ಮೆಕ್ಸಿಕೊ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ ಎಂಟು ಮಂದಿ ಮೃತ್ಯು

Update: 2023-01-30 03:11 GMT

ಝಕಾಟೆಕಸ್, ಮೆಕ್ಸಿಕೊ: ಉತ್ತರ ಮೆಕ್ಸಿಕೋದ ಜೆರೆಝ್ ಪಟ್ಟಣದ ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟು, ಇತರ ಐದು ಮಂದಿ ಗಾಯಗೊಂಡಿದ್ದಾರೆ.

ಝಕಾಟೆಕಸ್ ರಾಜ್ಯದಲ್ಲಿ ಶುಕ್ರವಾರ ಕಳೆದ ಶನಿವಾರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಗಳು ಎರಡು ವಾಹನಗಳಲ್ಲಿ ಬಾರ್‌ಗೆ ಬಂದು, ದಿಢೀರನೇ ಬೇಕಾಬಿಟ್ಟಿ ಗುಂಡಿನ ದಾಳಿ ನಡೆಸಿದರು ಎಂದು ಭದ್ರತಾ ಕಾರ್ಯಾಲಯ ಪ್ರಕಟಿಸಿದೆ.

ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇತರ ಇಬ್ಬರು ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಇತರ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರಲ್ಲಿ ಕ್ಲಬ್ ಸಿಬ್ಬಂದಿ, ಸಂಗೀತ ಕಲಾವಿದರು ಮತ್ತು ಗ್ರಾಹಕರು ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕ್ಲಬ್‌ನಲ್ಲಿ ರಕ್ತದ ಓಕುಳಿ ಹರಿದು ಜನ ಭಯಭೀತಿಯಿಂದ ಚಲ್ಲಾಪಿಲ್ಲಿಯಾದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಇಐ ವೆನಡಿಟೊ ಎಂಬ ಹೆಸರಿನ ಬಾರ್ ಜೆರೆಝ್ ಪಟ್ಟಣದ ಕೇಂದ್ರಭಾಗದಲ್ಲಿದೆ. ಜೆರೆಝ್ ಪಟ್ಟಣ ಇತ್ತೀಚಿನ ವರ್ಷಗಳಲ್ಲಿ ಹಿಂಸೆಯಿಂದ ಕಂಗೆಟ್ಟಿದ್ದು, ಕಳೆದ ವರ್ಷ ನೂರಾರು ಮಂದಿ ತಮ್ಮ ಮನೆ ಮಠಗಳನ್ನು ಬಿಟ್ಟು ತೆರಳಿದ್ದರು.

ಝಕಾಟೆಕಸ್ ರಾಜ್ಯವು ಅಮೆರಿಕದ ಡ್ರಗ್ ವ್ಯಾಪಾರಕ್ಕೆ ಆಯಪಟ್ಟಿನ ಪ್ರದೇಶವಾಗಿದ್ದು, ಇದು ಮೆಕ್ಸಿಕೋದ ಅತ್ಯಂತ ಪ್ರಬಲ ಸಿನಾಲೋವಾ ಕಾರ್ಟೆಲ್ಸ್ ಹಾಗೂ ಜಲಿಸ್ಕೊ ನಡುವಿನ ಹಿಂಸಾತ್ಮಕ ವ್ಯಾಜ್ಯಗಳ ತಾಣವಾಗಿ ಪರಿಣಮಿಸಿದೆ.

Similar News