‘ಲವ್ ಜಿಹಾದ್’ವಿರುದ್ಧ ಕಾನೂನಿಗೆ ಆಗ್ರಹಿಸಿ ಮುಂಬೈಯಲ್ಲಿ ರ‍್ಯಾಲಿ

Update: 2023-01-30 15:53 GMT

ಮುಂಬೈ, ಜ.30: ಹಿಂದೂ ಸಂಘಟನೆಗಳ ಒಕ್ಕೂಟ ಸಕಲ ಹಿಂದೂ ಸಮಾಜ್ ರವಿವಾರ ಇಲ್ಲಿ ರ‍್ಯಾಲಿಯನ್ನು ನಡೆಸಿ ತಥಾಕಥಿತ ‘ಲವ್ ಜಿಹಾದ್’ ಮತ್ತು ಧಾರ್ಮಿಕ ಮತಾಂತರಗಳ ವಿರುದ್ಧ ಕಾನೂನುಗಳಿಗಾಗಿ ಆಗ್ರಹಿಸಿದೆ.

ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಷ್ ಶೇಲಾರ್, ಸಂಸದರಾದ ಗೋಪಾಲ ಶೆಟ್ಟಿ ಮತ್ತು ಮನೋಜ್ ಕೋಟಕ್ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ನಾಯಕರೂ ಉಪಸ್ಥಿತರಿದ್ದರು.

ದಾದರ್ ನ ಶಿವಾಜಿ ಪಾರ್ಕ್‌ ನಿಂದ ಪ್ರಭಾದೇವಿಯ ಕಾಮಗಾರ್ ಮೈದಾನದವರೆಗೆ ಸಾಗಿದ ಜಾಥಾದ ಅಂತ್ಯದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಮುಸ್ಲಿಮರ ಅಂಗಡಿಗಳಿಂದ ಸರಕುಗಳ ಖರೀದಿಯನ್ನು ಬಹಿಷ್ಕರಿಸುವಂತೆ ಆಗ್ರಹಿಸಿದರು. ‘ಈ ಜನರ ಪ್ರಾಬಲ್ಯದ ವಿರುದ್ಧ ಹಿಂದು ಸಮುದಾಯವು ಎದ್ದು ನಿಲ್ಲಬೇಕಿದೆ. ಜನರ ಹೃದಯಗಳು ಮತ್ತು ಮನಸ್ಸುಗಳಲ್ಲಿ ಕ್ರೋಧ ತುಂಬಿದೆ. ಇನ್ನೊಂದು ಸಮುದಾಯದ ವ್ಯವಸ್ಥಿತ ಸಂಚುಗಳಿಗೆ ನಮ್ಮ ಸೋದರಿಯರು ಮತ್ತು ಪುತ್ರಿಯರು ಬಲಿಯಾಗುತ್ತಿದ್ದಾರೆ ’ಎಂದರು.

ಪ್ರವಾದಿ ಮುಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವೀಡಿಯೊ ಪೋಸ್ಟ್ ಮಾಡಿದ್ದಕ್ಕಾಗಿ ಸಿಂಗ್ ಅವರನ್ನು ಕಳೆದ ವರ್ಷದ ಆಗಸ್ಟ್‌ ನಲ್ಲಿ ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು. ಹಿಂದೂಗಳು ಪಕ್ಷ ರಾಜಕೀಯವನ್ನು ಬದಿಗಿಟ್ಟು ಒಂದಾಗಬೇಕು ಎಂದು ಶೇಲಾರ್ ಕರೆ ನೀಡಿದರು.

Similar News