ಫೆ.1ರಿಂದ 4: ರಂಗಭೂಮಿಯಿಂದ ರಂಗೋತ್ಸವ, ಪ್ರಶಸ್ತಿ ಪ್ರದಾನ

ರಂಗಭೂಮಿ ಪ್ರಶಸ್ತಿಗೆ ಡಾ.ಜಿ.ಶಂಕರ್ ಆಯ್ಕೆ

Update: 2023-01-30 13:19 GMT

ಉಡುಪಿ: 58ನೇ ವರ್ಷಕ್ಕೆ ಕಾಲಿಡುತ್ತಿರುವ ರಂಗಭೂಮಿ ಉಡುಪಿ, ಇದೇ ಫೆ.1ರಿಂದ 4ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ‘ರಂಗಭೂಮಿ ರಂಗೋತ್ಸವ’ವನ್ನು ಹಮ್ಮಿಕೊಂಡಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭದಲ್ಲಿ ರಂಗಭೂಮಿ ಪ್ರಶಸ್ತಿ ಪ್ರದಾನ, ಜಾನಪದ ವೈಭವ, 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ವಾರ್ಷಿಕ ಸ್ಮರಣ ಸಂಚಿಕೆ ‘ಕಲಾಂಜಲಿ’ ಬಿಡುಗಡೆ, ವಿಚಾರಗೋಷ್ಠಿ ಹಾಗೂ ಖ್ಯಾತನಾಮ ನಿರ್ದೇಶಕರ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.

ಫೆ.1ರಂದು ಸಂಜೆ 5:45ಕ್ಕೆ ರಂಗೋತ್ಸವದ ಉದ್ಘಾಟನೆಯು ಹಾವೇರಿಯ  ಕರ್ನಾಟಕ ಜಾನಪದ ವಿವಿಯ ಉಪಕುಲಪತಿಗಳಾದ ಪ್ರೊ.ಸಿ.ಟಿ. ಗುರು ಪ್ರಸಾದ್ ಇವರಿಂದ ನಡೆಯಲಿದೆ. ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್. ಎಸ್.ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ಕಲಾಂಜಲಿ ಬಿಡುಗಡೆಗೊಳಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಮೈಸೂರಿನ ನವೋದಯ ತಂಡದಿಂದ ವಾಲ್ಮೀಕಿ ರಾಮಾಯಣ ಆಧಾರಿತ ಖ್ಯಾತ ರಂಗನಿರ್ದೇಶಕ ಪ್ರಸನ್ನ ನಿರ್ದೇಶನ ದಲ್ಲಿ ‘ಅಯೋಧ್ಯಾ ಕಾಂಡ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಫೆ.2ರಂದು ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ಜಾನಪದ ವೈಭವ-2023ರಲ್ಲಿ ನಾಡಿನ ಜಾನಪದ ಕಲೆ-ಸಂಸ್ಕೃತಿ ಅನಾವರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ‘ನಿತ್ಯ ಸತ್ಯ- ಬಾಳ ಬೆಳಕು’ ಕೃತಿಯನ್ನು ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ ಅನಾವರಣಗೊಳಿಸುವರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇವರಿಗೆ ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್- ಜಾನಪದ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೊನೆಯಲ್ಲಿ ಕಲಾಮಯಂ ಉಡುಪಿ ತಂಡದಿಂದ ಜಾನಪದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ವಿವರಿಸಿದರು.

ಫೆ.3ರಂದು ರಂಗಭೂಮಿ ಇತ್ತೀಚೆಗೆ ನಡೆಸಿದ 43ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಸಂಜೆ 5:45ಕ್ಕೆ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹಾವೇರಿಯ ಗಜಾನನ ಯುವಕ ಮಂಡಲದ ಪೌರಾಣಿಕ ನಾಟಕ ‘ವಾಲಿ ವಧೆ’ಯ ಮರುಪ್ರದರ್ಶನ ನಡೆಯಲಿದೆ.

ಫೆ.4ರ ಕೊನೆಯ ದಿನದಂದು ನಾಡೋಜ ಡಾ.ಜಿ.ಶಂಕರ್ ಅವರಿಗೆ ರಂಗಭೂಮಿ ವತಿಯಿಂದ ‘ಕರುನಾಡ ಕರುಣಾಳು’ ಬಿರುದಿನೊಂದಿಗೆ ಈ ವರ್ಷದ ‘ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಶನಿವಾರ ಅಪರಾಹ್ನ 2:00ರಿಂದ 5:30ರವರೆಗೆ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಯರಿಂದ ಕಾರ್ಯಕ್ರಮ ವೈವಿಧ್ಯ, ವಿವಿಧ ಕ್ಷೇತ್ರಗಳಿಗೆ ಜಿ.ಶಂಕರ್ ಅವರ ಕೊಡುಗೆಯ ಕುರಿತಂತೆ ವಿಚಾರಗೋಷ್ಠಿ ಹಾಗೂ ಶಂಕರ್‌ರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಶಿವರಾಮ ಶೆಟ್ಟಿ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಸಚಿವ ವಿ.ಸುನೀಲ್ ಕುಮಾರ್ ಅವರು ಶಂಕರ್‌ಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡುವರು.ಸಭಾ ಕಾರ್ಯಕ್ರಮದ ಕೊನೆಗೆ ಯಕ್ಷರಂಗಾಯಣ ಕಾರ್ಕಳ ಇವರಿಂದ ಡಾ.ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಶಶಿರಾಜ್ ರಾವ್ ಕಾವೂರು ರಚಿತ ‘ಪರಶುರಾಮ’ ನಾಟಕ  ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

Similar News