15 ವರ್ಷಕ್ಕಿಂತ ಹಳೆಯ ಒಂಭತ್ತು ಲಕ್ಷ ಸರಕಾರಿ ವಾಹನಗಳು ಎ.1ರಿಂದ ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2023-01-30 17:02 GMT

ಹೊಸದಿಲ್ಲಿ,ಜ.30: ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸೇರಿದ 15 ವರ್ಷಗಳಿಗೂ ಹಳೆಯದಾಗಿರುವ ಒಂಭತ್ತು ಲಕ್ಷಕ್ಕೂ ಅಧಿಕ ವಾಹನಗಳು ಎ.1ರಿಂದ ರಸ್ತೆಗಿಳಿಯುವುದಿಲ್ಲ ಮತ್ತು ಅವುಗಳ ಬದಲಾಗಿ ಹೊಸ ವಾಹನಗಳು ಬರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಸೋಮವಾರ ಇಲ್ಲಿ ತಿಳಿಸಿದರು.

ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಎಥೆನಾಲ್, ಮಿಥೆನಾಲ್, ಜೈವಿಕ ಸಿಎನ್ಐ, ಜೈವಿಕ ಎನ್ಎನ್ಜಿ ಮತ್ತು ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸುಲಭಗೊಳಿಸಲು ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

15 ವರ್ಷಗಳಿಗೂ ಹಳೆಯದಾದ ಒಂಭತ್ತು ಲಕ್ಷಕ್ಕೂ ಅಧಿಕ ಸರಕಾರಿ ವಾಹನಗಳ ನೋಂದಣಿ ಎ.1ರಿಂದ ರದ್ದುಗೊಳ್ಳುತ್ತದೆ ಮತ್ತು ಅವುಗಳನ್ನು ಗುಜರಿಗೆ ಹಾಕುವುದನ್ನು ಅನುಮೋದಿಸಲಾಗಿದೆ. ವಾಯುಮಾಲಿನ್ಯವನ್ನುಂಟು ಮಾಡುವ ಬಸ್ಗಳು ಮತ್ತು ಕಾರುಗಳು ರಸ್ತೆಗಳಿಂದ ಹೊರಗಿರಲಿದ್ದು, ಪರ್ಯಾಯ ಇಂಧನಗಳೊಂದಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ. ಇದರಿಂದ ವಾಯಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಇತ್ತೀಚಿಗೆ ಹೊರಡಿಸಿರುವ ಅಧಿಸೂಚನೆಯು, ದೇಶದ ರಕ್ಷಣೆಗಾಗಿ ಹಾಗೂ ಕಾನೂನು ಮತ್ತು ಭದ್ರತೆ,ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಬಳಕೆಯಾಗುವ ವಿಶೇಷ ಉದ್ದೇಶದ ವಾಹನಗಳಿಗೆ (ಶಸ್ತ್ರಸಜ್ಜಿತ ಮತ್ತು ಇತರ ವಿಶೇಷ ವಾಹನಗಳು) ಅನ್ವಯಿಸುವುದಿಲ್ಲ.

ಆರಂಭಿಕ ನೋಂದಣಿ ದಿನಾಂಕದಿಂದ 15 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರುವ ವಾಹನಗಳು 2021ರ ಮೋಟರ್ ವಾಹನಗಳ ನಿಯಮಗಳಡಿ ಸ್ಥಾಪಿಸಲಾಗಿರುವ ನೋಂದಣಿಗೊಂಡಿರುವ ವಾಹನಗಳ ಗುಜರಿ ಕೇಂದ್ರಗಳ ಮೂಲಕ ವಿಲೇವಾರಿಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 2021-22ರ ಕೇಂದ್ರ ಮುಂಗಡಪತ್ರದಲ್ಲಿ ಪ್ರಕಟಿಸಿದ ಗುಜರಿ ನೀತಿಯಂತೆ ಖಾಸಗಿ ವಾಹನಗಳು 20 ವರ್ಷಗಳ ಬಳಿಕ ಮತ್ತು ವಾಣಿಜ್ಯ ಉದ್ದೇಶದ ವಾಹನಗಳು 15 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆಗೊಳಪಡಬೇಕಾಗುತ್ತದೆ. ನೂತನ ನೀತಿಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಳೆಯ ವಾಹನಗಳನ್ನು ಗುಜರಿಗೆ ಹಾಕಿದ ಬಳಿಕ ಖರೀದಿಸಲಾಗುವ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ಒದಗಿಸಲಿವೆ.

ಪ್ರಧಾನಿ ನರೇಂದ್ರ ಮೋದಿಯವರು 2021ರಲ್ಲಿ ರಾಷ್ಟ್ರೀಯ ಗುಜರಿ ನೀತಿಗೆ ಚಾಲನೆಯನ್ನು ನೀಡಿದ್ದರು.

Similar News