ಕಾಶ್ಮೀರದಲ್ಲಿ ಅಮಿತ್ ಶಾ ಪಾದಯಾತ್ರೆ ಮಾಡಲಿ: ರಾಹುಲ್ ಸವಾಲು

Update: 2023-01-30 01:55 GMT

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ಅಲ್ಲಗಳೆದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, "ಕಾಶ್ಮೀರದಲ್ಲಿ ಎಲ್ಲವೂ ಸರಿ ಇದ್ದರೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಜಮ್ಮುವಿನಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಲಿ" ಎಂದು ಸವಾಲು ಹಾಕಿದ್ದಾರೆ.

ಶ್ರೀನಗರದಲ್ಲಿ 137 ದಿನಗಳ ಭಾರತ್ ಜೋಡೊ ಯಾತ್ರೆ ಕೊನೆಗೊಳಿಸಿದ ಅವರು, ವಿರೋಧ ಪಕ್ಷಗಳ ಏಕತೆಯ ಅಗತ್ಯತೆಯನ್ನು ಪ್ರತಿಪಾದಿಸಿ, ಬಿಜೆಪಿ/ಅರೆಸ್ಸೆಸ್ ವಿರೋಧಿ ಪಕ್ಷಗಳೆಲ್ಲ ಜತೆಯಾಗಿ ಹೋರಾಟ ನಡೆಸಲಿವೆ ಎಂದು ಪ್ರಕಟಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡ 4000 ಕಿಲೋಮೀಟರ್ ಪಾದಯಾತ್ರೆಯನ್ನು ಲಾಲ್‌ಚೌಕದಲ್ಲಿ ತ್ರಿವರ್ಣಧ್ವಜ ಹಾರಿಸುವ ಮೂಲಕ ಕೊನೆಗೊಳಿಸಿದ ರಾಹುಲ್, ಕಾಶ್ಮೀರದಲ್ಲಿ ಸಹಜ ಸ್ಥಿತಿ ನಿರ್ಮಾಣ ಸಾಧ್ಯವಾದದ್ದು ಮೋದಿ ಸರ್ಕಾರದ ಆಡಳಿತದ ಕಾರಣದಿಂದ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ನಿಗದಿತ ವ್ಯಕ್ತಿಗಳನ್ನು ಗುರಿ ಮಾಡಿ ಹತ್ಯೆ ಮಾಡುವುದು ಹಾಗೂ ಬಾಂಬ್ ಸ್ಫೋಟಗಳು ಮುಂದುವರಿದಿವೆ ಎಂದು ಹೇಳಿದರು.

"ಜಮ್ಮುವಿನಿಂದ ಲಾಲ್‌ಚೌಕ್ ವರೆಗೆ ಬಿಜೆಪಿ ಮುಖಂಡರು ಏಕೆ ಪಾದಯಾತ್ರೆ ಮಾಡುವುದಿಲ್ಲ? ಪರಿಸ್ಥಿತಿ ಚೆನ್ನಾಗಿದ್ದರೆ, ಅಮಿತ್ ಶಾ ಏಕೆ ಜಮ್ಮುವಿನಿಂದ ಕಾಶ್ಮೀರಕ್ಕೆ ಪಾದಯಾತ್ರೆ ಕೈಗೊಳ್ಳಬಾರದು" ಎಂದು ತಿರುಗೇಟು ನೀಡಿದರು.

ಯಾತ್ರೆ ಪೂರ್ಣಗೊಂಡ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ವಿರೋಧ ಪಕ್ಷಗಳು ಛಿದ್ರವಾಗಿವೆ ಎಂಬ ಪ್ರತಿಪಾದನೆಯನ್ನು ರಾಹುಲ್ ಅಲ್ಲಗಳೆದರು. ಮಾತುಕತೆ ಹಾಗೂ ಜಂಟಿ ದೂರದೃಷ್ಟಿಯಿಂದ ವಿರೋಧ ಪಕ್ಷಗಳಲ್ಲಿ ಏಕತೆ ಮೂಡಿದೆ. ವಿರೋಧ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ದ್ದರೂ, ಮಾತುಕತೆ ನಡೆಸಿ, ಒಗ್ಗೂಡಿ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Similar News