ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ಡಿಎಂಕೆ ನಾಯಕನಿಂದ ದಲಿತ ಯುವಕನ ನಿಂದನೆ

Update: 2023-01-30 18:03 GMT

ಸೇಲಂ(ತ.ನಾಡು),ಜ.30: ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ಡಿಎಂಕೆ ನಾಯಕರೋರ್ವರು ದಲಿತ ಯುವಕನನ್ನು ಅವಾಚ್ಯವಾಗಿ ನಿಂದಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಜ.19ರಂದು ಸೇಲಂನ ತಿರುಮಲೈಗಿರಿಯಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ಮುಜರಾಯಿ ಇಲಾಖೆಯಡಿ ವಣ್ಣಿಯಾರ ಸಮುದಾಯವು ನಿರ್ವಹಿಸುತ್ತಿರುವ ದೇವಸ್ಥಾನವನ್ನು ಪ್ರವೇಶಿಸಿದ್ದ.

ಡಿಎಂಕೆ ಯೂನಿಯನ್ ಕಾರ್ಯದರ್ಶಿ ಹಾಗೂ ಪಂಚಾಯತ್ ಮುಖ್ಯಸ್ಥ ಮಾಣಿಕಂ ಯುವಕನಿಗೆ ಬೆದರಿಕೆಯೊಡ್ಡಿದ್ದನ್ನು ಮತ್ತು ಅವಮಾನಕಾರಿಯಾಗಿ ನಿಂದಿಸುತ್ತಿದ್ದನ್ನು ವೀಡಿಯೊ ತೋರಿಸಿದೆ. ದೇವಸ್ಥಾನವನ್ನು ಪ್ರವೇಶಿಸಿದ್ದೇಕೆ ಎಂದು ಯುವಕನನ್ನು ಪದೇ ಪದೇ ಪ್ರಶ್ನಿಸದ ಮಾಣಿಕಂ, ತನ್ನ ಗ್ರಾಮದ ಯಾರೂ ಈಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿಲ್ಲ ಎಂದು ಹೇಳಿದ್ದನ್ನೂ ವೀಡಿಯೊ ತೋರಿಸಿದೆ.

ಘಟನೆಯು ನಡೆದು ಒಂದು ವಾರವಾಗಿದ್ದರೂ ಈವರೆಗೆ ದೂರು ದಾಖಲಾಗಿಲ್ಲ. ಈ ನಡುವೆ ಪಕ್ಷದ ನೀತಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿರುವುದಕ್ಕಾಗಿ ಡಿಎಂಕೆಯು ಮಾಣಿಕಂ ಅವರನ್ನು ಅಮಾನತುಗೊಳಿಸಿದೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಣಿಕಂ, ದುರುದ್ದೇಶಪೂರ್ವಕವಾಗಿ ವೀಡಿಯೊವನ್ನು ವೈರಲ್ ಮಾಡಲಾಗಿದೆ ಎಂದರಾದರೂ ಘಟನೆ ನಡೆದಿದ್ದನ್ನು ದೃಢಪಡಿಸಿದರು. ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲವೇ ಎಂಬ ಪ್ರಶ್ನೆಗೆ ಇಂತಹ ಯಾವುದೇ ನಿರ್ಬಂಧವನ್ನು ಪರೋಕ್ಷವಾಗಿ ನಿರಾಕರಿಸಿದ ಅವರು, “ದಲಿತ ಯುವಕ ಮದ್ಯವನ್ನು ಸೇವಿಸಿದ್ದ. ಅಂದು ಮಾರಿಯಮ್ಮನ್ ದೇವಸ್ಥಾನದಲ್ಲಿ ಕಾರ್ಯಕ್ರಮವೊಂದು ನಡೆದಿತ್ತು ಮತ್ತು ಸಚಿವ ಉದಯನಿಧಿ ಬಂದಿದ್ದರಿಂದ ತಾನು ಅಲ್ಲಿಗೆ ತೆರಳಿದ್ದೆ. ಯುವಕ ಕುಡಿದು ಗಲಾಟೆ ಮಾಡುತ್ತಿದ್ದ. ಆತನನ್ನು ಒಂಟಿಯಾಗಿ ಬಿಡುವಂತೆ ತಾನು ಹೇಳಿದ್ದೆ. ಮರುದಿನ ಯುವಕನ ಕಡೆಯವರು ಕ್ಷಮೆ ಯಾಚಿಸಲು ಬಂದಿದ್ದರು. ಗ್ರಾಮಸ್ಥರೊಂದಿಗೆ ಜಗಳಗಳನ್ನು ಮಾಡುವ ಬಗ್ಗೆ ಅವರನ್ನು ಪ್ರಶ್ನಿಸಿದ್ದೆ” ಎಂದು ಉತ್ತರಿಸಿದರು. ದೂರು ನೀಡಿದ್ದರೆ ದಲಿತ ಯುವಕನ ಬಂಧನವಾಗುತ್ತಿತ್ತು ಎಂದರು.

‘ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಿಲ್ಲ. ಕುಡಿದು ಬಂದಿದ್ದಕ್ಕಾಗಿ ಇಡೀ ಗ್ರಾಮ ಆತನ್ನು ದೂಷಿಸುತ್ತಿದೆ. ನಾನು ಉಭಯ ಸಮುದಾಯಗಳಿಗೂ ಬೇಕಾದ ವ್ಯಕ್ತಿಯಾಗಿದ್ದೇನೆ, ಹೀಗಾಗಿ ಅವು ನನ್ನ ವಿರುದ್ಧ ಮಾತನಾಡುವುದಿಲ್ಲ ’ ಎಂದೂ ಮಾಣಿಕಂ ಹೇಳಿದ್ದಾರೆ.

Similar News