ವಿಶ್ವಕಪ್ ಹಾಕಿ: ಅರ್ಜೆಂಟೀನಾ ಜತೆ ಜಂಟಿ 9ನೇ ಸ್ಥಾನ ಗೆದ್ದ ಭಾರತ

Update: 2023-01-29 02:36 GMT

ಭುವನೇಶ್ವರ: ಸ್ಥಾನ ನಿರ್ಧರಿಸುವ ಪ್ಲೇಆಫ್ ಪಂದ್ಯದಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಭಾರತ ಪುರುಷರ ಹಾಕಿ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಜತೆ ಜಂಟಿ ಒಂಬತ್ತನೇ ಸ್ಥಾನ ಗಳಿಸಿತು.

ಶನಿವಾರ ಇಲ್ಲಿನ ಬಿಸ್ರಾ ಮುಂಡಾ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 20 ಸಾವಿರ ಅಭಿಮಾನಿಗಳ ಎದುರು ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 5-2 ಗೋಲುಗಳಿಂದ ಮಣಿಸಿತು.

ಇದು ವಿಶ್ವಕಪ್ ಪುರುಷರ ಹಾಕಿ ಪಂದ್ಯಾವಳಿಯ ಇತಿಹಾಸದಲ್ಲೇ ಅತಿಥೇಯ ತಂಡದ ಅತ್ಯಂತ ಕಳಪೆ ಸಾಧನೆಯಾಗಿದೆ. 2010ರಲ್ಲಿ ದೆಹಲಿಯಲ್ಲಿ ಎಂಟನೇ ಸ್ಥಾನ ಗಳಿಸಿದ ಕಳಪೆ ದಾಖಲೆಯನ್ನು ಭಾರತ ಮುರಿದಂತಾಗಿದೆ. ಇದಕ್ಕೂ ಮುನ್ನ ಮಲೇಷ್ಯಾ (ಕೌಲಾಲಂಪುರ 2002) ಹಾಗೂ ಅರ್ಜೆಂಟೀನಾ (ಬ್ಯೂನಸ್ ಐರಿಸ್-1978) ಕೂಡಾ ಎಂಟನೇ ಸ್ಥಾನ ಪಡೆದಿದ್ದವು.

ಜಪಾನ್ ವಿರುದ್ಧದ ಪಂದ್ಯದಂತೆ ದಕ್ಷಿಣ ಆಫ್ರಿಕಾ ವಿರುದ್ಧ ಕೂಡಾ ಭಾರತ ತಂಡ ಪ್ರಾಬಲ್ಯ ಮೆರೆಯಿತು. ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ಹಾಗೂ 60ನೇ ನಿಮಿಷದಲ್ಲಿ ಸಮ್ಕೆಲೊ ವಿಂಬಿ ಹಾಗೂ ಮುಸ್ತಾಫಾ ಕ್ಯಾಸೀಮ್ ಮೂಲಕ ಸಮಾಧಾನಕರ ಗೋಲುಗಳನ್ನು ಗಳಿಸಿತು.

ಕಳೆದ ಪಂದ್ಯದ ಹೀರೊ ಅಭಿಷೇಕ್ ಈ ಪಂದ್ಯದಲ್ಲೂ ಭಾರತದ ಮೊದಲ ಗೋಲು ದಾಖಲಿಸಿದರು. ಜಪಾನ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿದ್ದ ಅಭಿಷೇಕ್ ಈ ಪಂದ್ಯದಲ್ಲೂ ಐದನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ಒದಗಿಸಿದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಡ್ರ್ಯಾಗ್ ಫ್ಲಿಕ್ಸ್‌ನಿಂದ 12ನೇ ನಿಮಿಷದಲ್ಲಿ ಭಾರತದ ಮುನ್ನಡೆ ಹಿಗ್ಗಿತು. 45ನೇ ನಿಮಿಷದಲ್ಲಿ ಶಂಶೇರ್ ಸಿಂಗ್ ಅವರ ಗೋಲಿನ ಮೂಲಕ ಭಾರತ 3-0 ಮುನ್ನಡೆ ಸಾಧಿಸಿತು. ಆಕಾಶ್‌ದೀಪ್ ಸಿಂಗ್ 49ನೇ ನಿಮಿಷಲ್ಲಿ 4-0 ಮುನ್ನಡೆಗೆ ಕಾರಣರಾದರೆ ತಕ್ಷಣ ಎದುರಾಳಿಗಳು ಕೂಡಾ ಒಂದು ಗೋಲು ದಾಖಲಿಸಿ ಹಿನ್ನಡೆಯನ್ನು 1-4ಕ್ಕೆ ಕುಗ್ಗಿಸಿದರು. ಸುಖಜೀತ್ ಸಿಂಗ್ 59ನೇ ನಿಮಿಷದಲ್ಲಿ ಭಾರತದ ನಾಲ್ಕು ಗೋಲುಗಳ ಮುನ್ನಡೆಗೆ ಕಾರಣರಾದರು. ಕೊನೆಯ ನಿಮಿಷದಲ್ಲಿ ಕಾಸಿಂ ಗೋಲಿನೊಂದಿಗೆ ದಕ್ಷಿಣ ಆಫ್ರಿಕಾ ಸೋಲಿನ ಅಂತರ 2-5ಕ್ಕೆ ಇಳಿಯಿತು.

Similar News