ವಿಮಾನ ಹಾರಾಟದಲ್ಲಿದ್ದಾಗ ತುರ್ತು ನಿರ್ಗಮನದ ಕವರ್ ತೆಗೆಯಲು ಯತ್ನಿಸಿದ ಪ್ರಯಾಣಿಕ; ಪ್ರಕರಣ ದಾಖಲು

Update: 2023-01-29 09:56 GMT

ಹೊಸದಿಲ್ಲಿ: ಇಂದು ನಾಗ್ಪುರದಿಂದ ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನವು ಹಾರಾಟದಲ್ಲಿದ್ದಾಗಲೇ  ಹಾಗೂ  ಲ್ಯಾಂಡಿಂಗ್‌ಗೆ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನದ ಕವರ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ ಎಂದು ಇಂಡಿಗೋ ಏರ್‌ಲೈನ್ಸ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ತಿಳಿಸಿದೆ.

ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್‌ಗೆ ಎಚ್ಚರಿಕೆ ನೀಡಿದರು ಹಾಗೂ  ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.

ವಿಮಾನದ ಸುರಕ್ಷಿತ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಇಂಡಿಗೋ ಹೇಳಿಕೊಂಡಿದೆ ಹಾಗೂ  ತುರ್ತು ನಿರ್ಗಮನದ ಹೊದಿಕೆಯನ್ನು  ಅನಧಿಕೃತವಾಗಿ ಹಾನಿ ಮಾಡಿದ್ದಕ್ಕಾಗಿ ಪ್ರಯಾಣಿಕನ ವಿರುದ್ಧ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ-ತಿರುಚಿರಾಪಳ್ಳಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತುರ್ತು ಬಾಗಿಲು ತೆರೆದಿದ್ದಾರೆ ಎಂದು ರಾಷ್ಟ್ರೀಯ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬಹಿರಂಗಪಡಿಸಿದ ದಿನಗಳ ನಂತರ ಈ ಘಟನೆ ನಡೆದಿದೆ. ಆದರೆ,ಆಗ ವಿಮಾನ ಇನ್ನೂ ಟೇಕಾಫ್ ಆಗದ  ಕಾರಣ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ.

 ತುರ್ತು ಬಾಗಿಲು ತೆರೆದಿರುವ  ಪ್ರಯಾಣಿಕ ಸಂಸದ ತೇಜಸ್ವಿ ಸೂರ್ಯ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನಂತರ ದೃಢಪಡಿಸಿದರು.  ಸೂರ್ಯ ಅವರು "ತಪ್ಪಾಗಿ" ಬಾಗಿಲು ತೆರೆದರು ಹಾಗೂ  ಅದಕ್ಕಾಗಿ ಕ್ಷಮೆಯಾಚಿಸಿದರು ಎಂದು ಸಿಂಧಿಯಾ  ಹೇಳಿದರು.

Similar News