ಕುಂದಾಪುರ: ಸಮುದಾಯದಿಂದ ಸಾರಾ ಅಬೂಬಕ್ಕರ್‌ಗೆ ನುಡಿ ನೆನಪು

Update: 2023-01-29 16:37 GMT

ಕುಂದಾಪುರ: ಸಾರಾ ಅವರ ಪ್ರಗತಿಪರ ಚಿಂತನೆಗಳು ತನ್ನ ಜೀವನ ದಲ್ಲಿ ಹಲವಾರು ರೀತಿಯಲ್ಲಿ ಪ್ರಭಾವ ಬೀರಿವೆ. ಹೀಗೆ ನಮ್ಮ ಸಮುದಾಯದ ಹಲವರಲ್ಲಿ ಇದೇ ರೀತಿಯ ಪ್ರಭಾವ ಬೀರಬೇಕಾದ ಅಗತ್ಯತೆ ಇದೆ ಎಂದು ಹಾಲಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ರೋಶನ್ ಬೇಬಿ ಹೇಳಿದ್ದಾರೆ.

ಸಮುದಾಯ  ಸಾಂಸ್ಕೃತಿಕ ಸಂಘಟನೆ ಕುಂದಾಪುರ ಹಾಗೂ ಕುಂದಾಪುರದ ಸ್ಥಳೀಯ ವಾರಪತ್ರಿಕೆ ಜನಪ್ರತಿನಿಧಿ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡ ನಾಡೋಜಾ ಡಾ.ಸಾರಾ ಅಬೂಬಕ್ಕರ್ ಅವರ ನುಡಿ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಶನ್ ಬೇಬಿ ಅವರು ತಮ್ಮನ್ನು ಒಳಗೊಂಡಂತೆ ಮುಸ್ಲಿಂ ಸಮುದಾಯದ ಮಹಿಳಾ ಲೇಖಕಿಯರು ಹಾಗೂ ಎಲ್ಲಾ ವರ್ಗದ ಲೇಖಕ- ಲೇಖಕಿಯರ ಮೇಲೆ ಸಾರಾ ಅಬೂಬಕ್ಕರ್ ಅವರ ಬರಹ ಬದುಕಿನ ಪ್ರಭಾವದ ಕುರಿತು ಮಾತನಾಡಿದರು.

ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಬ್ದುಲ್ ರವೂಫ್ ಅವರು ಮಾತನಾಡಿ, ಸಾರಾ ಅವರ ಜೀವನ, ವ್ಯಕ್ತಿತ್ವ, ಕೃತಿಗಳು, ಪ್ರಶಸ್ತಿಗಳು ಹಾಗೂ ಸಾಧನೆಗಳನ್ನು ಅವರ ಜೀವನದ ಘಟನೆಗಳ ಉದಾಹರಣೆಗಳ ಜೊತೆಗೆ ವಿಶ್ಲೇಷಿಸಿದರು.

ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದ ಶಿಕ್ಷಕಿ ಅಶ್ವಿನಿ ಕನ್ನಂತ ಅವರು ಸಾರಾ ಅವರ ‘ನಿಯಮ ನಿಯಮಗಳ ನಡುವೆ’ ಕಥೆಯನ್ನು ವಾಚಿಸಿದರು. ಜನಪ್ರತಿನಿಧಿ ಪತ್ರಿಕಾ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಕುಂದಾಪುರದಲ್ಲಿ ಸಾರಾ ಅಬೂಬಕ್ಕರ್ ಅವರು ಭಾಗವಹಿಸಿರುವ ಕಾರ್ಯಕ್ರಮದ ಬಗೆಗಿನ ನೆನಪು ಹಂಚಿಕೊಂಡರು.

ಕುಂದಾಪುರ ಸಮುದಾಯ ಸಾಂಸ್ಕೃತಿಕ  ಸಂಘಟನೆಯ ಅಧ್ಯಕ್ಷ ಡಾ. ಸದಾನಂದ ಬೈಂದೂರು ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಕಾರ್ಯದರ್ಶಿ ವಾಸುದೇವ ಗಂಗೇರ ನಿರೂಪಿಸಿದರು. ಉಪಾಧ್ಯಕ್ಷ ಸುಧಾಕರ ಕಾಂಚನ್ ವಂದಿಸಿದರು. ಕುಂದಾಪುರ ಸಮುದಾಯದ ಸದಸ್ಯರು ಹಾಗೂ ಹಲವಾರು ಚಿಂತಕರು ಹಾಜರಿದ್ದು ಸಾರಾ ಅವರ ಕುರಿತ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡರು.

‘ತಿಂಗಳ ಓದು’ ಕಾರ್ಯಕ್ರಮದಡಿ ಸಾರಾ ನುಡಿ ನೆನಪು
ನಾಡಿನ ಜನದನಿಯಾಗಿ ನಾಲ್ಕು ದಶಕಗಳಿಂದಲೂ ಜಗತ್ತಿನ ಜೀವ ವಿರೋಧಿ ಶಕ್ತಿ ಮತ್ತು ಘಟನೆಗಳಿಗೆ ಸಾಂಸ್ಕೃತಿಕ ಪ್ರತಿರೋಧವನ್ನು ತೋರಿದ, ಸಾಂಸ್ಕೃತಿಕ ಚಳುವಳಿಯ ಮೂಲಕ ಕುಂದಾಪುರ ಸಮುದಾಯ ಸಂಸ್ಥೆಯು ಮಕ್ಕಳು ಯುವಕರು ಮಹಿಳೆಯರು ಶಿಕ್ಷಕರನ್ನು ಒಳಗೊಂಡು ಸಾಮಾಜಿಕ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ನಾಟಕ, ಬೀದಿನಾಟಕ, ಹಾಡು, ಬೇಸಿಗೆ ಶಿಬಿರ, ಸಾಹಿತ್ಯ, ಚಿತ್ರ, ವೈಜ್ಞಾನಿಕ ಚಿಂತನೆಗಳನ್ನು ಹಚ್ಚುವ ವಿಜ್ಞಾನ ಕಾರ್ಯಕ್ರಮಗಳನ್ನು ಜನಸಮುದಾಯದ ಮಧ್ಯ ಆಯೋಜಿಸುತ್ತಿದೆ.

ಸಮುದಾಯ ಕುಂದಾಪುರದ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದಾದ ‘ತಿಂಗಳ ಓದು’ ಕಾರ್ಯಕ್ರಮದಡಿ ಅಗಲಿರುವ ಸಂವೇದನಾಶೀಲ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿತ್ತು. ಲೇಖಕಿ ಸಾರಾ ಅಬೂಬಕ್ಕರ್ ಅವರ ನುಡಿ ನಮನ ಕಾರ್ಯಕ್ರಮಕ್ಕೆ ಸಮುದಾಯ ಕುಂದಾಪುರದ ಹಿತೈಷಿಗಳು ಸಮಾನ ಮನಸ್ಕ ಚಿಂತಕರು, ಲೇಖಕರು, ಕವಿಗಳು ಭಾಗವಹಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

Similar News