ಈ ವಾರ

Update: 2023-01-29 04:22 GMT

ಯಾರೆಷ್ಟು ಭ್ರಷ್ಟರು?

‘ಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿ’ ಎಂದು ಕಾಂಗ್ರೆಸ್ ಬೆಂಗಳೂರಿನ 300 ಕಡೆ ಪ್ರತಿಭಟನೆ ಶುರು ಮಾಡುತ್ತಿದ್ದಂತೆ ಬಿಜೆಪಿಯ ಛಲವಾದಿ ನಾರಾಯಣ ಸ್ವಾಮಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಸಿಎಂ ಬೊಮ್ಮಾಯಿ, ಸಿ.ಟಿ. ರವಿ, ಡಾ. ಸುಧಾಕರ್ ಹೇಳಿಕೆ ಮೇಲೆ ಹೇಳಿಕೆ ನೀಡಿದರು. ಬಹಳ ಗಮನ ಸೆಳೆದಿದ್ದು ಸಿದ್ದರಾಮಯ್ಯ ಮತ್ತು ಸುಧಾಕರ್ ನಡುವಿನ ಆರೋಪಗಳು. ‘‘2013-18ರ ಅವಧಿಯಲ್ಲಿ ರೂ. 35,000 ಕೋಟಿ ಆರ್ಥಿಕ ಅವ್ಯವಹಾರ ಆಗಿದೆ ಎಂದು ಸಿಎಜಿ ರಿಪೋರ್ಟ್ ಕೊಟ್ಟಿದೆ. ರೂ. 1,000 ಕೋಟಿ ಹೈಕಮಾಂಡ್ ಹಣ ಕೊಡುವುದಕ್ಕೆ ಅಯವ್ಯಯದಲ್ಲಿ ಮೀಸಲಿಟ್ಟಿದ್ದರೇ?’’ ಎಂದು ಸುಧಾಕರ್ ಪ್ರಶ್ನೆ ಮಾಡಿದರೆ, ‘‘ಸುಧಾಕರ್ ರಾಜ್ಯದಲ್ಲೇ ನಂ.1 ಭ್ರಷ್ಟ ಸಚಿವ, ಕೋವಿಡ್ ಸಂದರ್ಭ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ’’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚುನಾವಣೆ ಹತ್ತಿರವಾಗುತ್ತಿರುವಾಗ ಮೊದಲ ಬಾರಿಗೆ ಧಾರ್ಮಿಕ, ಭಾವನಾತ್ಮಕ ವಿಷಯ ಬಿಟ್ಟು ಜನರಿಗೆ ಸಂಬಂಧಿಸಿದ ವಿಷಯಾಧಾರಿತ ಚರ್ಚೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಗಮನಿಸಬೇಕಿರುವುದು ಏನೆಂದರೆ, ಈಗ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವ ಸುಧಾಕರ್ ಒಂದು ಕಾಲದಲ್ಲಿ, ಸಿದ್ದರಾಮಯ್ಯ ಬಣದಲ್ಲಿ ಆಪ್ತರಾಗಿದ್ದವರು. ಈಗ ಅವರು ಎತ್ತಿರುವ ಡೈರಿ ವಿಚಾರ ನಡೆಯುವಾಗ ಕಾಂಗ್ರೆಸ್‌ನಲ್ಲೇ ಇದ್ದರು. ಆಗ ಯಾಕೆ ಮಾತನಾಡಲಿಲ್ಲ? ಹಾಗೂ ಸುಧಾಕರ್ ಭ್ರಷ್ಟ ಎಂದು ಆಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಗೊತ್ತಿರಲಿಲ್ಲವೆ?

ಇನ್ನು ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ ಎನ್ನಲಾಗುವ ಭ್ರಷ್ಟಾಚಾರದ ಬಗ್ಗೆ ಬಿಜೆಪಿ 3 ವರ್ಷದಿಂದ ಏನು ಮಾಡುತ್ತಿತ್ತು? ಚುನಾವಣೆ ಹತ್ತಿರವಾಗುತ್ತಿದ್ದಂತೆ ಇದೆಲ್ಲ ಶುರುವಾಗಿದೆ. ರಾಜಕೀಯದವರನ್ನು ಜನ ನಂಬುವ ಕಾಲ ಹೊರಟುಹೋಗಿದೆ.

ಡಿಕೆಶಿ v/s ಜಾರಕಿಹೊಳಿ

ನಮಗೆ ಮತ ಹಾಕಿ, ಪ್ರತಿ ವೋಟಿಗೆ 6,000 ರೂ. ಕೊಡುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ ವೀಡಿಯೊ ವೈರಲ್ ಆಯಿತು. ಕಾಂಗ್ರೆಸ್ ದೂರು ನೀಡಿತು. ಈ ವಿಚಾರದ ಮುಂದುವರಿದ ಭಾಗ ಡಿ.ಕೆ. ಶಿವಕುಮಾರ್ ಮತ್ತು ಜಾರಕಿಹೊಳಿ ನಡುವಿನ ಮಾತಿನ ಕದನ. ‘‘ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದೇ ಶಿವಕುಮಾರ್’’ ಎಂದು ಜಾರಕಿಹೊಳಿ ಗುಡುಗಿದರೆ, ‘‘ನಮ್ಮ ಶಾಸಕರನ್ನು ಆಪರೇಷನ್ ಕಮಲ ಮಾಡಿ ಹಾಳು ಮಾಡಿದ್ದೇ ಅವನು’’ ಎಂದು ಡಿಕೆಶಿ ಪರಸ್ಪರ ಏಕವಚನದಲ್ಲೇ ಬೈದಾಡಿಕೊಂಡರು.

ಚುನಾವಣೆಯಲ್ಲಿ ಹಣ ಹಂಚುವುದೇ ಅಕ್ರಮ. ಅಂಥದ್ದರಲ್ಲಿ ಬಹಿರಂಗ ಸಭೆಯಲ್ಲಿ ಇಷ್ಟು ಕೊಡುತ್ತೇವೆ ಎಂದು ಹೇಳುತ್ತಾರೆಂದರೆ ಅದಕ್ಕೆ ನಮ್ಮ ದುರ್ಬಲ ಕಾನೂನುಗಳೇ ಕಾರಣ. ಹಣ ಇದ್ದರೆ ಏನು ಬೇಕಾದರೂ ಮಾಡುತ್ತೇವೆ ಎಂಬ ರಾಜಕೀಯ ನಾಯಕರ ಕೆಟ್ಟ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕ

ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು 23ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಿಂದ ಬಂದಿರುವ ತಾಯಂದಿರು ಫ್ರೀಡಂ ಪಾರ್ಕ್‌ನಲ್ಲೇ ಹಗಲು ರಾತ್ರಿ ಕಳೆಯುತ್ತಿದ್ದಾರೆ. ಅವರನ್ನು ಸರಕಾರ ಮಾತುಕತೆಗೆ ಕರೆದಿಲ್ಲ. ಹೇಳಿದ ಎಲ್ಲ ಕೆಲಸ ಮಾಡಿ, ಸರಕಾರ ಕೊಡೋ ಬಿಡಿಗಾಸು ಎಣಿಸುವ ಈ ತಾಯಂದಿರ ಕೂಗು ಕೇಳಿಸಿಕೊಳ್ಳುವ ಸೌಜನ್ಯವೂ ಈ ಸರಕಾರಕ್ಕಿಲ್ಲವೇ? ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಇವರು ಮಾಡಿದ ತ್ಯಾಗ ಕಡಿಮೆಯೆ? ಕನಿಷ್ಠ ನಿಮ್ಮ ಸಮಸ್ಯೆ ಏನೆಂದು ಕೇಳುವ ವ್ಯವಧಾನವೂ ಸರಕಾರಕ್ಕಿಲ್ಲ. ರಾತ್ರಿಯಡೀ ಚಳಿಯಲ್ಲೇ ಕಳೆಯುತ್ತಿದ್ದಾರೆ. ಅದರ ಬಗ್ಗೆ ಕಾಳಜಿ ಇಲ್ಲ. ಮಹಿಳಾ ಪರ ಸರಕಾರ, ‘ಬೇಟಿ ಬಚಾವೋ ಬೇಟಿ ಪಢಾವೋ’, ಮಹಿಳಾ ಸಬಲೀಕರಣ ಎಂದೆಲ್ಲ ಬಿಜೆಪಿ ಮಾತಾಡುವುದು ಹಾಸ್ಯಾಸ್ಪದ. ಪ್ರತಿಪಕ್ಷಗಳಾದರೂ ಇವರ ಕಷ್ಟ ಕೇಳಿದವೇ ಎಂದರೆ ಅದೂ ಇಲ್ಲ.

ಬಿಬಿಸಿ ಸಾಕ್ಷಚಿತ್ರದ ಸದ್ದು

ಬಿಬಿಸಿ ಈ ವಾರ ಭಾರತಕ್ಕೆ ಸಂಬಂಧಿಸಿದ ಎರಡು ಸಾಕ್ಷ ಚಿತ್ರ ಬಿಡುಗಡೆ ಮಾಡಿದೆ. ‘ಇಂಡಿಯಾ ದಿ ಮೋದಿ ಕ್ವಶ್ಚನ್’ ಹೆಸರಿನಲ್ಲಿ ಮೊದಲ ಭಾಗ 17ರಂದು ಬಿಡುಗಡೆಯಾಯಿತು. 2002ರ ಗುಜರಾತ್ ಹತ್ಯಾಕಾಂಡದ ಬಗೆಗಿನ ಸಾಕ್ಷಚಿತ್ರದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಬಗ್ಗೆ ವಿವರಗಳಿವೆ. ಹತ್ಯಾಕಾಂಡದ ಬಗ್ಗೆ ಅಂದಿನ ಬ್ರಿಟನ್ ಸರಕಾರ ನಡೆಸಿದ್ದ ಉನ್ನತ ಮಟ್ಟದ ತನಿಖೆಯ ವಿವರಗಳು ಇದೇ ಮೊದಲ ಬಾರಿ ಬಹಿರಂಗವಾಗಿವೆ. ಭಾಗ ಎರಡರಲ್ಲಿ 2019ರ ನಂತರ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಸಿಎಎ, ಎನ್‌ಆರ್‌ಸಿ ಬಗ್ಗೆ ಕೇಂದ್ರೀಕರಿಸಿದೆ. ಮುಖ್ಯವಾಗಿ ನರೇಂದ್ರ ಮೋದಿ ಅವರ ಧೋರಣೆ ಹಾಗೂ ಅವರು ಅಧಿಕಾರಕ್ಕೆ ಬಂದ ಮೇಲೆ ಆಗುತ್ತಿರುವ ಕೋಮು ಧ್ರುವೀಕರಣವನ್ನು ಪ್ರಶ್ನಿಸಲಾಗಿದೆ.

ಮೊದಲ ಭಾಗ ಬಿಡುಗಡೆಯಾಗುತ್ತಿದ್ದಂತೆ ಭಾರತ ಸರಕಾರ ವಿರೋಧ ವ್ಯಕ್ತಪಡಿಸಿ ಅದನ್ನು ನಿಷೇಧ ಮಾಡಿತು. ಆದರೂ ಕೆಲವು ವಿವಿಗಳಲ್ಲಿ ಪ್ರದರ್ಶನ ಮಾಡಲಾಯಿತು. ಕೇರಳದಂತಹ ರಾಜ್ಯಗಳಲ್ಲೂ ಅಲ್ಲಲ್ಲಿ ಪ್ರದರ್ಶನ ನಡೆಯಿತು. ನಿಷೇಧಿಸಿದ್ದಕ್ಕೋ ಏನೋ ವಾಟ್ಸ್‌ಆ್ಯಪ್, ಟೆಲಿಗ್ರಾಮ್‌ಗಳಲ್ಲೂ ಈ ಡಾಕ್ಯುಮೆಂಟರಿ ಸಾಕಷ್ಟು ಜನರಿಗೆ ತಲುಪಿತು. ಒಪ್ಪುವುದು, ತಿರಸ್ಕರಿಸುವುದು ಅವರವರ ಆಯ್ಕೆ. ಹಾಗೆಯೇ ನೋಡುವ ಆಯ್ಕೆಯನ್ನು ಕಾಪಾಡಬೇಕು. ಅಂಗೈಯಲ್ಲೇ ಜಗತ್ತು ಇರುವ ಕಾಲದಲ್ಲಿ ಭಾರತದಲ್ಲಿ ನಿಷೇಧ ಮಾಡಿದ ಮಾತ್ರಕ್ಕೆ ಅಳಿಸಿಹಾಕಲಾಗುವುದಿಲ್ಲ ಮತ್ತು ಇತಿಹಾಸ ಬದಲಿಸಲಾಗುವುದಿಲ್ಲ.

ಹಿಂಡನ್ ಬರ್ಗ್ ವರದಿ

ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್‌ನ 32,000 ಪದಗಳ ಒಂದೇ ಒಂದು ವರದಿ ದೈತ್ಯ ಅದಾನಿ ಸಾಮ್ರಾಜ್ಯವನ್ನು ನಡುಗಿಸಿ ಹಾಕಿದೆ. ಕಳೆದ ಕೆಲವು ವರ್ಷಗಳಿಂದ ಷೇರಿನ ಬೆಲೆ ಒಂದೇ ಸಮನೆ ಏರಿಕೆ ಕಾಣುತ್ತ, ಎಲ್ಲಿಲ್ಲದ ಲಾಭವನ್ನು ಅನುಭವಿಸಿದ್ದ ಅದಾನಿ ಸಮೂಹದ ಕಂಪೆನಿಗಳು ಕೇವಲ 2 ದಿನಗಳಲ್ಲಿ 4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೌಲ್ಯವನ್ನು ಕಳೆದುಕೊಂಡು ತತ್ತರಿಸಿವೆ. ಅದಾನಿ ಸಮೂಹ ಕಳೆದ ಕೆಲವು ದಶಕಗಳಿಂದಲೇ ಸ್ಟಾಕ್ ತಿರಿಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ನಡೆಸಿರುವುದಕ್ಕೆ ಪುರಾವೆ ನಮ್ಮಲ್ಲಿದೆ ಎಂದು ಹಿಂಡನ್ ಬರ್ಗ್ ಹೇಳಿದೆ. ಹಿಂಡನ್ ಬರ್ಗ್ ವರದಿ ಹೊರಬೀಳುವ ಮುನ್ನ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಇದೀಗ ಏಕಾಏಕಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವರದಿ ವಿರುದ್ಧ ಕಾನೂನು ಕ್ರಮದ ಬಗ್ಗೆ ಅದಾನಿ ಗ್ರೂಪ್ ಎಚ್ಚರಿಸಿದ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಹಿಂಡನ್ ಬರ್ಗ್, ಬೇಕಾದರೆ ಅಮೆರಿಕದಲ್ಲೂ ಕೇಸ್ ಹಾಕಿ ಎಂದು ಸವಾಲು ಹಾಕಿದೆ. 2014ರಿಂದ ಈಚೆಗೆ ಅದಾನಿ ಸಂಪತ್ತಿನಲ್ಲಾದ ಅಸಹಜ ಏರಿಕೆ ಎಲ್ಲರಲ್ಲೂ ಪ್ರಶ್ನೆ ಮೂಡಿಸಿತ್ತು. ಭಾರತದ ಬಹುತೇಕ ಮಾದ್ಯಮಗಳು ಆಳುವವರ ಮರ್ಜಿಗೆ ಬಿದ್ದಿರುವಾಗ ವಿದೇಶದ ಮಾದ್ಯಮಗಳು ಬಡಿದೆಬ್ಬಿಸಿವೆ.

ಮಹಿಳಾ ಐಪಿಎಲ್

ಜನಪ್ರಿಯ ಟಿ20 ಕ್ರಿಕೆಟ್‌ನ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮಹಿಳಾ ಐಪಿಎಲ್ ಅನ್ನು ಆರಂಭಿಸುತ್ತಿದೆ. ಹರಾಜು ಪ್ರಕ್ರಿಯೆ ಪುರ್ಣಗೊಂಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 4,669.99 ಕೋಟಿ ರೂ. ಆದಾಯ ಗಳಿಸಿದೆ.

1,289 ಕೋಟಿ ರೂ.ಗೆ ಅಹಮದಾಬಾದ್ ತಂಡ ಖರೀದಿಸಿದ ಅದಾನಿ ಸ್ಪೋರ್ಟ್‌ಲೈನ್ ಹರಾಜಿನಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿಲ್ಲಿ ಕ್ಯಾಪಿಟಲ್ಸ್ ಐಪಿಎಲ್ ತಂಡಗಳು ಕ್ರಮವಾಗಿ ರೂ. 912 ಕೋಟಿ, ರೂ. 901 ಕೋಟಿ ಹಾಗೂ ರೂ. 810 ಕೋಟಿಗೆ ಮಹಿಳಾ ತಂಡಗಳನ್ನು ಖರೀದಿಸಿವೆ. ಐದು ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ದಿಲ್ಲಿ ಹಾಗೂ ಲಕ್ನೊ ತಂಡಗಳು ಕಣಕ್ಕಿಳಿಯಲಿವೆ.

ಪಠಾಣ್ ಯಶಸ್ಸು

ಶಾರುಕ್, ದೀಪಿಕಾ ನಟನೆಯ ಪಠಾಣ್ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿತ್ತು. ಚಿತ್ರ ನಿಷೇಧಿಸಬೇಕು ಎಂದೂ ಬಲಪಂಥೀಯರು, ಬಿಜೆಪಿ ಬೆಂಬಲಿಗರು ಆಗ್ರಹಿಸಿದ್ದರು. ಹಲವು ಕಡೆ ಪ್ರತಿಭಟನೆ ನಡೆದಿತ್ತು. ಎಲ್ಲ ಮುಗಿದು ಚಿತ್ರ ಬಿಡುಗಡೆ ಆಗಿದೆ. ಭರ್ಜರಿ ಯಶಸ್ಸು ಕಾಣುತ್ತಿರುವ ಪಠಾಣ್ ಹಲವು ದಾಖಲೆ ಬರೆದಿದೆ. ವಿರೋಧಿಸಿದ್ದವರಿಗೆ ಚಿತ್ರದ ಯಶಸ್ಸೇ ಉತ್ತರಿಸಿದೆ. ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ 57 ಕೋಟಿ ರೂಪಾಯಿ ಹಾಗೂ ವಿಶ್ವದಾದ್ಯಂತ ಒಟ್ಟು 106 ಕೋಟಿ ರೂ. ಕಲೆಕ್ಷನ್ ಮಾಡಿರುವ ‘ಪಠಾಣ್’ ಈ ದಾಖಲೆ ಮಾಡಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡೇ ದಿನಗಳಲ್ಲಿ 231 ಕೋಟಿಗೂ ಹೆಚ್ಚು ಸಂಪಾದಿಸಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ನಾಲ್ಕು ವರ್ಷದ ಬಳಿಕ ಶಾರುಕ್ ಖಾನ್‌ಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಕಲೆ ಮತ್ತು ಸಾಹಿತ್ಯ ರಾಜಕೀಯದಿಂದ ಹೊರಗೆ ಇರಬೇಕು, ರಾಜಕೀಯ ಮತ್ತು ಧರ್ಮದ ಕನ್ನಡಿಯಲ್ಲಿ ಸಿನೆಮಾ ನೋಡಿದಾಗ ಸಮಸ್ಯೆ ಆಗುತ್ತದೆ, ಜನರಿಗೆ ಇಷ್ಟವಾಗುವ ಚಿತ್ರವೊಂದರ ಯಶಸ್ಸನ್ನು ಕೆಲವೇ ಸಂಖ್ಯೆಯ ಗುಂಪು ತಡೆಯಲಾಗದು ಎನ್ನುವುದು ಮತ್ತೆ ಸಾಬೀತಾಗಿದೆ.

Similar News