ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್‌

Update: 2023-01-30 11:08 GMT

ಮುಂಬೈ: ಖ್ಯಾತ ಕ್ರಿಕೆಟಿಗ ಮುರಳಿ ವಿಜಯ್‌ (Murali Vijay) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮೂವತ್ತೆಂಟು ವರ್ಷದ ಮುರಳಿ ವಿಜಯ್‌ ಈ ಕುರಿತು ಇಂದು ಟ್ವಿಟರ್‌ನಲ್ಲಿ (Twitter) ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

ಒಂದು ಕಾಲದಲ್ಲಿ ಭಾರತ ಟೆಸ್ಟ್‌ ತಂಡದ ಪ್ರಾರಂಭಿಕ ದಾಂಡಿಗನಾಗಿದ್ದ ಮುರಳಿ ವಿಜಯ್‌ ನಂತರ 2018 ಕ್ರಿಕೆಟ್‌ ಋತುವಿನಲ್ಲಿ ಕಳಪೆ ಪ್ರದರ್ಶನ ದಾಖಲಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಬಳಿಕ ಅವರನ್ನು ಭಾರತ ತಂಡದಿಂದ ಕೈಬಿಡಲು ನಿರ್ಧರಿಸಲಾಗಿತ್ತು.

ಸ್ಟೈಲಿಶ್‌ ಬ್ಯಾಟರ್ ಎಂದು ಖ್ಯಾತಿ ಪಡೆದಿದ್ದ ಮುರಳಿ ವಿಜಯ್‌ ತಮ್ಮ ಕ್ರಿಕೆಟ್‌ ಜೀವನದಲ್ಲಿ ಆಡಿದ 61 ಟೆಸ್ಟ್‌ ಪಂದ್ಯಗಳಲ್ಲಿ  12 ಶತಕಗಳು ಹಾಗೂ 15 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಟ್ಟು 3982 ರನ್‌ ಗಳಿಸಿರುವ ಅವರ ಸರಾಸರಿ ರನ್‌ ಗಳಿಕೆ 38.28 ಆಗಿತ್ತು.

ತಮಿಳುನಾಡು ಮೂಲದ ಮುರಳಿ ವಿಜಯ್‌ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದರು. ಐಪಿಎಲ್‌ನಲ್ಲಿ ಅವರು ಎರಡು ಶತಕಗಳೊಂದಿಗೆ ಒಟ್ಟು 2619 ರನ್‌ ಗಳಿಸಿದ್ದರಲ್ಲದೆ 106 ಪಂದ್ಯಗಳಲ್ಲಿ ಸರಾಸರಿ 121.87 ರನ್‌ ಗಳಿಸಿದ್ದರು.

2002 ಹಾಗೂ 2018ರ ನಡುವಿನ ತಮ್ಮ ಕ್ರಿಕೆಟ್‌ ಪಯಣ ತಮ್ಮಜೀವನದ ಸುಂದರ ಕ್ಷಣಗಳಾಗಿತ್ತು ಹಾಗೂ ಭಾರತವನ್ನು ಪ್ರತಿನಿಧಿಸುವ ಗೌರವ ತಮಗೆ ದೊರಕಿತ್ತು ಎಂದು ಅವರು ಬರೆದಿದ್ದಾರಲ್ಲದೆ ತಮ್ಮ ಕುಟುಂಬ. ಬಿಸಿಸಿಐ, ಟಿಎನ್‌ಸಿಎ, ಸಿಎಸ್‌ಕೆ  ಮತ್ತು ತಂಡ ಸದಸ್ಯರು, ಕೋಚುಗಳು ಹಾಗೂ ಎಲ್ಲರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕ 6 ದಿನಗಳ ನಂತರ ಮಲೇಷ್ಯಾದಲ್ಲಿ ಪತ್ತೆ!

Similar News