ತ್ರಿಪುರಾ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಮಾಣಿಕ್ ಸಹಾ ನಾಮಪತ್ರ ಸಲ್ಲಿಕೆ

Update: 2023-01-30 16:25 GMT

ಅಗರ್ತಲಾ, ಜ.30: ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ತ್ರಿಪುರಾ ವಿಧಾನಸಭೆಗೆ ಫೆ.16ರಂದು ನಡೆಯಲಿರುವ ಚುನಾವಣೆಗಾಗಿ ಟೌನ್ ಬೋರ್ಡೊವಾಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಅಸ್ಸಾಂ ಮತ್ತು ಮಣಿಪುರದ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಮತ್ತು ಎನ್.ಬೀರೆನ್ ಸಿಂಗ್ ಹಾಗೂ ಬಿಜೆಪಿಯ ಈಶಾನ್ಯ ಭಾರತ ಸಂಯೋಜಕ ಸಂಬಿತ್ ಪಾತ್ರಾ ಅವರು ಸಹಾ ಜೊತೆಯಲ್ಲಿದ್ದರು.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯ 55 ಸ್ಥಾನಗಳಿಗೆ ಸ್ಪರ್ಧಿಸಿರುವ ಬಿಜೆಪಿ ,ಐದು ಸ್ಥಾನಗಳನ್ನು ಮಿತ್ರಪಕ್ಷ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾಕ್ಕೆ ಬಿಟ್ಟುಕೊಟ್ಟಿದೆ.

ಎರಡನೇ ಸಲ ಅಧಿಕಾರಕ್ಕೇರುವ ಬಿಜೆಪಿ ಮೈತ್ರಿಕೂಟದ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಸಹಾರನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ಬಿಪ್ಲಬ್ ಕುಮಾರ್ ದೇಬ್ ಅವರ ಬದಲು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಕಳೆದ ವರ್ಷದ ಜೂನ್‌ ನಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಅವರು ಟೌನ್ ಬೋರ್ಡೊವಾಲಿ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದಿದ್ದರು.

Similar News