ಭಾರತ್ ಜೋಡೊ ಯಾತ್ರೆ ಸೋಮವಾರ ಅಂತ್ಯ: ಸಮಾರಂಭದಲ್ಲಿ ಭಾಗವಹಿಸಲಿರುವ ವಿಪಕ್ಷಗಳು ಯಾವುವು ಗೊತ್ತೇ?

Update: 2023-01-29 05:05 GMT

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಸೋಮವಾರ ನಡೆಯಲಿರುವ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಮಾನ ಮನಸ್ಕ 12 ವಿರೋಧ ಪಕ್ಷಗಳು ಭಾಗವಹಿಸಲಿವೆ ಎಂದು ಮೂಲಗಳು ಇಂದು ತಿಳಿಸಿವೆ.

ಸಮಾರಂಭಕ್ಕೆ 21 ಪಕ್ಷಗಳನ್ನು ಆಹ್ವಾನಿಸಲಾಗಿತ್ತು, ಆದರೆ ಕೆಲವು ಪಕ್ಷಗಳು  ಭದ್ರತೆಯ ಕಾರಣದಿಂದ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. 

ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ  ಟಿಡಿಪಿ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿವೆ.

ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಸಂಯುಕ್ತ), ಉದ್ಧವ್ ಠಾಕ್ರೆ ಅವರ ಶಿವಸೇನೆ, ಸಿಪಿಎಂ, ಸಿ.ಪಿ.ಐ. , ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಹಾಗೂ  ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶ್ರೀನಗರದಲ್ಲಿ ಸಮಾರಂಭದಲ್ಲಿ ಭಾಗವಹಿಸಲಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಸಹೋದರ ರಾಹುಲ್ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಸೇರಿಕೊಂಡರು.   ಭದ್ರತಾ ಉಲ್ಲಂಘನೆಯ ಆರೋಪದ ಕಾರಣ ಯಾತ್ರೆಯು ಶುಕ್ರವಾರ ರದ್ದುಗೊಂಡ ನಂತರ ಆವಂತಿಪೋರಾದ ಚೆರ್ಸೂ ಗ್ರಾಮದಿಂದ ಪುನರಾರಂಭವಾಯಿತು. ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಅವಂತಿಪೋರಾದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕನ್ಯಾಕುಮಾರಿಯಿಂದ ಕಾಶ್ಮೀರದ ತನಕದ ಭಾರತ್ ಜೋಡೊ  ಯಾತ್ರೆಯು ಸೆಪ್ಟೆಂಬರ್ 7 ರಂದು ದೇಶದ ದಕ್ಷಿಣ ತುದಿಯಿಂದ ಆರಂಭವಾಯಿತು. ಸುಮಾರು 145 ದಿನಗಳಲ್ಲಿ 3,970 ಕಿಮೀ, 12 ರಾಜ್ಯಗಳು ಹಾಗೂ  ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಕೊನೆಗೊಳ್ಳಲಿದೆ.

Similar News