ದಾಖಲೆ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಜೊಕೊವಿಕ್

Update: 2023-01-29 13:39 GMT

ಮೆಲ್ಬೋರ್ನ್, ಜ.29: ಸರ್ಬಿಯದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್ ದಾಖಲೆಯ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗ್ರೀಕ್‌ನ ಸ್ಟೆಫನೊಸ್ ಸಿಟ್ಸಿಪಾಸ್‌ರನ್ನು 6-3, 7-6(4), 7-6(5) ಸೆಟ್‌ಗಳ ಅಂತರದಿಂದ ಮಣಿಸಿದ ಜೊಕೊವಿಕ್ ಈ ಸಾಧನೆ ಮಾಡಿದರು. ಸಿಟ್ಸಿಪಾಸ್‌ಗೆ ಚೊಚ್ಚಲ ಪ್ರಶಸ್ತಿಯನ್ನು ನಿರಾಕರಿಸಿದರು.

 ಮತ್ತೊಮ್ಮೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಜೊಕೊವಿಕ್ ವೃತ್ತಿಜೀವನದಲ್ಲಿ 22ನೇ ಗ್ರಾನ್‌ಸ್ಲಾಮ್ ಟೂರ್ನಿ ಜಯಿಸಿದ ಸಾಧನೆ ಮಾಡಿದರು. ಈ ಮೂಲಕ ನಡಾಲ್ ಅವರ ಗರಿಷ್ಠ ಗ್ರಾನ್‌ಸ್ಲಾಮ್ ಪ್ರಶಸ್ತಿ ದಾಖಲೆ(22)ಯನ್ನು ಸರಿಗಟ್ಟಿದರು.

ಕಳೆದ ವರ್ಷ ಕೋವಿಡ್-19 ವ್ಯಾಕ್ಸಿನ್ ತೆಗೆದುಕೊಳ್ಳದ ಕಾರಣಕ್ಕೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯದೆ ಆಸ್ಟ್ರೇಲಿಯದಿಂದ ಗಡಿಪಾರಾಗಿದ್ದ ಜೊಕೊವಿಕ್ ಈ ಬಾರಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದರು. ಇದೀಗ ಮತ್ತೊಮ್ಮೆ ‘ಮೆಲ್ಬೋರ್ನ್ ಕಿಂಗ್’ ಆಗಿ ಹೊರಹೊಮ್ಮಿರುವ ಜೊಕೊವಿಕ್ ವಿಶ್ವದ ನಂ.1 ರ್ಯಾಂಕ್ ಕಬಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

24ರ ಹರೆಯದ ಸಿಟ್ಸಿಪಾಸ್ ವೃತ್ತಿಜೀವನದಲ್ಲಿ ಆಡಿರುವ ತನ್ನ ಎರಡನೇ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಜೊಕೊವಿಕ್ ವಿರುದ್ಧ ಎರಡನೇ ಬಾರಿ ಸೋಲುಂಡಿದ್ದಾರೆ. ಸಿಟ್ಸಿಪಾಸ್ ಈ ಮೊದಲು 2021ರ ಫ್ರೆಂಚ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಆಗ ಅವರು ಎರಡು ಸೆಟ್‌ಗಳನ್ನು ಜಯಿಸಿದ್ದರೂ 6-7 (6), 2-6, 6-3, 6-2, 6-4 ಸೆಟ್‌ಗಳ ಅಂತರದಿಂದ ಜೊಕೊವಿಕ್‌ಗೆ ಸೋತಿದ್ದರು.
 

Similar News