ಅತ್ಯಾಚಾರ ಪ್ರಕರಣ: ಆಸಾರಾಂ ಬಾಪು ದೋಷಿ ಎಂದು ಘೋಷಿಸಿದ ಗುಜರಾತ್‌ ನ್ಯಾಯಲಯ

Update: 2023-01-30 17:15 GMT

ಅಹಮದಾಬಾದ್: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಘೋಷಿತ ದೇವಮಾನವ ಆಸಾರಾಂ ಬಾಪು ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್‌ ನ್ಯಾಯಾಲಯ ಘೋಷಿಸಿದೆ. 2013ರಲ್ಲಿ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ ಎಂದು ಗುಜರಾತ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿಕೆ ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಮಂಗಳವಾರಕ್ಕೆ (ಜನವರಿ 31) ಕಾಯ್ದಿರಿಸಿದ್ದಾರೆ. ಗಾಂಧಿನಗರದ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಸಾರಾಂ ಪತ್ನಿ ಸೇರಿದಂತೆ ಇತರ ಆರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ವಾಸವಾಗಿದ್ದ ಮಹಿಳೆಯ ಮೇಲೆ 2001 ರಿಂದ 2006 ರವರೆಗೆ ಆಸಾರಾಂ ಬಾಪು ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

"ನ್ಯಾಯಾಲಯವು ಪ್ರಾಸಿಕ್ಯೂಷನ್ ಪ್ರಕರಣವನ್ನು ಸ್ವೀಕರಿಸಿದೆ. ಸೆಕ್ಷನ್ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), ಮತ್ತು ಅಕ್ರಮ ಬಂಧನಕ್ಕಾಗಿ ಭಾರತೀಯ ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಆಸಾರಾಂನನ್ನು ದೋಷಿ ಎಂದು ತೀರ್ಪು ನೀಡಿದೆ" ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೆಕರ್ ಹೇಳಿದ್ದಾರೆ.

ವಿವಾದಿತ ದೇವಮಾನವ ಸದ್ಯ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿದ್ದಾನೆ. 2013 ರಲ್ಲಿ ತನ್ನ ಆಶ್ರಮದಲ್ಲಿ ಬಾಲಕಿಯ ಅತ್ಯಾಚಾರ ಎಸಗಿದ್ದಕ್ಕಾಗಿ ಜೋಧ್‌ಪುರದ ನ್ಯಾಯಾಲಯವು ಏಪ್ರಿಲ್ 25, 2018 ರಂದು ಆಸಾರಾಂಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 2002 ರ ಅತ್ಯಾಚಾರ ಪ್ರಕರಣದಲ್ಲಿ ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಸೂರತ್ ಮೂಲದ ಮಹಿಳೆಯೊಬ್ಬರು ಆಸಾರಾಂ ಬಾಪು ಮತ್ತು ಇತರ ಏಳು ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದ್ದರು.

Similar News