಂತ್ರಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ’: ಮೋದಿ ಸಾಕ್ಷಚಿತ್ರ ನಿಷೇಧಕ್ಕೆ ಜರ್ಮನಿ ಅಸಮಾಧಾನ

Update: 2023-01-28 15:38 GMT

ಹೊಸದಿಲ್ಲಿ,ಜ.28: ನರೇಂದ್ರ ಮೋದಿ(Narendra Modi) ಕುರಿತ ಬಿಬಿಸಿ(BBC) ಸಾಕ್ಷಚಿತ್ರವನ್ನು ನಿಷೇಧಿಸುವ ಭಾರತ ಸರಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜರ್ಮನಿಯ ವಿದೇಶಾಂಗ ಸಚಿವಾಲಯವು, ಮಾಧ್ಯಮ ಸ್ವಾತಂತ್ರ ಹಾಗೂ ವಾಕ್ ಸ್ವಾತಂತ್ರ ಅತ್ಯಂತ ಮಹತ್ವದ್ದಾಗಿದೆಯೆಂದು ಹೇಳಿದೆ.

ಭಾರತದಲ್ಲಿ ಬಿಬಿಸಿ ನಿರ್ಮಿತ ಸಾಕ್ಷ ಚಿತ್ರ ‘ ಇಂಡಿಯಾ: ದಿ ಮೋದಿ ಕ್ವಶ್ಚನ್’(India: The Modi Question) ಕುರಿತ ವಿವಾದದ ಬಗ್ಗೆ ಶುಕ್ರವಾರ ಜರ್ಮನಿಯ ವಿದೇಶಾಂಗ ಇಲಾಖೆಯ ವಕ್ತಾರ ಸ್ಟೀಫನ್ ಹಿಬರ್ಸ್ಟ್ರೆಟ್ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದು ‘‘ ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಹಾಗೂ ಸ್ವಾತಂತ್ರವನ್ನು ಗೌರವಿಸುತ್ತದೆ. ಮಾಧ್ಯಮ ಸ್ವಾತಂತ್ರ ಹಾಗೂ ವಾಕ್ ಸ್ವಾತಂತ್ರವು ಅವುಗಳಲ್ಲಿ ಸೇರಿವೆ. ಈ ಮೌಲ್ಯಗಳನ್ನು ಜರ್ಮನಿಯು ತನ್ನ ಭಾರತೀಯ ಪಾಲುದಾರರ ಜೊತೆ ಹಂಚಿಕೊಳ್ಳುತ್ತದೆ. ಜರ್ಮನಿಯು ಜಗತ್ತಿನಾದ್ಯಂತ ಈ ಮೌಲ್ಯಗಳ ಪರ ನಿಲ್ಲುತ್ತದೆ ಹಾಗೂ ನಾವು ಈ ಬಗ್ಗೆ ನಿಯಮಿತವಾಗಿ ಭಾರತದ ಜೊತೆ ಚರ್ಚಿಸುತ್ತಿರುತ್ತವೆ’’ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರಿನ್ಸ್ ಅವರ ಕೂಡಾ ಮೋದಿ ಕುರಿತ ವಿವಾದಿತ ಸಾಕ್ಷಚಿತ್ರವನ್ನು ಭಾರತ ನಿಷೇಧಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರದಂತಹ ಪ್ರಜಾತಾಂತ್ರಿಕ ವೌಲ್ಯಗಳ ಮಹತ್ದದ ಬಗ್ಗೆ ಬೆಳಕು ಚೆಲ್ಲಲು ಮತ್ತು ಭಾರತದಂತೆ ಜಗತ್ತಿನಾದ್ಯಂತ ಈ ಬಗ್ಗೆ ಚರ್ಚಿಸುವುದು ಅಗತ್ಯವಾಗಿದೆ ಎಂದವರು ಹೇಳಿದ್ದರು.

ಇದಕ್ಕೂ ಮೊದಲು ಬ್ರಿಟನ್ ಪ್ರಧಾನಿ ರಿಶಿ ಸುನಾಕ್(Rishi Sunak) ಅವರು ಮೋದಿ ಕುರಿತ ಬಿಬಿಸಿ ಸಾಕ್ಷಚಿತ್ರದಿಂದ ಅಂತರ ಕಾಯ್ದುಕೊಂಡಿದ್ದರು. ಭಾರತದ ಪ್ರಧಾನಿಯನ್ನು ಸಾಕ್ಷಚಿತ್ರದಲ್ಲಿ ಬಿಂಬಿಸಿರುವುದನ್ನು ತಾನು ಒಪ್ಪಿಕೊಳ್ಳುವುದಿಲ್ಲವೆಂದು ಅವರು ತಿಳಿಸಿದ್ದರು.

Similar News