ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡುವವರನ್ನು ಗಡಿಪಾರು ಮಾಡಿ: ಯು.ಟಿ.ಖಾದರ್

Update: 2023-01-30 10:13 GMT

ಮಂಗಳೂರು, ಜ.30: ರಾಜಕೀಯ ಲಾಭ, ವ್ಯಾಪಾರಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅವಿಶ್ವಾಸ, ದ್ವೇಷ, ಕೊಲೆ, ಅಹಿತಕರ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಇಲ್ಲಿನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಅಂತಹವರು ಸಮಾಜಕ್ಕೆ ಅಪಾಯಕಾರಿ ಎಂದು ಶಾಸಕ ಹಾಗೂ ವಿಧಾನಸಭಾ ಸಭಾ ವಿಪಕ್ಷ ನಾಯಕ ಯು.ಟಿ.ಖಾದರ್  ತಿಳಿಸಿದ್ದಾರೆ.

ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ತುಮಕೂರಿನಲ್ಲಿ ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ರೀತಿ ಹೇಳಿಕೆ ನೀಡುವ ಯಾರೇ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಅಗತ್ಯವಿದೆ ಎಂದರು.

ಸುರತ್ಕಲ್ ನ ಫಾಝಿಲ್ ಪ್ರಕರಣದ ಬಗ್ಗೆ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಯ ನ್ನು ಗಮನಿಸಿದರೆ ಈ ಪ್ರಕರಣದ ಮರು ತನಿಖೆ ಅಗತ್ಯವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ರೀತಿ ರಾಜ್ಯದಲ್ಲಿ ನಡೆದ ಎಲ್ಲಾ ಪ್ರಕರಣಗಳ ಮರು ತನಿಖೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ತಿಳಿದರು.

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನಾಯಕರಾದ  ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಲ್ಲಿ ಪ್ರಾರಂಭಿಸಿದ ‘ಭಾರತ್ ಜೋಡೋ ಯಾತ್ರೆಯು 3,970 ಕಿ.ಮೀಗಳು ಸುದೀರ್ಘ ಪಾದಯಾತ್ರೆ 135 ದಿನಗಳ ಬಳಿಕ  2023ರ ಜನವರಿ 30ರಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿ ಅವರು ಇಂದು  ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪಿಸಿಸಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಅವರಿಗೆ ದೇಶದೆಲ್ಲೆಡೆ  ಅಭೂತಪೂರ್ವ ಬೆಂಬಲ ದೊರೆತಿದೆ. ಜಮ್ಮು ಕಾಶ್ಮೀರದಲ್ಲೂ ಅತ್ಯುತ್ತಮ ಬೆಂಬಲ ದೊರೆತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಕಾಂಗ್ರೆಸ್ ಕಚೇರಿ ಎದುರು ಧ್ವಜಾರೋಹಣ ಕಾರ್ಯಕ್ರಮ ಮಹಾತ್ಮ ಗಾಂಧೀಜಿಯವರ 75ನೇ ಪುಣ್ಯದಿನ ಸ್ಮರಣೆಯೊಂದಿಗೆ ನಡೆಯಿತು ಎಂದು  ಯು.ಟಿ.ಖಾದರ್  ತಿಳಿಸಿದರು.

ಬಿಜೆಪಿಯ ಅಪಪ್ರಚಾರವನ್ನು ನಿರ್ಲಕ್ಷಿಸಿ ನಡೆದ ಯಾತ್ರೆಗೆ  ಜನತೆಯ ಬೆಂಬಲ ವ್ಯಾಪಕವಾಗಿ ದೊರೆತಿದೆ. ಬಿಜೆಪಿ ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿ ರಾಹುಲ್ ಪಾದಯಾತ್ರೆಯ ವಿರುದ್ಧ ಅಪಪ್ರಚಾರ ಮಾಡಲು 600 ಕೋಟಿ ವೆಚ್ಚ ಮಾಡಿದೆ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ. ಆದರೆ, ದೇಶದ ಜನ ರಾಹುಲ್ ಅವರ ಸಮರ್ಥ ನಾಯಕತ್ವವನ್ನು ಬೆಂಬಲಿಸಿದರು. ಶೇ 90ರಷ್ಟು ಮಂದಿ ರಾಹುಲ್ ಅವರ ಪ್ರೀತಿ, ಸಹೋದರತ್ವದ ಸಂದೇಶ ಸಾರುವ ಯಾತ್ರೆಯನ್ನು ಬೆಂಬಲಿಸಿದರು ಎಂದು ಯು.ಟಿ. ಖಾದರ್ ತಿಳಿದರು.

ಸುದ್ದಿ ಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ , ಕಾಂಗ್ರೆಸ್ ಪದಾಧಿಕಾರಿಗಳಾದ ‌ಸಂತೋಷ್ ಕುಮಾರ್ ಶೆಟ್ಟಿ, ಜಿ.ಕೆ.ಜಬ್ಬಾರ್, ಝಕರಿಯಾ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.

Similar News