ಎಂಬಿಎ ಸೇರಿ ಸ್ನಾತಕೊತ್ತರ ಕೋರ್ಸ್‍ಗಳಿಗೆ ಶುಲ್ಕ ನಿಗದಿಪಡಿಸಿದ ಸರಕಾರ

‘ಖಾಸಗಿ ಕಾಲೇಜುಗಳು’ ಸರಕಾರಿ ಕೋಟಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ

Update: 2023-01-29 14:16 GMT

ಬೆಂಗಳೂರು: ಎಂಬಿಎ, ಎಂಸಿಎ, ಎಂಇ ಹಾಗೂ ಎಂ.ಟೆಕ್ ಕೋರ್ಸ್‍ಗಳಿಗೆ ಸರಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವರಿಗೆ ಸರಕಾರವು ಶುಲ್ಕವನ್ನು ವಿಧಿಸಿದ್ದು, ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ಪ್ರಸಕ್ತ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‍ಗಳಾದ ಎಂಬಿಎ, ಎಂಸಿಎ, ಎಂಇ ಹಾಗೂ ಎಂ.ಟೆಕ್ ಕೋರ್ಸ್‍ಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಖಾಸಗಿ ಕಾಲೇಜುಗಳು ಸರಕಾರಿ ಕೋಟಾದಲ್ಲಿ ಪ್ರವೇಶ ಪಡೆದವರಿಗೂ ಕಾನೂನುಬಾಹಿರವಾಗಿ ಹಣ ವಸೂಲಿ ಮಾಡಲು ಮುಂದಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಖಾಸಗಿ ಸಂಸ್ಥೆಗಳಲ್ಲಿ ಎಂಬಿಎ ಮತ್ತು ಎಂಸಿಎ ಕೋರ್ಸ್‍ಗಳಿಗೆ 55 ಸಾವಿರ ರೂ., ಎಂಇ ಮತ್ತು ಎಂಟೆಕ್ ಕೋರ್ಸ್‍ಗಳಿಗೆ 66 ಸಾವಿರ ರೂ. ವಾರ್ಷಿಕ ಬೋಧನಾ ಶುಲ್ಕವಾಗಿ ಪಾವತಿ ಮಾಡಬೇಕು. ವಿದ್ಯಾರ್ಥಿಗಳು ಈ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪಾವತಿ ಮಾಡಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ವರದಿ ಮಾಡಿಕೊಂಡ ಒಂದು ತಿಂಗಳ ಬಳಿಕ ಆಯಾ ಕಾಲೇಜಿಗೆ ಶುಲ್ಕವನ್ನು ವರ್ಗಾಹಿಸುತ್ತದೆ ಎಂದು ತಿಳಿಸಿದೆ. 

ಖಾಸಗಿ ಕಾಲೇಜುಗಳು ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಗಳು ಸರಕಾರಿ ಕೋಟಾದಲ್ಲಿ ಪ್ರವೇಶವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಇತರೆ ಶುಲ್ಕಗಳನ್ನು ಸಂಗ್ರಹಿಸುವಂತಿಲ್ಲ. ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ಹಣವನ್ನು ಪಾವತಿ ಮಾಡುವಂತೆ ಬೇಡಿಕೆ ಇಟ್ಟಲ್ಲಿ, ಸರಕಾರಕ್ಕೆ ದೂರು ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಎಂಬಿಎ ಕೋರ್ಸಿನ ಒಟ್ಟು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ‘ಸ್ನಾತಕೋತ್ತರ ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ(ಪಿಜಿಸಿಇಟಿ)ಯಲ್ಲಿ’ ವಿದ್ಯಾರ್ಥಿಗಳು ಪಡೆಯುವ ರ್ಯಾಂಕಿಂಗ್ ಆಧಾರದಲ್ಲಿ ಕೆಇಎ ಆನ್‍ಲೈನ್ ಕೌನ್ಸಿಲಿಂಗ್ ನಡೆಸಿ, ಸೀಟು ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.50ರಷ್ಟು ಸೀಟುಗಳನ್ನು ಆಯಾ ಕಾಲೇಜಿನ ಆಡಳಿತ ಮಂಡಳಿಯು ಹಂಚಿಕೆ ಮಾಡುತ್ತದೆ. 

ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಆನ್‍ಲೈನ್ ಮೂಲಕ ಪ್ರವೇಶ ನೀಡಬೇಕು ಎಂದು ಕಡ್ಡಾಯವಾಗಿಲ್ಲ. ಆದರೆ ನ್ಯಾಯಾಯುತವಾಗಿ, ಪಾರದರ್ಶಕವಾಗಿ ಸೀಟುಗಳನ್ನು ಹಂಚಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಬೇಕು ಎಂದು ತಿಳಿಸಿದೆ. ಸರಕಾರಿ ಕೋಟದಲ್ಲಿ ಪ್ರವೇಶ ನೀಡಲು ಕೌನ್ಸಿಲಿಂಗ್ ಬಳಿಕ ಭರ್ತಿಯಾಗದೇ ಬಾಕಿ ಉಳಿದಿರುವ ಸೀಟುಗಳನ್ನು ಆಯಾ ಸಂಸ್ಥೆಯ ಆಡಳಿತ ಮಂಡಳಿಗಳಿಗೆ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. 

ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲ ಅನುದಾನಿತ ಕೋರ್ಸ್‍ಗಳ ಎಲ್ಲ ಸೀಟುಗಳನ್ನು ಸರಕಾರಿ ಸೀಟಿಗಳು ಎಂದು ಪರಿಗಣಿಸಿ ಭರ್ತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. 

ಇನ್ನು ಸರಕಾರಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ ಕೋರ್ಸ್‍ಗಳಿಗೆ ವಾರ್ಷಿಕವಾಗಿ 20 ಸಾವಿರ ರೂ.ಗಳ ಬೋಧನಾ ಶುಲ್ಕವನ್ನು ನಿಗದಿ ಮಾಡಲಾಗಿದೆ. 

ಕರ್ನಾಟಕ ಖಾಸಗಿ ಸ್ನಾತಕೋತ್ತರ ಪದವಿ ಕಾಲೇಜುಗಳ ಸಂಘದವರು ಬೆಂಗಳೂರಿನಲ್ಲಿ ಒಂದು ದೂರು ಪರಿಹಾರ ಕೇಂದ್ರವನ್ನು ಸ್ಥಾಪಿಸಿ, ಯಾವುದೇ ಸಂಸ್ಥೆ, ವಿದ್ಯಾರ್ಥಿಯಿಂದ ಸ್ವೀಕೃತವಾಗುವ ದೂರುಗಳನ್ನು ಪರಿಶೀಲಿಸಿ ಪರಿಹರಿಸಬೇಕು. ಒಂದು ವೇಳೆ ದೂರು ಪರಿಹಾರ ಕೇಂದ್ರವು ಸ್ವೀಕೃತವಾಗುವ ದೂರುಗಳನ್ನು ಪರಿಹರಿಸಲು ವಿಫಲವಾದಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸರಕಾರವು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಎಚ್ಚರಿಕೆ ನೀಡಲಾಗಿದೆ.

Similar News