ಮುಂದುವರಿದ ಅದಾನಿ ಗುಂಪಿನ ಶೇರುಗಳ ಬೆಲೆ ಕುಸಿತ: ಒಟ್ಟು ನಷ್ಟ 5.4 ಲಕ್ಷ ಕೋಟಿ ರೂ.ಗೆ ಏರಿಕೆ

Update: 2023-01-30 18:25 GMT

ಹೊಸದಿಲ್ಲಿ: ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಕಂಪೆನಿಯ ವರದಿ ಪ್ರಕಟಗೊಂಡ ಬಳಿಕ, ಸತತ ಮೂರನೇ ಮಾರುಕಟ್ಟೆ ವ್ಯವಹಾರದ ದಿನವಾದ ಸೋಮವಾರವೂ ಅದಾನಿ ಗುಂಪಿನ ಕಂಪೆನಿಗಳ ಶೇರುಗಳ ಬೆಲೆಗಳು ಕುಸಿದಿವೆ. 

ಅದಾನಿ ಕಂಪೆನಿಗಳ ಶೇರುಗಳಲ್ಲಿ ಹಣ ಹೂಡಿರುವ ಹೂಡಿಕೆದಾರರು ಅನಭವಿಸಿರುವ ನಷ್ಟ ಸೋಮವಾರದ ವೇಳೆಗೆ ಸುಮಾರು 5.4 ಲಕ್ಷ ಕೋಟಿ ರೂಪಾಯಿಗೆ ಏರಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅದಾನಿ ಟ್ರಾನ್ಸ್ಮಿಶನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಶೇರುಗಳ ಮೌಲ್ಯ ಸೋಮವಾರ ತಲಾ 20 ಶೇಕಡದಷ್ಟು ಕುಸಿದಿದೆ. ಅದೇ ವೇಳೆ, ಅದಾನಿ ಗ್ರೀನ್ ಎನರ್ಜಿಯ ಶೇರುಗಳ ವೌಲ್ಯ 18% ದಷ್ಟು ಇಳಿಕೆಯಾಗಿದೆ. ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಕಂಪೆನಿಗಳ ಶೇರುಗಳೂ ತಲಾ 5 ಶೇಕಡದಷ್ಟು ಕುಸಿದಿವೆ. 

ಆದರೆ, ಅದಾನಿ ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್ಪ್ರೈಸಸ್ ಶೇರುಗಳ ವೌಲ್ಯ ಸೋಮವಾರದ ದಿನಾಂತ್ಯದ ವೇಳೆಗೆ ಸುಮಾರು 4.75 ಶೇಕಡದಷ್ಟು ಏರಿಕೆ ಕಂಡಿದೆ. ಗುಂಪಿನ ಇನ್ನೊಂದು ಕಂಪೆನಿ ಅದಾನಿ ಪೋರ್ಟ್ಸ್ ಮತ್ತು ಸ್ಪೆಶಲ್ ಎಕನಾಮಿಕ್ ರೆನ್ನ ಶೇರುಗಳ ವೌಲ್ಯವೂ 0.05% ದಷ್ಟು ಏರಿಕೆಯಾಗಿದೆ.

► ಹೆಚ್ಚುವರಿ ಶೇರುಗಳನ್ನು ಕೊಳ್ಳಲು ಹೂಡಿಕೆದಾರರೇ ಇಲ್ಲ

ಅದಾನಿ ಎಂಟರ್ಪ್ರೈಸಸ್ ಕಂಪೆನಿಯ 20,000 ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಶೇರು ಮಾರಾಟವು ಸೋಮವಾರ ಎರಡನೇ ದಿನ ಪ್ರವೇಶಿಸಿದೆ. ಆದರೆ, ಹೂಡಿಕೆದಾರರು ಆ ಶೇರುಗಳನ್ನು ಕೊಳ್ಳಲು ಉತ್ಸುಕರಾಗಿಲ್ಲ. ಕಂಪೆನಿಯ ಶೇರುಗಳ ಬೆಲೆಯು ಸೋಮವಾರ 2,892 ರೂ.ಗೆ ಮಾರಾಟವಾಗುತ್ತಿತ್ತು. ಇದು ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆ ಮಾಡುತ್ತಿರುವ ಹೆಚ್ಚುವರಿ ಶೇರುಗಳಿಗೆ ನಿಗದಿಪಡಿಸಲಾದ ಮೂಲ ಬೆಲೆಗಿಂತ ತುಂಬಾ ಕಡಿಮೆಯಾಗಿದೆ. ಹೆಚ್ಚುವರಿ ಶೇರುಗಳ ಮೂಲ ಬೆಲೆಯನ್ನು 3,112- 3,276 ರೂಪಾಯಿಗಳ ವ್ಯಾಪ್ತಿಯಲ್ಲಿ ನಿಗದಿಪಡಿಸಲಾಗಿತ್ತು.

ಹೆಚ್ಚುವರಿ ಶೇರುಗಳ ಮಾರಾಟದ ಮೊದಲ ದಿನವಾದ ಶುಕ್ರವಾರ ಕೇವಲ ಒಂದು ಶೇಕಡ ಶೇರುಗಳ ಖರೀದಿಯಾಗಿತ್ತು. ಸೋಮವಾರ ಒಟ್ಟು 4.55 ಕೋಟಿ ಶೇರುಗಳ ಪೈಕಿ ಕೇವಲ 6,87,840 ಶೇರುಗಳಿಗೆ, ಅಂದರೆ 1.5 ಶೇಕಡ ಶೇರುಗಳಿಗಾಗಿ ಹೂಡಿಕೆದಾರರು ಬೇಡಿಕೆ ಸಲ್ಲಿಸಿದ್ದಾರೆ. ಶೇರುಗಳ ಮಾರಾಟವು ಮಂಗಳವಾರ ಕೊನೆಗೊಳ್ಳಲಿದೆ. 

ವಿದೇಶಿ ಮತ್ತು ದೇಶಿ ಬೃಹತ್ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್ ಗಳು ಈವರೆಗೆ ಶೇರುಗಳ ಖರೀದಿಗೆ ಮುಂದಾಗಿಲ್ಲ.

Similar News